ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದಾಗ ಪ್ರತಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಬಸ್ ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ, ಪ್ರತಿಭಟಿಸಿದ್ದರು. ಇದನ್ನು ನೆನಪಿಸಿಕೊಂಡು, ಮೆಟ್ರೋ ಟಿಕೆಟ್ ದರ ಹೆಚ್ಚಿಸಿದ್ದಕ್ಕೆ ಮೋದಿ ಪರವಾಗಿ ಕ್ಷಮೆಯಾಚನೆ ಮಾಡಲ್ವಾ? ಮೆಟ್ರೋ ಪ್ರಯಾಣಿಕರಿಗೆ ಹೋಗಿ ಗುಲಾಬಿ ಹೂ ಕೊಡಲ್ವಾ?" ಎಂದು ಬಿಜೆಪಿ ನಾಯಕರನ್ನು ನೆಟ್ಟಿಗರು ಕುಟುಕಿದ್ದಾರೆ.
ಪ್ರಯಾಣ ದರ ಏರಿಕೆ ಹೆಸರಲ್ಲಿ ಬೆಂಗಳೂರು ಮೆಟ್ರೋ (ನಮ್ಮ ಮೆಟ್ರೋ) ಅಕ್ಷರಶಃ ಹಗಲು ದರೋಡೆಗೆ ಇಳಿದಂಗೆ ಕಾಣುತ್ತಿದೆ. ಶೇ.47ರಷ್ಟು ದರ ಹೆಚ್ಚಳ ಎಂದು ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರದ ದುಪ್ಪಟ್ಟು ಶೇ.100ರಷ್ಟು ಅಧಿಕ ಮೊತ್ತ ನೀಡಬೇಕಾಗಿದೆ.
‘ನಮ್ಮ ಮೆಟ್ರೊ‘ ಪ್ರಯಾಣ ದರ ಏರಿಕೆ ಹೆಚ್ಚಳದಿಂದ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರವನ್ನು ಹೊಂದಿರುವ ರಾಜ್ಯ ಬೆಂಗಳೂರಿನ ಮೆಟ್ರೋದ್ದಾಗಿದೆ. ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆಯುವ ಬದಲು ಬೃಹತ್ ಆದಾಯ ಸಂಗ್ರಹದ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಕ್ಕೆ ನಿಗಮ ಗುರಿಯಾಗಿದೆ.
ಸೋಮವಾರ ಬೆಳಿಗ್ಗೆ ಯಥಾ ಪ್ರಕಾರ ಮೆಟ್ರೋ ಸ್ಟೇಶನ್‌ಗಳಿಗೆ ಬಂದು ಟಿಕೆಟ್ ಪಡೆದ ಪ್ರಯಾಣಿಕರು ಟಿಕೆಟ್ ದರ ಹೆಚ್ಚಳ ಕಂಡು ಒಂದು ಕ್ಷಣ ಹೌಹಾರಿದ್ದಾರೆ. ಸರ್ಕಾರಗಳನ್ನು ಬೈದು ಮುಂದೆ ಸಾಗಿದ್ದಾರೆ. ಕೆಲವು ಪ್ರಜ್ಞಾವಂತರು ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಡಿ ಶಾಪ ಹಾಕಿದ್ದಾರೆ.
ಪತ್ರಕರ್ತ Shashi Sampalli (ಶಶಿ ಸಂಪಳ್ಳಿ) ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, “ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಹಗಲು ದರೋಡೆ. ಈ ಮೊದಲು 26.50 ರೂ. ಇದ್ದ ನನ್ನ ನಿತ್ಯ ಪ್ರಯಾಣ ದರ ಈಗ 47.50 ರೂ. ಆಗಿದೆ. ಅಂದರೆ ಬಹುತೇಕ 90% ಹೆಚ್ಚಳ. ದುಪ್ಪಟ್ಟು ದರ ಏರಿಕೆ. ಸರ್ಕಾರದ ಉದ್ದೇಶವೇನು? ಜನರು ಮೆಟ್ರೋ ಬಳಸದೆ ಬೈಕ್, ಕಾರಲ್ಲೇ ಓಡಾಡಲಿ ಎಂದೇ? ಹಾಗಾದರೆ ಸಾವಿರಾರು ಕೋಟಿ ರೂ. ಜನರ ತೆರಿಗೆ ಹಣ ಸುರಿದು ನಮ್ಮ ಮೆಟ್ರೋ ಮಾಡಿರುವುದು ಯಾಕೆ” ಎಂದು ಪ್ರಶ್ನಿಸಿದ್ದಾರೆ.
“ಮೆಟ್ರೋ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶದಲ್ಲೇ ಅತಿಹೆಚ್ಚು ದರ ಪಾವತಿ ಮಾಡಬೇಕಾದ ಸ್ಥಿತಿ. ಆದರೆ, ಆಶ್ಚರ್ಯದ ವಿಷಯವೆಂದರೆ ಈ ಬಗ್ಗೆ ಎಲ್ಲೂ ಪ್ರತಿಭಟನೆ, ಆಕ್ಷೇಪದ ದನಿ ಇಲ್ಲದಿರುವುದು. ಕೆಎಸ್‌ಆರ್‌ಟಿಸಿಯಲ್ಲಿ ಹತ್ತು, ಹದಿನೈದು ಪರ್ಸೆಂಟ್ ಟಿಕೆಟ್ ದರ ಏರಿಕೆಯಾದಾಗ ಕೇಳಿಬರುವ ಆಕ್ಷೇಪ ಕೂಡ ಇಲ್ಲಿ ಕಾಣಿಸುತ್ತಿಲ್ಲ. ಇದು ನಗರ ಪ್ರದೇಶಗಳ ಸಮಸ್ಯೆಯೇ? ಅಥವಾ ಜನರ ಬಳಿ ಹಣ ಇಷ್ಟೊಂದು ಹೆಚ್ಚಿದೆಯೇ? ಪ್ರತಿಭಟಿಸುವ ಕ್ಷಿಣ ದನಿ ಕೂಡ ಸಾರ್ವಜನಿಕರಿಂದ ಇಲ್ಲವಲ್ಲ. ವಿರೋಧದ ದನಿಗಳು ಕಡಿಮೆಯಾದಷ್ಟು ಬಂಡವಾಳಶಾಯಿಗಳು, ಸರ್ಕಾರಗಳ ದರ್ಪ ಹೆಚ್ಚಾಗುತ್ತದೆ ಎಂಬುದನ್ನು ನಮ್ಮ ಸಮಾಜ ಎಂದಿಗೂ ಮರೆಯಬಾರದು. ಬೀದಿಗಿಳಿದು ಹೋರಾಡಲು ಆಗದಿದ್ದರೇ ಕನಿಷ್ಟ ಸಾಮಾಜಿಕ ಜಾಲತಾಣಗಳಲ್ಲಿಯಾದರೂ ಈ ಬಗ್ಗೆ ವಿರೋಧ ಕೇಳಿಬರಲಿ. ಸರ್ಕಾರ ಯಾವುದಾದರೂ ಆಗಿರಲಿ ನಮ್ಮ ಮೇಲಾಗುವ ದೌರ್ಜನ್ಯಗಳನ್ನು ಒಕ್ಕೂರಲಿನಿಂದ ಪ್ರತಿಭಟಿಸಬೇಕಿರುವುದು ನಮ್ಮ ಕರ್ತವ್ಯ” ಎಂದು Mamatha M (ಮಮತಾ ಎಂ) ಎಂಬುವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಮೆಟ್ರೋ ರೈಲು ದರವನ್ನು ಏಕಾಏಕಿ 50% ಜಾಸ್ತಿ ಮಾಡಿದ್ದಾರೆ. ಮೊನ್ನೆ 50 ರೂಪಾಯಿ ಇದ್ದ ಟಿಕೆಟ್ ನೆನ್ನೆ 75 ರೂ. ಆಗಿದೆ. ಯಾರೂ ಕೇಳುವ ಹಾಗಿಲ್ಲ, ಕಾಸಿದ್ರೆ ಮೆಟ್ರೋ ಹತ್ತಿ, ಇಲ್ಲದಿದ್ರೆ ನಿಮ್ಮ ಹಣೆಬರಹ ಎಂಬಂತಿದೆ ನಮ್ಮ ಮೆಟ್ರೋ ವ್ಯವಸ್ಥೆ. ಮೆಟ್ರೋ ರೈಲು ಸ್ವತಂತ್ರ ಸಂಸ್ಥೆಯಾಗಿರುವ ಕಾರಣಕ್ಕಾಗಿ ಅದನ್ನು ನಿಯಂತ್ರಿಸಲು ಸರ್ಕಾರದಿಂದಲೂ ಸಾಧ್ಯವಿಲ್ಲವಂತೆ. ಇದೇ ಹೀಗಾದ್ರೆ, ಖಾಸಗೀಕರಣವನ್ನು ಬೆಂಬಲಿಸುವ ಹೊಟ್ಟೆ ತುಂಬಿದ ಹಾಗೂ ತಲೆ ಬಲಿಯದ ಜನಕ್ಕೆ ಖಾಸಗೀಕರಣದ ಸೈಡೆಫೆಕ್ಟ್ ತಾಕಬಾರದ ಜಾಗಗಳಿಗೆಲ್ಲಾ ಸರಿಯಾಗಿ ತಾಕಿದ್ರೂ ಅಸಹಾಯಕರಾಗಿಯೇ ನಿಲ್ಲಬೇಕು. ದುಡ್ಕೊಂಡು ತಿನ್ನೋರ ಪಾಡು ಮಾತ್ರ ನರಕವೇ” ಎಂದು ವೀರೇಂದ್ರ ಮಲ್ಲಣ್ಣ (ವೀರೇಂದ್ರ ಮಲ್ಲಣ್ಣ) ಬರೆದುಕೊಂಡಿದ್ದಾರೆ.

ಅರ್ಧ ಸತ್ಯ ಹೇಳುತ್ತಿರುವ ಆರ್ ಅಶೋಕ್
ಕೇಂದ್ರ ರೈಲ್ವೆ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಕಳೆದ ಜನವರಿ 17ರಂದು ಮಂಡಳಿ ಸಭೆ ನಡೆದಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರು, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ದರ ನಿಗದಿ ಸಮಿತಿಯ ಶಿಫಾರಸುಗಳಿಗೆ ಒಪ್ಪಿಗೆ ನೀಡಲಾಗಿದೆ. ಆದರೆ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಕೇಂದ್ರ ಸರ್ಕಾರದ ಪಾತ್ರವನ್ನು ಮರೆಮಾಚಿ, ರಾಜ್ಯ ಸರ್ಕಾರವೇ ಪ್ರಯಾಣ ದರ ಏರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್ ತಾಣದಲ್ಲಿ ಬರೆದುಕೊಂಡಿರುವ ಅವರು, “ಪೆಟ್ರೋಲ್, ಡೀಸೆಲ್, ಹಾಲು, ಬಸ್ಸು ದರ ಏರಿಕೆಯ ಬರೆಯಿಂದ ಈಗಾಗಲೇ ಹೈರಾಣಗಿರುವ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಬೆಂಗಳೂರು ಮೆಟ್ರೋ ದರವನ್ನ ಏಕಾಏಕಿ 50% ಏರಿಸುವ ಮೂಲಕ ಜನಸಾಮಾನ್ಯರ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ. “ಸ್ವಾಮಿ ಸಿಎಂ ಸಿದ್ದರಾಮಯ್ಯ ನವರೇ, ಮೆಟ್ರೋ ದರ 50% ಏರಿಕೆ ಮಾಡಿರುವುದರಿಂದ ಅನೇಕ ಜನಸಾಮಾನ್ಯರಿಗೆ ಈಗ ಮೆಟ್ರೋ ಸಂಚಾರ ಕೈಗೆಟುಕದ ಪರಿಸ್ಥಿತಿ ಎದುರಾಗಿದ್ದು. ಮೆಟ್ರೋ ಪ್ರಯಾಣಕ್ಕಿಂತ ಸ್ವಂತ ಸ್ಕೂಟರ್, ಬೈಕಿನ ಪ್ರಯಾಣ ಜೇಬಿಗೆ ಹಿತ ಎನ್ನುವಂತಾಗಿದೆ. ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಿ, ಬೆಂಗಳೂರಿನ ಟ್ರಾಫಿಕ್ ಸಮಸ್ಯೆ, ಪರಿಸರ ಮಾಲಿನ್ಯಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ, ಜನರನ್ನು ಮೆಟ್ರೋದಿಂದ ವಿಮುಖರಾಗುವಂತೆ ಮಾಡುತ್ತಿದೆ. ಈ ಕೊಡಲೇ ಮೆಟ್ರೋ ದರ ಏರಿಕೆಯ ನಿರ್ಧಾರವನ್ನ ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ ರಾಜ್ಯ ಸರ್ಕಾರ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿದಾಗ ಪ್ರತಿಪಕ್ಷ ನಾಯಕ ಆರ್ ಅಶೋಕ್, ವಿಧಾನ ಪರಿಷತ್ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ದಂಡು ನಾಡಪ್ರಭು ಕೆಂಪೇಗೌಡ ಬಸ್ ನಿಲ್ದಾಣಕ್ಕೆ (ಮೆಜೆಸ್ಟಿಕ್) ಧಾವಿಸಿ, ಸಾರಿಗೆ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ, ಪುರುಷ ಪ್ರಯಾಣಿಕರಿಗೆ ಗುಲಾಬಿ ಹೂ ನೀಡುವ ಮೂಲಕ ಬಿಜೆಪಿ ನಾಯಕರು ವಿಶಿಷ್ಟವಾಗಿ ಪ್ರತಿಭಟಿಸಿದ್ದರು. ಇದನ್ನು ನೆನಪಿಸಿಕೊಂಡು, “ಮೆಟ್ರೋ ಟಿಕೆಟ್ ದರ ಹೆಚ್ಚಿಸಿದ್ದಕ್ಕೆ ಮೋದಿ ಪರವಾಗಿ ಕ್ಷಮೆಯಾಚನೆ ಮಾಡಲ್ವಾ? ಮೆಟ್ರೋ ಪ್ರಯಾಣಿಕರಿಗೆ ಹೋಗಿ ಗುಲಾಬಿ ಹೂ ಕೊಡಲ್ವಾ? ” ಎಂದು ಹೇಮಾ ಸುಳ್ಯ ಅವರು ಆರ್ ಅಶೋಕ್ ಅವರನ್ನು ಕುಟುಕಿದ್ದಾರೆ.

ಫೆ.8ರಂದು ದರ ಹೆಚ್ಚಿಸಿ ಆದೇಶ
ಬೆಂಗಳೂರು ‘ನಮ್ಮ ಮೆಟ್ರೋ’ ರೈಲು ಪ್ರಯಾಣಿಕರ ದರ ಏರಿಕೆಯಾಗಿದ್ದು, ಫೆ.8ರಂದು ಆದೇಶ ಪ್ರಕಟವಾಗಿದೆ. ಭಾನುವಾರದಿಂದಲೇ ಪ್ರಯಾಣಿಕರು ಪರಿಷ್ಕೃತ ದರ ಪಾವತಿಸಬೇಕಾಗಿದೆ. ಕನಿಷ್ಠ ದರ 10 ರೂ. ಹಾಗೆ ಉಳಿದಿದ್ದು, ಗರಿಷ್ಠ ದರವು ಶೇ. 50 ರಷ್ಟು ಏರಿಕೆಯಾಗಿದೆ.
ಸುಮಾರು ಎಂಟು ವರ್ಷಗಳ ನಂತರ ದರ ನಿಗದಿ ಸಮಿತಿಯ (ಎಫ್‌ಎಫ್‌ಸಿ) ಶಿಫಾರಸುಗಳ ಆಧಾರದ ಮೇಲೆ ನಮ್ಮ ಮೆಟ್ರೋವನ್ನು ನಿರ್ವಹಿಸುವ ಬಿಎಂಆರ್‌ಸಿಎಲ್ ದರಗಳನ್ನು ಪರಿಷ್ಕರಿಸಿದೆ. ದರ ಪರಿಷ್ಕರಣೆಯ ನಂತರ 60 ರೂ.ಗಳ ಹಿಂದಿನ ದರವೂ ಈಗ 90 ರೂ.ಗೆ ತಲುಪಿದೆ.
0-2 ಕಿ.ಮೀ ವರೆಗಿನ ದೂರಕ್ಕೆ, ಪ್ರಯಾಣಿಕರು ಕನಿಷ್ಠ 10 ರೂ. ಪಾವತಿಸುವುದು ಮುಂದುವರಿಯಲಿದೆ. 2-4 ಕಿ.ಮೀ.ಗೆ, ದರವನ್ನು 20 ರೂ.ಗೆ ಮತ್ತು 4-6 ಕಿ.ಮೀ.ಗೆ 30 ರೂ.ಗೆ ಹೆಚ್ಚಿಸಲಾಗಿದೆ. 6-8 ಕಿ.ಮೀ.ಗೆ, ಪ್ರಯಾಣಿಕರು 40 ರೂ. ಪಾವತಿಸಬೇಕಾಗುತ್ತದೆ. 8-10 ಕಿ.ಮೀ. ಪ್ರಯಾಣಿಸುವವರು 50 ರೂ. ಪಾವತಿಸಬೇಕಾಗುತ್ತದೆ.
ದರ ಪರಿಷ್ಕರಣೆ ಪ್ರಕ್ರಿಯೆ ಹೇಗೆ?: 2011ರಲ್ಲಿ ಮೆಟ್ರೊ ಸಂಚಾರ ಆರಂಭವಾಗಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಆಗ ದರ ನಿಗದಿಗಾಗಿ ಸಮಿತಿ ರಚಿಸದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಪ್ಪಿಗೆ ಪಡೆದು ಪ್ರಯಾಣ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಲಾಗಿತ್ತು.
2017ರಲ್ಲಿ ದರ ಪರಿಷ್ಕರಣೆ ಆಗಿತ್ತು
2011ರಲ್ಲಿ ಮೆಟ್ರೊ ಸಂಚಾರ ಆರಂಭವಾಗಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಆದರೆ, ಆಗ ದರ ನಿಗದಿಗಾಗಿ ಸಮಿತಿ ರಚಿಸದೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಒಪ್ಪಿಗೆ ಪಡೆದು ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಳ ಮಾಡಲಾಗಿತ್ತು. ನಿರ್ವಹಣೆ ವೆಚ್ಚ, ವೇತನ ವೆಚ್ಚ, ಇಂಧನ ವೆಚ್ಚ, ಸಾಮಗ್ರಿ ವೆಚ್ಚಗಳು ಪ್ರತಿವರ್ಷ ಏರಿಕೆಯಾಗುತ್ತಿವೆ. ಏಳು ವರ್ಷಗಳಿಂದ ‘ನಮ್ಮ ಮೆಟ್ರೊ’ ದರ ಪರಿಷ್ಕರಣೆ ಮಾಡಿಲ್ಲ ಎಂದು ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರವು ಮೂವರು ಸದಸ್ಯರನ್ನು ಒಳಗೊಂಡ ದರ ನಿಗದಿ ಸಮಿತಿಯನ್ನು ರಚಿಸಿ ದರ ಏರಿಕೆ ಮಾಡಲಾಗಿದೆ. ರಾಜ್ಯದಿಂದ ಇಬ್ಬರು ಸದಸ್ಯರು ಇದ್ದ ಕಾರಣ ಬಹುಮತ ಕೇಂದ್ರ ಸದಸ್ಯರದ್ದಾಗಿದ್ದು, ದರ ಏರಿಕೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.
ಮೋದಿ ಅವರ ಅಚ್ಚೇದಿನ್ ಅಂದ್ರೆ ಇದೆನಾ?
ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ ಮಾರ್ಗವನ್ನು ಅಕ್ಟೋಬರ್,20,2023 ಲೋಕಸಭೆ ಚುನಾವಣೆ ಪೂರ್ವ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿ, “ಇಂದು ನಿಮ್ಮೆಲ್ಲರೊಂದಿಗಿರುವುದು ಬಹಳ ವಿಶೇಷ ಮತ್ತು ಸ್ಮರಣೀಯ ದಿನ. ಬೆಂಗಳೂರು ನಗರವು ಆಹ್ಲಾದಕರ ಹವಾಮಾನ, ಹಸಿರು ಉದ್ಯಾನವನಗಳು ಮತ್ತು ದೇಶದ ಐಟಿ ರಾಜಧಾನಿ ಎಂದು ಹೆಸರುವಾಸಿಯಾಗಿದೆ. ವಿಶ್ವದರ್ಜೆಯ ಮೆಟ್ರೋ ರೈಲು ವ್ಯವಸ್ಥೆಯನ್ನು ಸೇರಿಸುವುದರೊಂದಿಗೆ, ಕರ್ನಾಟಕದ ಜನತೆಗೆ ಹೆಮ್ಮೆಯ ವಿಷಯವಾಗಿದೆ” ಎಂದು ನುಡಿದಿದ್ದರು.
“ಕೆ.ಆರ್.ಪುರ-ಬೈಯ್ಯಪ್ಪನಹಳ್ಳಿ, ಕೆಂಗೇರಿ-ಚಲ್ಲಘಟ್ಟ ಮೆಟ್ರೋ ಮಾರ್ಗಕ್ಕೆ ರಾಜ್ಯ ಸರ್ಕಾರ 5,630 ಕೋಟಿ ರೂ. ನೀಡಿದೆ. ಕೇಂದ್ರ, ರಾಜ್ಯ ಸರ್ಕಾರ ಜಂಟಿಯಾಗಿ ಮೆಟ್ರೋ ಯೋಜನೆ ಕೈಗೊಂಡಿದೆ. ಎರಡು ಹಂತದಲ್ಲಿ ಸುಮಾರು 74 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಣೆಯಾಗಿದೆ. ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರೋದ್ರಿಂದ ಮೆಟ್ರೋ ಸೇವೆ ಅತ್ಯಗತ್ಯ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇಡೀ ವಿಶ್ವಕ್ಕೆ ಗೊತ್ತಿದೆ. 5 ಕಿ.ಮೀ ಪ್ರಯಾಣಕ್ಕೆ ಕನಿಷ್ಠ 45 ನಿಮಿಷ ಬೇಕಿದೆ. ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸಿ, ಜನಸ್ನೇಹಿ ಪ್ರಯಾಣ ವ್ಯವಸ್ಥೆ ರೂಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿ ಅನುದಾನದಲ್ಲಿ ನಮ್ಮ ಮೆಟ್ರೋ ಪರಿಚಯಿಸಲಾಗಿದೆ. ಆರಂಭದಲ್ಲಿ ಜನಸ್ನೇಹಿಯಾಗಿ ಬಂದ ಮೆಟ್ರೋ ಸೇವೆ ಈಗ ಜನರನ್ನೇ ಸುಲಿಗೆ ಮಾಡುವ ಹಂತಕ್ಕೆ ತಲುಪಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸರ್ಕಾರಕ್ಕೆ ಉದ್ದೇಶಪೂರ್ವಕವಾಗಿ ಕೆಟ್ಟ ಹೆಸರು ತರಲು ಮೂವರು ಸದಸ್ಯರನ್ನು ನೇಮಿಸಿಕೊಂಡು ಪ್ರಯಾಣ ದರ ಏರಿಕೆ ಮಾಡಲಾಗಿದೆ.
ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರ್ಕಾರ ಕೂಡ ಕೇಂದ್ರದಿಂದಾಗುತ್ತಿರುವ ಅನ್ಯಯದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ನಮ್ಮದೇನು ಪಾತ್ರವಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿ ಕೈತೊಳೆದುಕೊಂಡಿದ್ದಾರೆ. ದೈನಂದಿನ ಜೀವನ ವೆಚ್ಚ, ಬೆಲೆ ಏರಿಕೆಯ ಹೊರೆ ಜನರನ್ನು ಇನ್ನಿಲ್ಲದಂತೆ ಭಾದಿಸಿದೆ. ಕೂಲಿ ಕಾರ್ಮಿಕರ ವೇತನದಲ್ಲಿ ಯಾವುದೇ ಹೆಚ್ಚಳವಿಲ್ಲ. ಜನಸಾಮಾನ್ಯರ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನೇ ಮರೆತು ಅವೈಜ್ಞಾನಿಕವಾಗಿ ದರ ಪರಿಷ್ಕರಣೆ ಮಾಡಿರುವುದು ಜನರ ಜೇಬಿಗೆ ಮತ್ತಷ್ಟು ಹೊರೆಯಾಗಿದೆ. ಮೋದಿ ಅವರು ಕನವರಿಸುವ ಅಚ್ಚೇದಿನ್ ಇದೆನಾ? ಶೇ.47ರಷ್ಟು ದರ ಹೆಚ್ಚಳ ಎಂದು ಬಿಎಂಆರ್‌ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರದ ದುಪ್ಪಟ್ಟು ಶೇ.100ರಷ್ಟು ಅಧಿಕ ಮೊತ್ತ ನೀಡಬೇಕಾಗಿರುವುದು ಸುಲಿಗೆ ಅಲ್ಲದೇ ಮತ್ತೇನು?

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.