21ನೇ ಶತಮಾನಕ್ಕೆ ಕಾಲಿಟ್ಟರು ಕೂಡ ಇನ್ನು ಅಸ್ಪೃಶ್ಯತೆ ಜೀವಂತವಾಗಿದೆ. ಯುವಕನೊಬ್ಬನಿಗೆ ದೇವಸ್ಥಾನ ಪ್ರವೇಶಿಸದಂತೆ ಗ್ರಾಮಸ್ಥರು ತಡೆದು ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕ್ಷೇತ್ರ ವರುಣಾದ ಕಿರಾಳು ಗ್ರಾಮದಲ್ಲಿ ನಡೆದಿದೆ.
ಕಿರಾಳು ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿರುವ ಬಗ್ಗೆ ನವೀನ್ ಎಂಬವರು ತಹಶೀಲ್ದಾರ್ಗೆ ದೂರು ನೀಡಿದ್ದರು. ದೂರು ಬಂದ ಹಿನ್ನೆಲೆ, ಅಧಿಕಾರಿಗಳು ಗ್ರಾಮಸ್ಥರ ಸಭೆ ಕರೆದು ಅನಿಷ್ಠ ಪದ್ಧತಿಯ ಆಚರಣೆಗೆ ಕಡಿವಾಣ ಹಾಕಿದ್ದಾರೆ. ಗ್ರಾಮದ ಮುಖಂಡರೊಂದಿಗೆ ಮಾತುಕತೆ ನಡೆಸಿ ಅಸ್ಪೃಶ್ಯತೆ ಆಚರಿಸದಂತೆ ಎಚ್ಚರಿಕೆ ನೀಡಿದ್ದಾರೆ.
“ವಿದ್ಯಾವಂತ ನಾಗರಿಕನಾದ ನನಗೆ ಕಿರಾಳು ಗ್ರಾಮದ ಶಂಭು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಪ್ರವೇಶಿಸದಂತೆ ಅರ್ಚಕರು ಹಾಗೂ ಗ್ರಾಮಸ್ಥರು ನಿರ್ಬಂಧ ಹೇರಿದ್ದಾರೆ. ನನಗೆ ದೇವಸ್ಥಾನ ಪ್ರವೇಶಿಸಲು ಅವಕಾಶ ನೀಡದೆ ಅಸ್ಪೃಶ್ಯತೆ ಆಚರಣೆ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿ ನವೀನ್ ಎಂಬವವರು ತಹಶೀಲ್ದಾರ್ಗೆ ದೂರು ನೀಡಿದ್ದರು.
ದೂರು ಬಂದ ಕೂಡಲೇ ಎಚ್ಚೆತ್ತ ತಹಶೀಲ್ದಾರ್ ಅವರು ವರುಣಾ ಠಾಣೆಯ ಪಿಎಸ್‌ಐ ಚೇತನ್ ಹಾಗೂ ಇತರ ಅಧಿಕಾರಿಗಳ ಜತೆಗೆ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ, ಗ್ರಾಮಸ್ಥರ ಮನವೊಲಿಸಿ ನವೀನ್ ಅವರು ದೇವಸ್ಥಾನಕ್ಕೆ ಪ್ರವೇಶ ಮಾಡುವಂತೆ ಅವಕಾಶ ಕಲ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ; ಕರಾವಳಿ ಜಿಲ್ಲೆಗೆ ‘ರೆಡ್ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ
ಅಧಿಕಾರಿಗಳ ಸಮ್ಮುಖದಲ್ಲೇ ನವೀನ್ ದೇವಸ್ಥಾನ ಪ್ರವೇಶ ಮಾಡಿ ಪೂಜೆ ಸಲ್ಲಿಸಿದ್ದಾರೆ. ಹಾಗೆಯೇ, ದೇವಸ್ಥಾನದ ಆವರಣದಲ್ಲಿಯೇ, ಗ್ರಾಮಸ್ಥರನ್ನು ಸಭೆ ಕರೆದು ಅಸ್ಪೃಶ್ಯತೆ ಆಚರಣೆ ಮಾಡದಂತೆ ಜಾಗೃತಿ ಮೂಡಿಸಿದ್ದಾರೆ. ಹಾಗೆಯೇ, ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ತಹಶೀಲ್ದಾರ್ ಮಹೇಶ್ ಕುಮಾರ್, ಉಪ ತಹಶೀಲ್ದಾರ್ ಲತಾ ಶರಣಮ್ಮ, ಗ್ರಾಮ ಆಡಳಿತಾಧಿಕಾರಿಗಳಾದ ಕೀರ್ತಿ ಕುಮಾರ್ ಮತ್ತು ಅಬ್ದುಲ್ ರಶೀದ್ ಗ್ರಾಮಕ್ಕೆ ತೆರಳಿ ಅಸ್ಪೃಶ್ಯತೆಗೆ ಕಡಿವಾಣ ಹಾಕಿದ್ದಾರೆ.