ಮೊಬೈಲ್ ಇಲ್ಲದೆ ಜೀವನವೇ ಇಲ್ಲವೆಂಬುವ ಸ್ಥಿತಿ ಇಂದಿನ ಯುಗದಲ್ಲಿ ನಿರ್ಮಾಣವಾಗಿದೆ. ಪ್ರತಿಯೊಬ್ಬ ವೃತ್ತಿಪರರಿಗೂ ಮೊಬೈಲ್ ಅಗತ್ಯವಾಗಿ ಬೇಕೆಬೇಕಾಗಿದೆ. ಅದು ಆಂಡ್ರಾಯ್ಡ್, ಐಫೋನ್ ಅಥವಾ ಕೀಪ್ಯಾಡ್ ಮೊಬೈಲ್ ಆಗಿರಲಿ ಮೊಬೈಲ್ ನಿತ್ಯ ಜೀವನದ ಒಂದು ಭಾಗವಾಗಿ ಪರಿಗಣಿಸಿದೆ. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೊಬೈಲ್‌ಗಳನ್ನು ಖರೀದಿಸಿದರೆ, ಮತ್ತೂ ಕೆಲವರು ಸಾಲ ಮಾಡಿ ಇಎಂಐ ಮೂಲಕ ಕೊಂಡಿರುತ್ತಾರೆ. ಅಂತಹ ಮೊಬೈಲ್ ಕಳುವಾದರೆ ಕೋಪ, ಆವೇಶ ಎಲ್ಲವೂ ಒಟ್ಟಿಗೆ ಬರುತ್ತದೆ. ಹೊಸ ಮೊಬೈಲ್‌ನಲ್ಲಿ ಬ್ಯಾಟರಿ ಬೇಗ ಖಾಲಿಯಾದರೆ ಬೇಸರ ಖಂಡಿತಾ ಆಗುತ್ತದೆ
ನೀವು ಆಂಡ್ರಾಯ್ಡ್ ಫೋನ್ ಖರೀದಿಸಿದಾಗ ಮಳಿಗೆಯವರು ಅಥವಾ ಆನ್‌ಲೈನ್ ಫೀಚರ್‌ನಲ್ಲಿ ಬ್ಯಾಟರಿ ಬಾಳಿಕೆಯ ಬಗ್ಗೆ ಇಂತಿಷ್ಟು ಎಂದು ಗ್ಯಾರಂಟಿ ನೀಡಿರುತ್ತಾರೆ. ಆದರೆ ಕೆಲವು ದಿನಗಳ ಬಳಿಕ ಬ್ಯಾಟರಿ ಅವಧಿ ಕಡಿಮೆಯಾಗುತ್ತ ಬರುತ್ತದೆ. ಸಾಮಾನ್ಯವಾಗಿ ಇದು ಎಲ್ಲರಿಗೂ ಬೇಸರ ತರಿಸಿ ಆಗಾಗ ಚಾರ್ಜ್ ಹಾಕಬೇಕಾದ ಸಂದರ್ಭ ಒದಗಿಬರುತ್ತದೆ. ನೀವು ಹೊರಗಿದ್ದಾಗ ಫೋನ್ ಸ್ವಿಚ್ ಆಫ್ ಆಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಕೆಲವು ಬಾರಿ ಪವರ್ ಬ್ಯಾಂಕ್ ಕೂಡ ನಿಮ್ಮ ಬಳಿ ಇರುವುದಿಲ್ಲ. ಆಗ ಏನು ಮಾಡುವಿರಿ? ಬ್ಯಾಟರಿ ಬಾಳಿಕೆಯನ್ನು ದೀರ್ಘ ಸಮಯದವರೆಗೂ ಇಟ್ಟುಕೊಳ್ಳಲು ಕೆಳಗಿನ ಸೂಚನೆಗಳನ್ನು ಅನುಸರಿಸಿ.
- ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಕ್ರೀನ್ ಹೊಳಪನ್ನು(ರೆಸಲ್ಯೂಷನ್) ಅಗತ್ಯಕ್ಕೆ ತಕ್ಕ ಹಾಗೆ ಕಡಿಮೆ ಮಾಡುವುದರಿಂದ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸಬಹುದು. ಅಗತ್ಯವಿಲ್ಲದಿದ್ದಾಗ ಸ್ಕ್ರೀನ್ ಸಂಪೂರ್ಣವಾಗಿ ಆಫ್ ಮಾಡಿ.
- ನೀವು ವೈ-ಫೈ ಮತ್ತು ಬ್ಲೂಟೂತ್ ಅನ್ನು ಬಳಸದೇ ಇರುವಾಗ ಅವುಗಳನ್ನು ಆಫ್ ಮಾಡಿ. ಇವು ಬ್ಯಾಟರಿಯನ್ನು ಹೆಚ್ಚು ಬಳಸುತ್ತವೆ.
- ಕೆಲವು ಅಪ್ಲಿಕೇಶನ್‌ಗಳು ಬ್ಯಾಗ್ರೌಂಡ್‌ನಲ್ಲಿ ಚಾಲನೆಯಲ್ಲಿರುತ್ತವೆ. ಇದು ಕೂಡ ಬ್ಯಾಟರಿ ಬೇಗ ಮುಗಿದು ಹೋಗಲು ಪ್ರಮುಖ ಕಾರಣ. ಈ ಹಿನ್ನೆಲೆಯಲ್ಲಿ ಅಪ್ಲಿಕೇಶನ್‌ಗಳನ್ನು ಆಫ್ ಮಾಡಲು ನೀವು ”ಸೆಟ್ಟಿಂಗ್‌ಗಳು” > ”ಅಪ್ಲಿಕೇಶನ್‌ಗಳು” > ”ರನ್ನಿಂಗ್”ಗೆ ಹೋಗುವ ಮೂಲಕ ಅವುಗಳನ್ನು ಆಫ್ ಮಾಡಬಹುದು. ಇದು ವಿವಿಧ ಮೊಬೈಲ್‌ನಲ್ಲಿ ವಿವಿಧ ರೀತಿ ಇರುತ್ತದೆ. ಸೆಟ್ಟಿಂಗ್‌ನಲ್ಲಿಯೇ ಗಮನಿಸಿ ಆಫ್ ಮಾಡಬಹುದು.
- ಯೂಟ್ಯೂಬ್, ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮುಂತಾದ ಆಪ್ ಅಥವಾ ಒಟಿಟಿಯಲ್ಲಿ ವಿಡಿಯೋ ಅಥವಾ ಸಿನಿಮಾಗಳನ್ನು ವೀಕ್ಷಿಸುತ್ತಿದ್ದರೆ ವಿಡಿಯೋ ರೆಸಲ್ಯೂಷನ್‌ನನ್ನು ಆದಷ್ಟು ಕಡಿಮೆ ಮಾಡಿ. ವಿಡಿಯೋ ಗುಣಮಟ್ಟದ ಆಯ್ಕೆಗಳು ಆಯಾ ಆಪ್‌ನಲ್ಲಿಯೇ ಇರುತ್ತವೆ. ಗುಣಮಟ್ಟವನ್ನು ಸಾಧಾರಣ ಹಂತದೊಂದಿಗೆ ಬಳಸಿ ವಿಡಿಯೋಗಳನ್ನು ನೋಡಿದರೆ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರುತ್ತದೆ.
- ನೀವು ಬಳಸದ ಅಪ್ಲಿಕೇಶನ್‌ಗಳನ್ನು ಹೋಮ್ ಸ್ಕ್ರೀನ್‌ನಲ್ಲಿಯೇ ಪರಿಶೀಲಿಸಿ ಅಳಿಸಿ. ಹಳೆಯ ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಕಡಿಮೆಗೊಳಿಸುತ್ತವೆ. ನಿಮ್ಮಲ್ಲಿ ಕಡಿಮೆ ಬ್ಯಾಟರಿ ಉಳಿದಿರುವಾಗ ಬ್ಯಾಟರಿ ಉಳಿತಾಯ ಮೋಡ್ ಬಳಸಿ. ಇದು ಬ್ಯಾಟರಿಯ ಅಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಗೂಗಲ್, ಕ್ರೋಮ್ ರೀತಿಯ ಸರ್ಚ್ ಇಂಜಿನ್‌ಗಳಲ್ಲಿ ಅಗತ್ಯಕ್ಕೆ ತಕ್ಕ ಹಾಗೆ ಟ್ಯಾಬ್‌ಗಳನ್ನು ಬಳಸಿ. ಹೆಚ್ಚು ಟ್ಯಾಬ್‌ಗಳನ್ನು ಬಳಸಿದರೆ ಬ್ಯಾಟರಿ ಅವಧಿ ಕಡಿಮೆಯಾಗುತ್ತ ಬರುತ್ತದೆ.
- ನೀವು ರಾತ್ರಿಯಲ್ಲಿ ಮಲಗುವ ವೇಳೆ ನಿಮ್ಮ ಸ್ಮಾರ್ಟ್‌ಫೋನ್ ಬಳಸುವಾಗ ರಾತ್ರಿ ಮೋಡ್ ಬಳಸಿ. ಇದು ಬ್ಯಾಟರಿ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಇಂಟರ್‌ನೆಟ್ ಆಫ್ ಮಾಡಿದರೆ ಮತ್ತಷ್ಟು ಒಳ್ಳೆಯದು.
- ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಯಾವಾಗಲೂ ನವೀಕರಿಸಿ. ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ.
- ಅನಗತ್ಯ ಆಪ್‌ಗಳನ್ನು ಪ್ಲೇಸ್ಟೋರ್‌ಗಳಿಂದ ಡೌನ್‌ಲೋಡ್ ಮಾಡಿಕೊಳ್ಳಬೇಡಿ. ನಿಮಗೆ ಅಗತ್ಯವಿರುವ ಆಪ್‌ಗಳನ್ನು ಮಾತ್ರ ಇನ್‌ಸ್ಟಾಲ್ ಮಾಡಿಕೊಂಡು ಬಳಸಿ. ಕೆಲವರು ತಾವು ಬಳಸುವುದಕ್ಕಿಂತ ಅತ್ಯಧಿಕ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ವರ್ಷಗಳಾದರೂ ಒಂದನ್ನೂ ಬಳಸಿರುವುದಿಲ್ಲ. ನವೀಕರಣ ಮಾಡುವಾಗ ನಿಮಗೆ ಬೇಕಾದ ಆಪ್‌ಗಳನ್ನು ಮಾತ್ರ ನವೀಕರಿಸಿ ಉಳಿದವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಇದರಿಂದ ಇಂಟರ್‌ನೆಟ್‌ಅನ್ನು ಕೂಡ ಉಳಿತಾಯ ಮಾಡಬಹುದು.
- ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿಯನ್ನು ನಿಯಮಿತವಾಗಿ ಚಾರ್ಜ್ ಮಾಡಿ, ಹಾಗೆಯೇ ಓವರ್‌ಚಾರ್ಜ್ ಕೂಡ ಮಾಡಬೇಡಿ. ನಿಮ್ಮ ಸ್ಮಾರ್ಟ್‌ಫೋನ್‌ನ ಬ್ಯಾಟರಿ ಹಾಳಾಗಿದ್ದರೆ ಅದನ್ನು ಬದಲಾಯಿಸಿ.
ಈ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ದೀರ್ಘಕಾಲದವರೆಗೆ ಉತ್ತಮ ಸ್ಥಿತಿಯಲ್ಲಿ ಇರಿಸಬಹುದು.
ನಿಮ್ಮ ಮೊಬೈಲ್ ಕಳುವಾದರೆ ಪತ್ತೆ ಮಾಡುವ ಸುಲಭ ವಿಧಾನ
ಮೊಬೈಲ್ ಇಲ್ಲದೆ ಜೀವನವೇ ಇಲ್ಲವೆಂಬುವ ಸ್ಥಿತಿ ಇಂದಿನ ಯುಗದಲ್ಲಿ ನಿರ್ಮಾಣವಾಗಿದೆ. ಪ್ರತಿಯೊಬ್ಬ ವೃತ್ತಿಪರರಿಗೂ ಮೊಬೈಲ್ ಅಗತ್ಯವಾಗಿ ಬೇಕೆಬೇಕಾಗಿದೆ. ಅದು ಆಂಡ್ರಾಯ್ಡ್, ಐಫೋನ್ ಅಥವಾ ಕೀಪ್ಯಾಡ್ ಮೊಬೈಲ್ ಆಗಿರಲಿ ಮೊಬೈಲ್ ನಿತ್ಯ ಜೀವನದ ಒಂದು ಭಾಗವಾಗಿ ಪರಿಗಣಿಸಿದೆ. ಕೆಲವರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೊಬೈಲ್‌ಗಳನ್ನು ಖರೀದಿಸಿದರೆ, ಮತ್ತೂ ಕೆಲವರು ಸಾಲ ಮಾಡಿ ಇಎಂಐ ಮೂಲಕ ಕೊಂಡಿರುತ್ತಾರೆ. ಅಂತಹ ಮೊಬೈಲ್ ಕಳುವಾದರೆ ಬೇಸರ, ಕೋಪ, ಆವೇಶ ಎಲ್ಲವೂ ಒಟ್ಟಿಗೆ ಬರುತ್ತದೆ.
ಈ ಹಿನ್ನಲೆಯಲ್ಲಿ ಕಳುವಾದ ಮೊಬೈಲ್ ಪತ್ತೆ ಹಾಗೂ ಕಳ್ಳರಿಗೆ ನಿಮ್ಮ ಗೌಪ್ಯ ವಿವರ ದೊರೆಯದಂತೆ ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಯೋಜನೆಯನ್ನು 2022ರ ಸೆಪ್ಟೆಂಬರ್‌ನಿಂದ ಜಾರಿಗೊಳಿಸಿದೆ. ಕರ್ನಾಟಕದಲ್ಲಿಯೂ ಸಿಇಐಆರ್ ಯೋಜನೆ ಜಾರಿಯಲ್ಲಿದೆ. ಕಳೆದು ಹೋದ ಮೊಬೈಲ್‌ನ ಐಎಂಇಐ ನಂಬರ್ ಆಧರಿಸಿ ಮೊಬೈಲ್ ಪತ್ತೆ ಹಚ್ಚುವ, ಮೊಬೈಲ್ ಬಳಕೆ ಆಗದಂತೆ ಬ್ಲಾಕ್ ಮಾಡುವ ತಂತ್ರಜ್ಞಾನದ ಅವಕಾಶವನ್ನು ಸಿಇಐಆರ್ ಯೋಜನೆ ಒಳಗೊಂಡಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆ ಸಿಇಐಆರ್ ಯೋಜನೆಯನ್ನು ಅಭಿವೃದ್ಧಿಪಡಿಸಿದೆ.
ಈ ಸುದ್ದಿ ಓದಿದ್ದೀರಾ? ವಾಟ್ಸಾಪ್, ಗೂಗಲ್ ಸರ್ಚ್ ಬಗ್ಗೆ ತಿಳಿದು ಅನುಸರಿಸಬೇಕಾದ ಮುಖ್ಯ ವಿಷಯಗಳು ಇಲ್ಲಿವೆ ನೋಡಿ
ಸಿಇಐಆರ್ ಜಾರಿಯಾದಾಗಿನಿಂದ ಈ ಯೋಜನೆಯ ಮೂಲಕ ಕಳುವಾದ ಅತೀ ಹೆಚ್ಚು ಮೊಬೈಲ್‌ಗಳನ್ನು ಪತ್ತೆ ಹಚ್ಚಿರುವ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕಳೆದ 2 ವರ್ಷಗಳಲ್ಲಿ ಕರ್ನಾಟಕದಲ್ಲಿ ಸಿಇಐಆರ್ ಪೋರ್ಟಲ್ ನಿರ್ಬಂಧಿಸಿದ ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್‌ಗಳ ಸಂಖ್ಯೆ 2 ಲಕ್ಷಕ್ಕೂ ಅಧಿಕವಾಗಿದ್ದರೆ, ರಾಜ್ಯದಲ್ಲಿ ಪತ್ತೆಯಾದ ಮೊಬೈಲ್‌ಗಳ ಸಂಖ್ಯೆ ಸರಿಸುಮಾರು ಒಂದು ಲಕ್ಷವಿದೆ. ಸಿಇಐಆರ್ ಪೋರ್ಟಲ್‌ನಲ್ಲಿ ಜನರು ತಮ್ಮ ಫೋನ್‌ಗಳು ಕಳೆದುಹೋಗಿವೆ ಅಥವಾ ಕಳುವಾಗಿವೆ ಎಂದು ವರದಿ ಮಾಡಿದ ನಂತರ ರಾಜ್ಯ ಪೊಲೀಸರು 30 ಸಾವಿರಕ್ಕೂ ಅಧಿಕ ಮೊಬೈಲ್‌ಗಳನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದಾರೆ.
ಮೊಬೈಲ್ ಕಳುವಾದರೆ ಪತ್ತೆ ಮಾಡಲು ಕೆಳಗಿನ ಕ್ರಮ ಅನುಸರಿಸಿ
- ಮೊಬೈಲ್ ಫೋನ್ ಬಳಕೆದಾರರು ತಮ್ಮ ಫೋನ್ ಕಳೆದುಹೋದರೆ ಅಥವಾ ಕಳ್ಳರು ಕದ್ದಿದ್ದರೆ ಅದರ ಐಎಂಇಐಅನ್ನು ನಿರ್ಬಂಧಿಸಬೇಕು.
- ದೂರನ್ನು ನೋಂದಾಯಿಸಲು, ಸಿಇಐಆರ್ (http://www.ceir.gov.in) ಪೋರ್ಟಲ್‌ಗೆ ಹೋಗಿ.
- ಅಲ್ಲಿನ ಹೋಂ ಪೇಜ್‌ನಲ್ಲಿ ಎಡಭಾಗದಲ್ಲಿ CEIR Services ಎಂಬ ಡ್ರಾಪ್ ಡೌನ್ ಸಿಗುತ್ತದೆ. ಅಲ್ಲಿ ಕ್ಲಿಕ್ಕಿಸಿದರೆ, ನಿಮಗೆ Block Stolen/Lost Mobile ಎಂಬ ಆಯ್ಕೆ ಬರುತ್ತದೆ. ಅದನ್ನು ಕ್ಲಿಕ್ಕಿಸಿದರೆ, ನಿಮಗೆ ಎರಡು ಭಾಗವಿರುವ ಇ-ಅಪ್ಲಿಕೇಶನ್ ಪುಟ ತೆರೆದುಕೊಳ್ಳುತ್ತದೆ.
- ಮೊದಲ ಭಾಗದಲ್ಲಿ, ನಿಮ್ಮ ಮೊಬೈಲ್‌ನ ಮಾಹಿತಿಯನ್ನು ತುಂಬ ಬೇಕಿರುತ್ತದೆ. ನಿಮ್ಮ ಮೊಬೈಲ್ Device Information ನಲ್ಲಿ ನಿಮ್ಮ ಮೊಬೈಲ್‌ನಲ್ಲಿ ಬಳಕೆಯಾಗುತ್ತಿದ್ದ ಫೋನ್ ನಂಬರ್‍ಗಳು, ಆಯಾ ಸಿಮ್ ಕಾರ್ಡ್‌ಗಳಿಗಾಗಿ ನಿಮ್ಮ ಫೋನ್ ತಯಾರಕರು ನೀಡಿರುವ IMEI ಸಂಖ್ಯೆಗಳನ್ನು ನಮೂದಿಸಬೇಕು. ಆನಂತರ, Device Brand (ಸ್ಯಾಮ್ ಸಂಗ್, ಐಫೋನ್ ಇತ್ಯಾದಿ)ಗಳನ್ನು ಕೆಳಗೆ ನೀಡಲಾಗಿರುವ ಆಯ್ಕೆಗಳ ಮೂಲಕ ಆರಿಸಬೇಕು. ಆನಂತರ ಡಿವೈಸ್ ಮಾಡೆಲ್ ನಮೂದಿಸಿ, ಮೊಬೈಲ್ ಫೋನ್ ಖರೀದಿಸಿದಾಗ ಪಡೆದಿದ್ದ ಬಿಲ್‌ನ ಭಾವಚಿತ್ರವನ್ನು ಅಪ್ಲೋಡ್ ಮಾಡಿ.
- ಹಾಗೆಯೇ ಎರಡನೇ ಭಾಗದಲ್ಲಿ, ಮೊಬೈಲ್ ಕಳೆದು ಹೋಗಿರುವ ಬಗ್ಗೆ ವಿವರಣೆಗಳನ್ನು ಭರ್ತಿಮಾಡಿ. ಅಲ್ಲಿ ಕಳೆದು ಹೋದ ಸ್ಥಳ, ಕಳೆದ ದಿನಾಂಕ, ರಾಜ್ಯ, ಜಿಲ್ಲೆ, ದೂರು ನೀಡಲಾಗಿರುವ ಪೊಲೀಸ್ ಠಾಣೆ, ದೂರಿನ ಸಂಖ್ಯೆ ತುಂಬಿ. ಆನಂತರ ಪೊಲೀಸ್ ದೂರಿನ ಪ್ರತಿಯ ಭಾವಚಿತ್ರವನ್ನು ಅಪ್ಲೋಡ್ ಮಾಡಿ.
- ಮೂರನೇ ಭಾಗದಲ್ಲಿ, ಮೊಬೈಲ್ ಮಾಲೀಕರ ಹೆಸರು, ವಿಳಾಸ, ಸರ್ಕಾರದಿಂದ ನೀಡಲಾಗಿರುವ ಗುರುತಿನ ಚೀಟಿಯ ಸಂಖ್ಯೆ, ಮಾಲೀಕರ ಖಾಸಗಿ ಇ-ಮೇಲ್ ವಿಳಾಸ ತುಂಬಿಸಿ, ಆನಂತರ ನಮೂದಿಸಲಾಗಿರುವ ಸರ್ಕಾರಿ ಗುರುತಿನ ಚೀಟಿಯ ಫೋಟೋವನ್ನು ಅಪ್ಲೋಡ್ ಮಾಡಬೇಕು. ತದ ನಂತರದಲ್ಲಿ, ದೂರು ದಾಖಲಿಸಲು ನಿಮ್ಮ ಆಪ್ತರ ಮೊಬೈಲಿಗೆ ಒನ್ ಟೈಮ್ ಪಾಸ್ ವರ್ಡ್ ಕಳಿಸಲು ಅಲ್ಲಿ ನೀಡಲಾಗಿರುವ Get OTP ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದಾಗ ನೀವು ನೀಡಲಾಗಿರುನ ಮೊಬೈಲ್ ನಂಬರಿಗೆ ಒಟಿಪಿ ಬರುತ್ತದೆ. ಅದನ್ನು ಅಲ್ಲಿ ತುಂಬಿ, ಕೆಳಗೆ ಡಿಕ್ಲರೇಷನ್ ಎಂಬ ಚೆಕ್ ಲಿಸ್ಟ್ ಕ್ಲಿಕ್ಕಿಸಿ. ಆನಂತರ ಸಬ್‌ಮಿಟ್ ಬಟನ್ ಒತ್ತುವ ಮೂಲಕ ನಿಮ್ಮ ದೂರನ್ನು ಸಲ್ಲಿಸಲಾಗುತ್ತದೆ.
- ಒಂದು ವೇಳೆ ಈ ಮಾಹಿತಿ ನಿಮಗೆ ತಿಳಿಯದಿದ್ದರೂ ನೀವು ದೂರು ಕೊಟ್ಟಿದ್ದರೆ, ದೂರಿನ ಆಧಾರದಲ್ಲಿ ಪೊಲೀಸರು ಹಾಗೂ ಸೈಬರ್, ಆರ್ಥಿಕ ಹಾಗೂ ಮಾದಕ ವಸ್ತುಗಳ ಪೊಲೀಸ್ ವಿಭಾಗದ (ಸಿಇಎನ್) ನೋಡಲ್ ಅಧಿಕಾರಿಗಳು ಕಳೆದು ಹೋದ ಮೊಬೈಲನ್ನು ನಿಷ್ಕ್ರಿಯಗೊಳಿಸುತ್ತಾರೆ.
- ಒಂದು ವೇಳೆ ಮೊಬೈಲ್ ಪತ್ತೆಯಾದರೆ ಪೊಲೀಸರು ನಿಮಗೆ ಮರಳಿಸುತ್ತಾರೆ. ಆದರೆ ಫೋನ್ ಕೊಂಡುಕೊಂಡ ನೈಜ ಬಿಲ್ಲನ್ನು ನೀವು ಇಟ್ಟುಕೊಂಡಿರಬೇಕು. ನಿಜವಾದ ಮಾಲೀಕರು ನೀವೆ ಎಂದು ತಿಳಿದು ಪೊಲೀಸರು ನಿಮಗೆ ಮೊಬೈಲ್‌ಅನ್ನು ಮರಳಿಸುತ್ತಾರೆ.
ಒಂದು ವೇಳೆ ಕಳೆದು ಹೋಗಿದ್ದ ಮೊಬೈಲ್ ಮತ್ತೆ ಸಿಕ್ಕಾಗ, https://www.ceir.gov.in/Home/index.jsp ಪುಟದಲ್ಲಿ ನಿಮ್ಮ ಸಿಇಐಆರ್ ಸೇವೆಗಳ ಅಡಿಯಲ್ಲಿ Unblock Found mobile ಆಯ್ಕೆಯನ್ನು ಬಳಸಿಕೊಂಡು ನಿಮ್ಮ ಮೊಬೈಲನ್ನು ಪುನಃ ಸಕ್ರಿಯಗೊಳಿಸಬೇಕು.