- ಬಿಜೆಪಿ ಮುಖಂಡ ವಿಜಯ್ ಕುಮಾರ್ ಸಿಂಗ್ ಮೃತ್ಯು
- ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಬಿಹಾರದ ಪಾಟ್ನಾದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಘಟನೆಯಲ್ಲಿ ಬಿಜೆಪಿ ನಾಯಕರೋರ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪೊಲೀಸರ ಬಲಪ್ರಯೋಗದಿಂದಾಗಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಸಿಂಗ್ ಅವರು ಜೆಹಾನಾಬಾದ್ ನಗರದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಲಾಠಿಚಾರ್ಜ್ನಿಂದಾಗಿ ಸಂಸದ ಜನಾರ್ದನ್ ಸಿಂಗ್ ಸ್ಥಿತಿ ಗಂಭೀರವಾಗಿರುವುದಾಗಿಯೂ ವರದಿಯಾಗಿದ್ದು, ಲಾಠಿಚಾರ್ಜ್ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, “ಇದೊಂದು ಕ್ರೂರ ಘಟನೆ. ಪೊಲೀಸ್ ಲಾಠಿಚಾರ್ಜ್ನಲ್ಲಿ ಉಂಟಾದ ಗಾಯಗಳಿಂದ ಪಕ್ಷದ ಜೆಹಾನಾಬಾದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾವನ್ನಪ್ಪಿದ್ದಾರೆ” ಎಂದು ಹೇಳಿದ್ದಾರೆ.
ಬಿಜೆಪಿ ನಾಯಕನ ಸಾವನ್ನು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಕೂಡ ದೃಢಪಡಿಸಿದೆ.
ರಾಜ್ಯದಲ್ಲಿ ಶಿಕ್ಷಕರ ಹುದ್ದೆಗೆ ಸಂಬಂಧಿಸಿದಂತೆ ಬಿಹಾರ ಸರ್ಕಾರದ ವಿರುದ್ಧ ಬಿಜೆಪಿಯು ‘ವಿಧಾನಸಭಾ ಮಾರ್ಚ್’ ನಡೆಸುತ್ತಿತ್ತು. ಈ ವೇಳೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು, ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದರು.
ಜೆ ಪಿ ನಡ್ಡಾ ಆಕ್ರೋಶ
ಈ ಘಟನೆಯ ನಂತರ ಬಿಹಾರದಲ್ಲಿ ರಾಜಕೀಯ ಬಿಸಿ ಏರತೊಡಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿ ನಿತೀಶ್ ಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
“ಬಿಜೆಪಿ ಕಾರ್ಯಕರ್ತರ ಮೇಲೆ ಪಾಟ್ನಾ ಪೊಲೀಸರು ಲಾಠಿಚಾರ್ಜ್ ನಡೆಸಿರುವುದು ಸರ್ಕಾರದ ವೈಫಲ್ಯ. ಭ್ರಷ್ಟಾಚಾರದ ಕೋಟೆ ಉಳಿಸಲು ಮಹಾಮೈತ್ರಿ ಸರ್ಕಾರ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುತ್ತಿದೆ. ಚಾರ್ಜ್ ಶೀಟ್ ಹಾಕಿರುವ ವ್ಯಕ್ತಿಯನ್ನು ರಕ್ಷಿಸಲು ಬಿಹಾರ ಸಿಎಂ ನೈತಿಕತೆಯನ್ನೂ ಮರೆತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.