ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದುಡಿಯುವ ವರ್ಗ, ಬಡವರು, ನಿರ್ಗತಿಕರು, ವಿದ್ಯಾರ್ಥಿಗಳ ಹಸಿವನ್ನು ‘ಇಂದಿರಾ ಕ್ಯಾಂಟೀನ್’ ನೀಗಿಸುತ್ತಿದೆ. ಯಾರೊಬ್ಬರೂ ಹಸಿವಿನಿಂದ ಮಲಗಬಾರದು ಎಂಬ ಧ್ಯೇಯದೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆರಂಭಿಸಿದ ಮಹತ್ವಾಕಾಂಕ್ಷೆಯ ಈ ಯೋಜನೆ ಹಲವು ಜನರಿಗೆ ಅಕ್ಷಯ ಪಾತ್ರೆಯಾಗಿದೆ. ಈಗ ಈ ಯೋಜನೆ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಕಡಿಮೆ ದರದಲ್ಲಿ ಬಡಜನರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಲತಾಯಿ ಧೋರಣೆಗೆ ಒಳಗಾಗಿತ್ತು. ಹಲವಾರು ಕ್ಯಾಂಟೀನ್‌ಗಳಲ್ಲಿ ಇಡ್ಲಿ ಸೇರಿದಂತೆ ನಾನಾ ಬಗೆಯ ತಿಂಡಿಗಳನ್ನು ಕೊಡುವುದು ನಿಲ್ಲಿಸಲಾಗಿತ್ತು. ಇನ್ನು ರಾತ್ರಿ ವೇಳೆ ಊಟ ನೀಡುವುದನ್ನು ಕೆಲವು ಕ್ಯಾಂಟೀನ್‌ಗಳಲ್ಲಿ ಸಂಪೂರ್ಣ ನಿಲ್ಲಿಸಲಾಗಿತ್ತು. ಇದರಿಂದ ನಗರದಲ್ಲಿರುವ ಎಲ್ಲ ಕ್ಯಾಂಟೀನ್‌ಗಳನ್ನು ಮುಚ್ಚಿಸಿ, ಬೇರೆ ಹೆಸರಿನೊಂದಿಗೆ ಹೊಸ ಕ್ಯಾಂಟೀನ್ ಆರಂಭಿಸಬೇಕು ಎಂಬುದು ಬಿಜೆಪಿಯ ನಿಲುವಾಗಿತ್ತು. ಆದರೆ, ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂದಿರಾ ಕ್ಯಾಂಟೀನ್‌ಗಳಿಗೆ ಮರು ಜೀವ ಬಂದತಾಗಿದೆ. ಮುಂದಿನ ವರ್ಷ ಅಂದರೆ ಮುಂಬರುವ ಸಂಕ್ರಾಂತಿ ಹಬ್ಬದಂದು ಹೊಸ ಮೆನುವಿನೊಂದಿಗೆ ಇಂದಿರಾ ಕ್ಯಾಂಟೀನ್ ಮತ್ತೆ ಹೊಸ ಚೈತನ್ಯದೊಂದಿಗೆ ತನ್ನ ಕಾರ್ಯ ಆರಂಭಿಸಲಿದೆ.
ಇಷ್ಟು ದಿನ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಕೇವಲ ರೈಸ್ ಬಾತ್ ಅಥವಾ ಅನ್ನ, ಸಾಂಬರ್, ಮೊಸರನ್ನ ಮಾತ್ರ ನೀಡಲಾಗುತ್ತಿತ್ತು. ಹಿರಿಯ ನಾಗರಿಕರು, ಸಕ್ಕರೆ ಕಾಯಿಲೆ ಇರುವವರು ಸೇರಿದಂತೆ ಹಲವರು ಮುದ್ದೆ, ಚಪ್ಪಾತಿ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಸರ್ಕಾರ ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್‌ನಲ್ಲಿ ಕಡ್ಡಾಯವಾಗಿ ಮುದ್ದೆ ಪೂರೈಕೆಗೆ ತೀರ್ಮಾನಿಸಿದ್ದು, ಸಂಕ್ರಾಂತಿ ವೇಳೆಗೆ ಇಂದಿರಾ ಕ್ಯಾಂಟೀನ್ನಲ್ಲಿ ಮುದ್ದೆ ದೊರೆಯುವ ಸಾಧ್ಯತೆ ಇದೆ.
ಸದ್ಯ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಮಾಡಲು ಟೆಂಡರ್ ಕರೆಯಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಬಿಬಿಎಂಪಿ ಸದ್ಯದಲ್ಲೇ ಟೆಂಡರ್ ಕರೆಯಲಿದ್ದು, ಒಂದು ತಿಂಗಳಿನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಕರೆಯುವ ಈ ಟೆಂಡರ್‌ನಲ್ಲಿ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರು ಕಡ್ಡಾಯವಾಗಿ ಮುದ್ದೆ ಪೂರೈಕೆ ಮಾಡಬೇಕು. ಉಪಾಹಾರಕ್ಕೆ ಎರಡು ಆಯ್ಕೆ ನೀಡಬೇಕು ಸೇರಿದಂತೆ ಹಲವು ನಿಯಮಗಳನ್ನು ಹಾಕಿದೆ. ಈ ಎಲ್ಲ ನಿಮಯಗಳಿಗೆ ಒಪ್ಪಿಗೆ ನೀಡಿದ ಗುತ್ತಿಗೆದಾರರಿಗೆ ಈ ಟೆಂಡರ್ ನೀಡಲು ಸರ್ಕಾರ ನಿರ್ಧರಿಸಿದೆ.
ಇನ್ನು ಇಂದಿರಾ ಕ್ಯಾಂಟೀನ್‌ನಲ್ಲಿ ಸುಳ್ಳು ಲೆಕ್ಕ ನೀಡಿ, ರಿಯಾಯಿತಿ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ, ನಗರದ ಯಾವುದೇ ಇಂದಿರಾ ಕ್ಯಾಂಟೀನ್ಗೆ ಗ್ರಾಹಕ ತೆರಳಿ ಊಟದ ಕೂಪನ್ ಪಡೆದರೆ ಆ ಮಾಹಿತಿ ಕೇಂದ್ರ ಕಚೇರಿಗೆ ತಲುಪುವಂತೆ ತಂತ್ರಜ್ಞಾನ ಅಭಿವೃದ್ಧಿ ಪಡಿಸಲಾಗಿದೆ. ಪ್ರತಿಯೊಂದು ಡಿಜಿಟಲೀಕರಣದ ಮೂಲಕ ಪಾರದರ್ಶಕ ವ್ಯವಸ್ಥೆ ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆ.
2017ರಲ್ಲಿ ಇಂದಿರಾ ಕ್ಯಾಂಟೀನ್ ಆರಂಭ
ಅತಿ ಕಡಿಮೆ ದರದಲ್ಲಿ ಬಡವರಿಗೆ ಮೂರು ಹೊತ್ತು ಊಟ ನೀಡಲು ಕ್ಯಾಂಟೀನ್ಗಳನ್ನು 2017ರ ಆಗಸ್ಟ್ 16ರಂದು ಆರಂಭಿಸಲಾಯಿತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಉದ್ಘಾಟಿಸಲಾಗಿತ್ತು. ತಮಿಳುನಾಡಿನ ‘ಅಮ್ಮಾ ಕ್ಯಾಂಟೀನ್’ ಮಾದರಿಯಲ್ಲಿ ಈ ಯೋಜನೆ ರೂಪಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಎರಡು ದಿನ ‘ನಮ್ಮ ರಸ್ತೆ’ ಪ್ರದರ್ಶನ ಮತ್ತು ಕಾರ್ಯಾಗಾರ ಆಯೋಜನೆ
ಆದರೆ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ್ಯಂತ ಚಾಲ್ತಿಯಲ್ಲಿದ್ದ ಇಂದಿರಾ ಕ್ಯಾಂಟೀನ್ಗಳನ್ನು ನಡೆಸಲು ಆಗಿನ ಬಿಜೆಪಿ ಸರ್ಕಾರ ಅನುದಾನ ನೀಡುವುದನ್ನೇ ನಿಲ್ಲಿಸಿತ್ತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕ್ಯಾಂಟೀನ್ ಅನ್ನು ನಿರ್ವಹಣೆ ಮಾಡುತ್ತಿತ್ತು. 2023-24ನೇ ಸಾಲಿನ ಬಜೆಟ್ನಲ್ಲಿ ಕ್ಯಾಂಟೀನ್ಗೆ ಬಿಬಿಎಂಪಿ ₹50 ಕೋಟಿ ಮೀಸಲಿಟ್ಟಿತ್ತು. ಹೊರತಾಗಿ ಆಹಾರದ ಗುತ್ತಿಗೆಯ ಕಂಪನಿಗಳಿಗೆ ಬಾಕಿ ಬಿಲ್ ಮಾಡಲು ಕೂಡ ಬಿಬಿಎಂಪಿ ಸಂಕಷ್ಟ ಎದುರಿಸುತ್ತಿತ್ತು.
ಇಂದಿರಾ ಕ್ಯಾಂಟೀನ್ಗೆ ಮರುಜೀವ
2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಅವಧಿಯಲ್ಲಿ ನಿರ್ಲಕ್ಷಕ್ಕೆ ಒಳಗಾಗಿ, ಮುಚ್ಚಲ್ಪಟ್ಟಿದ ಇಂದಿರಾ ಕ್ಯಾಂಟೀನ್ಗಳನ್ನು ರಾಜ್ಯಾದ್ಯಂತ ಪುನಃ ಆರಂಭಿಸಲಾಗುವುದು” ಎಂದಿದ್ದರು. ಈಗ ಅದರಂತೆಯೇ ನಗರದ 250 ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಮರುಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
K R ಸರ‌್ಕಲ್‌ನಲ್ಲಿ (pwd office ) ಇರುವ ಅನ್ನಪೂರ‌್ಣೇಶ್ವರಿ ಕ್ಯಾಂಟೀನ್ (ಕನಕಪುರದಮ್ಮ) ಬಗೆಯ ರುಚಿಯ ಮುದ್ದೆ ಸಾರು ಊಟ ಎಲ್ಲಾ ಕ್ಯಾಂಟೀನ್‌ಗಳಲ್ಲಿ ದೊರೆಯಲು ತಕ್ಕ ಏರ‌್ಪಾಡು ಮಾಡಲಿ