ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿ ಆಗಬೇಕು ಎಂಬ ಮಹದಾಸೆಯಿಂದ ರಾಜ್ಯ ಸರ್ಕಾರವನ್ನು ಉರುಳಿಸಲು ಸಾವಿರ ಕೋಟಿ ತೆಗೆದಿಟ್ಟಿದ್ದಾರೆ. ಶಾಸಕರ ಖರೀದಿ, ಆಪರೇಷನ್‌ಗೆ ಬಿಜೆಪಿಗೆ ವರಿಷ್ಠರು ಅವಕಾಶ ನೀಡುವುದಿಲ್ಲ, ನಾವೂ ಒಪ್ಪುವುದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆರೋಪ ಮಾಡಿದರು.
‘ರಾಜ್ಯ ಸರ್ಕಾರ ತಾನಾಗಿಯೇ ಪತನವಾಗುವ ಕಾಲ ಸನ್ನಿಹಿತವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಉರುಳಿಸಲು ಬಿಜೆಪಿ ಪ್ರಯತ್ನ ಮಾಡುವುದಿಲ್ಲ. ಸರ್ಕಾರ ಬೀಳಿಸಲು ಕೆಲವರ ಬಳಿ ಹಣ ಇರಬಹುದು. ಏಕೆಂದರೆ ಅವರ ಬಳಿ ಭ್ರಷ್ಟಾಚಾರ ಮಾಡಿದ ಸಾಕಷ್ಟು ಸಂಪತ್ತು ಇದೆ. ಆದರೆ, ಇದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡುವುದಿಲ್ಲ’ ಎಂದು ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
‘ಹಣ ಮೀಸಲು ಇಟ್ಟುಕೊಂಡವರು ಯಾರೂ ಎಂಬುದನ್ನು ನೀವೇ (ಪತ್ರಕರ್ತರು) ಅಂದಾಜು ಮಾಡಬೇಕು. ಅವರ ಹೆಸರನ್ನು ನಾನು ಹೇಳುವುದಿಲ್ಲ. ಈ ಹಿಂದೆ ಅವರ ಮನೆಯಲ್ಲಿ ನೋಟು ಎಣಿಕೆ ಯಂತ್ರ ಪತ್ತೆಯಾಗಿತ್ತು. ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ದೊಡ್ಡ ಕ್ರಾಂತಿ ನಡೆಯುವುದಾಗಿ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರ ವಿಸರ್ಜನೆಯಾಗುವವರೆಗೆ ನಾವು ಕಾಯುತ್ತೇವೆ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.
‘ಪಕ್ಷ ಉಳಿಸಲು ಪ್ರಯತ್ನ ಮಾಡುತ್ತಿರುವ ನಾವು ಭಿನ್ನಮತಿಯರಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಮುಂದಿನ ಡಿಸೆಂಬರ್‌ವರೆಗೂ ಕಾದು ನೋಡುತ್ತೇವೆ. ಆ ಬಳಿಕ ಪಕ್ಷದ ತೀರ್ಮಾನ ನೋಡಿಕೊಂಡು ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಮುಂದೆ ಓದಿದ್ದೀರಾ? ಈ ದಿನ ಸಂಪಾದಕೀಯ | ವಿಧಾನಸೌಧದಲ್ಲೇ ಅತ್ಯಾಚಾರ? ಇದು ಕೇವಲ ತನಿಖೆಯಿಂದ ಬಗೆಹರಿಯುವ ಸಂಗತಿಯಲ್ಲ
‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆಗೆ ನಾವು ಪಟ್ಟು ಹಿಡಿದಿಲ್ಲ. ಪಕ್ಷದ ವೇದಿಕೆಯಲ್ಲಿ ಕೆಲ ವಿಚಾರಗಳ ಕುರಿತು ಚರ್ಚಿಸಿದ್ದೇವೆ. ಹೈಕಮಾಂಡ್ ಎಲ್ಲರ ಅಭಿಪ್ರಾಯ ಪಡೆದಿದೆ. ವಿಜಯೇಂದ್ರ ಕುರಿತು ಬಹಿರಂಗವಾಗಿ ಮಾತನಾಡದಂತೆ ಪಕ್ಷ ಸೂಚನೆ ನೀಡಿದೆ. ಹೀಗಾಗಿ ಏನನ್ನೂ ನಾನು ಮಾತನಾಡುವುದಿಲ್ಲ’ ಎಂದು ಹೇಳಿದರು.
ಬಿ ವೈ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪಣತೊಟ್ಟಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಭಿನ್ನರ ಬಣದ ಗೋಪ್ಯ ಸಭೆ ಇಲ್ಲಿನ ಜಿಎಂ ಐಟಿ ಆವರಣದ ಅತಿಥಿ ಗೃಹದಲ್ಲಿ ಭಾನುವಾರ ನಡೆಯಿತು.
ಮಾಜಿ ಸಂಸದರಾದ ಜಿ. ಎಂ. ಸಿದ್ದೇಶ್ವರ, ಪ್ರತಾಪ್ ಸಿಂಹ, ಹರಿಹರ ಶಾಸಕ ಬಿ.ಪಿ. ಹರೀಶ್ ಸೇರಿ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ರಮೇಶ ಜಾರಕಿಹೊಳಿ ಗೈರಾಗಿದ್ದರು.
‘ಬೆಳಗಾವಿ ಬಳಿಕ ನಾವು ಎಲ್ಲಿಯೂ ಸಭೆ ಮಾಡಿಲ್ಲ. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನಡೆದ ಗಲಾಟೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಹಲವು ಪ್ರಕರಣ ದಾಖಲಿಸಲಾಗಿದೆ. ಇದು ಹೀಗೆ ಮುಂದುವರಿದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಲು ದಾವಣಗೆರೆಗೆ ಬಂದಿದ್ದೇವೆ’ ಎಂದು ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿದರು.
