ಹವಾಮಾನ ವೈಪರೀತ್ಯದ ಹಿನ್ನೆಲೆ, ರಾಜ್ಯದಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿದೆ. ಬೀನ್ಸ್, ಕೊತ್ತಂಬರಿ, ಮೂಲಂಗಿ, ದಂಟಿನ ಸೊಪ್ಪು ಸೇರಿದಂತೆ ನಾನಾ ತರಕಾರಿಗಳ ದರ ದಿನ ಕಳೆದಂತೆ ಏರಿಕೆಯಾಗುತ್ತಲೇ ಇದೆ. ಏಪ್ರಿಲ್‌ನಲ್ಲಿ ದುಬಾರಿಯಾಗಿದ್ದ ಬೀನ್ಸ್ ದರ ಈಗ ₹250 ಆಗಿದೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ಮೂಲಂಗಿ ₹80ಕ್ಕೆ ಏರಿಕೆಯಾಗಿದ್ದು, ಕೊತ್ತಂಬರಿ ಮತ್ತು ದಂಟಿನ ಸೊಪ್ಪು ಬೆಲೆ ಕೂಡ ಏರಿಕೆಯಾಗಿದೆ.
ದೊಡ್ಡಬಳ್ಳಾಪುರದ ಕೃಷ್ಣರಾಜೇಂದ್ರ ಹಾಗೂ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ 15 ದಿನಗಳ ಹಿಂದೆ ಇದ್ದ ತರಕಾರಿ ಬೆಲೆ ಈಗ ಹೆಚ್ಚಳವಾಗಿದೆ. ಕಳೆದ ಎರಡು ಮೂರು ತಿಂಗಳು ಮಳೆ ಬೀಳದ ಕಾರಣ ಬೆಳೆ ಬಂದಿಲ್ಲ. ರೈತರು ಹೆಚ್ಚಾಗಿ ತರಕಾರಿ ಬೆಳೆದಿಲ್ಲ. ಹಾಗೇಯೇ, ಮದುವೆ-ಸಮಾರಂಭಗಳು ಹೆಚ್ಚಾಗಿ ನಡೆಯುತ್ತಿರುವ ಕಾರಣ ತರಕಾರಿ ಬೇಡಿಕೆ ಹೆಚ್ಚಳವಾಗಿದೆ. ಹಾಗೇಯೇ ದರವೂ ಕೂಡ ಹೆಚ್ಚಾಗಿದೆ.
ತೀವ್ರ ತಾಪಮಾನ ಏರಿಕೆ ಮತ್ತು ತೀವ್ರ ವಿದ್ಯುತ್ ಕೊರತೆಯಿಂದ ರೈತರು ತರಕಾರಿ ಬೆಳೆಯಲು ಸಾಧ್ಯವಾಗಿಲ್ಲ. ಅಲ್ಲದೇ, ಅಕಾಲಿಕ ಮಳೆಯ ಹಿನ್ನೆಲೆ, ರೈತರು ಬೆಳೆದ ಅಲ್ಪಸ್ವಲ್ಪ ಬೆಳೆಯೂ ನೆಲಕಚ್ಚಿವೆ. ತರಕಾರಿಗಳು ಬಿಸಿಲಿನ ತಾಪಮಾನಕ್ಕೆ ಬಾಡಿವೆ. ಹೀಗಾಗಿಯೂ ಕೂಡ ರೈತರು ಹೆಚ್ಚಾಗಿ ತರಕಾರಿ ಬೆಳೆಯಲು ಆಸಕ್ತಿ ತೋರಿಲ್ಲ. ಇನ್ನು ಈ ತರಕಾರಿ ಬೆಲೆ ಆಷಾಡ ಮಾಸ ಆರಂಭವಾಗುವವರೆಗೂ ಹೆಚ್ಚಳವಾಗಿರಲಿದೆ ಎನ್ನಲಾಗಿದೆ.
ಪ್ರತಿಯೊಂದು ತರಕಾರಿ ಬೆಲೆಯೂ ಹೆಚ್ಚಳವಾಗಿದ್ದು, ಬಡವರು ಮಧ್ಯಮವರ್ಗದವರು ತರಕಾರಿ ಕೊಳ್ಳಲು ಹೈರಾಣಾಗಿದ್ದಾರೆ. ನಿತ್ಯ 300 ದುಡಿಯುವ ಕೂಲಿ ಕಾರ್ಮಿಕರು ಗ್ರಾಂ ಲೆಕ್ಕದಲ್ಲಿ ತರಕಾರಿ ಖರೀದಿ ಮಾಡುವ ಪರಿಸ್ಥಿತಿ ಎದುರಾಗಿದೆ.
ಬಿನ್ಸ್ ₹240, ಟೊಮೆಟೊ ₹50, ಕ್ಯಾರೇಟ್ ₹80, ಹಾಗಲಕಾಯಿ ₹100, ಬಟಾಣಿ ₹200ಕ್ಕೆ ಏರಿಕೆಯಾಗಿದೆ. ಮೂಲಂಗಿ ಕೂಡ ₹80 ಆಗಿದೆ. ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ ₹80, ದಂಟಿನ ಸೊಪ್ಪಿನ ಒಂದು ಕಟ್ಟು ₹50 ಆಗಿದೆ. ದೊಡ್ಡಬಳ್ಳಾಪುರ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ವಿಪರೀತ ಏರಿಕೆಯಾಗಿದೆ. ಆನೇಕಲ್ ತಾಲ್ಲೂಕಿನಲ್ಲಿ ತರಕಾರಿ ಮತ್ತು ಸೊಪ್ಪಿನ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕೊತ್ತಂಬರಿ ಸೊಪ್ಪು ಮತ್ತು ಬೀನ್ಸ್ ಬೆಲೆ ಶೇ 200ರಷ್ಟು ಏರಿಕೆಯಾಗಿದೆ.
ವಿಜಯಪುರ ಹೋಬಳಿಯಲ್ಲಿ ಬೀನ್ಸ್ ಬೆಲೆ ₹240 ಆಗಿದ್ದು, ಎಲ್ಲ ತರಕಾರಿಗಳ ಬೆಲೆಯಲ್ಲಿ ₹20 ಏರಿಕೆಯಾಗಿದೆ. ಇನ್ನು ಸೊಪ್ಪಿನ ಬೆಲೆ ಶತಕದತ್ತ ಮುಖ ಮಾಡಿದೆ.
ದಾವಣಗೆರಿಯಲ್ಲಿ ತರಕಾರಿ ಬೆಲೆ ಏರಿಕೆಯಾಗಿ, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಬೀನ್ಸ್ ಕೆ.ಜಿಗೆ ₹250, ಟೊಮೆಟೊ ₹60, ಈರುಳ್ಳಿ ₹30, ಮೆಣಸಿನಕಾಯಿ ₹120, ಸೌತೆಕಾಯಿ ₹80, ಕ್ಯಾರೆಟ್ ₹80 ಆಗಿದೆ. ಸೊಪ್ಪುಗಳ ದರ ಕೂಡ ಹೆಚ್ಚಳವಾಗಿದೆ. ಬೆಳಗಾವಿ, ಊಟಿ, ತಮಿಳುನಾಡು, ಆಂಧ್ರ, ಕೋಲಾರದಿಂದ ದಾವಣಗೆರೆಗೆ ತರಕಾರಿ ಬರುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಳಕೆಯಾಗದ ಪ್ರದೇಶಾಭಿವೃದ್ಧಿ ನಿಧಿ; ಶಾಸಕರಾಗಿ ಮುಂದುವರಿಯಲು ಯೋಗ್ಯರಲ್ಲ
ಬೆಂಗಳೂರಿನ ಹಾಪ್ಕಾಮ್ಸ್ ಮಳಿಗೆಗಳಲ್ಲಿ ಈಗ ಒಂದು ಕೆಜಿ ಬೀನ್ಸ್ ₹220 ಮಾರಾಟವಾಗುತ್ತಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಕೆಜಿಗೆ ₹250 ರಿಂದ ₹290 ಇದೆ. ಅದೇ ರೀತಿ, ಹಾಪ್ಕಾಮ್ಸ್ ಮಳಿಗೆಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ಕೆಜಿಗೆ ₹280 ರಿಂದ ₹320 ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈಗ ಕೊತ್ತಂಬರಿ ಸೊಪ್ಪು, ಪ್ರತಿ ಕಟ್ಟಿಗೆ ₹100ಗೆ ಮಾರಾಟವಾಗುತ್ತಿದೆ.
ಹಾಪ್ಕಾಮ್ಸ್ ಮಳಿಗೆಗಳಲ್ಲಿ ಮೆಂತ್ಯೆ ಸೊಪ್ಪು ಕೆಜಿಗೆ ₹220 ಮಾರಾಟವಾಗುತ್ತಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕಟ್ಟಿಗೆ ₹120 ರಿಂದ ₹150ಗೆ ಸಿಗುತ್ತಿದೆ. ಹಾಪ್ಕಾಮ್ಸ್ ಮಳಿಗೆಗಳಲ್ಲಿ ಶುಂಠಿ ಕೆಜಿಗೆ ₹195 ಮತ್ತು ಬೆಳ್ಳುಳ್ಳಿ ಕೆಜಿಗೆ ₹338ಗೆ ಮಾರಾಟವಾಗುತ್ತಿದೆ.