ಸಂಕಷ್ಟದ ಸುಳಿಯಿಂದ ಹೊರಬರಲಾಗದೆ ಬೀದರ್ ಜಿಲ್ಲೆಯಲ್ಲಿ ಕಳೆದ 15 ತಿಂಗಳಲ್ಲಿ 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕೃಷಿ ಕುಟುಂಬಗಳು, ಈಗ ಸಂಕಷ್ಟಕ್ಕೆ ಸಿಲುಕಿವೆ.
ಕಳೆದ 2023 ಎಪ್ರಿಲ್ 1 ರಿಂದ 2024 ಜುಲೈ 31ರವರೆಗೆ ಔರಾದ್ (5), ಬೀದರ್ (7), ಹುಮನಾಬಾದ್ (5), ಬಸವಕಲ್ಯಾಣ (2) ಭಾಲ್ಕಿ (11), ಹುಲಸೂರ (2) ಚಿಟಗುಪ್ಪ (5) ಹಾಗೂ ಕಮಲನಗರ (2) ತಾಲೂಕುಗಳಲ್ಲಿ ಒಟ್ಟು 39 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ʼ2023-24 ಸಾಲಿನಲ್ಲಿ ಒಟ್ಟು ದಾಖಲಾದ 36 ಪ್ರಕರಣಗಳಲ್ಲಿ ಈಗಾಗಲೇ 36 ರೈತರ ಕುಟುಂಬಗಳಿಗೆ ಪರಿಹಾರಧನ ವಿತರಿಸಲಾಗಿದೆ. 2024-25ನೇ ವರ್ಷದ ಜುಲೈ 31ವರೆಗೆ ವರದಿಯಾದ ಒಟ್ಟು 3 ಆತ್ಮಹತ್ಯೆ ಪ್ರಕರಣಗಳಲ್ಲಿ ರೈತ ಕುಟುಂಬಸ್ಥರಿಗೆ ಪರಿಹಾರ ಧನ ವಿತರಿಸಲು ಬಾಕಿ ಇವೆʼ ಎಂದು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯು ಹೆಚ್ಚಿನ ನೀರಾವರಿ ಪ್ರದೇಶ ಇಲ್ಲದಿದ್ದರೂ ಕಾರಂಜಾ ಜಲಾಶಯ, ಚುಳುಕಿನಾಲಾ ಹಾಗೂ ಮಂಜ್ರಾ ನದಿ ದಡವು ಈ ಪ್ರದೇಶದ ಕೆಲ ರೈತರಿಗೆ ಜೀವನಾಡಿ ಎಂಬಂತಿವೆ. ಆದರೆ ಕಳೆದ ವರ್ಷ ಜಿಲ್ಲೆಯ ಎಲ್ಲ ತಾಲೂಕುಗಳು ʼಬರʼದಿಂದ ತತ್ತರಿಸಿದ್ದವು. ಬಹುತೇಕ ಬೆಳೆ ಹಾನಿಗೀಡಾಗಿದ್ದವು. ರೈತರು ವರ್ಷ ಪೂರ್ತಿ ಶ್ರಮವಹಿಸಿ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರಕುತ್ತಿಲ್ಲ. ಇನ್ನೂ ಕೂಡ ಬೆನ್ನು ಬಿಡದ ತೀವ್ರ ಬರಗಾಲದಿಂದ ಬ್ಯಾಂಕ್ ಸಾಲ ಮರು ಪಾವತಿಸಲಾಗದೆ ಚಿಂತೆಗೀಡಾದ ಬಹುತೇಕ ರೈತರು ನೇಣಿಗೆ ಕೊರಳೊಡ್ಡಿದ್ದಾರೆ.
ಹಾಗಿದ್ದರೆ ಅನ್ನದಾತರ ಆತ್ಮಹತ್ಯೆಗಳು ತಡೆಯಲು ಸಾಧ್ಯವೇ ಇಲ್ಲವೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಅದಕ್ಕೆ ಸರ್ಕಾರದ ಸಹಾಯಹಸ್ತ ರೈತರನ್ನು ತಲುಪುತ್ತಿಲ್ಲ ಮತ್ತು ರೈತರಲ್ಲಿ ಆತ್ಮವಿಶ್ವಾಸ ತುಂಬಲು ಕಾರಣವಾಗಿಲ್ಲ ಎಂಬುದಕ್ಕೆ ಆತ್ಮಹತ್ಯೆಗಳು ಸರಣಿ ರೂಪದಲ್ಲಿ ಮುಂದುವರಿದಿರುವುದೇ ಸಾಕ್ಷಿಯಾಗಿದೆ. ಇನ್ನು ಸಾವಿನ ಮೊರೆ ಹೋದ ಬಹುತೇಕ ಎಲ್ಲರೂ ಸಣ್ಣ ಮತ್ತು ಅತಿಸಣ್ಣ ರೈತರು ಎಂಬುದು ಗಮನಾರ್ಹ ಅಂಶ.

ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಕೇಸರ ಜವಳಗಾ ಗ್ರಾಮದ ರೈತರೊಬ್ಬರು ಪಿಕೆಪಿಎಸ್ ಬ್ಯಾಂಕ್‌ನಲ್ಲಿ ಪಡೆದಿದ್ದ 2.5 ಲಕ್ಷ ರೂ. ಕೃಷಿ ಸಾಲ ಮರು ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಜಮೀನಿನಲ್ಲೇ ನೇಣಿಗೆ ಶರಣಾಗಿದ್ದಾರೆ. ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ಯುವ ರೈತರೊಬ್ಬರು ಬ್ಯಾಂಕ್ ಹಾಗೂ ಖಾಸಗಿಯವರ ಬಳಿ ಕೈಗಡ ಪಡೆದ 7 ಲಕ್ಷ ಸಾಲ ತೀರಿಸಲು ಸಾಧ್ಯವಾಗದೆ ಮನನೊಂದು ಸಾವಿನ ಮೊರೆ ಹೋಗಿದ್ದಾರೆ.
2024ರ ಜುಲೈ ತಿಂಗಳಲ್ಲಿ ಚಿಟಗುಪ್ಪ ತಾಲೂಕಿನ 31 ವರ್ಷದ ರೈತರೊಬ್ಬರು ತಂದೆ ಮಾಡಿದ ಕೃಷಿ ಸಾಲ ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಹೀಗೆ ಬಹುತೇಕ ರೈತರು ಬರ, ಬೆಳೆ ಹಾನಿ, ಸಾಲದ ಹೊರೆ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ರಾಜ್ಯದಲ್ಲಿ 2023 ಎಪ್ರಿಲ್ 1 ರಿಂದ 2024 ಜುಲೈ 4ರೊಳಗೆ ಒಟ್ಟು 1,182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಾಹಿತಿಯನ್ನು ಇಲಾಖೆಯು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದೆ. ಅದರಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಯಲ್ಲಿ 277 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಕಳೆದ 15 ತಿಂಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾದ ಜಿಲ್ಲೆಗಳೆಂದರೆ ಕಲಬುರಗಿ (69), ಬೀದರ್ (36), ರಾಯಚೂರು (18), ಯಾದಗಿರಿ (68), ಕೊಪ್ಪಳ (30), ಬಳ್ಳಾರಿ (19), ಹಾಗೂ ವಿಜಯನಗರ (37). ಯಾದಗಿರಿ ಚಿಕ್ಕ ಜಿಲ್ಲೆಯಾದರೂ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ದಾಖಲಾಗಿವೆ. ಕಲಬುರಗಿಯಲ್ಲಿ ಅತೀ ಹೆಚ್ಚು ಹಾಗೂ ರಾಯಚೂರು ಜಿಲ್ಲೆಯಲ್ಲಿ ಕಡಿಮೆ ರೈತರು ಸಾವಿನ ಮೊರೆ ಹೋಗಿದ್ದಾರೆ.
ʼರೈತರು ಬ್ಯಾಂಕ್‌ಗಳಲ್ಲಿ ಪಡೆದ ಸಾಲ ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದೆ. ರೈತರಿಗೆ ಸಕಾಲಕ್ಕೆ ಬೆಳೆ ವಿಮೆ ಬರುವುದಿಲ್ಲ. ಬಂದರೂ ನಿರೀಕ್ಷೆಯಂತೆ ಜಮೆ ಆಗುವುದಿಲ್ಲ. ಹೀಗಾಗಿ ರೈತರಿಗೆ ಯಾವುದೇ ಭದ್ರತೆ ಇಲ್ಲದಂತಾಗಿ ಆರ್ಥಿಕ ಸಂಕಷ್ಟದಿಂದ ಒದ್ದಾಡುತ್ತಿದ್ದಾರೆ. ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಸಾಲದಿಂದ ಋಣ ಮುಕ್ತವಾಗಿ ಮಾಡಬೇಕು. ಮಾರುಕಟ್ಟೆಯಲ್ಲಿ ನ್ಯಾಯಯುತವಾಗಿ ರೈತರ ಬೆಳೆಗೆ ಬೆಂಬಲ ಬೆಲೆ ದೊರಕುವಂತೆ ಸರ್ಕಾರ ಮಾಡಿದರೆ ರೈತರ ಆತ್ಮಹತ್ಯೆಗಳ ಸಂಖ್ಯೆ ತಡೆಗಟ್ಟಬಹುದುʼ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಬೀದರ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಈ ದಿನ.ಕಾಮ್ ಜೊತೆ ಮಾತನಾಡಿ ಹೇಳಿದರು.
ಎನ್‌ಸಿಆರ್‌ಬಿ ದಾಖಲೆಗಳ ಪ್ರಕಾರ, 2022ರಲ್ಲಿ ಕೃಷಿ ವಲಯದಲ್ಲಿ ತೊಡಗಿಸಿಕೊಂಡ 11,290 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 5207 ರೈತರು, 6083 ಕೃಷಿ ಕಾರ್ಮಿಕರು ಪ್ರಾಣ ತ್ಯಜಿಸಿದ್ದಾರೆ. ದೇಶದ ಒಟ್ಟು 1,70,924 ಆತ್ಮಹತ್ಯೆಗಳನ್ನು ಪರಿಗಣಿಸಿದರೆ ರೈತರ ಸಂಖ್ಯೆ ಶೇ 6.6 ರಷ್ಟಿದೆ.
ಕೆಲವು ರೈತರು ಆತ್ಮಹತ್ಯೆ ಮಾಡಿಕೊಂಡು ವರ್ಷವಾದರೂ, ಅವರ ಅವಲಂಬಿತರಿಗೆ ಪರಿಹಾರ ಸಿಗುವುದಿಲ್ಲ ಎಂಬ ಆರೋಪ ಇದ್ದೇ ಇದೆ. ಆದರೆ ಕೃಷಿ, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸರಿಯಾಗಿ ಮಾನದಂಡ ಅನುಸರಿಸಿದರೆ, ಆತ್ಮಹತ್ಯೆಯಾದ ಕುಟುಂಬಸ್ಥರಿಗೆ ಮಾನವೀಯತೆಯ ದೃಷ್ಟಿಯಿಂದ ತ್ವರಿತವಾಗಿ ಪರಿಹಾರ ನೀಡಬಹುದು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.
ಈ ಸುದ್ದಿ ಓದಿದ್ದೀರಾ? ಬಿಗ್ ಬ್ರೇಕಿಂಗ್: ಎಚ್‌ಡಿಕೆ ಪ್ರಾಸಿಕ್ಯೂಷನ್‌ಗೆ ಎಸ್‌ಐಟಿ ಮನವಿಯನ್ನು 10 ತಿಂಗಳಿಂದ ಬಚ್ಚಿಟ್ಟಿದ್ದ ರಾಜ್ಯಪಾಲ
ಔರಾದ್ ತಾಲೂಕಿನ ಯುವ ರೈತ ಶರಣಬಸವ ಮಸ್ಕಲ್ ಅವರು ಈ ದಿನ.ಕಾಮ್ ಜೊತೆಗೆ ಮಾತನಾಡಿ, ʼಕೃಷಿ ಲಾಭದಾಯಕ ಅಲ್ಲ ಎಂಬ ಯೋಚನೆ ಇಂದಿನ ಯುವಕರಲ್ಲಿ ದಟ್ಟವಾಗಿ ಬೇರೂರಿದೆ. ಸರ್ಕಾರದ ಯೋಜನೆಗಳು ಸಕಾಲಕ್ಕೆ ರೈತರಿಗೆ ತಲುಪುತ್ತಿಲ್ಲ. ರೈತ ಬೆಳೆದ ಬೆಳೆ ಮಾರುಕಟ್ಟೆಯಲ್ಲಿ ಬೆಲೆ ಸಿಗುತ್ತಿಲ್ಲ. ಇದರಿಂದ ರೈತರು ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ನಿರುತ್ಸಾಹ ತೋರುತ್ತಿದ್ದಾರೆ. ಕೃಷಿ ಎಂದರೆ ಮೂಗು ಮುರಿಯುವ ಅದೆಷ್ಟೋ ಪದವಿಧರ ಯುವಕರು ನಗರ, ಪಟ್ಟಣಗಳಿಗೆ ವಲಸೆ ಹೋಗಿ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿಯಲು ಉತ್ಸುಕರಾಗಿದ್ದಾರೆ. ಹಳ್ಳಿಯಲ್ಲಿಯೇ ನೆಲೆಸಿ ʼಒಕ್ಕಲುತನʼದಿಂದ ಬದುಕು ಕಟ್ಟಿಕೊಳ್ಳಲು ಆಸಕ್ತಿಯಿರುವ ಯುವ ಜನರಿಗೆ ಸರ್ಕಾರ, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸೂಕ್ತವಾಗಿ ಗುರುತಿಸಿ ಪ್ರೋತ್ಸಾಹಿಸಿದರೆ ಇತರ ರೈತರಿಗೆ ಮತ್ತಷ್ಟು ಪ್ರೇರಣೆಯಾಗುತ್ತದೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.