ಈ ದಿನ ಸಂಪಾದಕೀಯ | ಬಳಕೆಯಾಗದ ಪ್ರದೇಶಾಭಿವೃದ್ಧಿ ನಿಧಿ; ಶಾಸಕರಾಗಿ ಮುಂದುವರಿಯಲು ಯೋಗ್ಯರಲ್ಲ

Date:

ಶಾಸಕರಾಗಿ, ಸಂಸದರಾಗಿ ಆಯ್ಕೆಯಾದ ನಂತರ ಕನಿಷ್ಠ ಕರ್ತವ್ಯವನ್ನು ಮಾಡಲೇ ಬೇಕು. ಇಲ್ಲದಿದ್ದರೆ ಆ ಸ್ಥಾನಕ್ಕೆ ಬರುವ ಅಗತ್ಯವೇ ಇಲ್ಲ. ಶಾಸಕರ ಪ್ರದೇಶಾಭಿವೃದ್ಧಿಯ ನಿಧಿ ಬಳಕೆ ಮಾಡಲು ಆಗದವರು ತಮ್ಮ ಸ್ವಂತ ಹಣದಿಂದ ಜನಸೇವೆ ಏನಾದರೂ ಮಾಡಿದ್ದರೆ ಅದನ್ನು ತಿಳಿಸಲಿ

 

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಈ ಮಧ್ಯೆ ಆರೇ ತಿಂಗಳೊಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ವಿರೋಧ ಪಕ್ಷಗಳ ಬಾಯಿ ಬಂದ್‌ ಆಗುವಂತೆ ಮಾಡಿತ್ತು. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂಬ ವಾದವನ್ನು ವಿರೋಧಪಕ್ಷಗಳು ಮಾಡುತ್ತಿವೆ. ರಾಜ್ಯ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿಗೆ ಹಾಕಬೇಕಿದ್ದ ಹಣವನ್ನು ಬಿಟ್ಟಿ ಯೋಜನೆಗಳಿಗೆ ವ್ಯಯಿಸಿದೆ ಎಂದು ವಿರೋಧ ಪಕ್ಷಗಳು ಟೀಕಿಸುತ್ತಲೇ ಇವೆ. ವಿರೋಧ ಪಕ್ಷಗಳಿಗೆ ಆಡಳಿತ ಪಕ್ಷವನ್ನು ಟೀಕಿಸಿ ಇಕ್ಕಟ್ಟಿಗೆ ಸಿಲುಕಿಸುವುದೇ ಪ್ರಧಾನ ಕೆಲಸ. ಈ ಮಧ್ಯೆ ಸರ್ಕಾರ ರಚನೆಯಾದ ಆರಂಭದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನ ಕೆಲ ಶಾಸಕರೇ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ ಎಂಬ ಆರೋಪವನ್ನೂ ಮಾಡಿದ್ದರು.

ಈ ಒಂದು ವರ್ಷದ ಅವಧಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಎಷ್ಟು ಖರ್ಚು ಮಾಡಿದ್ದೇವೆ ಎಂಬ ಅಂಕಿಅಂಶಗಳ ಸಹಿತ ವಿರೋಧ ಪಕ್ಷಗಳಿಗೆ ಉತ್ತರ ನೀಡಿತ್ತು ಸಿದ್ದರಾಮಯ್ಯ ಸರ್ಕಾರ.

ಆದರೆ, ಈಗ ಬಂದ ವರದಿಯ ಪ್ರಕಾರ 2023-24ರಲ್ಲಿ ಶಾಸಕರ ಪ್ರದೇಶಾಭಿವೃದ್ಧಿಗೆ ಬಿಡುಗಡೆಯಾದ ರೂ. 1,038 ಕೋಟಿ ನಿಧಿ ಬಳಕೆಯಾಗಿಲ್ಲ. ತಮ್ಮ ಕ್ಷೇತ್ರಕ್ಕೆ ಬಂದಿರುವ ನಿಧಿಯನ್ನು ಬಳಸಲೂ ಶಾಸಕರು ನಿರ್ಲಕ್ಷ್ಯ ತೋರುತ್ತಿದ್ದಾರಂತೆ. ಇಷ್ಟು ಹಣ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಯಲ್ಲಿ ವೆಚ್ಚವಾಗದೇ ಉಳಿದಿದೆ. ಕೇವಲ ರೂ. 218.23 ಕೋಟಿ ವ್ಯಯವಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳು ನಡೆಸಿದ ಎಲ್ಲ ಇಲಾಖೆಗಳ ಕಾರ್ಯದರ್ಶಿ ಮತ್ತು ಇಲಾಖಾ ಮುಖ್ಯಸ್ಥರ ಸಭೆಯಲ್ಲಿ ಈ ವಿಷಯ ಗೊತ್ತಾಗಿದೆ.

ಶಾಸಕರು ನೀಡಿರುವ ಕ್ರಿಯಾ ಯೋಜನೆಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳು ತ್ವರಿತವಾಗಿ ಸ್ಪಂದಿಸಿಲ್ಲ, ಆಡಳಿತಾತ್ಮಕ ಅನುಮೋದನೆ ನೀಡಿದ ಕಾಮಗಾರಿಗಳ ಅನುಷ್ಠಾನ ಸಂಸ್ಥೆಗಳಿಗೆ ಶೇ. 40 ರಷ್ಟು ಅನುದಾನ ಬಿಡುಗಡೆ ಮಾಡದಿರುವುದು, ಏಜೆನ್ಸಿಗಳ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಕೆಲಸ ಶುರು ಮಾಡದೇ ಇರುವುದು ಮುಂತಾದ ಕಾರಣಗಳಿಂದ ನಿಧಿ ಬಳಕೆಯಾಗಿಲ್ಲ ಎಂದು ಹೇಳಲಾಗಿದೆ. ಶಾಸಕರ ಮಾತಿಗೆ ಅಧಿಕಾರಿಗಳು ಬೆಲೆ ಕೊಟ್ಟಿಲ್ಲ ಎಂಬ ಮಾತನ್ನು ಸದ್ಯ ನಂಬುವುದು ಕಷ್ಟ. ಹಾಗಿದ್ದರೆ ಇನ್ನೇನು ಕಾರಣ ಇರಬಹುದು ?

ಶಾಸಕರು ಪ್ರತಿ ವರ್ಷ ಜೂನ್‌ ತಿಂಗಳ ಒಳಗಾಗಿ ವಾರ್ಷಿಕ ರೂ. 2ಕೋಟಿಯ ಕಾಮಗಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು, ಆ ಕಾಮಗಾರಿಗಳನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸಬೇಕು ಎಂಬ ನಿಯಮವಿದೆ. ಆದರೆ, ಈ ಯಾವ ನಿಯಮವೂ ಪಾಲನೆಯಾಗುತ್ತಿಲ್ಲ. ಶಾಸಕರಿಗೆ ತಮ್ಮ ನಿಧಿ ಬಳಕೆ ಮಾಡುವುದಕ್ಕಿಂತ ಅಕ್ರಮ ಮಾರ್ಗಗಳಲ್ಲಿ ಲಪಟಾಯಿಸುವುದರಲ್ಲೇ ಹೆಚ್ಚು ಆಸಕ್ತಿ. ಶಾಸಕರ ಆಸ್ತಿಪಾಸ್ತಿಗಳು ಅವಧಿಯಿಂದ ಅವಧಿಗೆ ಹಿಗ್ಗುತ್ತಿರುವ ಪ್ರಮಾಣ ಗಮನಿಸಿದರೆ ಅವರೆಲ್ಲ ರಿಯಲ್‌ ಎಸ್ಟೇಟ್‌, ಗಣಿಗಾರಿಕೆ, ಅಕ್ರಮ ಮರಳು ಗಣಿಗಾರಿಕೆ, ಮುಂತಾದ ಸ್ವ ಉದ್ಯೋಗದಲ್ಲಿ ಮುಳುಗಿರುವುದು ಕಂಡೀತು.

ಶಾಸಕರ ಪ್ರದೇಶಾಭಿವೃದ್ಧಿಗೆಂದು ಸರ್ಕಾರ ನೀಡುವ ನಿಧಿಯನ್ನು ಬಳಸಲೂ ಶಾಸಕರು ಉತ್ಸಾಹ ತೋರುತ್ತಿಲ್ಲ ಎಂದ ಮೇಲೆ ಅವರು ಶಾಸಕರಾಗಿ ಮುಂದುವರಿಯಲು ಯೋಗ್ಯರಲ್ಲ. ಉತ್ತರ ಕರ್ನಾಟಕದ ಮೂಲಸೌಕರ್ಯದಲ್ಲಿ ಬಹಳ ಹಿಂದುಳಿದ ಜಿಲ್ಲೆಗಳಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ, ಶಾಲಾ ಕೊಠಡಿ ಮುಂತಾದ ಹಲವು ಸಮಸ್ಯೆಗಳಿರುತ್ತವೆ. ತಮ್ಮ ಕ್ಷೇತ್ರದ ಅಭಿವೃದ್ಧಿಯಾಗಬೇಕು ಎಂಬ ಕನಿಷ್ಠ ಕಾಳಜಿ, ತಹತಹ ಶಾಸಕರಾದವರಿಗೆ ಇದ್ದಿದ್ದರೆ ಇನ್ನೂ ಮುರುಕಲು ಕಟ್ಟಡಗಳಲ್ಲಿ ಶಾಲೆಗಳನ್ನು ನಡೆಸುವ ಸ್ಥಿತಿ ಇರುತ್ತಿರಲಿಲ್ಲ. ಸಾವಿರಾರು ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರಲಿಲ್ಲ.

ಶಾಸಕರು ಮನಸ್ಸು ಮಾಡಿದರೆ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಬಹುದು. ಹೆಚ್ಚುವರಿ ಕೊಠಡಿಗಳು, ಬಿಸಿಯೂಟದ ಮನೆಗಳು, ಅಂಗನವಾಡಿ ಕಟ್ಟಡಗಳನ್ನು ಕಟ್ಟಿಸಬಹುದು. ಆದರೆ ದೇಶದ ದೌರ್ಭಾಗ್ಯ ಏನೆಂದರೆ ದುಷ್ಟರು, ದುರುಳರು, ವಾಮ ಮಾರ್ಗದಿಂದ ಅಧಿಕಾರಕ್ಕೆ ಬರುವವರೇ ಹೆಚ್ಚು. ಚುನಾವಣೆಯ ಸಮಯದಲ್ಲಿ ಇದೇ ಮೂಲಸೌಕರ್ಯ ವಂಚಿತ ಮತದಾರರಿಗೆ ಹಣ, ಹೆಂಡ, ಸೀರೆ ಹಂಚಿ ವೋಟ್‌ ಪಡೆಯುವ ಖಾತರಿ ಅವರಿಗಿದೆ. ಹಾಗಾಗಿಯೇ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರಿಗೆ ಚಿಂತೆ ಇಲ್ಲ.

ಒಂದು ವರ್ಷದಲ್ಲಿ ಎರಡು ಕೋಟಿ ರೂಪಾಯಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗದ ನಾ ಲಾಯಕ್‌ ಶಾಸಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಶಾಸಕರಾದವರಿಗೆ ಮಂತ್ರಿ ಸ್ಥಾನದ ಮೇಲೆ ಕಣ್ಣು, ಮಂತ್ರಿಯಾದರೆ ಸಾಕೇ ಹೆಂಡತಿ, ಮಕ್ಕಳಿಗೂ ಟಿಕೆಟ್‌ ಕೊಡಿಸುವ ಚಿಂತೆ. ಜನರ ಚಿಂತೆ ಇನ್ನೆಲ್ಲಿಯದು? ಅಭಿವೃದ್ಧಿಗೆ ಅನುದಾನ ಕೊಡುತ್ತಿಲ್ಲ, ಕ್ಷೇತ್ರದ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂದು ಅಲವತ್ತುಕೊಂಡ ಶಾಸಕರು ಈಗ ಏನು ಹೇಳುತ್ತಾರೆ?

ರಾಜಕಾರಣ ಎಂಬುದು ಸೇವೆ ಎಂದು ಹೇಳುವುದು ಹಾಸ್ಯಾಸ್ಪದ. “ಜನರ ಸೇವೆಯೇ ಜನಾರ್ದನನ ಸೇವೆ”, “ಸರ್ಕಾರದ ಕೆಲಸ ದೇವರ ಕೆಲಸ” ಎಂಬುದೆಲ್ಲ ಪ್ರಜಾಪ್ರಭುತ್ವದ ಅಣಕ. ರಾಜಕಾರಣ ಹಣವಂತರ, ಬಲವಂತರ, ಬಲಿಷ್ಠ ಜಾತಿಗಳ ಮೇಲಾಟವಾಗಿ ಬಹಳ ಕಾಲವಾಗಿದೆ. ಆದರೆ, ಶಾಸಕರಾಗಿ, ಸಂಸದರಾಗಿ ಆಯ್ಕೆಯಾದ ನಂತರ ಕನಿಷ್ಠ ಕರ್ತವ್ಯವನ್ನು ಮಾಡಲೇ ಬೇಕು. ಇಲ್ಲದಿದ್ದರೆ ಆ ಸ್ಥಾನಕ್ಕೆ ಬರುವ ಅಗತ್ಯವೇ ಇಲ್ಲ. ಶಾಸಕರ ಪ್ರದೇಶಾಭಿವೃದ್ಧಿಯ ನಿಧಿ ಬಳಕೆ ಮಾಡಲು ಆಗದವರು ತಮ್ಮ ಸ್ವಂತ ಹಣದಿಂದ ಜನಸೇವೆ ಏನಾದರೂ ಮಾಡಿದ್ದರೆ ಅದನ್ನಾದರೂ ತಿಳಿಸಲಿ.

ತ್ವರಿತವಾಗಿ ನಿಧಿ ಬಳಕೆ ಮಾಡಬೇಕು. ಎರಡು ವರ್ಷಕ್ಕೂ ಹೆಚ್ಚು ಅವಧಿಯವರೆಗೆ ಹಣ ಖರ್ಚು ಮಾಡದಿದ್ದರೆ ನಿಧಿ ವಾಪಸ್‌ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ. ಈ ಎಚ್ಚರಿಕೆ ಸರಿಯಾಗಿದೆ. ಆದರೆ ಒತ್ತಡಕ್ಕೆ ಮಣಿದು ನಿಧಿಯನ್ನು ಅಪವ್ಯಯ ಮಾಡಿದರೆ ಅಪಾಯಕಾರಿ.

ರಾಜ್ಯದಲ್ಲಿ ಶೇ.100ರಷ್ಟು ಮೂಲಸೌಕರ್ಯ ಹೊಂದಿರುವ ಯಾವ ವಿಧಾನಸಭಾ ಕ್ಷೇತ್ರವೂ ಇರಲಾರದು. ಹಾಗೆಯೇ ಶಾಸಕರ ಬಳಿ ಸಮಸ್ಯೆ ಹೇಳಿಕೊಂಡು ಬರುವ ಜನರಿಗೇನೂ ಕೊರತೆಯಿರಲ್ಲ. ಇಚ್ಛಾಶಕ್ತಿ ಕೊರತೆಯಷ್ಟೇ. ಅದೇನೇ ಇದ್ದರೂ ಪ್ರದೇಶಾಭಿವೃದ್ಧಿ ನಿಧಿ ಸಕಾಲದಲ್ಲಿ ಸದ್ಬಳಕೆ ಮಾಡದಿರುವುದು ಅಕ್ಷಮ್ಯ. ಮತದಾರರಿಗೆ ಮಾಡುವ ಘೋರ ಅನ್ಯಾಯ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಕಿವಿ ಹಿಂಡುವ ಕೆಲಸ ಮಾಡಬೇಕು. ಅಧಿಕಾರಿಗಳಿಗೂ ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಕಳಂಕ ಹೊರಲು ಸಿದ್ಧವಿರಬೇಕು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ವೀರಣ್ಣ ಮಡಿವಾಳರ ಅವರನ್ನು ಅವಮಾನಿಸಿದ್ದೇ ಅನಾಗರಿಕತೆ! ಅಮಾನತನ್ನು ವಾಪಸು ಪಡೆಯಿರಿ

ಸರ್ಕಾರಿ ಶಾಲೆಗಳು ಸದ್ದಿಲ್ಲದೆ ಸಾಯುತ್ತಿರುವ ಈ ದಿನಮಾನಗಳಲ್ಲಿ ದಮನಿತರು, ದೀನ ದುರ್ಬಲರು,...

ಈ ದಿನ ಸಂಪಾದಕೀಯ | ರಾಜ್ಯ ಸರ್ಕಾರದ ‘ಗೃಹ ಆರೋಗ್ಯ’ ಮತ್ತೊಂದು ಗ್ಯಾರಂಟಿ ಯೋಜನೆಯೇ?

ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ಮತ್ತು ಔಷಧ ತಲುಪಿಸುವ ನಿಟ್ಟಿನಲ್ಲಿ...

ಈ ದಿನ ಸಂಪಾದಕೀಯ | ಸ್ಥಳೀಯ ಸರ್ಕಾರಗಳ ಚುನಾವಣೆ ವಿಳಂಬ; ಕಾಂಗ್ರೆಸ್ ನಡೆ ಸಂವಿಧಾನ ವಿರೋಧಿಯಲ್ಲವೇ?

'ಸಂವಿಧಾನ ಉಳಿವಿಗಾಗಿ ನಮ್ಮ ಹೋರಾಟ' ಎಂದು ಸಂವಿಧಾನ ಪುಸ್ತಕ ಹಿಡಿದು ಎಲ್ಲ...

ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ

2025ರ ವಿಧಾನಸಭಾ ಚುನಾವಣೆಗೆ ಬಿಹಾರ ಸಿದ್ಧವಾಗುತ್ತಿದೆ. ಪ್ರಧಾನಿ ಮೋದಿ ಅವರು ಬಿಹಾರದತ್ತ...

Download Eedina App Android / iOS

X