ವಡಗೇರಾ ತಾಲೂಕಿನ ಗಡ್ಡೆಸೂಗೂರ ಮತ್ತು ಹುಲಕಲ್(ಜೆ) ಗ್ರಾಮದ ನಡುವೆ ಇರುವ ರಸ್ತೆಯ ಕಳಪೆ ಕಾಮಗಾರಿ ನಡೆದಿದೆ. ಕಳಪೆ ಗುಣಮಟ್ಟದಲ್ಲಿ ಕಾಮಗಾರಿ ನಡೆಸಿ, ಹೆಚ್ಚು ‘ಬಿಲ್ ಕ್ಲೈಮ್’ ಮಾಡಲಾಗಿದೆ. ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು. ಅಲ್ಲಿಯವರೆಗೆ ಬಿಲ್ ಪಾವತಿ ಮಾಡದಂತೆ ತಡೆಯಬೇಕು ಎಂದು ಭೀಮ್ ಆರ್ಮಿ ಕರ್ನಾಟಕ ಏಕ್ತಾ ಮಿಷನ್ ಆಗ್ರಹಿಸಿದೆ.
ಯಾದಗಿರಿ ಜಿಲ್ಲೆಯ ಲೋಕೋಪಯೋಗಿ ವಿಭಾಗದ ಕಾರ್ಯಪಾಲಕ ಅಭಿಯಂತರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿರುವ ಕಾರ್ಯಕರ್ತರು, ರಸ್ತೆ ಕಾಮಗಾರಿ ಮತ್ತು ಗುಣಮಟ್ಟದ ಕುರಿತು ತನಿಖೆ ನಡೆಬೇಕೆಂದು ಒತ್ತಾಯಿಸಿದ್ದಾರೆ.
“ಉಭಯ ಗ್ರಾಮಗಳ ನಡುವಿನ ರಸ್ತೆ ಕಾಮಗಾರಿಯನ್ನು ಅಂದಾಜು ಪಟ್ಟಿ ಪ್ರಕಾರ ನಡೆಸಲಾಗಿಲ್ಲ. ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಲಾಗಿದೆ. ರಸ್ತೆಯ ಲೆವೆಲಿಂಗ್ ಮಾಡಿಲ್ಲ. ಜೆ.ಇ ಅವರಿಂದ ರಸ್ತೆಯ ಎಸ್ಟಿಮೇಟ್ ಹೇಳಿದರೆ, ಒಂದು ತಿಂಗಳಾದರೂ ನೀಡಿಲ್ಲ” ಎಂದು ಆರೋಪಿಸಿದ್ದಾರೆ.
“ಕಾಮಗಾರಿಯ ತನಿಖೆ ಆಗುವವರೆಗೂ ಬಿಲ್ ಪಾವತಿ ಮಾಡಬಾರದು. ಸಂಬಂಧಪಟ್ಟ ಜೆ.ಇ ಮತ್ತು ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಹಕ್ಕೊತ್ತಾಯ ಸಲ್ಲಿಸುವ ವೇಳೆ ಸೈದಪ್ಪ.ಎಂ, ಮರೆಪ್ಪ, ಶಾಂತು ಮ್ಯಾಗೇರಿ, ಹಣಮಂತ ವಡಗೇರಾ, ಚಾಂದು ಹುಲಿ ಇದ್ದರು.