ಹಾರೋಹಳ್ಳಿ ತಾಲೂಕಿನ ಗೊಟ್ಟಿಗೆಹಳ್ಳಿಯಲ್ಲಿ ಜಂಗಲ್ ಟ್ರೈಲ್ ರೆಸಾರ್ಟ್ನಲ್ಲಿ ಜಿಪ್ಲೈನ್ ಆಡುವಾಗ ತಂತಿ ತುಂಡಾಗಿ 35 ವರ್ಷದ ನರ್ಸ್ವೊಬ್ಬರು ಮೇ 18ರಂದು ಸಾವನ್ನಪ್ಪಿದ್ದರು. ಪ್ರವಾಸೋದ್ಯಮ ಇಲಾಖೆಯ ಅನುಮತಿ ಪಡೆಯದೇ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದ ಹಿನ್ನೆಲೆ, ಅಧಿಕಾರಿಗಳು ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡಿ ರೆಸಾರ್ಟ್ಗೆ ಬೀಗ ಹಾಕಿ ಬಂದ್ ಮಾಡಿದ್ದಾರೆ.
ರಂಜಿನಿ ಸಾವನ್ನಪ್ಪಿದ ಮಹಿಳೆ. ನಗರದ ಸೂರ್ಯಸಿಟಿ 3 ನೇ ಹಂತದ ನಿವಾಸಿ. ಅವರು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ವಾರಾಂತ್ಯದಲ್ಲಿ ರಾಮನಗರ ಜಿಲ್ಲೆಯ ಹಾರೋಹಳ್ಳಿಯಲ್ಲಿರುವ ರೆಸಾರ್ಟ್ಗೆ ವಿಹಾರಕ್ಕೆಂದು ಸಹೋದ್ಯೋಗಿಗಳೊಂದಿಗೆ ತೆರಳಿದ್ದರು. ಈ ವೇಳೆ, ಜಿಪ್ಲೈನ್ ಆಡುವಾಗ ತಂತಿ ತುಂಡಾಗಿದೆ. ರಂಜಿನಿ ಇತರ ಮೂವರೊಂದಿಗೆ ನೆಲಕ್ಕೆ ಬಿದಿದ್ದಾರೆ.
ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ದಯಾನಂದ ಸಾಗರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಹೆಚ್ಚಿನ ರಕ್ತಸ್ರಾವದಿಂದ ರಂಜಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದರು. ಇನ್ನುಳಿದವರು ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ರಂಜಿನಿ ಅವರ ಸಹೋದ್ಯೋಗಿ ನಿರ್ಮಲ್ ವೆಂಕಟೇಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ, ಚಟುವಟಿಕೆಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿದೆ ಎಂದು ಆರೋಪಿಸಿದ್ದಾರೆ.
“ಜಿಪ್ಲೈನ್ ಆಡುವಾಗ ಆಟಗಾರರಿಗೆ ರೆಸಾರ್ಟ್ನವರು ಹೆಲ್ಮೆಟ್ ಸಹ ನೀಡಲಿಲ್ಲ. ಪ್ರಥಮ ಚಿಕಿತ್ಸೆ ಕಿಟ್ ಇರಲಿಲ್ಲ. ಅಲ್ಲದೇ, ಆವರಣದಲ್ಲಿ ಆಂಬ್ಯುಲೆನ್ಸ್ ಸಹ ಇರಲಿಲ್ಲ. ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಬೇಕಾಯಿತು” ಎಂದು ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ, ಹಾರೋಹಳ್ಳಿ ಪೊಲೀಸರು ರೆಸಾರ್ಟ್ ಮ್ಯಾನೇಜರ್, ಪುಟ್ಟಮಾದು ಅವರನ್ನು ಬಂಧಿಸಿ, ಆಡಳಿತ ಮಂಡಳಿಯ ವಿರುದ್ಧ ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ) ಮತ್ತು 337 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಇನ್ಸ್ಪೆಕ್ಟರ್, ಎಸಿಪಿಗೆ ಪೊಲೀಸ್ ಪೇದೆಯಿಂದ ಕೊಲೆ ಬೆದರಿಕೆ; ಪ್ರಕರಣದ ತನಿಖೆ ಸಿಸಿಬಿಗೆ
ಜಿಲ್ಲಾಧಿಕಾರಿ ಸೂಚನೆಯಂತೆ ಜಂಗಲ್ ಟ್ರೈಲ್ ರೆಸಾರ್ಟ್ಗೆ ಮಂಗಳವಾರ ಭೇಟಿ ನೀಡಿದ್ದ ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು, ರೆಸಾರ್ಟ್ ಮಾಲೀಕರಿಗೆ ನೋಟಿಸ್ ನೀಡಿ, ರೆಸಾರ್ಟ್ಗೆ ಬಿಗಮುದ್ರೆ ಹಾಕಿ ಬಂದ್ ಮಾಡಿದ್ದಾರೆ.
ರೆಸಾರ್ಟ್ ಮಾಲೀಕರು ಅನುಮತಿ ಪಡೆಯದೆ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿದ್ದಾರೆ ಎಂದು ರಾಮನಗರ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಕಯ ನಿರ್ದೇಶಕರು ತಿಳಿಸಿದ್ದಾರೆ.
ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವವರೆಗೆ ರೆಸಾರ್ಟ್ನಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದರು.