ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿ.18ರಂದು ರಾಜ್ಯಸಭೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಆಡಿದ ಅವಮಾನಕಾರಿ ಮಾತುಗಳನ್ನು ವಾಪಸ್ ಪಡೆದು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ದಲಿತ ಹಕ್ಕುಗಳ ಸಮಿತಿ ಆಗ್ರಹಿಸಿದೆ.
ಸೋಮವಾರ ಸಮಿತಿಯ ಪದಾಧಿಕಾರಿಗಳು ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಿಂದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ, ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡುವ ವೇಳೆ ‘ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಅಂಬೇಡ್ಕರ್, ಅಂಬೇಡ್ಕರ್ ಎನ್ನುವುದರ ಬದಲು ದೇವರ ಹೆಸರು ಹೇಳಿದರೆ ಏಳೇಳು ಜನ್ಮದಲ್ಲೂ ಸ್ವರ್ಗ ಪ್ರಾಪ್ತಿಯಾಗುತ್ತಿತ್ತು’ ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಕಿಡಿಕಾರಿದರು.
ಅಂಬೇಡ್ಕರ್ ವಿರೋಧಿ ಹೇಳಿಕೆ ನೀಡಿರುವ ಅವರಿಗೆ ಗೃಹಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯಾವ ನೈತಿಕತೆಯು ಇರುವುದಿಲ್ಲ. ನಾಲಿಗೆ ಹರಿಬಿಟ್ಟಿರುವ ಅಮಿತ್ ಶಾ ದೇಶದ ಜನತೆಗೆ ಕ್ಷಮೆ ಕೇಳಬೇಕು. ಹಾಗೆಯೇ ಕೇಂದ್ರ ಸರ್ಕಾರ ಅವರಿಂದ ರಾಜೀನಾಮೆ ಪಡೆದು ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.
ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಹಿಳೆಯರನ್ನು ತುಚ್ಛವಾಗಿ ಮಾತನಾಡಿರುವುದು ತೀವ್ರವಾಗಿ ಖಂಡಿಸುತ್ತೇವೆ. ಮಹಿಳೆಯರ ಕುರಿತು ಮನುವಾದಿಗಳ ನಡವಳಿಕೆ ಒಪ್ಪಲಾಗದು ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಲೋಕಾಯುಕ್ತ ದಾಳಿ : ಲಂಚ ಪಡೆದ ನೋಟು ನುಂಗಿದ ಸಹಕಾರಿ ಸಂಘಗಳ ಉಪನಿಬಂಧಕ!
ಈ ಸಂದರ್ಭದಲ್ಲಿ ಸಮಿತಿಯ ತಾಲೂಕು ಸಂಚಾಲಕ ಶಶಿಕಾಂತ್ ಡಾಂಗೆ, ಸಹ ಸಂಚಾಲಕ ಪ್ರಭು ಸಂತೋಷಕರ್ ಹಾಗೂ ಪ್ರಮುಖರಾದ ಅಂಬುಬಾಯಿ ಮಾಳಗೆ, ಗೌಸೋದ್ದೀನ್, ರೇಷ್ಮಾ ಹಂಸರಾಜ್, ಇಸಾಮೋದ್ದೀನ್ ಮೀರಾಸಾಬ್, ಬಸವರಾಜ ಮಾಳಗೆ, ಶ್ರೀಮಂತ, ಜೈಭೀಮ್, ಅನೀಲ್ ದೊಡ್ಡಿ, ಯುವರಾಜ್ ಐಹೊಳ್ಳಿ ಸೇರಿದಂತೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.