- ‘ಕೃಷ್ಣ.. ರಾಮ.. ಆಯ್ತು, ಈಗ ಬಿಜೆಪಿಗೆ `ಭಾರತ್’ ನಾಮಕರಣ ವಿಷಯ ಸಿಕ್ಕಿದೆ’
- ನಿಜವಾದ ಭಾರತೀಯರನ್ನೇ ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ: ಕಿಡಿ
ಕೃಷ್ಣ.. ರಾಮ.. ಆಯ್ತು, ಈಗ ಬಿಜೆಪಿಗೆ `ಭಾರತ್’ ನಾಮಕರಣ ವಿಷಯ ಸಿಕ್ಕಿದೆ. ಭಾರತದ ಜನರೇ ಮುಂಬರುವ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಕೇಂದ್ರ ಸರ್ಕಾರ ಇಂಡಿಯಾ ಬದಲು ಭಾರತ್ ಎಂದು ಮರು ನಾಮಕರಣ ಮಾಡಲಾಗುತ್ತಿದೆ ಎಂಬ ವಿಚಾರಕ್ಕೆ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿ, “ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲೇ ಇದ್ದಾರೆ. ನಿಜವಾದ ಭಾರತೀಯರನ್ನು ಮರೆತಿದ್ದಾರೆ” ಎಂದು ಕಿಡಿಕಾರಿದರು.
“ಬಿಜೆಪಿಯವರು ಇನ್ನಾದರೂ ಭಾವನಾತ್ಮಕ ಆಟವನ್ನು ನಿಲ್ಲಿಸಬೇಕು. ಇಷ್ಟು ದಿನ ಸುಖವಾಗಿಯೆ ಇದ್ದೇವೆ. ಏನು ತೊಂದರೆ ಅಗಿಲ್ಲ. ಅಧಿಕಾರ ಇದೆ ಎಂದ ಮಾತ್ರಕ್ಕೆ ಹೆಸರು ಬದಲಾವಣೆ ಮಾಡುವುದನ್ನು ಜನರು ಒಪ್ಪಲ್ಲ. ಇದನ್ನು ಮೀರಿ ಮುಂದುವರಿದರೆ ದೇಶದ ಜನರು ಉತ್ತರ ಕೊಡುತ್ತಾರೆ” ಎಂದರು.
“ಚಂದ್ರಯಾನದ ಮೇಲೆ ಇಂಡಿಯಾ ಅಂತಾನೇ ಹೋಗಿದ್ದು. ಇಂಡಿಯಾ ಎಂದು ಕ್ರಿಕೆಟ್, ಒಲಿಂಪಿಕ್ಸ್ ನಲ್ಲಿ ಹಾಕಿ ಓಡಾಡಿದ್ದಾರೆ. ಈಗ ಭಾರತ್ ಎಂಬುದು ಏಕೆ ಇವರ ತಲೆಯಲ್ಲಿ ಬಂದಿದೆ. ಇದು ಜನರಿಗೆ ಅರ್ಥವಾಗದ ಸಂಗತಿಯಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ ಹತ್ತಿರ ಬರುತ್ತಿರುವುದರಿಂದ ಭಾವನಾತ್ಮಕ ವಿಚಾರಗಳನ್ನು ಕೆದಕುತ್ತಿದ್ದಾರೆ: ಸಿಎಂ
“ಬೇಸಿಗೆಯಲ್ಲಿ ಕುಡಿಯುವ ನೀರಿನ ಬಳಕೆ ಹಾಗೂ ತೋಟಗಳ ರಕ್ಷಣೆಗೆ ಆದ್ಯತೆ ನೀಡುವ ದೃಷ್ಟಿಯಿಂದ, ಭದ್ರಾ ಜಲಾಶಯದಿಂದ ಎಡದಂಡೆ ಕಾಲುವೆಗೆ ಹರಿಸುತ್ತಿರುವ ನೀರನ್ನು ಸೆಪ್ಟೆಂಬರ್ 6ರಿಂದಲೇ ನಿಲ್ಲಿಸಬೇಕು ಎಂದು ಐಸಿಸಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದಷ್ಟು ಕೂಡಲೇ ಬಿಕ್ಕಟ್ಟು ಶಮನವಾಗಿದೆ” ಎಂದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯ ನೂತನ ಪದ್ಧತಿ ಕುರಿತು ಪ್ರತಿಕ್ರಿಯಿಸಿದ ಸಚಿವರು, “ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ಫೇಲ್ ಆದ್ರೆ ಅವರಿಗೆ ಅನ್ಯಾಯ ಆಗುತ್ತದೆ. ಎಲ್ಲ ವಿಷಯದಲ್ಲಿ ಉತ್ತಮ ಅಂಕ ಪಡೆದು ಒಂದು ವಿಷಯದಲ್ಲಿ ಕಾರಣಾಂತರಗಳಿಂದ ಕಡಿಮೆ ಅಂಕ ಪಡೆದರೆ ಅನ್ಯಾಯವಾಗುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ” ಎಂದು ಹೊಸ ಪರೀಕ್ಷೆ ಪದ್ಧತಿಯನ್ನು ಸಮರ್ಥಿಸಿಕೊಂಡರು.