ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ, ಬೆಂಗಳೂರು ಜಲಮಂಡಳಿ ಅಧ್ಯಕ್ಷರು ನೀರಿನ ಬಗ್ಗೆ ನಾಗರಿಕರು ಆತಂಕ ಪಡಬೇಡಿ ಎಂದು ಹೇಳಿದ್ದಾರೆ. ಈ ನಡುವೆಯೇ, ನಗರಕ್ಕೆ ಉದ್ಯೋಗ ಅರಸಿ ಬಂದು ಇಲ್ಲಿಯೇ ನೆಲೆಸಿದ್ದ ಐಟಿ ಉದ್ಯೋಗಿಗಳು ನೀರಿನ ಕೊರತೆ ಹಿನ್ನೆಲೆ, ತಾತ್ಕಾಲಿಕವಾಗಿ ನಗರ ತೊರೆದು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ನೀರಿನ ಬಿಕ್ಕಟ್ಟು ನಗರದಲ್ಲಿ ಎಷ್ಟು ಪರಿಣಾಮ ಬೀರಿದೆ ಎಂದರೆ ಬಹುರಾಷ್ಟ್ರೀಯ ಸಂಸ್ಥೆಗಳ ಅನೇಕ ಟೆಕ್ ಉದ್ಯೋಗಿಗಳು ಮೈಸೂರಿನಲ್ಲಿ ಆಶ್ರಯ ಪಡೆದಿರುವ ಬಗ್ಗೆ ವರದಿಯಾಗಿದೆ.
ಬೆಂಗಳೂರಿನ ಹಲವು ಪ್ರದೇಶಗಳಿಗೆ ಸದ್ಯಕ್ಕೆ ನೀರಿನ ಸಮಸ್ಯೆ ಇದ್ದು, ಬಿಬಿಎಂಪಿ ನೀರಿನ ಕೊರತೆ ಇರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಆದರೂ, ಕೆಲವಡೆ ಟ್ಯಾಂಕರ್ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ ಎಂಬುದು ನಾಗರಿಕರ ಅಳಲಾಗಿದೆ.
ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯಿಂದ ಹಲವಾರು ಬಾಡಿಗೆದಾರರು ಬೇರೆಡೆ ಮನೆ ಹುಡುಕಿಕೊಂಡು ಹೋಗುತ್ತಿದ್ದಾರೆ. ಇನ್ನು ಅಪಾರ್ಟ್‌ಮೆಂಟ್‌ಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಜನರು ಕೋಟ್ಯಾಂತರ ರೂಪಾಯಿ ಇಎಮ್‌ಐ ಕಟ್ಟಿದರೂ ಸಹ ಸರಿಯಾದ ಮೂಲಭೂತ ಸೌಕರ್ಯ ಇಲ್ಲದೇ ಒದ್ದಾಡುವಂತಾಗಿದೆ ಎಂದು ಹೇಳಿದ್ದಾರೆ.
ಕೆ.ಆರ್.ಪುರಂನ ಅಯ್ಯಪ್ಪ ನಗರದಲ್ಲಿ ವಾಸವಾಗಿರುವ ಸುಮಂತ ಎಂಬವರು, “ಅಪಾರ್ಟ್ಮೆಂಟ್ನಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದು, ಮೂಲಭೂತ ಅವಶ್ಯಕತೆಗಳಿಗಾಗಿ ಹೆಣಗಾಡುತ್ತಿದ್ದೇವೆ. ನಗರದಲ್ಲಿನ ನೀರಿನ ಸಮಸ್ಯೆಯಿಂದಾಗಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿದ್ದೇವೆ. ಈ ಸ್ಥಿತಿಯಲ್ಲಿಯೂ ಸಹ ಫ್ಲಾಟ್ಗೆ ಮಾಸಿಕ ₹25 ಸಾವಿರ ಬಾಡಿಗೆ ನೀಡುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಫ್ಲ್ಯಾಟ್‌ನಲ್ಲಿ ನೀರಿಲ್ಲದ ಕಾರಣ ತಾತ್ಕಾಲಿಕವಾಗಿ ಬೆಂಗಳೂರಿನಿಂದ ಮುಂಬೈಗೆ ತೆರಳಿದ್ದೇನೆ” ಐಟಿ ಉದ್ಯೋಗಿ ಅನಿತಾ ಶ್ರೀನಿವಾಸ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಹಿನ್ನೆಲೆ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, “ಬೆಂಗಳೂರಿನಲ್ಲಿ ನೀರಿನ ಕೊರತೆಯ ಬಗ್ಗೆ ಬಿಜೆಪಿ ರಾಜಕೀಯ ಮಾಡುತ್ತಿದೆ. ಬೆಂಗಳೂರಿನಲ್ಲಿ ಹೇಳುವಷ್ಟೇನೂ ನೀರಿನ ಕೊರತೆ ಇಲ್ಲ, ಬಿಜೆಪಿಯವರು ಕೊರತೆಯನ್ನು ಸೃಷ್ಟಿಸಿದ್ದಾರೆ. ಬಿಜೆಪಿಯವರು ಏನು ಬೇಕಾದರೂ ಮಾಡಲಿ, ಮೊದಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿ ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಅನುಮತಿ ನೀಡುವಂತೆ ಹೇಳಲಿ. ತಮಿಳುನಾಡಿಗೆ ಕಾನೂನಾತ್ಮಕವಾಗಿ ಕೇಳಿದ್ದನ್ನು ನಾವು ನೀಡುತ್ತಿದ್ದೇವೆ. ಬೆಂಗಳೂರಿಗೆ ನೀರು ಕೊಡುವುದು ನಮ್ಮ ಆದ್ಯತೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ರೈಲ್ವೆ ಇಲಾಖೆಯಲ್ಲಿ 9,144 ಟೆಕ್ನಿಷಿಯನ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಏ.8 ಕೊನೆಯ ದಿನ
ಸ್ಮಶಾನದಲ್ಲಿಯೂ ನೀರಿಲ್ಲ…
ಬೆಂಗಳೂರಿನ ಕ್ರಿಮಿಟೋರಿಯಂಗಳಲ್ಲಿ ಜಲಕಂಟಕ ಎದುರಾಗಿದೆ. ಸತ್ತವರ ಅಂತಿಮ ಪೂಜಾ ವಿಧಿವಿಧಾನಗಳನ್ನ ನೆರವೇರಿಸಲು ಸಂಬಂಧಿಕರು ಪರದಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮೃತಪಟ್ಟವರನ್ನು ಸ್ಮಶಾನದಲ್ಲಿ ತಂದು ಅಂತಿಮ ಪೂಜಾ ವಿಧಾನಗಳನ್ನು ಮಾಡುವ ವೇಳೆ ಮಣ್ಣಿನ ಮಡಿಕೆಯಲ್ಲಿ ನೀರನ್ನು ತುಂಬಿ ಕುಡಿಕೆ ಒಡೆಯಲು ನೀರಿಲ್ಲ ಎಂಬಂತಾಗಿದೆ. ಅಲ್ಲದೆ, ಕೆಲವೊಂದು ಸಂಪ್ರದಾಯಗಳಲ್ಲಿ ಶವವನ್ನು ಮನೆಯಿಂದ ಸ್ಮಶಾನಕ್ಕೆ ತಂದು ಅಲ್ಲಿ ಸ್ನಾನ ಮಾಡಿಸಿ ಪೂಜೆ ಮಾಡಲಾಗುತ್ತದೆ ನಂತರ ಅಂತಿಮ ದರ್ಶನಕ್ಕೆ ಬಂದವರು ಕೈ ಕಾಲು ತೊಳೆದುಕೊಂಡು ಹೋಗುವುದು ಪದ್ದತಿಯಿದೆ ಇದೀಗ ಈ ಕಾರ್ಯಗಳನ್ನು ನೇರವೇರಿಸಲು ನೀರಿಲ್ಲದೇ ಜನ ಒದ್ದಾಡುತ್ತಿದ್ದಾರೆ ಎನ್ನಲಾಗಿದೆ.
ಸ್ಮಶಾನಗಳಲ್ಲಿ ನೀರು ಸಿಗದ ಕಾರಣ ಶವಕ್ಕೆ ಸ್ನಾನ ಮಾಡಿಸಲು ಆಗುತ್ತಿಲ್ಲ. ಯಾವುದೇ ಪೂಜಾ ವಿಧಿವಿಧಾನಗಳನ್ನು ಮಾಡಲು ಆಗುತ್ತಿಲ್ಲ. ಇದರಿಂದ ಮೃತರ ಕುಟುಂಬದವರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಹರಿಶ್ಚಂದ್ರ ಘಾಟ್, ಸುಮ್ಮನಹಳ್ಳಿ ಸ್ಮಶಾನ, ವಿಲ್ಸನ್ ಗಾರ್ಡನ್ ಹಾಗೂ ಚಾಮರಾಜಪೇಟೆಯ ಟಿ.ಆರ್ ಮಿಲ್ ಸ್ಮಶಾನದಲ್ಲಿ ನೀರಿಗೆ ಅಭಾವ ಎದುರಾಗಿದೆ ಎಂದು ತಿಳಿದುಬಂದಿದೆ.