ಸೈಬರ್ ವಂಚಕರು ಯಾವ್ಯಾವ ರೀತಿಯಲ್ಲಿ ವಂಚಿಸುತ್ತಾರೆ ಎಂಬುದಕ್ಕೆ ಮತ್ತೊಂದು ಪ್ರಕರಣ ದಾಖಲಾಗಿದೆ. ಟ್ರಾಫಿಕ್ ದಂಡ ಕಟ್ಟಿಸಿಕೊಳ್ಳುವ ನೆಪದಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ 2.65 ಲಕ್ಷ ರೂ. ಲಪಟಾಯಿಸಿದ್ದಾರೆ.
ಬೆಂಗಳೂರು ಸಂಚಾರ ಪೊಲೀಸರು ಇತ್ತೀಚಿಗೆ ಶೇ. 50 ರಷ್ಟು ರಿಯಾಯಿತಿ ನೀಡಿ ದಂಡ ಕಟ್ಟಲು ಅವಕಾಶ ನೀಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಸೈಬರ್ ವಂಚಕರು ವಾಹನ ಸವಾರರ ಮೊಬೈಲ್ ನಂಬರ್‌ಗಳಿಗೆ ಕೆಲ ಲಿಂಕ್‌ಗಳು, ಎಪಿಕೆ ಫೈಲ್‌ಗಳನ್ನು ಕಳುಹಿಸಿ ವಾಹನಗಳ ದಂಡವನ್ನು ಚೆಕ್ ಮಾಡಿಕೊಳ್ಳಿ. ಹಾಗೆಯೇ ಇಲ್ಲೇ ದಂಡ ಕಟ್ಟಬಹುದು ಎಂಬ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ವಂಚಕರ ಸಂದೇಶಗಳನ್ನು ನಂಬಿದ ಹಲವರು ಸಂದೇಶಗಳಲ್ಲಿರುವ ಲಿಂಕನ್ನು ತೆರದ ತಕ್ಷಣ ಅಕೌಂಟ್‌ನಲ್ಲಿದ್ದ ಹಣ ಮಾಯವಾಗುತ್ತದೆ. ಕೊಡಿಗೇಹಳ್ಳಿ ವ್ಯಾಪ್ತಿಯ ಟೆಕ್ಕಿಯೊಬ್ಬರಿಗೆ ಇದೇ ರೀತಿಯ ಎಪಿಕೆ ಫೈಲ್ ಕಳುಹಿಸಿದ ಸೈಬರ್ ವಂಚಕರು ಓಪನ್ ಮಾಡಿ ನಿಮ್ಮ ವಾಹನದ ಫೈನ್ ಎಷ್ಟಿದೆ ಚೆಕ್ ಮಾಡಿಕೊಳ್ಳಿ ಎಂದು ಸಂದೇಶ ಕಳುಹಿಸಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿ ಸಮುದಾಯಗಳಿಗೆ ಅನ್ಯಾಯ – ಜಾತಿಗಣತಿಯ ಮೇಲೂ ಕರಿನೆರಳು: ರಾಹುಲ್ ಗಾಂಧಿ ಗಮನಿಸುವರೇ?
ಆ ಮಸೇಜ್ ನಂಬಿದ ಟೆಕ್ಕಿ ಆ ಲಿಂಕ್‌ನ ತೆರದ ತಕ್ಷಣ ಕೆಲವೇ ನಿಮಿಷಗಳಲ್ಲಿ ಖಾತೆಯಲ್ಲಿದ್ದ 2.65 ಲಕ್ಷ ರೂ. ಹಣವನ್ನು ಸೈಬರ್ ವಂಚಕರು ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮುರಳಿ ಎಂಬುವವರು ದೂರು ನೀಡಿದ್ದಾರೆ.
ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರು ಆ.23ರಿಂದ ಸೆ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸಬಹುದು.
ಹಲವು ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಉಳಿಸಿಕೊಂಡವರಿಗೆ ಈ ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಇದೇ ರೀತಿ ರಿಯಾಯಿತಿ ಘೋಷಿಸಿ ಮೊತ್ತದ ದಂಡ ಸಂಗ್ರಹಿಸಿತ್ತು. ಈ ಆದೇಶದಂತೆ ಕೇವಲ ಬೆಂಗಳೂರು ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಮಾತ್ರ ದಂಡ ಪಾವತಿಸಲು ಅವಕಾಶವಿರುತ್ತದೆ. ಸಾರ್ವಜನಿಕರು ಎಪಿಕೆ ಫೈಲ್‌ಗಳನ್ನು ತೆರೆಯದೆ ಅಧಿಕೃತ ವೆಬ್‌ಸೈಟ್ ಹಾಗೂ ಆಪ್ ಮೂಲಕ ದಂಡ ಪಾವತಿಸುವಂತೆ ನಗರ ಪೊಲೀಸರು ಮನವಿ ಮಾಡಿದ್ದಾರೆ.
