ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗದಿತ ವೇಳೆಗೆ ಕೆಲಸಕ್ಕೆ ಹಾಜರಾಗದಿದ್ದರೆ ಮತ್ತು ಕೆಲಸದ ಅವಧಿಯಲ್ಲಿ ಕಚೇರಿಯಲ್ಲಿ ಇಲ್ಲದಿದ್ದರೆ, ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಅವರು ಟಿಪ್ಪಣೆ ಹೊರಡಿಸಿದ್ದಾರೆ.
‘ಕಂದಾಯ ಇಲಾಖೆಯ ಎಲ್ಲ ನೌಕರರು ನಿತ್ಯ ಬೆಳಗ್ಗೆ 10.30ರ ಒಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು. ಕಚೇರಿಯಿಂದ ಸಂಜೆ ತೆರಳುವಾಗ ತಮ್ಮ ಶಾಖೆಯ ಸಂಬಂಧಪಟ್ಟ ಜಂಟಿ ಅಥವಾ ಉಪ ಕಾರ್ಯದರ್ಶಿಯ ಅನುಮತಿ ಪಡೆಯಬೇಕು’ ಎಂದು ಅವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
‘ಕಂದಾಯ ಇಲಾಖೆಯ ಅಧೀನ ಶಾಖೆಗಳಿಗೆ ನಾನು ಖುದ್ದಾಗಿ ಪೂರ್ವಾಹ್ನ 10.45ಕ್ಕೆ ತಪಾಸಣೆಗೆಂದು ಭೇಟಿ ನೀಡಿದಾಗಲೆಲ್ಲ ಶಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಇನ್ನೂ ಹಾಜರಾಗದೇ ಇರುವುದು; ಸಾಯಂಕಾಲ ಕಚೇರಿ ತುರ್ತು ಕೆಲಸ ನಿರ್ವಹಣೆಗಾಗಿ ಸಿಬ್ಬಂದಿಯನ್ನು ಕರೆದಾಗಲೂ ಅವರು ಕಚೇರಿಯಿಂದ ಅತಿ ಬೇಗ ನಿರ್ಗಮಿಸಿರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಕಚೇರಿ ಕೆಲಸಕ್ಕೆ ಅಡಚಣೆಯುಂಟಾಗಿರುತ್ತದೆ’ ಎಂದು ಅವರು ಟಿಪ್ಪಣೆ ಹೊರಡಿಸಲು ಕಾರಣವಾದ ಅಂಶಗಳ ಬಗ್ಗೆ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ಸೆ.25ರಂದು ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ‘ಜನತಾ ದರ್ಶನ’ ನಡೆಸಲು ಸಿಎಂ ಸಿದ್ದರಾಮಯ್ಯ ಸೂಚನೆ
‘ಅಲ್ಲದೇ ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಟಪಾಲು/ಕಡತ ಚಲನವಲನ ವಿಚಾರಣೆಗಾಗಿ ಬಂದಾಗ ವಿನಾಕಾರಣ ಅವರೊಂದಿಗೆ ಕಾಲಹರಣ ಮಾಡುತ್ತಿರುವುದು, ಗಂಟೆಗಟ್ಟಲೇ ಕಾಫಿ/ಟೀ/ಉಪಹಾರಕ್ಕೆಂದು ಕಚೇರಿ ಬಿಟ್ಟು ಹೋಗುವುದು, ಸಂತೆ ಬೀದಿಗಳಲ್ಲಿ ಓಡಾಡುತ್ತಿರುವುದು ಮುಂತಾದವುಗಳು ನನ್ನ ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಈ ರೀತಿ ಪುನರಾವರ್ತನೆಯಾದಲ್ಲಿ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಕಛೇರಿಯ ಬಾಗಿಲ ಬಳಿ ಸಾರ್ವಜನಿಕರಿಗೆ ಸೂಚಿಸುವ ಹಾಗೆ ಕರ್ತವ್ಯದ ನಿರ್ಧಿಷ್ಠ ಸಮಯದ ವಿವರ ಹಾಗೂ ದೂರವಾಣಿ ಸಂಖ್ಯೆ, ಕಾರ್ಯ ವಿಳಂಬವಾದಲ್ಲಿ ಮೇಲ್ಮನವಿ ಪ್ರಾಧಿಕಾರದ ವಿಳಾಸ, ಅಧಿಕಾರಿಗಳು ಸ್ಥಳ ಪರಿಶೀಲನೆ(ನೆಪ)ಗೆಂದು ತೆರಳಿದ್ದರೆ ಕಛೇರಿಯಲ್ಲಿ ಅಧಿಕಾರಿಗಳ ಲಭ್ಯತೆಯ ಕುರಿತು ಮಾಹಿತಿ ಬಹುಮುಖ್ಯವಾದವುಗಳಾಗಿವೆ ಸಾರ್ವಜನಿಕರಿಗೆ.