ಯುವಜನರ ಜೀವಕ್ಕೆ ಕುತ್ತು ತರುತ್ತಿರುವ ಮೋಸದಾಟ: ಆನ್‌ಲೈನ್ ಗೇಮಿಂಗ್‌ ಬಗ್ಗೆ ಇರಲಿ ಎಚ್ಚರ

Date:

Advertisements

ಆತ ತಂದೆ-ತಾಯಿಗೆ ಒಬ್ಬನೇ ಮಗ. ಚೆನ್ನಾಗಿ ಓದಿ ಡಾಕ್ಟರ್‌ ಆಗಲೆಂದು ಲಕ್ಷಾಂತರ ರೂಪಾಯಿ ಡೊನೇಷನ್‌ ತೆತ್ತು ಪದವಿ ವ್ಯಾಸಂಗ ಮಾಡಲಿ ಅಂತ ಕಲಬುರಗಿಗೆ ಕಳಿಸಿದ್ದರು. ಆದರೆ ಪೋಷಕರ ಕನಸು ಈಡೇರಿಕೆಗೆ ಪ್ರಯತ್ನಿಸದ ಆ ಯುವಕ, ಅಕ್ಷರಶಃ ಆನ್‌ಲೈನ್ ಗೇಮಿಂಗ್ ಮಾಯೆಗೆ ಸಿಲುಕಿದ್ದ. ಅದರಲ್ಲಿ ₹80 ಲಕ್ಷ ಹಣ ಕಳೆದುಕೊಂಡು ಒದ್ದಾಡುತ್ತಿದ್ದ. ಕೊನೆಗೆ ಮಗನ ಜೀವ ಉಳಿದರೆ ಅಷ್ಟೇ ಸಾಕು! ಎಂದು ಯೋಚಿಸಿದ ಪೋಷಕರು, ತಮ್ಮ ಹೆಸರಲ್ಲಿದ್ದ ಜಮೀನು ಮಾರಾಟ ಮಾಡಿ ಲಕ್ಷಾಂತರ ಸಾಲ ತೀರಿಸಿದರು. ಆದರೆ, ಆನ್‌ಲೈನ್ ಜೂಜಿನ ವ್ಯಾಮೋಹದಿಂದ ಹೊರಬರಲು ಸಾಧ್ಯವಾಗದ ಆ ವಿದ್ಯಾರ್ಥಿ, ಕೊನೆಗೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ದಾರಿ ಹಿಡಿದ.

ಇದು ಕಾಲ್ಪನಿಕ ಘಟನೆಯಲ್ಲ. ಎರಡು ವಾರಗಳ ಹಿಂದಷ್ಟೇ ನಮ್ಮದೇ ರಾಜ್ಯದ ಬೀದರ್‌ ಜಿಲ್ಲೆಯಲ್ಲಿ ನಡೆದ ನೈಜ ಘಟನೆ. ಆನ್‌ಲೈನ್ ಜೂಜಿನ ಚಟಕ್ಕೆ ಬಿದ್ದು ಲಕ್ಷಗಟ್ಟಲೆ ಹಣದೊಂದಿಗೆ ಇದ್ದೊಬ್ಬ ಮಗನನ್ನು ಕಳೆದುಕೊಂಡ ಹೆತ್ತವರು, ಸದ್ಯ, ಕಣ್ಣೀರಿನಲ್ಲಿ ಬದುಕು ಸಾಗಿಸುತ್ತಿದ್ದಾರೆ.

ಸಮಾಜದ ಅಮೂಲ್ಯ ಶಕ್ತಿಯಾದ ಇಂದಿನ ವಿದ್ಯಾರ್ಥಿ, ಯುವ ಸಮೂಹದ ಭವಿಷ್ಯದ ದಾರಿ ಬೆಳಕಿನ ಹಾದಿಯಾಗಬೇಕು. ಆದರೆ ಕೆಲವೆಡೆ ಕಿರಾಣಿ ಅಂಗಡಿಗಳಲ್ಲೂ ಲಭ್ಯವಾಗುತ್ತಿರುವ ಮಾದಕ ವಸ್ತುಗಳು ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. ಇನ್ನು ಎಲ್ಲಕ್ಕಿಂತಲೂ ಅಪಾಯಕಾರಿಯಾದ ಆನ್‌ಲೈನ್ ಗೇಮ್‌ಗಳ ಮಾಯೆಗೆ ಸಿಲುಕಿದ ಹದಿಹರೆಯದವರ ಬದುಕು, ಅಕ್ಷರಶಃ ಸರ್ವನಾಶವಾಗುತ್ತಿದೆ. ಇದು ಪೋಷಕರನ್ನು ಬೆಚ್ಚಿ ಬೀಳಿಸುತಿದ್ದು, ಅದೆಷ್ಟೋ ಪೋಷಕರು ಮಕ್ಕಳ ಈ ಹವ್ಯಾಸದ ಬಗ್ಗೆ ಚಿಂತೆಯಲ್ಲಿಯೇ ಪ್ರತಿನಿತ್ಯ ರೋದಿಸುವಂತಾಗಿದೆ.

Advertisements
e0a4ade0a588e0a4afe0a
ಆನ್‌ಲೈನ್ ಗೇಮಿಂಗ್ ಗೀಳಿನಿಂದ ವಿದ್ಯಾರ್ಥಿಯೋರ್ವ ಸಾಲ ಮಾಡಿಕೊಂಡು ಕುಟುಂಬದಿಂದಲೇ ದೂರವಾಗಿರುವ ಬಗ್ಗೆ ನ್ಯೂಸ್‌18ನ ಪತ್ರಕರ್ತ ಪ್ರತೀಕ್ ತ್ರಿವೇದಿ ಅವರ ಕಾರ್ಯಕ್ರಮವೊಂದಲ್ಲಿ ಅಳಲು ತೋಡಿಕೊಂಡಿದ್ದ ಘಟನೆ ಇತ್ತೀಚೆಗೆ ನಡೆದಿತ್ತು.

ಇಂದಿನ ಬಹುತೇಕ ಪುಟ್ಟ ಮಕ್ಕಳು, ಯುವಕರು ‘ಆನ್‌ಲೈನ್‌’ ಎಂಬ ಕಾಲ್ಪನಿಕ ಜಗತ್ತಿನಲ್ಲಿ ಮುಳುಗಿದ್ದಾರೆ. ಇದರಿಂದ ಆನ್‌ಲೈನ್ ಹಾಗೂ ನಿಜ ಜಗತ್ತಿನ ವ್ಯತ್ಯಾಸವೇ ಮರೆತು ಬದುಕುವ ಪರಿಸ್ಥಿತಿಯಲ್ಲಿದ್ದಾರೆ. ಮೊಬೈಲ್‌ ಅದೆಷ್ಟು ಉತ್ತಮ ಸಾಧನವೋ ಅಷ್ಟೇ ಬದುಕನ್ನು ನುಂಗಬಲ್ಲ ಸಾಧನವೂ ಹೌದು.

ಮಗ ಉತ್ತಮ ಬದುಕು ಕಟ್ಟಿಕೊಳ್ಳಬೇಕೆಂಬ ಉದ್ದೇಶದಿಂದ ಮಕ್ಕಳ ಕೈಗೆ ಮೊಬೈಲ್‌ ಇಡುತ್ತಿದ್ದಾರೆ. ಆದರೆ ಮಕ್ಕಳು ಆನ್‌ಲೈನ್ ಗೇಮಿಂಗ್‌ ಜಾಲಕ್ಕೆ ಬಿದ್ದು ಅವರದ್ದೇ ಲೋಕ ಸೃಷ್ಟಿಸಿಕೊಂಡು ಒದ್ದಾಡುತ್ತಾ ಪೋಷಕರೊಂದಿಗೆ ಮಾತನಾಡಲಾಗದ ದುಸ್ಥಿತಿಗೆ ತಲುಪಿದ್ದಾರೆ. ಇಂತಹ ಅಪಾಯಕಾರಿ ಜಾಲಕ್ಕೆ ಸಿಲುಕಿದ ಮಕ್ಕಳನ್ನು ಹೊರತರಲು ಪೋಷಕರು ಏನೆಲ್ಲ ಸಾಹಸ ಪಡುತ್ತಿರುವುದು ಅಷ್ಟಿಷ್ಟಲ್ಲ.

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ಭಾಂಡೆ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಆನ್‌ಲೈನ್ ಆಟದ ಬೆನ್ನುಬಿದ್ದು ಲಕ್ಷಾಂತರ ಹಣ ಕಳೆದುಕೊಂಡಿದ್ದ, ದುಡ್ಡು ಕಳೆದುಕೊಂಡ ವಿಷಯ ಮನೆಯಲ್ಲಿ ಗೊತ್ತಾದರೆ ಸಮಸ್ಯೆ ಆಗುತ್ತೆ ಅಂತ ಮನನೊಂದು ಲಾಡ್ಜ್‌ನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಗ್ಗೆ ಡಿಸೆಂಬರ್‌ ಮೊದಲ ವಾರದಲ್ಲಿ ವರದಿಯಾಗಿತ್ತು. ‘ಆನ್‌ಲೈನ್‌ ಗೇಮ್‌ನಿಂದ ಬಹಳಷ್ಟು ಯುವ ಸಮೂಹದ ಬದುಕು ಹಾಳಾಗುತ್ತಿದೆ. ಆನ್‌ಲೈನ್ ಗೇಮ್ಸ್‌ ನಿಷೇಧಿಸಬೇಕು’ ಎಂದಿತ್ತು ಆತನ ಡೆತ್‌ ನೋಟ್! ‘ಆನ್‌ಲೈನ್ ಗೇಮ್‌ಗಾಗಿ ಇದೇ ಕೊನೆಯ ಸಾವಾಗಲಿ’ ಎಂದು ಕುಟುಂಬದವರು ಆಗ್ರಹಿಸಿದ್ದರು. ಆದರೆ, ಹಾಗಾಗಲಿಲ್ಲ.

ಉತ್ತಮ ಶ್ರೇಣಿಯಲ್ಲಿ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿಯೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾದ. ಆತನ ಕಳಪೆ ಫಲಿತಾಂಶಕ್ಕೆ ಆನ್‌ಲೈನ್ ಗೇಮಿಂಗ್ ಕಾರಣ ಎಂಬುದು ಆನಂತರ ಗೊತ್ತಾಗಿತ್ತು. ಪರೀಕ್ಷೆ ಬಗ್ಗೆ ಯೋಚಿಸದ ಮಗ ರಾತ್ರಿ ಎರಡು ಗಂಟೆಯಾದರೂ ಮೊಬೈಲ್‌ ಆನ್‌ ಇರುತ್ತಿತ್ತು. ನಿದ್ದೆಗೆಟ್ಟು ಆನ್‌ಲೈನ್ ಗೇಮ್‌ ಆಡುವ ಗೀಳಿಗೆ ಜಾರಿಬಿದ್ದ ಮಗನಿಂದ ಪೋಷಕರು ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯವಾಗಿರಲಿಲ್ಲ. ಮಗನ ಓದು, ಫಲಿತಾಂಶ ಹೋಗಲಿ, ಕೊನೆಗೆ ಅವನುಳಿದರೆ ಸಾಕು ಎಂದ ಹೆತ್ತವರು ಸುಮ್ಮನಾಗಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಸುತ್ತಮುತ್ತಲಲ್ಲಿ ನಡೆಯುತ್ತಿವೆ.

ಮನೆಯ ಜವಾಬ್ದಾರಿ ಹೊತ್ತಿದ್ದ ಅದೆಷ್ಟೋ ಜನರನ್ನು ಏಕಾಂತದ ಕತ್ತಲಿಗೆ ತಳ್ಳಿದ ಆನ್‌ಲೈನ್ ಮೋಸದಾಟಗಳು ಯುವಕರ ಭವಿಷ್ಯವನ್ನೇ ನುಂಗುತ್ತಿವೆ. ಗೇಮ್‌ಗಳಲ್ಲಿ ಹಣ ಕಳೆದುಕೊಂಡು ಜಾಗೃತರಾದ ಕೆಲವರು ಅದರಿಂದ ಹೊರಬಂದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಿದ್ದಾರೆ. ಲಕ್ಷಾಂತರ ಸಾಲ ಮಾಡಿ ಶೇ.4 ರಿಂದ 10ರಷ್ಟು ಬಡ್ಡಿ ಕಟ್ಟುತ್ತಾ ಆಸ್ತಿ ಮಾರಿಕೊಂಡು ಕುಟುಂಬವನ್ನು ಬೀದಿಗೆ ತಳ್ಳಿದವರ ಪಟ್ಟಿ ದೊಡ್ಡದಿದೆ. ಮೋಸದ ಜಾಲದಲ್ಲಿ ಹಣ ಕಳೆದುಕೊಂಡು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಬದುಕಿನ ಉತ್ಸಾಹವನ್ನೇ ಕಳೆದುಕೊಂಡವರ ಲೆಕ್ಕವಿಲ್ಲದಷ್ಟಿದೆ. ಇನ್ನು ದೊಡ್ಡ ಪ್ರಮಾಣದ ಸಾಲದಲ್ಲಿ ಬೀಳುತ್ತಿದ್ದಂತೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಏರುತ್ತಲೇ ಇದೆ. ಆದರೆ ಆನ್‌ಲೈನ್ ಗೇಮಿನಿಂದ ಬದುಕು ಕಟ್ಟಿಕೊಂಡವರನ್ನು ದುರ್ಬೀನು ಹಾಕಿ ಹುಡುಕಬೇಕಿದೆ ಅಷ್ಟೇ!

ಆನ್‌ಲೈನ್ ಮೋಸದಾಟದ ಗೀಳಿಗೆ ಬೀಳುವುದರಲ್ಲಿ ಯುವಸಮೂಹದ ಸಂಖ್ಯೆ ಅಧಿಕವಾಗಿದೆ. ಅದರಲ್ಲೂ ಪ್ರೌಢ ಶಾಲೆಯಿಂದ ಕಾಲೇಜುವರೆಗೆ ಓದುವ ಯುವಕರು ಈ ಜಾಲಕ್ಕೆ ಹೆಚ್ಚು ಸಿಲುಕುತ್ತಿದ್ದಾರೆ. ಹಾಗಂತ ಮಕ್ಕಳು, ಹಿರಿಯರು ಕಮ್ಮಿಯೇನಲ್ಲ. ಫೋನ್‌ ಹಿಡಿದವರನ್ನು ದಿನವಿಡೀ ಮೋಸದ ಜಾಲಕ್ಕೆ ಕೆಡಹುವ ಆನ್‌ಲೈನ್ ಗೇಮಿಂಗ್‌ ಅಡ್ಡಾದಲ್ಲಿ ಒಮ್ಮೆ ಬಿದ್ದವರು ಅದರಿಂದ ಹೊರಬರುವುದು ಕಷ್ಟಕರ ಎಂಬಂತಿದೆ.

ʼಪೋಷಕರು ಮಕ್ಕಳ ಮೇಲಿನ ಪ್ರೀತಿಯ ಕಾರಣಕ್ಕೆ ಮೊಬೈಲ್‌ ಕೊಡಿಸುತ್ತಾರೆ. ಆದರೆ ಮಕ್ಕಳು ಆನ್‌ಲೈನ್ ಮೋಸದ ಜಾಲಕ್ಕೆ ಬಿದ್ದರೆ ಅದಕ್ಕೆ ಪೋಷಕರು ಜವ್ದಾಬಾರರಲ್ಲ. ಸಮಾಜ ಪರಿವರ್ತನೆ ಬಯಸುವ ಜನರು ಇಂತಹ ಮೋಸದಾಟ ವಿರುದ್ಧ ಜಾಗೃತಿ ಮೂಡಿಸುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಸರ್ಕಾರಗಳು ಆನ್‌ಲೈನ್ ಗೇಮಿಂಗ್‌ ಜೊತೆಗೆ ಡ್ರಗ್ಸ್‌, ಸೈಬರ್‌ ಕ್ರೈಮ್‌ ನಿಯಂತ್ರಣಕ್ಕೆ ಬಿಗಿಯಾದ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಇಲ್ಲದಿದ್ದರೆ ಈ ಮೋಸದಾಟಗಳು ಯುವಕರ ಬದುಕು ಕಿತ್ತುಕೊಳ್ಳುತ್ತವೆʼ ಎಂದು ಹಿರಿಯ ವಕೀಲ ಬಾಬುರಾವ್‌ ಹೊನ್ನಾ ಅಭಿಪ್ರಾಯಪಟ್ಟಿದ್ದಾರೆ.

ʼಆನ್‌ಲೈನ್ ಜೂಜಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುವವರು ಯುವಕರೇ ಆಗಿದ್ದಾರೆ. ಮಕ್ಕಳು ಕೇಳಿದಷ್ಟು ಹಣ ಕೊಡುವ ಪೋಷಕರು, ಮಗ ಮೋಸದ ಜಾಲದಲ್ಲಿ ಬೀಳುತ್ತಿರುವುದರ ಬಗ್ಗೆ ಪರಿವೆಯೇ ಇರುವುದಿಲ್ಲ. ಕುಟುಂಬ, ಸಮಾಜದ ಬಗ್ಗೆ ಯಾವುದೇ ಕಾಳಜಿ ವಹಿಸದ ದೊಡ್ಡ ಸಂಖ್ಯೆಯ ಯುವಜನಾಂಗ, ʼಆನ್‌ಲೈನ್ʼ ಎಂಬ ಜಗತ್ತನ್ನೇ ನೆಚ್ಚಿಕೊಂಡಿದ್ದಾರೆ. ಇದರಿಂದ ಕೋಟ್ಯಾಧೀಶರಾಗಿದ್ದವರು ಹಣ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಈ ವ್ಯಸನದಿಂದ ಆತ್ಮಹತ್ಯೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ರಾಜ್ಯ ಸರ್ಕಾರ ಆನ್‌ಲೈನ್ ಗೇಮಿಂಗ್‌ಗಳನ್ನು ನಿರ್ಬಂಧಿಸಲು ಮುಂದಾಗಬೇಕುʼ ಎಂದು ಉದ್ಯಮಿ ಆನಂದ ಪಾಟೀಲ್‌ ಆಗ್ರಹಿಸಿದ್ದಾರೆ.

ಬೀದರ್ 9
ಬೀದರ್‌ನಲ್ಲಿನ ಯುವಕ ಆತ್ಮಹತ್ಯೆ ಘಟನೆಯ ಬಳಿಕ ನಮ್ಮ ಕರ್ನಾಟಕ ಸೇನೆಯ ಬೀದರ್ ಜಿಲ್ಲಾ ಘಟಕವು, ರಾಜ್ಯದಲ್ಲಿ ಆನ್‌ಲೈನ್‌ ಆಟಗಳನ್ನು ನಿಷೇಧಿಸುವಂತೆ ಒತ್ತಾಯಿಸಿತ್ತು.

ಕಳೆದ ಬೆಳಗಾವಿ ಅಧಿವೇಶನದ ವೇಳೆ ಸುವರ್ಣ ಸೌಧ ಎದುರು ನಮ್ಮ ಕರ್ನಾಟಕ ಸೇನೆಯಿಂದ ಪ್ರತಿಭಟನೆ ನಡೆಸಿ, ʼಇಡೀ ರಾಜ್ಯಾದ್ಯಂತ ವಿದ್ಯಾರ್ಥಿ ಮತ್ತು ಯುವ ಸಮುದಾಯದ ಬದುಕು ಹಾಳು ಮಾಡುತ್ತಿರುವ ಆನ್‌ಲೈನ್‌ ಬೆಟ್ಟಿಂಗ್ ಮತ್ತು ಜೂಜಾಟ (ರಮ್ಮಿ) ಆಟಗಳನ್ನು ನಿಷೇಧಿಸಬೇಕು. ಪಾಲಕರು ಕೂಡಿಟ್ಟ ಹಣವನ್ನು ಆನ್ ಲೈನ್ ಗೇಮ್‌ನಲ್ಲಿ ಕಳೆದುಕೊಂಡ ಯುವಕರು, ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಕೂಡಲೇ ಸಿಕ್ಕಿಂ, ಮೇಘಾಲಯ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಂಪೂರ್ಣವಾಗಿ ರಾಜ್ಯದಲ್ಲಿ ಆನ್‌ಲೈನ್‌ ಗೇಮ್ ರದ್ದುಪಡಿಸಲು ಸರಕಾರ ಕ್ರಮ ಕೈಗೊಳ್ಳಬೇಕುʼ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದರು.

ಬೆಳಗಾವಿ ಅಧಿವೇಶನದಲ್ಲೂ ನಡೆದಿತ್ತು ಚರ್ಚೆ

ಕಳೆದ ಡಿಸೆಂಬರ್ 19ರಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲೂ ಕೂಡ ಆನ್‌ಲೈನ್ ‌ಗೇಮಿಂಗ್, ಬೆಟ್ಟಿಂಗ್ ಹಾಗೂ ಅದರಿಂದ ಆಗುತ್ತಿರುವ ಅವಾಂತರಗಳು ಪ್ರತಿಧ್ವನಿಸಿತ್ತು. ಈ ಕುರಿತು ಪ್ರತ್ಯೇಕ ಚರ್ಚೆಗೆ ಪಕ್ಷಾತೀತವಾಗಿ ಒತ್ತಾಯ ಕೇಳಿಬಂದಿತ್ತು.

ಉತ್ತರ ಕರ್ನಾಟಕ ಸಮಸ್ಯೆಗಳ ಮೇಲಿನ ಚರ್ಚೆಯ ವೇಳೆ ವಿಷಯ ಪ್ರಸ್ತಾಪಿಸಿದ್ದ ಬೀದರ್ ಜಿಲ್ಲೆಯ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗಾರ, “ಆನ್‌ಲೈನ್ ಗೇಮಿಂಗ್‌, ಬೆಟ್ಟಿಂಗ್‌ನಿಂದ ಗ್ರಾಮೀಣ ಭಾಗದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಯುವ ಸಮೂಹ ಬಲಿಯಾಗುತ್ತಿದೆ. ಆತ್ಮಹತ್ಯೆ ಪ್ರಕರಣಗಳು ಕೂಡ ನಡೆದಿವೆ” ಎಂದು ಬೇಸರ ವ್ಯಕ್ತಪಡಿಸಿದ್ದರು.

“ಉತ್ತರ ಕರ್ನಾಟಕದ ಗ್ರಾಮಾಂತರ ಭಾಗದಲ್ಲಿ ಯುವಕರು ಆನ್‌ಲೈನ್‌ ಜೂಜು, ಕ್ರಿಕೆಟ್ ಬೆಟ್ಟಿಂಗ್, ಮೊಬೈಲ್ ಗೇಮ್ಸ್‌ಗಳ ಗೀಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಲ ಯುವಕರು ಆತ್ಮಹತ್ಯೆ ಮಾಡಿಕೊಂಡು ವೃದ್ಧ ತಂದೆ- ತಾಯಂದಿರನ್ನು ಅನಾಥ ಮಾಡುತ್ತಿದ್ದಾರೆ” ಎಂದು ಹೇಳಿದಾಗ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರೂ ಇದಕ್ಕೆ ಧ್ವನಿಗೂಡಿಸಿದ್ದರು. ಈ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.

ಇದಕ್ಕೆ ದನಿಗೂಡಿಸಿದ್ದ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ನರೇಂದ್ರಸ್ವಾಮಿ, “ಇದೊಂದು ಗಂಭೀರ ವಿಷಯವಾಗಿದೆ. ಈ ಸಮಸ್ಯೆ ರಾಜ್ಯದ ಎಲ್ಲ ಭಾಗಗಳಲ್ಲೂ ಇದೆ. ಇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನಿನ ಅವಶ್ಯಕತೆ ಇದೆ. ಆದ್ದರಿಂದ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು” ಎಂದು ಆಗ್ರಹಿಸಿದ್ದರು.

ಆಗ, ಉಳಿದ ಹಲವು ಸದಸ್ಯರು ಕೂಡ ದನಿಗೂಡಿಸಿ, ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ್, “ಆನ್‌ಲೈನ್ ಬೆಟ್ಟಿಂಗ್, ಗೇಮಿಂಗ್, ಮಟ್ಕಾ ಮತ್ತಿತರ ವಿಚಾರಗಳಲ್ಲಿ ಸರ್ಕಾರ ಹಲವು ಕಠಿಣ ಕ್ರಮ ಕೈಗೊಂಡಿದೆ. ಈ ಬಗ್ಗೆ ಮಾಹಿತಿಯನ್ನು ಜನರಿಗೆ ನೀಡಬೇಕಿದೆ. ಆದ್ದರಿಂದ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಬೇಕು” ಎಂದು ಸಭಾಪತಿ ಯು.ಟಿ. ಖಾದರ್ ಅವರಲ್ಲಿ ಕೇಳಿಕೊಂಡಿದ್ದರು.

ಇಂತಹ‌ ಮೋಸದ ದಂಧೆಗೆ ಸರ್ಕಾರಗಳು ಕಡಿವಾಣ ಹಾಕಬೇಕು. ಜನರ ಆರೋಗ್ಯ ಮತ್ತು ನೆಮ್ಮದಿಗೆ ದಾರಿ ತೋರಬೇಕು ಎಂಬುದು ನಮ್ಮ ಕಳಕಳಿ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ: SIT ತನಿಖೆ ನಿಷ್ಪಕ್ಷಪಾತವಾಗಿ ಮುಂದುವರಿಸಲು ಸರ್ಕಾರಕ್ಕೆ ‘ನಾವೆದ್ದು ನಿಲ್ಲದಿದ್ದರೆ-ಕರ್ನಾಟಕ’ ಆಗ್ರಹ

ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ನಾಪತ್ತೆ, ಅತ್ಯಾಚಾರ ಮತ್ತು ಬರ್ಬರ ಕೊಲೆಗಳ ಪ್ರಕರಣಗಳ...

ಪಿಒಪಿ ಬಳಸಲ್ಲ ಎಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಿ: ಈಶ್ವರ ಖಂಡ್ರೆ ಸೂಚನೆ

ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಒಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್‌ಗೆ ಅನುಮತಿ ನೀಡುವ...

ಮಹೇಶ್ ಶೆಟ್ಟಿ ತಿಮರೋಡಿ ಪೊಲೀಸ್‌ ವಶಕ್ಕೆ, ಬ್ರಹ್ಮಾವರ ಪೊಲೀಸ್ ಠಾಣೆ ಸುತ್ತ ಒಂದು ದಿನದ ನಿಷೇಧಾಜ್ಞೆ ಜಾರಿ

ಮಹೇಶ್ ಶೆಟ್ಟಿ ತಿಮರೋಡಿ ತೀವ್ರ ವಿಚಾರಣೆಯ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ...

Download Eedina App Android / iOS

X