ವಿಶ್ವದ ಅತಿದೊಡ್ಡ ವಿಡಿಯೋ ಪ್ಲಾಟ್ಫಾರ್ಮ್ ಯೂಟ್ಯೂಬ್ ತನ್ನ ಕಂಟೆಂಟ್ ಕ್ರಿಯೇಟರ್ಗಳಿಗೆ ಹಣ ಗಳಿಕೆಯ ಕನಿಷ್ಠ ಚಂದಾದಾರಿಕೆಯ ನಿಯಮಗಳನ್ನು ಸಡಿಲಗೊಳಿಸಿದೆ. ಹೊಸ ನಿಯಮದ ಪ್ರಕಾರ ಮೊದಲಿದ್ದ ಚಂದಾದಾರಿಕೆಯ ಅರ್ಧದಷ್ಟಿದ್ದರೆ ಹಣ ಗಳಿಕೆಗೆ ಪ್ರವೇಶ ಪಡೆಯಬಹುದು.
ಈಗ ಯೂಟ್ಯೂಬ್ನ ಹೊಸ ಹಣ ಗಳಿಕೆಯ ನಿಯಮಗಳ ಪ್ರಕಾರ 500 ಚಂದಾದಾರರಿದ್ದರೆ ಸಾಕು. ಕಳೆದ 90 ದಿನಗಳಲ್ಲಿ ಕನಿಷ್ಠ ಮೂರು ಅಥವಾ ಹೆಚ್ಚಿನ ಸಾರ್ವಜನಿಕ ವಿಡಿಯೊಗಳನ್ನು ಅಪ್ಲೋಡ್ ಮಾಡಿರಬೇಕು. ಈ ಮೊದಲು ಕನಿಷ್ಠ 1000 ಚಂದಾದಾರರ ಅಗತ್ಯವಿತ್ತು.
ಒಂದು ವರ್ಷದಲ್ಲಿ 4000 ಗಂಟೆಗಳ ವೀಕ್ಷಣೆ ಬದಲು 3000 ಗಂಟೆಗಳ ವೀಕ್ಷಣೆ ಇದ್ದರೆ ಸಾಕು. ಹಾಗೆಯೇ, ಸಣ್ಣ ವಿಡಿಯೋಗಳ ವೀಕ್ಷಣೆ 1 ಕೋಟಿ ಬದಲು 30 ಲಕ್ಷಕ್ಕೆ ಇಳಿಸಲಾಗಿದೆ ಎಂದು ಗೂಗಲ್ ಮಾಲೀಕತ್ವದ ಯೂಟ್ಯೂಬ್ ಸಂಸ್ಥೆ ಮಾಹಿತಿ ನೀಡಿದೆ. ಆದರೆ ಯೂಟ್ಯೂಬ್ ಸಹಭಾಗಿತ್ವದ ಪ್ರೋಗ್ರಾಮ್ಗೆ ಅರ್ಹರಾಗಲು ಬೇಕಾದ ಬೇರೆಲ್ಲಾ ಮಾನದಂಡಗಳು ಹಾಗೆಯೇ ಮುಂದುವರಿಯಲಿವೆ ಎಂದು ಯೂಟ್ಯೂಬ್ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಮರಳಿ ವಿಶ್ವದ ನಂ.1 ಶ್ರೀಮಂತ ಪಟ್ಟಕ್ಕೇರಿದ ಎಲಾನ್ ಮಸ್ಕ್; ಮತ್ತೆ ಕುಸಿತ ಕಂಡ ಅಂಬಾನಿ, ಅದಾನಿ
ಅಲ್ಲದೆ ಪೇಯ್ಡ್ ಚ್ಯಾಟ್, ಟಿಪ್ಪಿಂಗ್, ಶಾಪಿಂಗ್ ಫೀಚರ್, ಚಾನಲ್ ಮೆಂಬರ್ಶಿಪ್ ಇತ್ಯಾದಿ ಹೊಸ ರೀತಿಯ ಆದಾಯ ಮಾರ್ಗಗಳನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರುಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಕನಿಷ್ಠ ಅರ್ಹತೆಗಳನ್ನು ಪೂರೈಸುವವರು ಯೂಟ್ಯೂಬ್ ಹಣ ಗಳಿಕೆ ಶುರು ಮಾಡಲು ಅರ್ಜಿ ಸಲ್ಲಿಸಬಹುದು.
ಈ ನಿಗದಿಪಡಿಸಿರುವ ಮಾನದಂಡಗಳನ್ನು ನೀವು ತಲುಪಿದ ಬಳಿಕ ತಾನಾಗೇ ವರಮಾನ ಬರತೊಡಗುತ್ತದೆ. ಅಂದರೆ ಮಾನಿಟೈಸೇಶನ್ ಆಗತೊಡಗುತ್ತದೆ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತುಗಳಿಂದ ಗೂಗಲ್ಗೆ ಆದಾಯ ಬರುತ್ತದೆ. ನೀವು ಯೂಟ್ಯೂಬ್ ಪಾರ್ಟನರ್ ಆಗಿದ್ದರೆ ಆ ಆದಾಯವನ್ನು ಯೂ ಟ್ಯೂಬ್ ನಿಮ್ಮೊಂದಿಗೆ ಹಂಚಿಕೊಳ್ಳುತ್ತದೆ.
ಅದೇ ರೀತಿ ಯೂ ಟ್ಯೂಬ್ ವಿಡಿಯೋಗಳಿಗೆ ಮ್ಯೂಸಿಕ್ ಬಳಸಿಕೊಳ್ಳಲು ಬೇರೆ ಸಾಫ್ಟವೇರ್ ಬಳಸುವ ಅಗತ್ಯವಿಲ್ಲ. ಯಾವುದೇ ಕಾಪಿರೈಟ್ ಇಲ್ಲದ, ಉಚಿತವಾಗಿ ಹಂಚಿಕೆಯಾಗುವ ಮ್ಯೂಸಿಕ್ ಸಂಗ್ರಹ ಯೂಟ್ಯೂಬ್ನಲ್ಲಿದೆ. ಇದರಲ್ಲಿ ಯಾರು ಬೇಕಾದರೂ ತಮ್ಮ ಯೂ ಟ್ಯೂಬ್ ವಿಡಿಯೋಗಳಿಗೆ ಬಳಸಬಹುದು. ಇಂತಹ ಮ್ಯೂಸಿಕ್ ಸಂಗ್ರಹವನ್ನು ಯೂ ಟ್ಯೂಬ್ ಆಗಾಗ ಹೆಚ್ಚಿಸುತ್ತಲೇ ಇರುತ್ತದೆ.
ಸದ್ಯ ಹೊಸ ನಿಯಮಗಳನ್ನು ಅಮೆರಿಕ, ಬ್ರಿಟನ್, ಕೆನಡಾ, ತೈವಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಲ್ಲಿ ಪರಿಚಯಿಸುತ್ತಿದೆ. ಇದು ಶೀಘ್ರದಲ್ಲೇ ಭಾರತವೂ ಸೇರಿದಂತೆ ಇತರ ದೇಶಗಳಲ್ಲಿ ಜಾರಿಗೆ ಬರಲಿದೆ.
ಆದಾಗ್ಯೂ, ಯೂಟ್ಯೂಬ್ನ ಹೊಸ ನಿಯಮಗಳು ಸಣ್ಣ ಕಂಟೆಂಟ್ ಸೃಷ್ಟಿಸುವ ರಚನಾಕಾರರಿಗೂ ಅವಕಾಶ ನೀಡುತ್ತದೆ. ಇದು ಸೂಪರ್ ಥ್ಯಾಂಕ್ಸ್, ಸೂಪರ್ ಚಾಟ್, ಸೂಪರ್ ಸ್ಟಿಕ್ಕರ್ಗಳಂತಹ ಟಿಪ್ಪಿಂಗ್ ಪರಿಕರಗಳನ್ನು ಮತ್ತು ಚಾನಲ್ ಸದಸ್ಯತ್ವಗಳಂತಹ ಚಂದಾದಾರಿಕೆ ಪರಿಕರಗಳನ್ನು ಪಡೆಯಲು ಅನುಮತಿಸುತ್ತದೆ.