ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಪ್ರಕರಣ ಪೋಕ್ಸೊ ಅಡಿ ದಾಖಲಾಗಿದೆ. ಆದರೆ ಇಲ್ಲಿ ಪೋಕ್ಸೊ ನಿಯಮವನ್ನು ಆರಂಭದಿಂದಲೂ ಗಾಳಿಗೆ ತೂರಲಾಗಿದೆ. ಹಣಬಲ, ಅಧಿಕಾರ ಬಲದ ಮುಂದೆ ಎಲ್ಲಾ ಕಾನೂನುಗಳು ಮಂಡಿಯೂರುತ್ತವೆ ಎಂಬುದು ವಿಪರ್ಯಾಸ
ಈ ನೆಲದ ಕಾನೂನಿನ ಮುಂದೆ ಎಲ್ಲರೂ ಸಮಾನರು. ಪೋಕ್ಸೊ ಕಾನೂನು ಎಲ್ಲರಿಗೂ ಅನ್ವಯವಾಗುವಂತೆ ರಾಜಕೀಯ ನಾಯಕರಿಗೂ, ಪ್ರಭಾವಶಾಲಿ ವ್ಯಕ್ತಿಗಳಿಗೂ ಅನ್ವಯವಾಗಬೇಕು. ಆದರೆ, ಇದು ಎಲ್ಲಾ ಸಂದರ್ಭಗಳಲ್ಲಿ ಸರಿ ಎಂದು ಹೇಳುವಂತಿಲ್ಲ. ಇತ್ತೀಚೆಗೆ ಮುರುಘಾ ಮಠದ ಸ್ವಾಮಿ ಬಂಧನವಾದಾಗ ಪೋಕ್ಸೊ ಕಾನೂನಿನ ಬಗ್ಗೆ ಮೂಡಿದ ಆಶಾಕಿರಣ, ಯಡಿಯೂರಪ್ಪನವರ ಪ್ರಕರಣದಲ್ಲಿ ಇಲ್ಲವಾಗಿದೆ.
ಪೋಕ್ಸೊ ಕಾಯ್ದೆಯಡಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಾರ್ಚ್ನಲ್ಲಿ ದೂರು ದಾಖಲಾಗಿ, ಬಾಲಕಿಯ ಹೇಳಿಕೆ ಪಡೆಯಲಾಗಿದೆ. ಯಡಿಯೂರಪ್ಪನವರ ಧ್ವನಿ ಮಾದರಿಯನ್ನು ಎಫ್ಎಸ್ಎಲ್ಗೆ ಕಳಿಸಲಾಗಿತ್ತು. ಆದರೆ ಆ ನಂತರ ತನಿಖಾಧಿಕಾರಿಗಳು ಯಾಕೆ ಸುಮ್ಮನಿದ್ದರು? ಇದುವರೆಗೆ ಆರೋಪ ಪಟ್ಟಿ ಸಲ್ಲಿಕೆ ಮಾಡದಂತೆ ತಡೆದವರು ಯಾರು? ಹಾಗಿದ್ದರೆ ಹಣ ಅಧಿಕಾರದ ಬಲ ಇರೋರು ಪೋಕ್ಸೊ ಪ್ರಕರಣದಲ್ಲಿಯೂ ಬಚಾವ್ ಆಗುತ್ತಾರೆಂದರೆ ಅಪ್ರಾಪ್ತ ಮಕ್ಕಳಿಗೆ ರಕ್ಷಣೆ ಕೊಡೋರು ಯಾರು?
ಹದಿನೇಳು ವರ್ಷದ ಅಪ್ರಾಪ್ರ ಬಾಲಕಿಯನ್ನು ಕೋಣೆಗೆ ಕರೆದೊಯ್ದು ಆಕೆಯ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದಾರೆಂಬ ಆರೋಪವನ್ನು ದಿನಾಂಕ ಮಾರ್ಚ್ 14ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಾಯಿ ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಬಾಲಕಿಯ ತಾಯಿ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣವನ್ನು ಸಿ.ಐ.ಡಿ.ಗೆ ರಾಜ್ಯ ಸರ್ಕಾರವು ವಹಿಸಿ ಕೊಟ್ಟಿದೆ. ಪ್ರಕರಣ ದಾಖಲಾದ ನಂತರ ವಿಚಾರಣೆಗೆ ಹಾಜರಾದ ಯಡಿಯೂರಪ್ಪನವರು “ದೂರುದಾರೆ ಮಹಿಳೆಗೆ ಇತರರ ವಿರುದ್ಧ ದೂರು ನೀಡುವುದೇ ಒಂದು ಹವ್ಯಾಸವಾಗಿದೆ” ಎಂದು ಹೇಳಿದ್ದರು. ಗೃಹಮಂತ್ರಿಗಳು “ಹುಡುಗಿಯ ತಾಯಿ ಮಾನಸಿಕ ಅಸ್ವಸ್ಥೆ ಎಂಬ ಮಾಹಿತಿ ಇದೆ” ಎಂದು ತನಿಖೆ ನಡೆಯುವ ಮುನ್ನವೇ ಹೇಳಿಬಿಟ್ರು.
ಬಾಲಕಿಯ ಮೇಲೆ ದೌರ್ಜನ್ಯ ನಡೆದಿದೆಯೇ, ಇಲ್ಲವೇ ಎಂಬುದು ಮುಖ್ಯವೇ ಹೊರತು, ದೂರುದಾರೆ ಅಥವಾ ಸಂತ್ರಸ್ತೆಯ ಮಾನಸಿಕ ಸ್ಥಿತಿ ಮುಖ್ಯವೇ ಅಲ್ಲ. ಮಾನಸಿಕ ಅಸ್ವಸ್ಥೆಯರ ಮೇಲೂ ಲೈಂಗಿಕ ದೌರ್ಜನ್ಯ ನಡೆದಿವೆ. ಮಾಧ್ಯಮಗಳು ಸಂತ್ರಸ್ತೆಯ ಮೇಲೆ ತೋರಿಸಬೇಕಿದ್ದ ಕಾಳಜಿಯನ್ನು ಬಲಿಷ್ಠ ಆರೋಪಿ ಮೇಲೆ ತೋರಿಸಿ ತಮ್ಮ ಪತ್ರಿಕಾ ಧರ್ಮ ಗಾಳಿಗೆ ತೂರಿದರು. ಅದರ ಪರಿಣಾಮವೇ ಈ ಆರೋಪಿಯ ರಕ್ಷಣೆಗೆ ಇಡೀ ವ್ಯವಸ್ಥೆ ನಿಂತಂತಿದೆ.
ದೂರುದಾರ ಮಹಿಳೆಯು ಕೆಲ ಪತ್ರಕರ್ತರು, ಹೋರಾಟಗಾರರನ್ನು ಮೇ 26 ರಾತ್ರಿ ಭೇಟಿಯಾಗಿ ಮಾತನಾಡಿದ್ದಾರೆ. ಮರುದಿನ ಪ್ರೆಸ್ಮೀಟ್ ಮಾಡಬೇಕಿತ್ತು. ಆದರೆ 27ರಂದು ಆ ಮಹಿಳೆಯ ಸಾವಾಗುತ್ತದೆ. ಇದು ಸಹಜ ಸಾವೋ ಅಥವಾ ಮತ್ತಿನ್ನೇನೋ ಎಂಬ ವಿಷಯ ಜನರಿಗೆ ಗೊತ್ತಾಗಬೇಕಿದೆ. ಯಾವುದೇ ಪೋಸ್ಟ್ ಮಾರ್ಟಂ ಇಲ್ಲದೇ ಆಸ್ಪತ್ರೆಯ ಹಿಂಬಾಗಿಲಿನಿಂದ ಶವ ಸಾಗಿಸಲಾಗಿದೆ ಎಂಬ ಆರೋಪವಿದೆ.
ಫೇಸ್ಬುಕ್ನಲ್ಲಿದ್ದ ಆ ಸಂತ್ರಸ್ತ ಅಪ್ರಾಪ್ತ ಬಾಲಕಿಯ ಆಡಿಯೋವನ್ನು ಅಳಿಸಿ ಹಾಕಲಾಗಿರುವುದು, ಈ ಮೂಲಕ ಯಡಿಯೂರಪ್ಪನವರು ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ. ಆ ತಾಯಿ ಮಾಡಿಕೊಂಡಿರುವ ವಿಡಿಯೊವನ್ನು ಸಹ ಡಿಲಿಟ್ ಮಾಡಿದ್ದಾರೆ. ಹೀಗೆ ಯಡಿಯೂರಪ್ಪನವರು ಸಾಕ್ಷಿ ನಾಶಕ್ಕೆ ಎಲ್ಲ ಪ್ರಯತ್ನವನ್ನೂ ಮಾಡಿದ್ದಾರೆ. ಹಾಗಾದರೆ ಒಬ್ಬ ಶಕ್ತಿವಂತ ರಾಜಕಾರಣಿಯು ಯಾವ ಅಪರಾಧ ಮಾಡಿದರೂ ನಡೆಯುತ್ತದೆ ಎಂದರೆ, ಬಡವರಿಗೆ ನ್ಯಾಯ ಸಿಗುವುದು ಹೇಗೆ?
ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಬೇಕು. ಮತ್ತು 90 ದಿನಗಳೊಳಗಾಗಿ ತೀರ್ಪು ನೀಡಬೇಕೆಂದಿದೆ. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಸಿ.ಟಿ.ರವಿಯವರು “ಇದು ಆಳುವ ಸರ್ಕಾರದ ಪಿತೂರಿ” ಎಂದು ಹೇಳುತ್ತಿರುವುದು ನಾಚಿಕೆಗೇಡು. ಒಂದು ವೇಳೆ ಸರ್ಕಾರ ಸೇಡಿನ ರಾಜಕಾರಣ ಮಾಡಿದ್ದರೆ ಅದು ಚುನಾವಣೆಗಳ ಮುಂಚಿನ ಕಾಲವಾಗಿತ್ತು. ಯಡಿಯೂರಪ್ಪನರನ್ನು ಬಂಧಿಸಿ ಅವರು ರಾಜಕೀಯ ಲಾಭ ಪಡೆಯಬಹುದಾಗಿತ್ತು. ಸಿಐಡಿ ತೆಪ್ಪಗಿದ್ದ ಕಾರಣ ಸಂತ್ರಸ್ತೆಯ ಸಹೋದರ ಹೈಕೋರ್ಟ್ ಮೊರೆ ಹೋದ ನಂತರ ಪ್ರಕರಣ ಮತ್ತೆ ಜೀವ ಪಡೆದಿದೆ. ಇಲ್ಲದಿದ್ದರೆ ಮುಚ್ಚಿಯೇ ಹೋಗುತ್ತಿತ್ತು. ಈಗಲಾದರೂ ತನಿಖೆ ನಡೆದು ಆರೋಪಿಗೆ ಶಿಕ್ಷೆಯಾಗಲಿ. ಈ ನೆಲದ ಕಾನೂನು ಪಾಲನೆಯಾಗಲಿ.

ಡಾ ಕೆ ಷರೀಫಾ
ಬಂಡಾಯ ಸಾಹಿತಿ, ಕವಿ