ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. “ನೇಹಾ ಆತನೊಂದಿಗೆ ಮಾತನಾಡಲು ನಿರಾಕರಣೆ ಮಾಡಿದ್ದಕ್ಕೆ ಆಕೆಯನ್ನು ಆರೋಪಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ” ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ನೇಹಾ ಹಿರೇಮಠ ಹತ್ಯೆ ಪ್ರಕರಣ ಕರ್ನಾಟಕ ಮಾತ್ರವಲ್ಲದೆ, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ. ಸಿನಿಮಾ ರಂಗದ ನಟ, ನಟಿಯರು ಸೇರಿದಂತೆ ಇಡೀ ರಾಜ್ಯದ ಜನತೆ ನೇಹಾ ಹಿರೇಮಠ ಹತ್ಯೆಯನ್ನು ಖಂಡಿಸಿದ್ದಾರೆ.
ಕೊಲೆ ಆರೋಪಿ ಫಯಾಜ್‌ನನ್ನು ಬಂಧಿಸಿರುವ ಪೊಲೀಸರು ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ. ಕಾರಾಗೃಹದ ಸಿಬ್ಬಂದಿ ಎದುರು ಆರೋಪಿ ಕೊಲೆ ವಿಚಾರ ಬಾಯಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.
“ಒಂದು ವಾರದಿಂದ ನೇಹಾ ಜತೆಗೆ ಮಾತನಾಡಿಸಲು ಪ್ರಯತ್ನಿಸಿದೆ. ಆದರೆ, ನೇಹಾ ನನ್ನ ಜತೆಗೆ ಮಾತನಾಡಲು ಇಷ್ಟ ಇಲ್ಲ ಅಂತ ಅವೈಡ್ ಮಾಡುತ್ತಿದ್ದಳು. ಬಿವಿಬಿ ಕಾಲೇಜಿಗೆ ಏ.18 ರಂದು ಅವಳು ಪರೀಕ್ಷೆ ಬರೆಯಲು ಬಂದಿದ್ದಳು. ಆಗ ನಾನು ಮತ್ತೆ ಕಾಲೇಜಿಗೆ ಹೋದೆ, ನೇಹಾ ಪರೀಕ್ಷೆ ಮುಗಿಯುವವರೆಗೂ ಕಾದೆ. ಅವಳು ಹೊರಗಡೆ ಬಂದ ಬಳಿಕ ಮಾತನಾಡಿಸಲು ಪ್ರಯತ್ನಿಸಿದೆ. ಆದರೆ, ಅವಳು ಮಾತನಾಡುವುದಿಲ್ಲ ಎಂದಳು. ಹಾಗಾಗಿ, ಅವಳಿಗೆ ಚಾಕುವಿನಿಂದ ಚುಚ್ಚಿದೆ” ಎಂದು ಕಾರಾಗೃಹ ಸಿಬ್ಬಂದಿಗೆ ಫಯಾಜ್ ಹೇಳಿಕೊಂಡಿದ್ದಾನೆ ಎಂದು ‘ಟಿವಿ9’ ವರದಿ ಮಾಡಿದೆ.
“ನೇಹಾಳಿಗೆ ಚಾಕು ಹಾಕುವ ಸಮಯದಲ್ಲಿ ನನ್ನ ಎರಡು ಕೈ ಬೆರಳು ಮತ್ತು ಕಾಲಿಗೆ ಗಾಯವಾಗಿದೆ. ಏನಾಗಿದೆ ಎಂಬ ಬಗ್ಗೆ ಗೊತ್ತಿಲ್ಲ” ಎಂದಿದ್ದಾನೆ.
ಈ ಸುದ್ದಿ ಓದಿದ್ದೀರಾ? ಪಕ್ಷ ಸೂಚಿಸಿದರೇ ಕುಮಾರಸ್ವಾಮಿ ಪರ ಪ್ರಚಾರ: ಸುಮಲತಾ ಅಂಬರೀಶ್
ಏ.18ರಂದು ಮಧ್ಯಾಹ್ನ ಆರೋಪಿ ಫಯಾಜ್ ಕಾಲೇಜಿನ ಕ್ಯಾಂಪಸ್ ಒಳಗೆ ನುಗ್ಗಿ ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಗೆ ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದು ಕೊಲೆ ಮಾಡಿದ್ದನು.
ಆರೋಪಿ ಫಯಾಜ್ (23) ಮೊದಲ ವರ್ಷದ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಎಂಸಿಎ) ವಿದ್ಯಾರ್ಥಿಯಾಗಿದ್ದನು. ಚಾಕು ಮತ್ತು ಮಾಸ್ಕ್ ಧರಿಸಿ ಕಾಲೇಜು ಕ್ಯಾಂಪಸ್ ಒಳಗೆ ಹೋಗಿ ಮಧ್ಯಾಹ್ನ 3.30 ರ ಸುಮಾರಿಗೆ ನೇಹಾಳ ಎದೆ ಮತ್ತು ಕುತ್ತಿಗೆಗೆ ಹಲವು ಬಾರಿ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಎಂಸಿಎ ಬಿಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದಾರೆ.