2024ರ ಲೋಕಸಭಾ ಚುನಾವಣೆಯ ವರದಿ ಮತ್ತು ವೀಕ್ಷಣೆಯಲ್ಲಿ ಮುಖ್ಯವಾಹಿನಿ ಮಾಧ್ಯಮಗಳಿಗಿಂತ ಪರ್ಯಾಯ ಮಾಧ್ಯಮಗಳು ಹೆಚ್ಚು ಗಮನ ಸೆಳೆದಿದ್ದು, ಹೆಚ್ಚಿನ ವೀಕ್ಷಕರನ್ನು ಸಹ ಪಡೆದುಕೊಂಡು ಅಚ್ಚರಿ ಮೂಡಿಸಿವೆ.
ನಿಷ್ಪಕ್ಷಪಾತ ವರದಿ ಮಾಡಬೇಕಿದ್ದ, ಎಲ್ಲಾ ಪಕ್ಷಗಳಿಗೆ ಸಮಾನ ಅವಕಾಶ ನೀಡಬೇಕಿದ್ದ ಮೇನ್ ಸ್ಟ್ರೀಮ್ ಮೀಡಿಯಾಗಳು ದುಡ್ಡು, ಅಧಿಕಾರದಾಸೆಗೆ ಆಡಳಿತ ಪಕ್ಷದ ಪರವಾಗಿ ತುತ್ತೂರಿ ಹೂದುತ್ತಾ, ಘಂಟಾಘೋಷವಾಗಿ ಹೊಗಳುಭಟ್ಟರಂತೆ ವರ್ತಿಸುತ್ತಿವೆ. ಈ ಮೀಡಿಯಾಗಳಿಗೆ ಈಗಾಗಲೇ ಜನರೇ ʻಗೋದಿ ಮೀಡಿಯಾʼ ಅಂತ ಹೆಸರುಕೊಟ್ಟು, ಸಾಧ್ಯವಾದಷ್ಟು ದೂರ ಉಳಿದಿವೆ ಎನ್ನುವುದಕ್ಕೆ ಪರ್ಯಾಯ, ಸ್ವತಂತ್ರ ಮಾಧ್ಯಮಗಳು, ಯೂಟ್ಯೂಬರ್‌ಗಳೇ ಸಾಕ್ಷಿ.
ಸಾಮಾಜಿಕ ಮಾಧ್ಯಮಗಳನ್ನು ಬಳಸಿ, ನೈಜ ಪತ್ರಿಕೋದ್ಯಮ ಮಾಡಬೇಕು ಎಂಬ ದಿಟ್ಟ ಹೆಜ್ಜೆಯೊಂದಿಗೆ ಮುಂದುವರಿದ ಸ್ವತಂತ್ರ ಮಾಧ್ಯಮಗಳು, ಪರ್ಯಾಯ ಮಾಧ್ಯಮಗಳು ಮತ್ತು ಹತ್ತು ಹಲವು ಯೂಟ್ಯೂಬರ್‌ಗಳು ಜನರ ವಿಶ್ವಾಸಾರ್ಹತೆ ಗಳಿಸಿದ್ದಲ್ಲದೇ ನಂಬಿಕಾರ್ಹ ಜನರ ಮಾಧ್ಯಮಗಳಾಗಿ ಬೆಳೆಯುತ್ತಿರುವುದು ಸಂತೋಷದ ಮತ್ತು ಅಚ್ಚರಿಯ ವಿದ್ಯಮಾನ.
ನಾವು ನೊಂದವರ ಧ್ವನಿಯಾಗುತ್ತೇವೆ, ಸರ್ಕಾರದ ತಪ್ಪುಗಳನ್ನು ಗಟ್ಟಿಯಾಗಿ ಪ್ರಶ್ನಿಸುತ್ತೇವೆ ಎನ್ನುವ ಧ್ವನಿಗಳಿಗಿಂದು ಅಸ್ತಿತ್ವ ಸಿಕ್ಕಿದೆ.
ಕಳೆದ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಒಮ್ಮೆಯೂ ಪತ್ರಿಕಾಗೋಷ್ಠಿ ಮಾಡದ ಮಾನ್ಯ ಪ್ರಧಾನಿಯವರು ಇತ್ತೀಚೆಗೆ ಮುಖ್ಯವಾಹಿನಿ ಮಾಧ್ಯಮಗಳಿಗೆ ಸ್ಕ್ರಿಪ್ಟೆಡ್ ಎಕ್ಸ್‌ಕ್ಲೂಸೀವ್ ಸಂದರ್ಶನ ನೀಡಿದ್ದಾರೆ.
ಪ್ರಧಾನಿಯವರ ಮೊದಲ ಎಕ್ಸ್‌ಕ್ಲೂಸೀವ್ ಸಂದರ್ಶನ ಅಂದ್ರೆ ಸಿಕ್ಕಾಪಟ್ಟೆ ಮೈಲೇಜ್ ಸಿಗತ್ತೆ ಅಂತೆಲ್ಲ ಇರ್ತಿತ್ತು. ಆದ್ರೆ ವಾಸ್ತವದಲ್ಲಿ ಮೋದಿಯವರ ಸಂದರ್ಶನ ಗೋದಿ ಮೀಡಿಯಾಗಳ ಕೈ ಹಿಡಿದಿಲ್ಲ. ವಿಶೇಷವೆಂದರೆ ತಮ್ಮ ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಮೂಲಕವೇ ರಾಹುಲ್ ಗಾಂಧಿ ಜನರನ್ನು ತಲುಪಲು ಯತ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಹೋಲಿಸಿದರೆ ರಾಹುಲ್ ಗಾಂಧಿಯವರ ಯೂಟ್ಯೂಬ್ ರೀಚ್ 10 ಪಟ್ಟು ಹೆಚ್ಚಿದೆ ಎಂಬುದನ್ನು ಅಂಕಿ ಅಂಶಗಳು ತೋರಿಸುತ್ತವೆ.
ಮುಖ್ಯವಾಹಿನಿ ಮಾಧ್ಯಮಗಳ ಪಕ್ಷಪಾತಿತನಕ್ಕೆ ಬೇಸರಗೊಂಡು ಸ್ವತಂತ್ರ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದ ಖ್ಯಾತ ಪತ್ರಕರ್ತ ಅಭಿಸಾರ್ ಶರ್ಮಾರವರ ಯೂಟ್ಯೂಬ್ ಚಾನೆಲ್ ಕಳೆದ 5 ತಿಂಗಳಿನಿಂದಲೂ ಸತತವಾಗಿ ಯ್ಯೂಟ್ಯೂಬ್‍ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಇಂಡುವಿಷುಯಲ್ ಯೂಟ್ಯೂಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಏಪ್ರಿಲ್ ತಿಂಗಳೊಂದರಲ್ಲಿಯೇ ಅವರ ಯೂಟ್ಯೂಬ್ ವಿಡಿಯೋಗಳನ್ನು 17.3 ಕೋಟಿ ಜನ ವೀಕ್ಷಿಸಿದ್ದಾರೆ. ಸದ್ಯ ಅವರ ಯೂಟ್ಯೂಬ್ ಚಾನೆಲ್‍ಗೆ 56 ಲಕ್ಷ ಚಂದಾದಾರರಿದ್ದಾರೆ.
ಎನ್‌ಡಿಟಿವಿಯ ದಿಟ್ಟ ಪತ್ರಕರ್ತ ರವೀಶ್ ಕುಮಾರ್ ಅವರ ಬಗ್ಗೆ ನಿಮಗೆ ಗೊತ್ತಿರುತ್ತದೆ. ಅದಾನಿ ಕಂಪನಿ ಎನ್‍ಡಿಟಿವ ಮಾಲಿಕತ್ವ ಪಡೆದ ನಂತರ ಅವ್ರು ಎನ್‌ಡಿಟಿವಿಯಿಂದ ಹೊರ ಬಂದ ಕೇವಲ ಆರು ತಿಂಗಳಲ್ಲಿ ಅವರ ಯೂಟ್ಯೂಬ್ ಚಾನೆಲ್‌ಗೆ ಒಂದು ಕೋಟಿ ಸಬ್‌ಸ್ಕ್ರೈಬರ್ಸ್ ಬಂದಿರುವುದು, ಎನ್‌ಡಿಟಿವಿ ಯೂಟ್ಯೂಬ್‌ಗಿಂತ ರವೀಶ್ ಕುಮಾರ್ ಅವರ ಯೂಟ್ಯೂಬ್ ವ್ಯೂಸ್ ತುಂಬಾ ಹೆಚ್ಚಿರುವುದು ಇದಕ್ಕೆ ಉದಾಹರಣೆ ಎಂತಲೇ ಹೇಳಬಹುದು.
ಇನ್ನು ಧ್ರುವ್ ರಾಠೀಯವರ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡ್ ಆಗುತ್ತಿವೆ. ಹರಿಯಾಣದ ಧ್ರುವ್ ರಾಠಿ ಸದ್ಯ ಜರ್ಮನಿಯಲ್ಲಿ ವಾಸವಿದ್ದರೂ ಭಾರತದ ಆಗು ಹೋಗುಗಳ ಬಗ್ಗೆ ಅವರು ಮಾಡುವ ವಿಡಿಯೋಗಳು ಭಾರತದಲ್ಲಿ ಸಂಚಲನವನ್ನೇ ಮೂಡಿಸಿವೆ ಎಂದರೆ ತಪ್ಪಾಗಲಾರದು. ಮೂರು ತಿಂಗಳ ಹಿಂದೆ ಭಾರತ ಸರ್ವಾಧಿಕಾರದತ್ತ ಚಲಿಸುತ್ತಿದೆಯೇ ಎಂಬ ವಿಡಿಯೋ ಬಿಡುಗಡೆ ಮಾಡಿದ ನಂತರ ಭಾರತದಾದ್ಯಂತ ಚಿರ ಪರಿಚಿತರಾಗಿದ್ದಾರೆ. ಆ ವಿಡಿಯೋ ಯೂಟ್ಯೂಬ್ ಒಂದರಲ್ಲೇ 2.5 ಕೋಟಿ ವೀಕ್ಷಣೆ ಪಡೆದರೆ ಟ್ವಿಟರ್ ಮತ್ತು ಫೇಸ್‍ಬುಕ್‍ನಲ್ಲಿ ಹತ್ತಾರು ಕೋಟಿ ಜನರಿಗೆ ತಲುಪಿದೆ. ಸರ್ವಾಧಿಕಾರಿ ಹೆದರಿದರೆ ಎಂಬ ವಿಡಿಯೋ 3.4 ಕೋಟಿ ಜನ ವೀಕ್ಷಿಸಿದ್ದಾರೆ. ಕನ್ನಡ, ತಮಿಳು, ತೆಲುಗು, ಮರಾಠಿ, ಬಂಗಾಳಿ ಭಾಷೆಗಳಲ್ಲಿಯೂ ತಮ್ಮ ವಿಡಿಯೋ ಪ್ರಕಟಿಸಿದ್ದಾರೆ. ಸದ್ಯ 2 ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿರುವ ಧ್ರುವ್ ರಾಠೀ ನೊಂದವರ, ಶೋಷಿತರ ಪರವಾದ ಧ್ವನಿಯಾಗಿ ಹೊರಹೊಮ್ಮಿದ್ದಾರೆ.
ಇವರಷ್ಟೇ ಅಲ್ಲ. ಇಂತಹ ನೂರಾರು ಧ್ವನಿಯಗಳಿಂದು ನೊಂದವರ, ಪ್ರಜಾಪ್ರಭುತ್ವದ ಉಳಿವಿಗಾಗಿ ಕೆಲಸ ಮಾಡುತ್ತಿವೆ. ದಿ ವೈರ್, ನ್ಯೂಸ್ ಲಾಂಡ್ರಿ, ಕಾರವಾನ್, ದಿ ಸ್ಕ್ರೋಲ್ ಮತ್ತು ದಿ ನ್ಯೂಸ್ ಮಿನಿಟ್ ಎಂಬ 5 ಆಂಗ್ಲ ಮಾಧ್ಯಮಗಳು ಜೊತೆಗೂಡಿ 2024ರ ಚುನಾವಣೆಯ ವರಿದಿ ಮಾಡುತ್ತಿವೆ.
ಮುಖ್ಯವಾಹಿನಿ ಮಾಧ್ಯಮಗಳು 24 ಗಂಟೆ ಮೋದಿ ಪರವಾಗಿ ಭಜನೆ ಮಾಡುವುದನ್ನು ನೋಡಿ ಬೇಸತ್ತ ಪತ್ರಕರ್ತರು ಒಂದೆಡೆ ತಮ್ಮದೇ ಯೂಟ್ಯೂಬ್ ಚಾನೆಲ್ ತೆಗೆದು ಆಡಳಿತ ಪಕ್ಷದ ತಪ್ಪುಗಳ ಬಗ್ಗೆ ಮಾತನಾಡುತ್ತಿದ್ದರೆ, ನಮ್ಮ ದೇಶ ಸರ್ವಾಧಿಕಾರದೆಡೆಗೆ ಹೋಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಯೂಟ್ಯೂಬರ್‌ಗಳು ಪರ್ತಕರ್ತರಾಗಿ ಕೆಲಸ ಮಾಡಲು ಆರಂಭಿಸಿರುವುದನ್ನು ನಾವು ನೋಡಬಹುದು.
4PM, ಅಜಿತ್ ಅಂಜುನ್, ಸಾಕ್ಷಿ ಜೋಶಿ, ಪುಣ್ಯ ಪ್ರಸೂನ್ ಬಾಜ್ಪಾಯಿ, ಆಕಾಶ್ ಬ್ಯಾನರ್ಜಿ ಥರಹದ ಹತ್ತು ಹಲವು ಜನ ತಮ್ಮ ಯೂಟ್ಯೂಬ್ ಮೂಲಕ ಚುನಾವಣಾ ವಿಶ್ಲೇಷಣೆಗಳನ್ನು ಮುಂದಿಟ್ಟು ಲಕ್ಷಾಂತರ ಜನರನ್ನು ತಲುಪಿದ್ದಾರೆ.
ಡಾಟಾ ಬೀಯಿಂಗ್ಸ್ ಕಂಪನಿಯ ಇತ್ತೀಚಿನ ವರದಿ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವ್ಯೂಸ್ ಪಡೆದ ಪೊಲಿಟಿಕಲ್ ಕಮೆಂಟೆಟರ್‌ಗಳಲ್ಲಿ 4pm, db live, ಖಬರ್ ಇಂಡಿಯಾ, ಭಾರತ್ ಸಮಾಚಾರ್ ಮುಂತಾದ ಸ್ವತಂತ್ರ ಮಾಧ್ಯಮಗಳು ಮುಂಚೂಣಿಯಲ್ಲಿವೆ. ವಿಶೇಷವೆಂದರೆ, ಅಭಿಸಾರ್ ಶರ್ಮ, ರವೀಶ್ ಕುಮಾರ್, ದ್ರುವ್ ರಾಠಿಯಂತಹ ಯೂಟ್ಯೂಬರ್‌ಗಳ ವಿಡಿಯೋಗಳು ಅತಿ ಹೆಚ್ಚು ವ್ಯೂಸ್ ಆಗಿವೆ. ನೀವೀಗ ನೋಡುತ್ತಿರುವುದು ಅದರ ಡಾಟಾ ಟೇಬಲ್.
ಇನ್ನು ಗೋದಿ ಮೀಡಿಯಾಗಳ ವ್ಯೂಸ್ ಎಷ್ಟಿದೆ ಎಂಬುದನ್ನು ನೀವೊಮ್ಮೆ ಯೂಟ್ಯೂಬ್‌ನಲ್ಲಿ ಒಮ್ಮೆ ಕಣ್ಣಾಡಿಸಿ ನೋಡಿ.
ಒಟ್ಟಾರೆಯಾಗಿ, ಇವೆಲ್ಲವೂ ಸೂಚಿಸುತ್ತಿರುವುದು ಏನನ್ನು? ಜನ ಗೋದಿ ಮೀಡಿಯಾಗಳ ʻಸುಳ್ಳುಗಳಿಗೆ ಬಲಿಯಾಗದಿರಲು ನಿಶ್ಚಯಿಸಿದ್ದಾರೆ. ಸತ್ಯ, ವಾಸ್ತವತೆಯತ್ತ ಜನ ಮುಖ ಮಾಡಿದ್ದಾರೆ ಎಂಬುದು. ಈಗಲಾದರೂ ಮಾಧ್ಯಮಗಳು ಎಚ್ಚೆತ್ತುಕೊಂಡು ನಿಷ್ಪಕ್ಷಪಾತವಾಗಿ ವರ್ತಿಸದಿದ್ದಲ್ಲಿ, ಅವರ ಕ್ರೆಡಿಬಲಿಟಿ ಕಳೆದುಹೋಗಿ ಆ ಜಾಗಕ್ಕೆ ಸ್ವತಂತ್ರ ಪತ್ರಕರ್ತರು ಬಂದು ನಿಲ್ಲುವುದರಲ್ಲಿ ಆಶ್ಚರ್ಯವಿಲ್ಲ.