ಭ್ರಷ್ಟ ಬಿಜೆಪಿ ಸರ್ಕಾರದಿಂದ ಬೇಸತ್ತ ರಾಜ್ಯದ ಜನತೆ ಮುಂದಿನ ದಿನಗಳಲ್ಲಾದರೂ ತಾವು ನೆಮ್ಮದಿಯಿಂದ ಜೀವನ ನಡೆಸುವ ಸಲುವಾಗಿ ಕಾಂಗ್ರೆಸ್‌ಗೆ ಬಹುಮತ ನೀಡಿ ಗೆಲ್ಲಿಸಿದರು. ಆದರೆ ಜನತೆಯ ನಂಬಿಕೆಗೆ ಚ್ಯುತಿ ತರುವಂತಹ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆರಂಭಿಸಲು ಶುರು ಮಾಡಿದೆಯೇ ಎಂಬ ಅನುಮಾನ ಶುರುವಾಗಿದೆ. ಹಲವು ಭ್ರಷ್ಟಾಚಾರ ಆರೋಪಗಳನ್ನು ಹೊತ್ತಿರುವ ಟಿ. ಶ್ಯಾಮ್ ಭಟ್ ಎಂಬ ವಿವಾದಾತ್ಮಕ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯನನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಟಿ ಶ್ಯಾಮ್ ಭಟ್ ಈ ಹಿಂದೆ ಬಿಡಿಎ ಆಯುಕ್ತರಾಗಿದ್ದರು. ಆಗ ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆಯನ್ನು ಪಡೆಯದೇ ಬಡಾವಣೆ ನಕ್ಷೆಯನ್ನೇ ತಿದ್ದುಪಡಿ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಎದುರಾಗಿತ್ತು. ಆ ಪ್ರಕರಣ ಸಂಬಂಧದ ತನಿಖೆ ಎದುರಿಸುತ್ತಿರುವ ಟಿ ಶ್ಯಾಮ್ ಭಟ್ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದ ಟಿ ಶ್ಯಾಮ್ ಭಟ್ ಅವರನ್ನು ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಸದಸ್ಯರನ್ನಾಗಿ 2023ರ ನವೆಂಬರ್ 25ರಂದು ನೇಮಕ ಮಾಡಿ ಆದೇಶ ಹೊರಡಿಸಿದೆ.
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸಚಿವರಾಗಿರುವ ಎಚ್ ಕೆ ಪಾಟೀಲ್ ಅವರ ಅನುಮೋದನೆ ಮೇರೆಗೆ ಈ ನೇಮಕಾತಿ ನಡೆದಿದೆ ಎನ್ನಲಾಗಿದೆ. ಸರ್ಕಾರ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರಾದ ತಾವರ್ ಚಂದ್ ಗೆಹಲೋತ್ ಅವರು ಅನುಮೋದಿಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿಯುತ್ತಿರುವ ಬಿಜೆಪಿಯಲ್ಲಿ ಗಳ ಇರಿಯುತ್ತಿರುವ ನಾಯಕರು
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೊದಲನೇ ಅವಧಿಯಲ್ಲಿಯೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರನ್ನಾಗಿ ಟಿ ಶ್ಯಾಮ್ ಭಟ್ ಅವರನ್ನು ನೇಮಿಸಿದ್ದರು. ಅವರ ಅಧಿಕಾರವಧಿಯಲ್ಲಿ ಕೆಪಿಎಸ್‌ಸಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡಿತ್ತು ಎನ್ನುವ ಆರೋಪಗಳು ಬಂದಿದ್ದವು. ಇದೀಗ ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾಗಿರುವ ಅವಧಿಯಲ್ಲಿಯೂ ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ಅವರನ್ನು ಸದಸ್ಯರನ್ನಾಗಿ ನೇಮಿಸಿರುವುದು ವಿವಾದಕ್ಕೆ ಗುರಿಯಾಗಿದೆ. ಭ್ರಷ್ಟಾಚಾರ ಎಲ್ಲ ಸರ್ಕಾರಗಳಲ್ಲೂ ಮಾಮೂಲು ಎಂಬುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಸಾಬೀತುಪಡಿಸಲು ಹೊರಟಿದೆ ಎಂಬ ಅನುಮಾನ ಕಾಡತೊಡಗಿದೆ.
ಭ್ರಷ್ಟಚಾರ ಆರೋಪ ಹೊತ್ತಿರುವ ಟಿ ಶ್ಯಾಮ್ ಭಟ್ ನೇಮಕ ಖಂಡಿತವಾಗಿಯು ಪ್ರತಿಪಕ್ಷಗಳಿಗೆ ಮತ್ತೊಂದು ಪ್ರಬಲ ಅಸ್ತ್ರವಾಗುವುದಲ್ಲಿ ಸಂದೇಹವಿಲ್ಲ.

ಶ್ಯಾಮ್ ಭಟ್ ಬಿಡಿಎ ಆಯುಕ್ತರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಪ್ರಕರಣದಲ್ಲಿ ತನಿಖೆ ಕೈಗೊಳ್ಳಲು ಹಿಂದಿನ ಬಿಜೆಪಿ ಸರ್ಕಾರವು ಪೂರ್ವಾನುಮತಿ ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 100 ದಿನದೊಳಗೇ ಟಿ ಶ್ಯಾಮ್ ಭಟ್, ಐಎಎಸ್ ಅಧಿಕಾರಿ ರೂಪ ಅವರ ವಿರುದ್ಧ ವಿಚಾರಣೆ ಕೈಗೊಳ್ಳಲು ಪೂರ್ವಾನುಮತಿ ನೀಡಿ ಇತ್ತೀಚೆಗಷ್ಟೆ ಆದೇಶ ಹೊರಡಿಸಿತ್ತು ಎಂಬುದನ್ನು ಗಮನಿಸಬಹುದು.
ಆದರೆ ಈಗ ವಿವಾದಾತ್ಮಕ ಅಧಿಕಾರಿಯನ್ನು ಮಾನವ ಹಕ್ಕುಗಳ ಆಯೋಗದ ಸದಸ್ಯರನ್ನಾಗಿ ಮಾಡಿರುವುದು ಸರ್ಕಾರದ ಇಬ್ಬಗೆ ನೀತಿಯನ್ನು ತೋರಿಸುತ್ತದೆ.
ಶ್ಯಾಮ್ ಭಟ್ ವಿರುದ್ಧ ಇರುವ ಕೆಲವು ಆರೋಪಗಳು
2012ರಲ್ಲಿ ಭಾಸ್ಕರ್ ರೆಡ್ಡಿ ಮತ್ತು ಇತರರಿಗೆ ಹಂಚಿಕೆಯಾಗಿದ್ದ 60*40 ಅಳತೆಯ ನಿವೇಶನಗಳನ್ನು ಬಿಡಿಎ ಆಯುಕ್ತರ ಆದೇಶದಂತೆ 30*40 ಅಳತೆಯ 12 ನಿವೇಶನಗಳನ್ನಾಗಿ ವಿಂಗಡಿಸಿ ಪ್ರತ್ಯೇಕ ನಿವೇಶನ ಸಂಖ್ಯೆಗಳನ್ನು ನೀಡಲಾಗಿತ್ತು. ಆದರೆ ಈ ಪ್ರಕ್ರಿಯೆ ಸಂಬಂಧ 60*40 ಅಳತೆಯ ನಿವೇಶನದ ಮೂಲ ಹಂಚಿಕೆದಾರರ ಒಪ್ಪಿಗೆಯನ್ನು ಸಹ ಪಡೆಯದೇ ಬಡಾವಣೆ ನಕ್ಷೆ ತಿದ್ದುಪಡಿ ಮಾಡಲಾಗಿತ್ತು. ಇದಕ್ಕೆ ಅಭಿಯಂತರರ ವಿಭಾಗ ಮತ್ತು ಆಡಳಿತ ವಿಭಾಗದ ಅಧಿಕಾರ ದುರುಪಯೋಗವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿತ್ತು.
ಅಲ್ಲದೇ ಈ ನಿವೇಶನಗಳನ್ನು ವಿಭಾಗ ಮಾಡಿ ನಂತರ ವಿಶೇಷ ಪ್ರೋತ್ಸಾಹ ಯೋಜನೆ ಅಡಿಯಲ್ಲಿ 30*40 ಅಳತೆ ನಿವೇಶನಗಳನ್ನು ವಿವಿಧ ವ್ಯಕ್ತಿಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ಪೈಕಿ ಭಾಸ್ಕರ್ ರೆಡ್ಡಿ ಅವರಿಗೆ ಹಂಚಿಕೆಯಾಗಿದ್ದ ನಿವೇಶನದಲ್ಲಿ 30*40 ಅಳತೆ ವಿಸ್ತೀರ್ಣಕ್ಕೆ ಪರಿವರ್ತಿಸಿದ್ದ ನಿವೇಶನ (ಸಂಖ್ಯೆ 1607/69 ಎ)ಯನ್ನು ಪುಟ್ಟಲಕ್ಷ್ಮಮ್ಮ ಎಂಬುವರಿಗೆ ಹಂಚಿಕೆ ಮಾಡಲಾಗಿತ್ತು. ಅದೇ ರೀತಿ 1607/67 ಎ ನಿವೇಶನವನ್ನು ಗಂಗಮ್ಮ ಎಂಬುವರಿಗೆ, 1607/66 ಎ ನಿವೇಶನವನ್ನು ಕೃಷ್ಣ ಎಂಬುವರಿಗೆ, 1607/70 ಎ ನಿವೇಶನವನ್ನು ನಾಗರತ್ನಮ್ಮ ಅವರಿಗೆ, ನಿವೇಶನ ಸಂಖ್ಯೆ 201607/70 16073/71ನ್ನು ರಾಮಚಂದ್ರ ಪಣಿಕಲ್ ಅವರಿಗೆ ಹಂಚಿಕೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಅಂದಿನ ಬಿಡಿಎ ಆಯುಕ್ತ ಟಿ ಶ್ಯಾಮ್ ಭಟ್, ಅಂದಿನ ಉಪ ಕಾರ್ಯದರ್ಶಿ ಐಎಎಸ್ ಅಧಿಕಾರಿ ರೂಪಾ ಮತ್ತು ಇತರೆ ಅಧಿಕಾರಿಗಳು ನೇರ ಶಾಮೀಲಾಗಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಅಂಥ ಅಧಿಕಾರಿಗೆ ಈಗ ಸರ್ಕಾರ ಹೊಸ ಜವಾಬ್ದಾರಿ ನೀಡಿ ವಿವಾದಕ್ಕೆ ಗುರಿಯಾಗಿದೆ.