ಬೆಳಗಾವಿಯ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಅಥಣಿಯಿಂದ ಲಕ್ಷ್ಮಣ ಸವದಿ ವಿರುದ್ಧ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಕಾಗವಾಡದಿಂದ ಮಾಜಿ ಸಚಿವ ಶ್ರೀಮಂತ ಪಾಟೀಲ ಅವರ ಪುತ್ರ ಶ್ರೀನಿವಾಸ ಪಾಟೀಲ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಘೋಷಿಸಿದರು.
ಅಥಣಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, “ಜಾರಕಿಹೊಳಿ ಕುಟುಂಬ ಲಿಂಗಾಯತ ವಿರೋಧಿ ಅಲ್ಲ. ನಮ್ಮ ಮನೆಯಿಂದ ಯಾರೂ ಅಧ್ಯಕ್ಷರಾಗುವುದಿಲ್ಲ. ಲಿಂಗಾಯತ ಸಮುದಾಯದವರೇ ಅಧ್ಯಕ್ಷರಾಗಲಿದ್ದಾರೆ. ಅಥಣಿಯಲ್ಲಿ ಲಕ್ಷ್ಮಣ ಸವದಿಗೆ ಬುದ್ಧಿ ಕಲಿಸಲು ಕುಮಠಳ್ಳಿಯೇ ಅಭ್ಯರ್ಥಿ” ಎಂದು ಹೇಳಿದರು.
ಲಕ್ಷ್ಮಣ ಸವದಿ ವಿರುದ್ಧ ಕಿಡಿಕಾರಿದ ಜಾರಕಿಹೊಳಿ, “ಸವದಿ ಬಿಜೆಪಿಗೆ ದ್ರೋಹ ಮಾಡಿ ಕಾಂಗ್ರೆಸ್ ಸೇರಿದ್ದಾರೆ. ನಾನು ಕೂಡ 2023ರಲ್ಲಿ ಕಾಂಗ್ರೆಸ್ಗೆ ಹೋಗಬಹುದಾಗಿತ್ತು, ಆದರೆ ಪಕ್ಷದ ವಿರುದ್ಧ ಹೋಗಲಿಲ್ಲ. ಸವದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ” ಎಂದರು.
ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಮಾತನಾಡಿ, “ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರೈತರ ಹಿತಾಸಕ್ತಿ ಮುಖ್ಯ. ಆದರೆ ಅಥಣಿಯಲ್ಲಿ ಕೆಲವರಿಗೆ ಮಾತ್ರ ಸಾಲ ನೀಡಲಾಗುತ್ತಿದೆ. ಬಿಜೆಪಿ ಬೆಂಬಲಿಗರಿಗೆ ಸಾಲ ಸೌಲಭ್ಯ ನಿರಾಕರಿಸಲಾಗಿದೆ. ಇದೂ ರಾಜಕೀಯವೇ” ಎಂದು ಆರೋಪಿಸಿದರು.
ಅವರು 2019ರಲ್ಲಿ ರಮೇಶ್ ಕತ್ತಿ ಮತ್ತು ಉಮೇಶ್ ಕತ್ತಿ ಒತ್ತಡದ ಹಿನ್ನೆಲೆಯಲ್ಲಿ ಸ್ಪರ್ಧಿಸಿದ್ದನ್ನು ನೆನಪಿಸಿಕೊಂಡು, “ಈ ಬಾರಿ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದೇನೆ. ಫಲಿತಾಂಶ ಏನೇ ಬರಲಿ ಸ್ಪರ್ಧೆ ಖಚಿತ” ಎಂದು ಹೇಳಿದರು.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ
ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲ ಮುಖಂಡ ಸಿದ್ದಪ್ಪ ಮುದಕ್ಕಣ್ಣವರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ. ರವಿ ಸಂಕ, ಉಪಾಧ್ಯಕ್ಷರು ಸಿದ್ದು ಪಾಟೀಲ, ಮಲ್ಲಪ್ಪಾ ಹಂಚಿನಾಳ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅಣ್ಣಪ್ಪಾ ಹಳ್ಳೂರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.