ರಾಜ್ಯದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದೆ. ಈ ಸಮಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸುವುದರಿಂದ ಮತ್ತಷ್ಟು ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ವಕೀಲರ ಸಂಘದ ಮನವಿ ಆಧರಿಸಿದ ಕರ್ನಾಟಕ ಹೈಕೋರ್ಟ್ ಏ.18ರಿಂದ ಮೇ 31ರವರೆಗೆ ರಾಜ್ಯಾದ್ಯಂತ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಹಾಜರಾಗುವ ವಕೀಲರಿಗೆ ಕಪ್ಪು ಕೋಟು ಧರಿಸುವುದರಿಂದ ವಿನಾಯಿತಿ ನೀಡಿದೆ.
ಈ ಬಗ್ಗೆ ರಿಜಿಸ್ಟ್ರಾರ್ ಕೆ.ಎಸ್.ಭರತ್ ಕುಮಾರ್ ಮಂಗಳವಾರ ಸುತ್ತೋಲೆಯಲ್ಲಿ ಹೊರಡಿಸಿದ್ದಾರೆ. “ಬೇಸಿಗೆ ಸಮಯದಲ್ಲಿ ವಕೀಲರು ಕಪ್ಪು ಕೋಟು ಬದಲಿಗೆ ಸಾದಾ ಬಿಳಿ ಬಣ್ಣದ ಶರ್ಟ್ ಅಥವಾ ಸಲ್ವಾರ್-ಕಮೀಜ್ ಅಥವಾ ಯಾವುದೇ ಶಾಂತ ಬಣ್ಣದ ಬಟ್ಟೆಗಳನ್ನು ಧರಿಸಬಹುದು” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಜ್ಯದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದ್ದು, ತಾಪಮಾನವೂ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಹೀಗಾಗಿ, ಇಂತಹ ಸಂದರ್ಭದಲ್ಲಿ ಕಪ್ಪು ಕೋಟು ಧರಿಸಿ ಬರುವುದರಿಂದ ಮತ್ತಷ್ಟು ಸಮಸ್ಯೆಯಾಗುತ್ತದೆ ಎಂದು ಏಪ್ರಿಲ್ 5 ರಂದು ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರು ಕಪ್ಪು ಕೋಟಿನಿಂದ ವಿನಾಯಿತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗಾಳಿ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ: ಈ ಮಾರ್ಗದಲ್ಲಿ ಸಂಚಾರ ಬಂದ್
ತಾತ್ಕಾಲಿಕವಾಗಿ ಕಪ್ಪು ಕೋಟು ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಮನವಿಯನ್ನು ಆಧರಿಸಿ ಹೈಕೋರ್ಟ್ ವಿನಾಯಿತಿ ನೀಡಿದೆ.
ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ, ಕೊಂಕಣ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕೆಲವು ಭಾಗಗಳಲ್ಲಿ ಮುಂದಿನ ಐದು ದಿನಗಳಲ್ಲಿ ಉಷ್ಣಾಂಶ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.