ಸಾಲ ತೀರಿಸಲು ಯುಟ್ಯೂಬ್, ವೆಬ್‌ಸೀರಿಸ್‌ಗಳನ್ನು ನೋಡಿ ಕಳ್ಳತನ ಮಾಡಲು ತೀರ್ಮಾನಿಸಿ, ತಾಯಿಯ ಸ್ನೇಹಿತೆಯ ಮನೆಗೆ ಕನ್ನ ಹಾಕಿದ್ದ ಆರೋಪಿಯೊಬ್ಬನನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಮದನ್ ಕುಮಾರ್(34) ಬಂಧಿತ. ಕೆ.ಪಿ.ಅಗ್ರಹಾರದ ಟೆಲಿಕಾಂ ಲೇಔಟ್ ನಿವಾಸಿ. ಈತ ಮೆಕಾನಿಕಲ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದನು. ಸಾಲ ತೀರಿಸುವುದಕ್ಕೆ ತಾಯಿಯ ಸ್ನೇಹಿತೆ ಮನೆ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದನು.
ಕೆ.ಪಿ.ಅಗ್ರಹಾರ ಪೊಲೀಸರು ಈತನನ್ನು ಬಂಧಿಸಿ, ಈತನಿಂದ ₹6.57 ಲಕ್ಷ ಮೌಲ್ಯದ 110 ಗ್ರಾಂ ಚಿನ್ನಾಭರಣ, ₹30 ಸಾವಿರ ಮೌಲ್ಯದ 458 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ ₹1.35 ಲಕ್ಷ ನಗದು ವಶಕ್ಕೆ ಪಡೆದಿದ್ದಾರೆ.
ಏನಿದು ಪ್ರಕರಣ?
ಮದನ್ ಕುಮಾರ್ ಮೆಕಾನಿಕಲ್ ಎಂಜಿನಿಯರ್ ಆಗಿದ್ದನು. ಕುಂಬಳಗೋಡಿನಲ್ಲಿ ಅಲ್ಯೂಮಿನಿಯಂ ಸಂಬಂಧಿತ ಕಾರ್ಖಾನೆ ನಡೆಸುತ್ತಿದ್ದನು. ಕಳೆದ ವರ್ಷ ವಿದ್ಯುತ್ ಅವಘಡದಿಂದ ಇಡೀ ಕಾರ್ಖಾನೆ ಸುಟ್ಟು ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು.
ನಷ್ಟದಿಂದ ಕಂಗೆಟ್ಟಿದ್ದ ಆತ ಹಲವರ ಬಳಿ ಸಾಲ ಮಾಡಿದ್ದನು. ಈತನಿಗೆ ಸಾಲ ತೀರಿಸೋಕೆ ಆಗಲಿಲ್ಲ. ಇನ್ನೊಂದೆಡೆ ಕೆಲಸಕ್ಕೂ ಹೋಗುತ್ತಿರಲಿಲ್ಲ.
ಯುಟ್ಯೂಬ್, ವೆಬ್‌ಸೀರಿಸ್ ನೋಡಿ ಕಳ್ಳತನ ಮಾಡಲು ತೀರ್ಮಾನ ಮಾಡಿದ್ದನು. ಅದರಂತೆ, ತನ್ನ ತಾಯಿಯ ಸ್ನೇಹಿತೆ ಮನೆಗೆ ಕನ್ನ ಹಾಕಲು ಹೊಂಚು ಹಾಕಿದ್ದನು.
ಆರೋಪಿ ಮದನ್ ಆತನ ತಾಯಿಯ ಸ್ನೇಹಿತೆಯ ಮನೆಗೆ ಕನ್ನ ಹಾಕಲು ಯೋಜನೆ ರೂಪಿಸಿದ್ದನು. ದಂಪತಿಯ ದಿನನಿತ್ಯದ ಚಟುವಟಿಕೆ ತಿಳಿದಿದ್ದ ಆತ ಜ.17ರಂದು ಕಳ್ಳತನ ಮಾಡಲು ದಿನಾಂಕ ನಿಗದಿ ಮಾಡುತ್ತಾನೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಜಯನಗರ ಹೋಟೆಲ್ನಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯ ಬಂಧನ
ನಗರದ ಟೆಲಿಕಾಂ ಲೇಔಟ್‌ನಲ್ಲಿ ವಾಸವಾಗಿರುವ ವೃದ್ಧ ದಂಪತಿ ಎಂದಿನಂತೆ ಬೆಳಗ್ಗೆ 8 ಗಂಟೆಗೆ ವಾಯುವಿಹಾರಕ್ಕೆ ಹೋಗಿದ್ದಾರೆ. ಇವರು ಬೆಳಗ್ಗೆ 8 ಗಂಟೆಗೆ ವಾಯುವಿಹಾರಕ್ಕೆ ತೆರಳಿದರೆ, ಮನೆಗೆ ಬೆಳಗ್ಗೆ 10 ಗಂಟೆಗೆ ವಾಪಸ್ ಬರುತ್ತಿದ್ದರು.
ಇದನ್ನು ಅರಿತಿದ್ದ ಆರೋಪಿ ಅವರು ವಾಕಿಂಗ್ ತೆರಳಿದ ತಕ್ಷಣ ಬಾಗಿಲನ್ನು ವುಡ್ ಕಟರ್‌ನಿಂದ ಕತ್ತರಿಸಿ ಮನೆ ಒಳಗೆ ನುಗ್ಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದು ಕಳ್ಳತನ ಮಾಡಿದ್ದಾನೆ.
ವೃದ್ಧ ದಂಪತಿ ಮನೆಗೆ ಬಂದಾಗ ಕೃತ್ಯ ಬಯಲಾಗಿದೆ. ದಂಪತಿ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಸಿಸಿ ಕ್ಯಾಮೆರಾದ ಡಿವಿಆರ್ ಕದ್ದು ಪರಾರಿಯಾಗಿದ್ದನು.