ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದೇಶ ಅಷ್ಟೇ ಅಲ್ಲದೇ ಇಡೀ ಪ್ರಪಂಚವೇ ಬೆಚ್ಚಿ ಬೀಳಿಸುವ ವಿದ್ರಾವಕ ಘಟನೆಯಾಗಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕ ರಾಜ್ಯ ಅಧ್ಯಕ್ಷೆ ಪುಷ್ಪಾ ಅಮರನಾಥ ಹೇಳಿದರು.
ಬೀದರ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ಬಿಜೆಪಿಯವರು ಬೇಟಿ ಬಚಾವೋ, ಬೇಟಿ ಪಡಾವೋ, ನಾರಿ ಶಕ್ತಿ ಯೋಜನೆ ಎಂದು ಹೇಳುತ್ತಾರೆ. ಆದರೆ ಈಗ ಬಿಜೆಪಿ ಹಾಗೂ ಎನ್‌ಡಿಎ ನಾಯಕರಿಂದ ನಾವು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಬೇಕಾಗಿದೆ” ಎಂದರು.
“ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದಲ್ಲಿ ಸುಮಾರು ಮೂರು ಸಾವಿರಕ್ಕೂ ಹೆಚ್ಚಿನ ವಿಡಿಯೋಗಳಿಗೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಮನವಿ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ಒಳಪಡಿಸಿದೆ. ಆದರೆ ಪ್ರಕರಣದ ಪ್ರಮುಖ ಆರೋಪಿ ದೇಶ ಬಿಟ್ಟು ಹೋಗಿದ್ದಾನೆ. ಅದಕ್ಕೆ ಅವಕಾಶ ಮಾಡಿದ್ದು ಯಾರು? ಎಂಬುದು ಮೊದಲು ತನಿಖೆಯಾಗಲಿ” ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದರೆ ಎಚ್‌ಡಿಕೆ ಅವರು ಗ್ಯಾರಂಟಿ ಯೋಜನೆಯಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದಿದ್ದಾರೆ. ತಾಳಿ ಮಹತ್ವ ಗೊತ್ತಿಲ್ಲದ ಪ್ರಧಾನಿ ಮೋದಿಯವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರ ಕಸಿದುಕೊಳ್ಳುತ್ತಾರೆ ಎಂದು ಮಾತಾಡಿದಾಗಲೂ ಬಿಜೆಪಿ ನಾಯಕಿಯರಾದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ಶ್ರುತಿ, ಮಾಳವಿಕಾ ಅವರು ಖಂಡಿಸಲಿಲ್ಲ” ಎಂದರು.
“ಸಂತ್ರಸ್ತ ಮಹಿಳೆಯರಿಗೆ ಹೆದರಿಕೆ, ಕೊಲೆ ಬೆದರಿಕೆ ಇರುವ ಕಾರಣಕ್ಕೆ ಮರ್ಯಾದೆಗೆ ಭಯಪಟ್ಟು ಇಷ್ಟು ವರ್ಷಗಳ ಕಾಲ ಅಶ್ಲೀಲ ವಿಡಿಯೋಗಳು ಹೊರತರಲು ಸಾಧ್ಯವಾಗಲಿಲ್ಲ. ಇಂದು ಅದೇ ವಿಡಿಯೋಗಳು ಬೀದಿಗೆ ಬಂದಿವೆ. ಆದರೆ ಸಾವಿರಾರು ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿ ರಕ್ಷಣೆ ನೀಡುವ ಕೆಲಸ ತಾಯಿ ಸ್ಥಾನದಲ್ಲಿರುವ ಪ್ರಧಾನಿ ಮೋದಿಯವರು ಮಾಡಬೇಕಾಗಿತ್ತು. ಅದನ್ನು ಮಾಡುತ್ತಿಲ್ಲ. ಈ ಬಗ್ಗೆ ಬಿಜೆಪಿ ಪಕ್ಷದವರು ಯಾಕೆ ಧ್ವನಿ ಎತ್ತುತ್ತಿಲ್ಲ” ಎಂದು ಪ್ರಶ್ನಿಸಿದರು.
“ಹುಬ್ಬಳಿಯ ನೇಹಾ ಕೊಲೆ ಪ್ರಕರಣ ಅತ್ಯಂತ ಖಂಡನೀಯವಾಗಿದೆ. ಯಾವುದೇ ರಾಜಕಾರಣ ಮಾಡದೇ ಕೊಲೆ ಆರೋಪಿಗೆ ಸರ್ಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುವೆ. ನೇಹಾ ಕೊಲೆ ಘಟನೆ ನಡೆದ ಮರುಕ್ಷಣ ರಾಜ್ಯಾದ್ಯಂತ ಪ್ರತಿಭಟನೆ ಮಾಡಿಸಿದ ಎನ್‌ಡಿಎ ನಾಯಕರು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ. ಇದು ಕೊಲೆಗಿಂತಲೂ ಘೋರ ಕೊಲೆಯಾಗಿದೆ. ಸಂತ್ರಸ್ತ ಮಹಿಳೆಯರು ಬದುಕಿದ್ದು ಸತ್ತಂತಿದ್ದಾರೆ. ನಮ್ಮ ನಾಡಿನ ಹೆಣ್ಣು ಮಕ್ಕಳ ಬಗ್ಗೆ ಬಿಜೆಪಿಯವರು ಯಾಕೆ ಮೌನವಹಿಸಿದ್ದಾರೆ” ಎಂದು ಕಿಡಿಕಾರಿದರು.
“ಮೋದಿ ಪರಿವಾರದಲ್ಲಿ ಅತ್ಯಾಚಾರಿಗಳು, ಕೊಲೆಗಡುಕರೇ ಇದ್ದಾರೆಯೇ? ಇಂತಹ ಕೃತ್ಯದಲ್ಲಿ ಭಾಗಿಯಾದವರಿಗೆ ಕೇಂದ್ರ ಬಿಜೆಪಿ ಸರ್ಕಾರ ರಕ್ಷಣೆ ನೀಡುತ್ತದೆಯೇ? ಬಿಲ್ಕಿಸ್ ಬಾನು, ಉನ್ನಾವ್ ದಲ್ಲಿ ಜೀವಂತ ಸುಟ್ಟರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ” ಎಂದು ಆರೋಪಿಸಿದರು.
“ಎನ್‌ಡಿಎ ನಾಯಕರು ಹಾಸನ ಸಂಸದರ ಘಟನೆಯನ್ನು ಸುಳ್ಳು ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಇದು ಸುಳ್ಳಾಗಿದ್ದರೆ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಏಕೆ ಹೋಗುತ್ತಿದ್ದರು. ಮಾಧ್ಯಮಗಳಲ್ಲಿ ತನ್ನ ವಿರುದ್ಧ ಸುದ್ದಿ ಪ್ರಕಟಿಸಬಾರದೆಂದು ಆರ್ಡರ್ ತಂದಿದ್ದೇಕೆ? ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿದ್ದು ಏಕೆ? ಎಚ್.ಡಿ. ರೇವಣ್ಣ ವಿರುದ್ದವೂ ಆರೋಪ ಕೇಳಿ ಬಂದಿದ್ದು, ಅವರ ವಿರುದ್ದವೂ ತನಿಖೆ ನಡೆಸಬೇಕಿದೆ” ಎಂದು ಹೇಳಿದರು.
ವಿಕ್ರತಿ ತೋರಿದ ಸಂಸದ ಪ್ರಜ್ವಲ್ ರೇವಣ್ಣನಿಗೆ ನಿರ್ಭಯಾ ಅತ್ಯಾಚಾರ, ವಿಕೃತಕಾಮಿ ಉಮೇಶ್ ರೆಡ್ಡಿ ಪ್ರಕರಣದ ಮಾದರಿಯಲ್ಲಿ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುಳಾ ನಾಯ್ಡು ಮಾತನಾಡಿ, “ಹಾಸನ ಸಂಸದ ಪ್ರಜ್ವಲ್ ಸಾವಿರಾರು ಮಹಿಳೆಯರಿಗೆ ಅತ್ಯಾಚಾರ ಎಸಗಿ ವಿಕೃತಿ ತೋರಿಸಿದ್ದಾನೆ. ಎನ್‌ಡಿಎ ಮಿತ್ರಪಕ್ಷದ ಅಭ್ಯರ್ಥಿಯ ನೀಚತನ ಘಟನೆಗೆ ಪ್ರಧಾನಿ ಮೋದಿ, ರಾಜ್ಯ ಘಟಕ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಕ್ಷಮೆಯಾಚಿಸಿ ಸಂತ್ರಸ್ತ ಮಹಿಳೆಯರ ಪರ ನಿಂತು ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣ | ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾನಿ: ರಮೇಶ್ ಬಾಬು
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪೂಜಾ ಜಾರ್ಜ್ ಸ್ಯಾಮುವೆಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ವನಿಲಾ ಸೂರ್ಯವಂಶಿ, ಕೆಪಿಸಿಸಿ ಸದಸ್ಯೆಯರಾದ ಗುರಮ್ಮ ಸಿದ್ದಾರೆಡ್ಡಿ, ರಾಜಶ್ರೀ ಸ್ವಾಮಿ, ಅಕ್ಕಮಹಾದೇವಿ ಹಾಜರಿದ್ದರು.