25 Sep 2023, 07:15 PM
ಬೆಂಗಳೂರು ಬಂದ್: ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ತಮಿಳುನಾಡಿಗೆ ಕಾವೇರಿ ಜಲಾಶಯದಿಂದ ನೀರು ಹರಿಸಿರುವುದನ್ನು ಖಂಡಿಸಿ ನಗರದ ವಿವಿಧ ಸಂಘಟನೆಗಳು ಸೆ. 26 ರಂದು ‘ಬೆಂಗಳೂರು ಬಂದ್’ ಘೋಷಿಸಿರುವುದರಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ ಬೆಂಗಳೂರು ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕೆ.ಎ. ದಯಾನಂದರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

25 Sep 2023, 07:00 PM
ತಮಿಳುನಾಡು | ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟ ತೊರೆದ ಎಐಎಡಿಎಂಕೆ
ಲೋಕಸಭಾ ಚುನಾವಣೆಗೆ ಮೊದಲೇ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಆಘಾತ ಎದುರಾಗಿದ್ದು, ದಕ್ಷಿಣ ಭಾರತದಲ್ಲಿ ಅತೀ ಹೆಚ್ಚಿನ ಸ್ಥಾನ ಗೆಲ್ಲುವ ಕನಸಿಗೆ ತೀವ್ರ ಹೊಡೆತ ಬಿದ್ದಿದೆ. ಇಂದು ಆಲ್ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ( ಎಐಎಡಿಎಂಕೆ) ತನ್ನ ಪಕ್ಷದ ಸಂಸದರು, ಶಾಸಕರು ಹಾಗೂ ನಾಯಕರ ಜೊತೆಗೆ ಜಿಲ್ಲಾ ಮಟ್ಟದ ಸಭೆ ನಡೆಸಿದ ಬಳಿಕ ಎನ್ಡಿಎ ಮೈತ್ರಿಕೂಟವನ್ನು ತೊರೆದಿದೆ. ಮೈತ್ರಿ ಮುರಿದುಕೊಂಡಿರುವ ನಿರ್ಧಾರವನ್ನು ಎಐಎಡಿಎಂಕೆ ನಾಯಕ ಕೆಪಿ ಮುನುಸ್ವಾಮಿ ಪ್ರಕಟಿಸಿದ್ದಾರೆ. ಪ್ರಮುಖವಾಗಿ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಡವಳಿಕೆ, ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ನಾಯಕ ಅಣ್ಣಾ ದೊರೆಯನ್ನು ಖಂಡಿಸಿರುವುದು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.

25 Sep 2023, 05:35 PM
ಬೆಂಗಳೂರು ಬಂದ್ಗೆ ಅವಕಾಶವಿಲ್ಲ: ನಗರ ಪೊಲೀಸ್ ಕಮಿಷನರ್ ದಯಾನಂದ್ ಸ್ಪಷ್ಟನೆ
ಸೆ.26ರಂದು ಕಾವೇರಿ ವಿಚಾರವಾಗಿ ಬೆಂಗಳೂರು ಬಂದ್ಗೆ ಅವಕಾಶವಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ್ ಹೇಳಿಕೆ ನೀಡಿದ್ದು, ಭದ್ರತೆಗಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಸೆ.25ರ ಮಧ್ಯರಾತ್ರಿಯಿಂದ 26ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಇರಲಿದೆ. ಬಲವಂತದ ಬಂದ್ ಮಾಡಿಸಿದರೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

25 Sep 2023, 04:45 PM
ಬೆಂಗಳೂರು ಬಂದ್: ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ; ಹೆಚ್ ಡಿ ಕುಮಾರಸ್ವಾಮಿ
ಸೆ.26ರಂದು ಕಾವೇರಿ ವಿಚಾರವಾಗಿ ನಡೆಯಲಿರುವ ಬೆಂಗಳೂರು ಬಂದ್ಗೆ ಬೆಂಬಲ ಕೊಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇವೆ. ಹೀಗಾಗಿ, ಬಂದ್ನಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಭಾಗವಹಿಸುತ್ತಾರೆ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

25 Sep 2023, 04:20 PM
ಏಷ್ಯನ್ ಗೇಮ್ಸ್ ಕ್ರಿಕೆಟ್ | ಶ್ರೀಲಂಕಾವನ್ನು ಸೋಲಿಸಿ ಚಿನ್ನ ಗೆದ್ದ ಭಾರತೀಯ ಮಹಿಳಾ ತಂಡ
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 19 ರನ್ಗಳಿಂದ ಸೋಲುಣಿಸುವ ಮೂಲಕ ಭಾರತೀಯ ವನಿತೆಯರು ಚಿನ್ನದ ಪದಕ ಗೆದ್ದು, ಐತಿಹಾಸಿಕ ಸಾಧನೆ ಮಾಡಿದ್ದಾರೆ. ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟ್ ಕಳೆದುಕೊಂಡು 116 ರನ್ ಕಲೆ ಹಾಕಿದ್ದರೆ, ಲಂಕಾ 8 ವಿಕೆಟ್ ಕಳೆದುಕೊಂಡು 97 ರನ್ ಅಷ್ಟೇ ಮಾಡಿ, 19 ರನ್ಗಳಿಂದ ಸೋಲೊಪ್ಪಿಕೊಂಡಿತು.

25 Sep 2023, 04:10 PM
ಪಿಎಸ್ಐ ಹಗರಣ | ಆರೋಪಿ ಐಪಿಎಸ್ ಅಧಿಕಾರಿ ಅಮೃತ್ಪಾಲ್ಗೆ ಹೈಕೋರ್ಟ್ ಜಾಮೀನು
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಜೈಲು ಸೇರಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 5 ಲಕ್ಷ ಮೌಲ್ಯದ ಬಾಂಡ್, ಇಬ್ಬರು ಶ್ಯೂರಿಟಿ ಒದಗಿಸಬೇಕು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಕೋರ್ಟ್ ಆನುಮತಿಯಿಲ್ಲದೇ ವಿದೇಶಕ್ಕೆ ಪ್ರಯಾಣಿಸುವಂತಿಲ್ಲ ಎಂದು ಜಾಮೀನು ನೀಡುವ ವೇಳೆ ಹೈಕೋರ್ಟ್ ಷರತ್ತು ವಿಧಿಸಿದೆ.

25 Sep 2023, 03:30 PM
ಬೆಂಗಳೂರು ಬಂದ್ಗೆ ಬೆಂಬಲವಿದೆ ಎಂದು ತಿಳಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ
ಕಾವೇರಿ ವಿಚಾರ, ರೈತರ ನೀರಿನ ಸಮಸ್ಯೆ ಗಂಭೀರವಾದ ವಿಚಾರ. ಆ ಸಮಸ್ಯೆಗೆ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ. ಹಾಗಾಗಿ, ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ. ಬೆಳಗ್ಗೆ 6 ಗಂಟೆಯಿಂದ 6 ವರೆಗೂ ಚಿತ್ರಮಂದಿರಗಳನ್ನು ಬಂದ್ ಮಾಡುತ್ತೇವೆ ಎಂದು ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷ ಎನ್.ಎಮ್. ಸುರೇಶ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

25 Sep 2023, 02:00 PM
ಹೋರಾಟ ಅಂದಾಗ ನಾವು ನಾಲ್ವರು ಮಾತ್ರ ನೆನಪಾಗ್ತೀವಾ?: ನಟ ದರ್ಶನ್ ಪ್ರಶ್ನೆ
ಕಾವೇರಿ ಸಮಸ್ಯೆ ಹಿನ್ನೆಲೆಯಲ್ಲಿ ಚಿತ್ರನಟರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ, ಹೋರಾಟಕ್ಕೆ ಮುನ್ನುಗ್ಗಿ ಬರುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದ್ದರು. ಇದಕ್ಕೆ ಟಾಂಗ್ ನೀಡಿರುವ ಕನ್ನಡ ಚಿತ್ರ ನಟ ದರ್ಶನ್, ‘ನಿಮಗೆ ಹೋರಾಟ ಅಂದ್ರೆ ಕೇವಲ ದರ್ಶನ್, ಸುದೀಪ್, ಶಿವಣ್ಣ, ಯಶ್ ಮಾತ್ರ ನೆನಪಾಗೋದಾ. ಕನ್ನಡಿಗರು ಕನ್ನಡ ಸಿನಿಮಾ ನೋಡುತ್ತಿಲ್ಲ. ತಮಿಳು ಸಿನಿಮಾಕ್ಕೆ ಬೆಂಗಳೂರಿನಲ್ಲಿ 37 ಕೋಟಿ ರೂ. ಶೇರು ಹರಿದುಬರುತ್ತದೆ. ಮೊದಲು ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಿ” ಎಂದು ಹೋರಾಟಗಾರರಿಗೆ ತಿರುಗೇಟು ನೀಡಿದ್ದಾರೆ.

25 Sep 2023, 01:30 PM
ಬೆಂಗಳೂರು ಬಂದ್ಗೆ ಬೆಂಬಲವಿಲ್ಲ, ಸೆ.29ರಂದು ಕರ್ನಾಟಕ ಬಂದ್: ವಾಟಾಳ್ ನಾಗರಾಜ್
ಸೆ.26ರ ಬೆಂಗಳೂರು ಬಂದ್ಗೆ ನಮ್ಮ ಬೆಂಬಲವಿಲ್ಲ. ಸೆ.29ರಂದು ಕರ್ನಾಟಕ ಬಂದ್ ಮಾಡಲು ನಿರ್ಧಾರ ಮಾಡಿದ್ದೇವೆ. ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ರಾಜ್ಯದ ಹಿತಕ್ಕಾಗಿ ಸೆ.29ರಂದು ಕರ್ನಾಟಕ ಬಂದ್ಗೆ ಕರೆ ಕೊಟ್ಟಿದ್ದೇವೆ. ಕಾವೇರಿ ನದಿ ನೀರು ಹಂಚಿಕೆ ವಿವಾದ, ಮಹದಾಯಿ ಯೋಜನೆ, ಕೃಷ್ಣಾನದಿ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ವಿಚಾರವಾಗಿ ಕರ್ನಾಟಕ ಬಂದ್ ನಡೆಯಲಿದೆ. ನಾಳೆ ರಾಜಭವನಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಬೆಂಗಳೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.

ಕಾವೇರಿ ವಿವಾದ | ‘ಬೆಂಗಳೂರು ಬಂದ್ಗೆ ನಮ್ಮ ಬೆಂಬಲವಿಲ್ಲ ಎಂದ ಓಲಾ, ಉಬರ್ ಚಾಲಕರ ಸಂಘ
25 Sep 2023, 01:15 PM
ಕಾವೇರಿ ವಿಚಾರವಾಗಿ ಸೆ.26ರ ಮಂಗಳವಾರದಂದು ಕೆಲ ರೈತ ಮುಖಂಡರು ಘೋಷಿಸಿರುವ ಬೆಂಗಳೂರು ಬಂದ್ಗೆ ನಮ್ಮ ಬೆಂಬಲವಿಲ್ಲ. ಸೆ.29ರಂದು ಕರ್ನಾಟಕ ಬಂದ್ಗೆ ಬೆಂಬಲವಿದೆ. ವಾರದಲ್ಲಿ ಎರಡೆರಡು ಬಂದ್ ಆದರೆ ನಮಗೂ ಕಷ್ಟವಾಗಲಿದೆ. ಹಾಗಾಗಿ ‘ಬೆಂಗಳೂರು ಬಂದ್ಗೆ’ ನಮ್ಮ ಬೆಂಬಲವಿಲ್ಲ. ಎಂದಿನಂತೆ ನಮ್ಮ ಸೇವೆ ಲಭ್ಯವಿರಲಿದೆ ಎಂದು ಓಲಾ, ಉಬರ್ ಚಾಲಕರ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.

25 Sep 2023, 12:45 PM
ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಅರ್ಜಿ ವಿಚಾರಣೆ; ಸಿಎಂ ಸಿದ್ದರಾಮಯ್ಯ
ಕಾವೇರಿ ನೀರು ಹಂಚಿಕೆ ವಿಚಾರವಾಗಿ ನಾಳೆ(ಸೆ.26) ಸುಪ್ರೀಂ ಕೋರ್ಟಿನಲ್ಲಿ ಮತ್ತೆ ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಬಹಳ ಸ್ಪಷ್ಟವಾಗಿ ನ್ಯಾಯಾಲಯಕ್ಕೆ ಕರ್ನಾಟಕದ ಕಾನೂನು ತಜ್ಞರ ತಂಡ ವಾದ ಮಂಡಿಸಲಿದೆ. ಬಿಜೆಪಿ ಮತ್ತು ಜೆಡಿಎಸ್ನವರು ರಾಜಕೀಯ ಮಾಡುತ್ತಿದ್ದಾರೆ. ಪ್ರತಿಭಟನೆ, ಚಳವಳಿಗಳನ್ನು ನಿಲ್ಲಿಸಲು ಹೋಗಲ್ಲ ಎಂದು ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

25 Sep 2023, 12:15 AM
ಕೌಶಲ್ಯಾಭಿವೃದ್ಧಿ ಹಗರಣ | ನಾಯ್ದು ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಸಿಐಡಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದು ಅವರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದ್ದು, ‘ನಾಳೆ (ಮಂಗಳವಾರ) ಬನ್ನಿ’ ಎಂದು ನಾಯ್ದು ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದಾರೆ.

25 Sep 2023, 11:45 AM
ಸಿಂಗಾಪುರದಲ್ಲಿ ಎರಡನೇ ಮಹಾಯುದ್ಧದ ಬಾಂಬ್ ಪತ್ತೆ
ಸಿಂಗಾಪುರದಲ್ಲಿ ನಿರ್ಮಾಣ ಹಂತದ ಸ್ಥಳವೊಂದರಲ್ಲಿ ಎರಡನೇ ಮಹಾಯುದ್ಧದ ವೇಳೆಯ ಸುಮಾರು 100 ಕೆಜಿ ಇರುವ ಬಾಂಬ್ ಪತ್ತೆಯಾಗಿದೆ. ಬಾಂಬ್ ಅನ್ನು ಅಲ್ಲಿಂದ ಸರಿಸುವುದು ಸುರಕ್ಷಿತವಲ್ಲ. ಹಾಗಾಗಿ, ಅದನ್ನು ಸೆ. 26 ರಂದು ಸ್ಥಳದಲ್ಲಿಯೇ ನಾಶಪಡಿಸಲಾಗುವುದು. ಈ ಹಿನ್ನೆಲೆಯಲ್ಲಿ ಹತ್ತಿರದ ನಿವಾಸಿಗಳಿಗೆ ತಮ್ಮ ಮನೆಗಳನ್ನು ಖಾಲಿ ಮಾಡಲು ತಿಳಿಸಿದ್ದೇವೆ ಎಂದು ಸಿಂಗಾಪುರ ಪೊಲೀಸರು ತಿಳಿಸಿದ್ದಾರೆ.

25 Sep 2023, 11:25 AM
ಭದ್ರಾ ನೀರಿಗೆ ಆಗ್ರಹಿಸಿ ದಾವಣಗೆರೆ ನಗರ ಸಂಪೂರ್ಣ ಬಂದ್
ಭದ್ರಾ ಬಲದಂಡೆ ನಾಲೆಗೆ ನಿರಂತರವಾಗಿ 100 ದಿನ ನೀರು ಹರಿಸುವಂತೆ ಒತ್ತಾಯಿಸಿ ದಾವಣಗೆರೆ ನಗರ ಬಂದ್ ನಡೆಸುವಂತೆ ರೈತ ಸಂಘಟನೆಗಳು ಕರೆ ಕೊಟ್ಟ ಹಿನ್ನೆಲೆಯಲ್ಲಿ ಬಂದ್ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಭದ್ರಾ ನೀರಿಗೆ ಆಗ್ರಹಿಸಿ ದಾವಣಗೆರೆ ನಗರ ಸಂಪೂರ್ಣ ಬಂದ್
— eedina.com (@eedinanews) September 25, 2023
ಬಂದ್ ನಡುವೆ ರಸ್ತೆಗಿಳಿದಿದ್ದ ಖಾಸಗಿ ಬಸ್ ಅನ್ನು ರೈತ ಮುಖಂಡರು ತಡೆದು, ಹಿಂದೆ ಹೋಗುವಂತೆ ತಿಳಿಸಿದರು. pic.twitter.com/KCNMrTJOQP
ದಾವಣಗೆರೆ ಜಿಲ್ಲೆಯಲ್ಲಿ ಬಹುತೇಕ ರೈತರು ಭತ್ತ ನಾಟಿ ಮಾಡಿದ್ದಾರೆ. ನೀರು ನಿಲ್ಲಿಸಿರುವುದರಿಂದ ರೈತರಿಗೆ ಸಮಸ್ಯೆ ಆಗಿದೆ. ಹೀಗಾಗಿ 100 ದಿನ ನೀರು ಹರಿಸುವಂತೆ ರೈತರು ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ನಗರ ಬಂದ್ಗೆ ಭಾರತೀಯ ರೈತ ಒಕ್ಕೂಟ ಕರೆ ನೀಡಿತ್ತು. ಸಾರಿಗೆ ವ್ಯವಸ್ಥೆ ಸೇರಿದಂತೆ ಸಂಪೂರ್ಣ ಬಂದ್ ಆಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಈ ನಡುವೆ ರಸ್ತೆಗಿಳಿದಿದ್ದ ಖಾಸಗಿ ಬಸ್ ಅನ್ನು ರೈತ ಮುಖಂಡರು ತಡೆದು, ಹಿಂದೆ ಹೋಗುವಂತೆ ತಿಳಿಸಿದ್ದಾರೆ.
