ಸುನಿತಾ ಮಾತ್ರ ದೀರ್ಘ ಕಾಲದಿಂದ ವಾಸವಿರುವ ಬಾಹ್ಯಕಾಶ ಯಾತ್ರಿಯಲ್ಲ. ಸರಿಸುಮಾರು 2 ವರ್ಷಗಳ ಕಾಲ ಐಎಸ್‌ಎಸ್‌ನಲ್ಲಿ ವಾಸವಿದ್ದವರು ಇದ್ದಾರೆ. ಪಿಗ್ಗಿ ವಿಟ್ಸನ್ ಎಂಬ ಅಮೆರಿಕದ ಮಹಿಳೆ ತಮ್ಮ 15 ವರ್ಷಗಳ ಹಲವು ಬಾರಿಯ ಗಗನಯಾತ್ರೆಯಲ್ಲಿ ಒಟ್ಟು 675 ದಿನಗಳ ಕಾಲ ವಾಸವಿದ್ದರು. ಒಮ್ಮೆ 289 ದಿನಗಳ ಕಾಲ ಸತತವಾಗಿ ಐಎಸ್‌ಎಸ್‌ನಲ್ಲಿ ಕಳೆದಿದ್ದರು. ಫ್ರಾಂಕ್ ರುಬಿಯೋ ಎಂಬಾತ 371 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸಮಾಡಿದ್ದ. ಒಟ್ಟು 275 -300 ಗಗನಯಾತ್ರಿಗಳು ಈಗಾಗಲೇ ಪ್ರಯಾಣ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯಾಗದಿದ್ದರೆ ಮೂರು ತಿಂಗಳು ಅಲ್ಲಿ ನೆಲೆಸುವುದು ದೊಡ್ಡ ವಿಷಯ ಅಲ್ಲವೇ ಅಲ್ಲ
ಹಲವು ಪ್ರಯತ್ನಗಳ ನಂತರ ನಾಸಾ ಕೊನೆಗೂ ಸಂತಸದ ಸುದ್ದಿ ನೀಡಿದೆ. ಗಗನಯಾತ್ರಿಗಳಾದ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶದಿಂದ ವಾಪಸ್ ಕರೆದುಕೊಂಡು ಬರುವ ದಿನಾಂಕ ನಿಗದಿಗೊಳಿಸಲಾಗಿದೆ. ಅಂದುಕೊಂಡ ದಿನಾಂಕಕ್ಕೂ ಮೊದಲೇ ಗಗನಯಾತ್ರಿಗಳನ್ನು ವಾಪಸ್ ಕರೆತರುವುದಾಗಿ ನಾಸಾ ಅಧಿಕೃತವಾಗಿ ತಿಳಿಸಿದೆ. ಈ ಇಬ್ಬರು ಗಗನಯಾತ್ರಿಗಳು ಮಾರ್ಚ್ ಮಧ್ಯದಲ್ಲಿ ಭೂಮಿಗೆ ಭೂಮಿಗೆ ಹಿಂತಿರುಗಲಿದ್ದಾರೆ. ನಾಸಾ ನೀಡಿರುವ ಮಾಹಿತಿಯ ಪ್ರಕಾರ ಮಾರ್ಚ್ 12ರಂದು ಕ್ರೂ-10 ಗಗನಕ್ಕೆ ಲಾಂಚ್ ಆಗುತ್ತಿದೆ. ಇದು ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದ ಗಗನಯಾತ್ರಿಗಳಾದ ಸುನಿತಾ ಮತ್ತು ಬುಚ್ ಅವರನ್ನು ಭೂಮಿಗೆ ಮರಳಿ ಕರೆತರುತ್ತದೆ. ಎಲ್ಲವೂ ಅಂದುಕೊಂಡಂತೆ ಆದರೆ ಮಾರ್ಚ್ 25ರೊಳಗೆ ಸುನಿತಾ ವಿಲಿಯಮ್ಸ್ ಅವರು ಪೃಥ್ವಿಗೆ ಕಾಲಿಡಲಿದ್ದಾರೆ.
8 ದಿನಗಳ ಮಿಷನ್‌ಗೆ ತೆರಳಿದ್ದ ಸುನಿತಾ
ಸುನಿತಾ ವಿಲಿಯಮ್ಸ್ ಎಂಟು ದಿನದ ಮಿಷನ್ಗಾಗಿ ಕಳೆದ ವರ್ಷದ ಜೂನ್ 5 ರಂದು ಬೋಯಿಂಗ್ ಸ್ಟರ್ಲೈನರ್ ಕ್ಯಾಪ್ಸುಲ್ ಮೂಲಕ ಸಹಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಬಾಹ್ಯಾಕಾಶಕ್ಕೆ ಹಾರಿದ್ದರು. ಅವರು ತೆರಳಿದ್ದ ಬೋಯಿಂಗ್ ಸ್ಟಾರ್ ಲೈನರ್ ಏರ್‌ಕ್ರಾಫ್ಟ್‌ನಲ್ಲಿ ಹೀಲಿಯಂ ಸೋರಿಕೆ ಕಾಣಿಸಿದ್ದರಿಂದ ಥ್ರಸ್ಟರ್ಸ್‌ನಲ್ಲಿ ಸಮಸ್ಯೆ ಉಂಟಾಯಿತು. ತಾಂತ್ರಿಕ ಸಮಸ್ಯೆ ಕಂಡ ಬಂದ ಹಿನ್ನೆಲೆಯಲ್ಲಿ ನಿಗದಿತ ಅವಧಿಯೊಳಗೆ ವಾಪಸ್ ಬರಲು ಆಗಲಿಲ್ಲ. ನಂತರ ಈ ಇಬ್ಬರು ಗಗನಯಾತ್ರಿಗಳು ಬೋಯಿಂಗ್‌ನ ಹೊಸ ಸ್ಟಾರ್‌ಲೈನರ್ ಕ್ಯಾಪ್ಸುಲ್ ಪರೀಕ್ಷಿಸಲು ಮುಂದಾದರು. ಸಮಸ್ಯೆ ಸರಿಯಾಗದ ಕಾರಣ ಆಗಿನಿಂದಲೂ ಅವರಿಬ್ಬರೂ ಅಂತಾರಾಷ್ಟ್ರೀಯ ಬಾಹ್ಯಾಕಾಶದಲ್ಲಿಯೇ(ಐಎಸ್‌ಎಸ್) ಸಿಲುಕಿದರು. ತಾಂತ್ರಿಕ ದೋಷಗಳನ್ನು ಸರಿಪಡಿಸಲು ಕಳೆದ 8 ತಿಂಗಳಿನಿಂದಲೂ ವಿಜ್ಞಾನಿಗಳಿಂದ ಸಂಶೋಧನೆ ಕೂಡ ನಡೆಯುತ್ತಿದೆ.
ಥ್ರಸ್ಟರ್ ಅಂದರೆ ಸಣ್ಣ ಇಂಜಿನ್‌ಗಳಾಗಿದ್ದು, ಸ್ಟಾರ್‌ಲೈನರ್ ಅಂತಹ ಒಟ್ಟು 28 ಇಂಜಿನ್‌ಗಳನ್ನು ಹೊಂದಿದೆ. ಇವುಗಳು ಬಾಹ್ಯಾಕಾಶ ನೌಕೆ ಚಲಿಸುವ ಪಥವನ್ನು ನಿಯಂತ್ರಿಸಲು ನೆರವಾಗುತ್ತವೆ. ಈಗ 5 ಥ್ರಸ್ಟರ್‌ಗಳಲ್ಲಿ ತೊಂದರೆ ಕಾಣಿಸಿಕೊಂಡಿವೆ. ಐಎಸ್‌ಎಸ್‌ಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸರಿಪಡಿಸಬೇಕಿದೆ. ತಾಂತ್ರಿಕ ದೋಷ ಬಹುತೇಕ ನಿವಾರಣೆಯಾದ ಹಿನ್ನೆಲೆಯಲ್ಲಿ ಇಬ್ಬರು ಗಗನಯಾತ್ರಿಗಳು ಮುಂದಿನ ತಿಂಗಳು ಸುರಕ್ಷಿತವಾಗಿ ಮರಳುತ್ತಿದ್ದಾರೆ. ಈ ಮೊದಲು, ಎಲೋನ್ ಮಸ್ಕ್ ಅವರ ಕಂಪನಿ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಈ ವರ್ಷದ ಫೆಬ್ರವರಿಯಲ್ಲಿ ಸುನೀತಾ ಮತ್ತು ಬುಚ್ ವಿಲ್ಮೋರ್ ಅವರನ್ನು ಮರಳಿ ಕರೆತರುವ ಬಗ್ಗೆ ನಾಸಾ ತಿಳಿಸಿತ್ತು. ಆದಾರೆ ಈ ಪ್ರಯತ್ನ ಸಾಧ್ಯವಾಗಿರಲಿಲ್ಲ.
ಐಎಸ್‌ಎಸ್ ಆಯುಷ್ಯ, ಆಯ್ಕೆ, ಗಗನಯಾತ್ರಿಗಳ ವಾಸ
200 ದಿನಗಳಿಗಿಂತ ಭೂಮಿಯಿಂದ 400 ಕಿ.ಮೀ ದೂರದಲ್ಲಿರುವ ಐಎಸ್‌ಎಸ್‌ನಲ್ಲಿ ಸುನಿತಾ ವಿಲಿಯಮ್ಸ್ ವಾಸವಿದ್ದಾರೆ. ಈ ಬಾಹ್ಯಾಕಾಶ ಕೇಂದ್ರ ಪ್ರತಿ 90 ನಿಮಿಷಕ್ಕೆ ಭೂಮಿಗೆ ಒಂದು ಪರಿಭ್ರಮಣೆ ನಡೆಸುತ್ತದೆ. ಪ್ರತಿದಿನ 16 ಬಾರಿ ಭೂಮಿಯ ಸುತ್ತ ಸುತ್ತುತಿರುತ್ತದೆ. ಇಲ್ಲಿ ದಿನದಲ್ಲಿ 16 ಬಾರಿ ಬೆಳಕು ಹಾಗೂ 16 ಬಾರಿ ಕತ್ತಲಾಗುತ್ತದೆ. ಐಎಸ್‌ಎಸ್‌ನ ಒಟ್ಟು ವಿಸ್ತೀರ್ಣ 375 ಅಡಿಯಷ್ಟು ಅಗಲ ಮತ್ತು ಉದ್ದವಿರುತ್ತದೆ. ಈ ಗಾತ್ರದ ಅಂದಾಜು ಸುಮಾರು ಅಮೆರಿಕಾದ ಪುಟ್‌ಬಾಲ್ ಮೈದಾನದಷ್ಟು ದೊಡ್ಡದಾಗಿರುತ್ತೆ. ಇದರಲ್ಲಿ ಆರು ಮಲಗುವ ಜಾಗಗಳು, ಎರಡು ಸ್ನಾನಗೃಹಗಳು, ಒಂದು ವ್ಯಾಯಾಮ ಕೇಂದ್ರ,ಅಡುಗೆ ಮಾಡಿಕೊಳ್ಳಲು ಸ್ಥಳ ಕೂಡ ಲಭ್ಯವಿರುತ್ತದೆ ಮತ್ತು 360 ಡಿಗ್ರಿಗಳ ನೋಟ ಒದಗಿಸುವ ಕಿಟಕಿಗಳಿವೆ. ಭೂಮಿಯಿಂದ ಉಡಾವಣೆಗೊಂಡ ಬಾಹ್ಯಾಕಾಶ ನೌಕೆ ನಾಲ್ಕು ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಬಾಹ್ಯಾಕಾಶ ನಿಲ್ದಾಣ ತಲುಪಬಲ್ಲದು. ಏಕಕಾಲದಲ್ಲಿ ಐಎಸ್ಎಸ್ ಎಂಟು ಬಾಹ್ಯಾಕಾಶ ನೌಕೆಗಳ ನಿಲುಗಡೆಗೆ ಅವಕಾಶ ನೀಡಬಲ್ಲದು.
ಗಗನಯಾತ್ರಿಗಳಿಗೆ ಸಂಶೋಧನೆಗೆ ಬೇಕಾದ ಎಲ್ಲ ವಸ್ತುಗಳನ್ನು ಕೂಡ ಅದರಲ್ಲಿಯೇ ಇರುತ್ತದೆ. ಬಾಹ್ಯಾಕಾಶದಲ್ಲಿ ಒಂದು ಬಾರಿಗೆ ಆರರಿಂದ ಏಳು ಜನರು ಮಾತ್ರ ಇರಲು ಸಾಧ್ಯ. ಬಾಹ್ಯಾಕಾಶದಲ್ಲಿ ಸಾಮಾನ್ಯವಾಗಿ ಗಗನಯಾನಿಗಳು 6 ತಿಂಗಳು ಕಾಲ ಇರುತ್ತಾರೆ. ಕೆಲವೊಮ್ಮೆ ಎಂಟು ದಿನ ಆರು ದಿನ ಇರುವ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಭೂಮಿಯಿಂದ ಆಗಾಗ್ಗೆ ಕಾರ್ಗೋ ರಾಕೆಟ್‌ಗಳ ಮೂಲಕ ಕೆಲ ವಸ್ತುಗಳನ್ನು ರವಾನೆ ಮಾಡಲಾಗುತ್ತದೆ.
ನಾಸಾ ಐಎಸ್‌ಎಸ್‌ಅನ್ನು ನಿರಂತರವಾಗಿ ಗಮನಿಸುತ್ತಾ, ಅಲ್ಲಿನ ವಾಯು ಒತ್ತಡವನ್ನು ಭೂಮಿಯ ಒತ್ತಡವಾದ 14.7 ಪೌಂಡ್‌ಪರ್ ಸ್ಕ್ವೇರ್ ಇಂಚ್ (ಪಿಎಸ್ಐ) ಅಥವಾ 1 ಅಟ್ಮಾಸ್ಫಿಯರ್ ಮಟ್ಟದಲ್ಲಿ ಇಡಲಾಗುತ್ತದೆ. ಬಾಹ್ಯಾಕಾಶ ನಿಲ್ದಾಣದ ತಾಪಮಾನವನ್ನು ಸಾಮಾನ್ಯವಾಗಿ 18.3 ಡಿಗ್ರಿ ಸೆಲ್ಸಿಯಸ್‌ನಿಂದ 26.7 ಡಿಗ್ರಿ ಸೆಲ್ಸಿಯಸ್ ನಡುವೆ ಇಡಲಾಗುತ್ತದೆ. ಐಎಸ್ಎಸ್ ಇರುವ ಸ್ಥಳಕ್ಕೆ ಅನುಗುಣವಾಗಿ ಈ ತಾಪಮಾನ ಬದಲಾಗುತ್ತಿರುತ್ತದೆ. ಬಾಹ್ಯಾಕಾಶವು ನಿಲ್ದಾಣದ ಹೊರಭಾಗದಲ್ಲಿ, ಸೂರ್ಯನಿಗೆ ಎದುರಾಗಿರುವ ಬದಿ ಅಂದಾಜು 121 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಹೊಂದಿದ್ದರೆ, ನೆರಳಿಗೆ ಎದುರಾಗಿರುವ ಬದಿ ಅಂದಾಜು -157 ಡಿಗ್ರಿ ಸೆಲ್ಸಿಯಸ್‌ನಷ್ಟು ಕನಿಷ್ಠ ತಾಪಮಾನ ಹೊಂದಿರುತ್ತದೆ.
ಈ ಸುದ್ದಿ ಓದಿದ್ದೀರಾ? ಚಾಂಪಿಯನ್ಸ್ ಟ್ರೋಫಿ | ಬೂಮ್ರಾ ಇಲ್ಲದ ಭಾರತಕ್ಕೆ ಎಷ್ಟು ಸಂಕಷ್ಟ; ಬಿಸಿಸಿಐ ಸ್ಪಿನ್ನರ್‌ಗಳ ತಂಡ ಪ್ರಕಟಿಸಿತೆ?
ಪ್ರತಿಯೊಬ್ಬ ಗಗನಯಾತ್ರಿಗೂ ದಿನಕ್ಕೆ ಅಂದಾಜು 3.79 ಲೀಟರ್ ನೀರಿನ ಅವಶ್ಯಕತೆ ಇರುತ್ತದೆ. ಈ ನೀರನ್ನು ಅವರು ಕುಡಿಯಲು, ಅಡುಗೆ ಮಾಡಲು, ಹಲ್ಲುಜ್ಜುವುದು ಸೇರಿದಂತೆ ವೈಯಕ್ತಿಕ ಸ್ವಚ್ಛತೆಗೆ ಬಳಸುತ್ತಾರೆ. ಒಂದು ವೇಳೆ ಗಗನಯಾತ್ರಿಗಳು ತಿಂಗಳಾನುಗಟ್ಟಲೆ ಬಾಹ್ಯಾಕಾಶ ನಿಲ್ದಾಣದಲ್ಲಿ ಕಳೆಯುತ್ತರೆಂದರೆ, ತಮ್ಮೊಡನೆ ತಂದ ಶೇ. 98 ನೀರನ್ನು ಯಶಸ್ವಿಯಾಗಿ ಮರುಬಳಕೆ ಮಾಡುತ್ತಾರೆ. ಇದರಲ್ಲಿ ಗಗನಯಾತ್ರಿಗಳ ಮೂತ್ರ ಮತ್ತು ಬೆವರೂ ಸೇರಿದ್ದು, ಅದನ್ನು ಮರಳಿ ಶುದ್ಧ ನೀರನ್ನಾಗಿ ಪರಿವರ್ತಿಸಲಾಗುತ್ತದೆ.
ಎನ್ವಿರಾನ್‌ಮೆಂಟಲ್ ಕಂಟ್ರೋಲ್ ಆ್ಯಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ಇಸಿಎಲ್ಎಸ್ಎಸ್) ಎಂಬ ವ್ಯವಸ್ಥೆಯನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ನೀರಿನ ಮರುಬಳಕೆ ನಡೆಸಲೆಂದೇ ಅಳವಡಿಸಲಾಗಿದೆ. ಇದು ಸ್ವಚ್ಛ ನೀರು ಒದಗಿಸಲು ಕೆಲಸ ಮಾಡುತ್ತದೆ. ಈ ಯಂತ್ರ ಕೇವಲ ಗಗನಯಾತ್ರಿಗಳ ಮೂತ್ರವನ್ನು ಮಾತ್ರವೇ ಶುದ್ಧ ನೀರನ್ನಾಗಿ ಪರಿವರ್ತಿಸುವುದಲ್ಲ. ಅದರೊಡನೆ, ಗಗನಯಾತ್ರಿಗಳ ಉಸಿರಿನ ತೇವಾಂಶ, ಬೆವರಿನ ತೇವಾಂಶವನ್ನೂ ಸಂಗ್ರಹಿಸಿ, ಮರುಬಳಕೆಗೆ ಶುದ್ಧ ನೀರನ್ನಾಗಿ ಪರಿವರ್ತಿಸುತ್ತದೆ.
ಸದ್ಯದ ಐಎಸ್‌ಎಸ್‌ನ ಆಯುಷ್ಯ 2040 ಅಥವಾ 2050ಕ್ಕೆ ಮುಗಿಯುತ್ತದೆ. ಇನ್ನೊಂದು ಸ್ಪೇಸ್ ಸ್ಟೇಷನ್ ತಯಾರಿಕೆಗೆ ಕೆಲ ದೇಶಗಳ ಒಡಂಬಡಿಕೆಯೊಂದಿಗೆ ಯೋಜನೆಗಳು ನಡೆಯುತ್ತಿವೆ. ಭಾರತವು ಸಹ ಸ್ಪೇಸ್ ಸ್ಟೇಷನ್ ನಿರ್ಮಿಸಲು ಯೋಜನೆ ರೂಪಿಸುತ್ತಿದೆ.
ಗಗನಯಾತ್ರಿಗಳನ್ನು ಹಲವು ಸುತ್ತುಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಒರ್ವ ಗಗನಯಾತ್ರಿಯಾಗಿ ಆಯ್ಕೆಯಾದ ಮೇಲೆ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗುತ್ತದೆ. ಸಮುದ್ರದ ಒಳಗೆ ಸ್ಕೂಬಾ ಡೈವ್ ತರಬೇತಿಯನ್ನು ನೆಡಸಲಾಗುತ್ತೆ. ಪ್ರತಿದಿನ ಈಜುವ ತರಬೇತಿಯನ್ನು ನೀಡಲಾಗುತ್ತದೆ. ಬಳಿಕ ಗುರುತ್ವಾಕರ್ಷಣೆ ಇಲ್ಲದಂತಹ ಸ್ಥಳವನ್ನು ನಿರ್ಮಿಸಿ, ಅಲ್ಲಿಯೂ ತರಬೇತಿ ಕೊಡಲಾಗುತ್ತದೆ. ಏರ್ ಪ್ಲೈ ಮಾಡುವ ತರಬೇತಿಯನ್ನು ಮಾಡುತ್ತಾರೆ . ಇದೆಲ್ಲಾ ತರಬೇತಿಗಳನ್ನು ವರ್ಷಾನುಗಟ್ಟಲೆ ನೀಡಲಾಗುತ್ತದೆ.
ಇನ್ನು ಆಹಾರ, ಆಮ್ಲಜನಕದ ವಿಷಯಕ್ಕೆ ಬಂದರೆ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳು ಬಹುತೇಕ ಭೂಮಿಯಲ್ಲಿ ಸೇವಿಸುವಂತಹ ಆಹಾರವನ್ನೇ ಸೇವಿಸುತ್ತಾರೆ. ಹಣ್ಣುಗಳು, ತರಕಾರಿಗಳು, ಮೊದಲೇ ಸಿದ್ಧಪಡಿಸಿರುವ ಆಹಾರ ಪದಾರ್ಥಗಳು, ಸಿಹಿ ತಿನಿಸುಗಳು, ಕೆಚಪ್ ಮತ್ತು ಸಾಸಿವೆಯಂತಹ ವಸ್ತುಗಳೂ ಸೇರಿವೆ. ಅವರು ಪ್ರತಿದಿನವೂ ಮೂರು ಬಾರಿ ಆಹಾರ ಸೇವಿಸುತ್ತಾರೆ. ಅದರೊಡನೆ ಹೆಚ್ಚುವರಿ ಕ್ಯಾಲರಿಗಾಗಿ ಇತರ ತಿನಿಸುಗಳನ್ನೂ ತಿನ್ನುತ್ತಾರೆ. ಅವರ ಆಹಾರ ಆಯ್ಕೆಗಳನ್ನು ಖುದ್ದಾಗಿ ಯೋಜನಾ ತಂಡ ಮತ್ತು ಗಗನಯಾತ್ರಿಗಳೇ ಜಾಗರೂಕತೆಯಿಂದ ಆಯ್ಕೆ ಮಾಡಿಕೊಂಡು ರೂಪಿಸುತ್ತಾರೆ. ಸುದೀರ್ಘ ಅವಧಿಯ ಬಾಹ್ಯಾಕಾಶ ಯೋಜನೆಗಳಲ್ಲಿ ಗಗನಯಾತ್ರಿಗಳು ಉಳಿಯುವ ಸಲುವಾಗಿ ವಿಜ್ಞಾನಿಗಳು ಆಹಾರ ತಯಾರಿ ಮತ್ತು ಪ್ಯಾಕೇಜಿಂಗ್ ಕ್ರಮವನ್ನು ವಿಶಿಷ್ಟವಾಗಿಸಿದ್ದಾರೆ. ಬಾಹ್ಯಾಕಾಶಕ್ಕೆ ಕಳುಹಿಸುವ ಆಹಾರ ವಸ್ತುಗಳನ್ನು ಆರಿಸುವಾಗ, ಕಡಿಮೆ ತೂಕ, ಹೆಚ್ಚು ಪೋಷಕಾಂಶ ಹೊಂದಿರುವ, ತಿನ್ನಲು ಸುಲಭ ಮತ್ತು ರುಚಿಕರವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
2 ವರ್ಷ ವಾಸವಿದ್ದ ಪಿಗ್ಗಿ ವಿಟ್ಸನ್ !
ಈಗ ಐಎಸ್‌ಎಸ್‌ನಲ್ಲಿ ಸಿಲುಕಿಕೊಂಡಿರುವ ಸುನಿತಾ ವಿಲಿಯಮ್ಸ್ ಈ ಮೊದಲು ಎರಡು ಬಾರಿ ತೆರಳಿದ್ದ ಅವರ ಒಟ್ಟು ಅವಧಿ ಸೇರಿ 400ಕ್ಕೂ ಹೆಚ್ಚು ದಿನಗಳಾಗಿವೆ. ಬುಚ್ ವಿಲ್ಮೋರ್ 300ಕ್ಕೂ ಹೆಚ್ಚು ದಿನಗಳ ಕಾಲ ವಾಸವಿದ್ದಾರೆ. ಹಾಗೆ ನೋಡಿದರೆ ಸುನಿತಾ ಮಾತ್ರ ದೀರ್ಘ ಕಾಲದಿಂದ ವಾಸವಿರುವ ಬಾಹ್ಯಕಾಶ ಯಾತ್ರಿಯಲ್ಲ. ಸರಿಸುಮಾರು 2 ವರ್ಷಗಳ ಕಾಲ ಐಎಸ್‌ಎಸ್‌ನಲ್ಲಿ ವಾಸವಿದ್ದವರು ಇದ್ದಾರೆ. ಪಿಗ್ಗಿ ವಿಟ್ಸನ್ ಎಂಬ ಅಮೆರಿಕದ ಮಹಿಳೆ ತಮ್ಮ 15 ವರ್ಷಗಳ ಹಲವು ಬಾರಿಯ ಗಗನಯಾತ್ರೆಯಲ್ಲಿ ಒಟ್ಟು 675 ದಿನಗಳ ಕಾಲ ವಾಸವಿದ್ದರು. ಒಮ್ಮೆ 289 ದಿನಗಳ ಕಾಲ ಸತತವಾಗಿ ಐಎಸ್‌ಎಸ್‌ನಲ್ಲಿ ಕಳೆದಿದ್ದರು. ಫ್ರಾಂಕ್ ರುಬಿಯೋ ಎಂಬಾತ 371 ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಾಸಮಾಡಿದ್ದ. ಒಟ್ಟು 275 -300 ಗಗನಯಾತ್ರಿಗಳು ಈಗಾಗಲೇ ಪ್ರಯಾಣ ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯಾಗದಿದ್ದರೆ ಮೂರು ತಿಂಗಳು ಅಲ್ಲಿ ನೆಲೆಸುವುದು ದೊಡ್ಡ ವಿಷಯ ಅಲ್ಲವೇ ಅಲ್ಲ.
ಬಾಹ್ಯಾಕಾಶ ಯಾತ್ರಿಗಳು ಅಂತರಿಕ್ಷ ಕೇಂದ್ರದಲ್ಲಿ ಕೆಲ ವೈದ್ಯಕೀಯ ಸಂಶೋಧನೆಗಳನ್ನು ಮಾಡುತ್ತಾರೆ. ಗುರತ್ವಾಕರ್ಷಣೆ ಇಲ್ಲದೇ ಆಗುವ ರಾಸಾಯನಿಕ ಪ್ರಕ್ರಿಯೆಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ. ಕೆಲ ಕಾಯಿಲೆಗಳಿಗೆ ಔಷಧಿಗಳ ಸಂಶೋಧನೆಯೂ ಕೂಡ ನಡೆಯುತ್ತದೆ. ಗುರುತ್ವಾಕರ್ಷಣೆ ಇಲ್ಲದೇ ಗಿಡಗಳನ್ನು ಬೆಳಸಬಹುದಾ ಅನ್ನುವುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
ಗುಜರಾತ್ ಮೂಲದ ಸುನಿತಾ !
ಸುನಿತಾ ವಿಲಿಯಮ್ಸ್ ಅವರ ತಂದೆ ಡಾ. ದೀಪಕ್ ಪಾಂಡ್ಯಾ ಅವರು ಭಾರತೀಯ ಮೂಲದವರು. ದೀಪಕ್ ಅವರು ಗುಜರಾತ್‌ನ ಮೆಹಸನಾ ಜಿಲ್ಲೆಯವರು. ಉದ್ಯೋಗಕ್ಕಾಗಿ 1950ರ ದಶಕದಲ್ಲಿ ಅಮೆರಿಕಕ್ಕೆ ತೆರಳಿ ವೈದ್ಯರಾಗಿ ಅಲ್ಲಿಯೇ ನೆಲೆನಿಂತು ಅಮೆರಿಕದ ಪ್ರಜೆ ಬೋನಿ ಝಲೋಕರ್ ಅವರನ್ನು ವಿವಾಹವಾದರು. ಸುನಿತಾ ಅವರು ಜನಿಸಿದ್ದು 1965ರ ಸೆ.19ರಂದು ಅಮೆರಿಕದ ಒಹಿಯೊದಲ್ಲಿ. 1983ರಲ್ಲಿ ಪದವಿ, 1987ರಲ್ಲಿ ಯುಎಸ್‌ಎನ್ ಅಕಾಡೆಮಿಯಿಂದ ಭೌತಿಕ ವಿಜ್ಞಾನದಲ್ಲಿ ಬಿಎಸ್‌ಸಿ ಪದವಿ ಹಾಗೂ 1995 ರಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಅಮೆರಿಕದ ನೌಕಾಪಡೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದರು. 1998ರಲ್ಲಿ ನಾಸಾವು ಸುನಿತಾ ಅವರ ಸೇವೆಯನ್ನು ಗುರುತಿಸಿ ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತು. ಆ ನಂತರ 2007 ಹಾಗೂ 2012ರಲ್ಲಿ ಗಗನಯಾತ್ರಿಯಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಮೈಕಲ್ ಜೆ ವಿಲಿಯಮ್ಸ್ ಅವರನ್ನು ಸುನಿತಾ ವಿವಾಹವಾಗಿದ್ದಾರೆ.