ಸೈಬರ್ ವಂಚಕರು ಅಧಿಕ ಲಾಭದ ನೆಪದಲ್ಲಿ ವಂಚಿಸಿ ₹1.85 ಲಕ್ಷ ಲಪಟಾಯಿಸಿದ್ದಾರೆಂದು ಆರೋಪಿಸಿ ಯುವತಿಯೋರ್ವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸಿಇಎನ್ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.
ಚಿಂತಾಮಣಿ ನಗರದ ಅಬ್ಬುಗುಂಡು ಹಿಂಭಾಗ ರಸ್ತೆಯ ನಿವಾಸಿ ಸಿವಿಲ್ ಎಂಜಿನಿಯರ್ ಕೆ ಎನ್ ಐಶ್ವರ್ಯ ಹಣ ಕಳೆದುಕೊಂಡು ದೂರು ನೀಡಿರುವ ಸಂತ್ರಸ್ತೆ.
ಸಂತ್ರಸ್ತೆ ಐಶ್ವರ್ಯ ಬೆಂಗಳೂರಿನ ಯಲಹಂಕದಲ್ಲಿ ಕಂಪನಿಯೊಂದರಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಬೆಂಗಳೂರಿನ ಮಾರುತಹಳ್ಳಿಯ ಎಸ್ಬಿಐ ಶಾಖೆ, ನಗರದ ಕರ್ನಾಟಕ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಾರೆ. ಪೋನ್ ಪೇ, ಗೂಗಲ್ ಪೇ ವ್ಯಾಲೆಟ್ ಬಳಸಿಕೊಂಡು ದೈನಂದಿನ ಹಣಕಾಸು ವ್ಯವಹಾರ ನಡೆಸುತ್ತಿದ್ದರು. ಜನವರಿ 17ರಂದು ಅವರಿಗೆ ಮೇಘಾ ಎಂಬುವವರಿಂದ ಮೆಸೇಜ್ ಬಂದಿದೆ. ಯುಟ್ಯೂಬ್ ರಿವ್ಯೂ ಮಾಡಿದರೆ ಒಂದಕ್ಕೆ ₹50 ಕೊಡುವುದಾಗಿ ತಿಳಿಸಿದ್ದಾರೆ.
ಕೆ ಎನ್ ಐಶ್ವರ್ಯ ಅವರನ್ನು ಟೆಲಿಗ್ರಾಂ ಗ್ರೂಪ್ಗೆ ಸೇರಿಸಿಕೊಂಡಿದ್ದಾರೆ. ಮೊದಲು ₹2,000 ಹೂಡಿಕೆ ಮಾಡುವಂತೆ ತಿಳಿಸಿದಾಗ ನಿರಾಕರಿಸಿದ್ದಾರೆ. ನಂತರ ಟೆಲಿಗ್ರಾಂ ಹೂಡಿಕೆದಾರರ ಪರಿಚಯ ಮಾಡಿಸಿ ಅದರಲ್ಲಿ ಹೂಡಿಕೆ ಮಾಡುತ್ತಿರುವವರಿಗೆ ಬರುತ್ತಿರುವ ಲಾಭದ ಅಮಿಷ ಒಡ್ಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಲ್ಕಿಸ್ ಬಾನೊ ಪ್ರಕರಣ: ಗೋಧ್ರಾ ಜೈಲಿನ ಅಧಿಕಾರಿಗಳಿಗೆ ಶರಣಾದ ಎಲ್ಲ 11 ಅಪರಾಧಿಗಳು
ಮೊದಲಿಗೆ ₹5,000 ಅವರು ಸೂಚಿಸಿದ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಹೂಡಿಕೆ ಮಾಡಿದ್ದಾರೆ. ಅದಕ್ಕೆ ಲಾಭವಾಗಿ ಅವರ ಖಾತೆಗೆ ₹6 ಸಾವಿರ ಜಮಾ ಆಗಿದೆ. ಹೆಚ್ಚಿನ ಲಾಭದ ಆಸೆ ತೋರಿಸಿ ಹಂತಹಂತವಾಗಿ ಒಟ್ಟು ₹1,85,800 ಹೂಡಿಕೆ ಮಾಡಿಸಿಕೊಂಡಿದ್ದಾರೆ.
ಹೂಡಿಕೆ ಮಾಡಿದ ಹಣವನ್ನು ಹಣವನ್ನು ವಾಪಸ್ ಪಡೆಯಲು ಅವಕಾಶ ನೀಡಿಲ್ಲ. ವಾಪಸ್ ನೀಡುವಂತೆ ಅನೇಕ ಬಾರಿ ಕೇಳಿದರೂ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.