ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆ ಇನ್ನು ಮುಂದೆ ಎಟಿಎಂನಲ್ಲಿ ನಗದು ವಿತ್ ಡ್ರಾ ಮಾಡುವ ಭಾರತದ ಪ್ರಥಮ ‘ಯುಪಿಐ ಎಟಿಎಂ’ ಈಗ ಚಾಲ್ತಿಗೆ ಬಂದಿದೆ. ಈ ವಿಧಾನವನ್ನು ಬಳಸಿಕೊಂಡು ಸಾರ್ವಜನಿಕರು ಸುರಕ್ಷಿತವಾಗಿ ನಗದನ್ನು ಪಡೆಯಬಹುದು.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆ ಸಹಯೋಗದಲ್ಲಿ ಹಿಟಾಚಿ ಪೇಮೆಂಟ್ ಸರ್ವಿಸಸ್ ಭಾರತದಲ್ಲಿ ಮೊದಲ ಯುಪಿಐ ಎಟಿಎಂ ಅನ್ನು ಸ್ಥಾಪಿಸಿದೆ. ಎಟಿಎಂ ಕಾರ್ಡ್ ಬಳಸದೆಯೇ, ಯಾವುದೇ ಯುಪಿಐನ ಆ್ಯಪ್ ಮೂಲಕ ಎಟಿಎಂ ಸೆಂಟರ್‌ನಲ್ಲಿ ನಗದು ಹಣವನ್ನು ವಿತ್ ಡ್ರಾ ಮಾಡಬಹುದಾಗಿದೆ.
ಈಗಾಗಲೇ ಎಸ್‌ಬಿಐ ಒಳಗೊಂಡು ಮೊದಲಾದ ಬ್ಯಾಂಕುಗಳ ಕೆಲ ಎಟಿಎಂಗಳಲ್ಲಿ ಯುಪಿಐ ಫೆಸಿಲಿಟಿ ಇದೆಯಾದರೂ ಅದಕ್ಕೆ ಆ ಬ್ಯಾಂಕ್‌ನ ಬಾಹ್ಯ ಆ್ಯಪ್ ಬೇಕಾಗುತ್ತದೆ. ಆದರೆ, ಹಿಟಾಚಿಯ ಯುಪಿಐನ ಎಟಿಎಂನಲ್ಲಿ ಯಾವುದೇ ಆ್ಯಪ್ ಬಳಸಬಹುದು.
ಈ ಸುದ್ದಿ ಓದಿದ್ದೀರಾ? ಅಂಗಿ ಕಳಚಿ ಎಂದರು, ನಾನು ದೇಗುಲದ ಒಳಗೆ ಕಾಲಿಡಲಿಲ್ಲ: ಕೇರಳ ಘಟನೆ ಮೆಲುಕು ಹಾಕಿದ ಸಿದ್ದರಾಮಯ್ಯ
ಎಟಿಎಂ ಸೆಂಟರ್‌ಗಳಲ್ಲಿ ಕಾರ್ಡ್ ಸ್ಕಿಮ್ಮಿಂಗ್(ಎಟಿಎಂ ಕಾರ್ಡ್ ದಾಖಲೆ ಕದಿಯುವುದು) ಇತ್ಯಾದಿ ಅಪರಾಧಗಳಾಗುವ ಅಪಾಯ ಇರುತ್ತದೆ. ಯುಪಿಐನ ಎಟಿಎಂನಿಂದ ಇದು ತಪ್ಪುತ್ತದೆ. ಎಟಿಎಂನ ಪರದೆಯಲ್ಲಿ ಕಾಣುವ ಕ್ಯುಆರ್ ಕೋಡ್ ಅನ್ನು ಯುಪಿಐನ ಆ್ಯಪ್‌ನಿಂದ ಸ್ಕ್ಯಾನ್ ಮಾಡಿ ಹಣವನ್ನು ಸುಲಭವಾಗಿ ವಿತ್‌ಡ್ರಾ ಮಾಡಬಹುದು.
ಇಂಡಿಯಾ 1 ಪೇಮೆಂಟ್ಸ್ ಲಿ. ಬಳಿಕ ಭಾರತದ ಅತಿದೊಡ್ಡ ವೈಟ್ ಲೇಬಲ್ ಎಟಿಎಂ ಆಪರೇಟರ್ ಎನಿಸಿದ ಹಿಟಾಚಿ ಪೇಮೆಂಟ್ ಸರ್ವಿಸಸ್ ದೇಶಾದ್ಯಂತ 8 ಸಾವಿರಕ್ಕೂ ಹೆಚ್ಚು ಎಟಿಎಂ ಸೆಂಟರ್‌ಗಳನ್ನು ನಿರ್ವಹಿಸುತ್ತದೆ.
ಯುಪಿಐನ ಎಟಿಎಂ ಮೂಲಕ ಹಣ ಪಡೆಯುವ ವಿಧಾನ
1) ಎಟಿಎಂನಿಂದ ಹಿಂಪಡೆಯಲು ಬಯಸುವ ಮೊತ್ತವನ್ನು ಆಯ್ಕೆ ಮಾಡಬೇಕಾಗುತ್ತದೆ.
2) ಆಯ್ದ ಮೊತ್ತಕ್ಕೆ ಕ್ಯೂಆರ್ ಕೋಡ್ ಪರದೆಯ ಮೇಲೆ ಮೂಡುತ್ತದೆ.
3) ನಂತರ ನಿಮ್ಮ ಮೊಬೈಲ್ ಫೋನ್‌ನಲ್ಲಿ ಲಭ್ಯವಿರುವ ಯಾವುದೇ ಯುಪಿಐ ಅಪ್ಲಿಕೇಶನ್ ಮೂಲಕ ನೀವು ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
4) ಅನಂತರ ವಹಿವಾಟನ್ನು ದೃಢೀಕರಿಸಲು ನಿಮ್ಮ ಮೊಬೈಲ್‌ನಲ್ಲಿ ನೀವು ಯುಪಿಐ ಪಿನ್ ಅನ್ನು ನಮೂದಿಸಬೇಕು.
5) ಪಿನ್ ಹಾಕಿ ಅಧಿಕೃತಗೊಳಿಸಿದ ನಂತರ ಎಟಿಎಂ ಹಣವನ್ನು ವಿತರಿಸುತ್ತದೆ.