ರಾಹುಲ್ ಗಾಂಧಿಯವರಿಗೆ ಮೋದಿ ಉಪನಾಮ ಪ್ರಕರಣದಲ್ಲಿ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬಳಿಕ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮತ್ತೆ ಪ್ರಶ್ನೆಗಳು ಮುಂದುವರಿಯಲಿದೆ’ ಎಂದು ಹೇಳಿದೆ.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿ ಸಂಸದ ಸ್ಥಾನದಿಂದಲೂ ಅನರ್ಹಗೊಂಡಿದ್ದರು.
ಮಾನಹಾನಿ ಪ್ರಕರಣದಲ್ಲಿ ವಿಧಿಸಲಾಗಿದ್ದ ಜೈಲು ಶಿಕ್ಷೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆ ನೀಡಿದೆ. ಇದರಿಂದ ಅವರು ಸಂಸದ ಸ್ಥಾನವನ್ನು ಮರಳಿ ಪಡೆದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಆತಂಕ ಕೂಡ ನಿವಾರಣೆಯಾಗಿದೆ.
ಇದನ್ನು ಓದಿದ್ದೀರಾ? ಮೋದಿ ಉಪನಾಮ ಪ್ರಕರಣ : ರಾಹುಲ್ ಗಾಂಧಿ ಶಿಕ್ಷೆಗೆ ತಡೆ ನೀಡಿದ ಸುಪ್ರೀಂ
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಈ ಹಿಂದೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಜೊತೆಗಿರುವ ಫೋಟೋವನ್ನು ಅದಾನಿ ಹಗರಣದ ಸಂದರ್ಭದ ಚರ್ಚೆಯ ವೇಳೆ ಪ್ರದರ್ಶಿಸಿದ್ದರು. ಈ ಫೋಟೋವನ್ನು ಟ್ವೀಟ್ ಮಾಡಿದ್ದು, ‘ಬರುತ್ತಿದ್ದೇನೆ, ಪ್ರಶ್ನೆಗಳು ಮುಂದುವರಿಯಲಿದೆ’ ಎಂದು ತಿಳಿಸಿದೆ.
‘ಇದು ದ್ವೇಷದ ವಿರುದ್ಧ ಪ್ರೀತಿಯ ಗೆಲುವು, ಸತ್ಯಮೇವ ಜಯತೇ- ಜೈ ಹಿಂದ್’ ಎಂದು ಕಾಂಗ್ರೆಸ್ ಐಟಿ ಸೆಲ್ ಇನ್ನೊಂದು ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ಸುಪ್ರೀಂ ಆದೇಶದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ರಾಹುಲ್ ಗಾಂಧಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.