ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಇತ್ತೀಚೆಗಷ್ಟೇ ಅಂಧ ಮುಸ್ಲಿಂ ವೃದ್ಧರೋರ್ವರ ಗಡ್ಡಕ್ಕೆ ಬೆಂಕಿ ಹಚ್ಚಿ, ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಸಾಫ್ಟ್‌ವೇರ್ ಇಂಜಿನಿಯರ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಇನ್ನೂ ಹಸಿರಾಗಿರುವಾಗಲೇ, ಉತ್ತರ ಪ್ರದೇಶದಲ್ಲಿ ಇದೇ ರೀತಿ ಹಿರಿಯ ಮುಸ್ಲಿಂ ವೃದ್ಧರೋರ್ವರೊಡನೆ ಗುಂಪೊಂದು ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ.
ಉತ್ತರಪ್ರದೇಶದಲ್ಲಿ ಗುಂಪೊಂದು ಮುಸ್ಲಿಂ ಸಮದಾಯದ ವೃದ್ಧ ವ್ಯಕ್ತಿಗೆ ಮುಖಕ್ಕೆ ಶಾಯಿ ಎರಚಿ ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದು, ಬಳಿಕ ನೆಲದಲ್ಲಿ ಉಗುಳು ನೆಕ್ಕುವಂತೆ ಬಲವಂತ ಮಾಡಿದೆ.
The #SiddharthnagarPolice on Friday arrested four persons for blackening the face of a 76-year-old man and parading him in the village after forcing him to wear a garland of shoes.
After the video of the incident went viral on Thursday evening, police swung into action and… pic.twitter.com/rzQALOaMw9
— Hate Detector 🔍 (@HateDetectors) December 9, 2023
ಉತ್ತರ ಪ್ರದೇಶದ ಸಿದ್ಧಾರ್ಥ ನಗರದ ತಿಘ್ರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೊಹಬ್ಬತ್ ಅಲಿ ಎಂಬ ವೃದ್ಧನಿಗೆ ಗುಂಪೊಂದು ಚಿತ್ರಹಿಂಸೆ ನೀಡಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
‘ಮೊಹಬ್ಬತ್ ಅಲಿ ಗ್ರಾಮದಲ್ಲಿ ಮಹಿಳೆಯೊಂದಿಗೆ ಮಾತನಾಡಿದ್ದಾರೆ’ ಎಂದು ಆರೋಪಿಸಿ ಗ್ರಾಮದ ಕಿಡಿಗೇಡಿಗಳ ಗುಂಪು ಅಮಾನವೀಯವಾಗಿ ವರ್ತಿಸಿದ್ದಾರೆ. ವೃದ್ಧನ ಮುಖಕ್ಕೆ ಶಾಹಿ ಎರಚಿ ಕೈಯ್ಯನ್ನು ಹಗ್ಗದಿಂದ ಕಟ್ಟಿ ಹಾಕಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಕೊರಳಿಗೆ ಚಪ್ಪಲಿಯ ಹಾರವನ್ನು ಹಾಕಿ, ಬಳಿಕ ಉಗುಳು ನೆಕ್ಕುವಂತೆ ಬಲವಂತ ಮಾಡಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಘಟನೆ ಬಳಿಕ ಪೊಲೀಸ್ ಠಾಣೆಗೆ ತೆರಳಿದ್ದ ವೃದ್ಧ, ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರು ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿ ಅಮನ್ ಪಾಂಡೆ, ಅಖಿಲೇಶ್ ಸಾಹ್ನಿ ಮತ್ತು ಘನಶ್ಯಾಮ್ ತಿವಾರಿ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಉದ್ದೇಶಪೂರ್ವಕ ಅವಮಾನ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಸೇರಿ ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಗೋಲ್ಹೌರಾ ಪೊಲೀಸ್ ಠಾಣೆ ಎಸ್‌ಎಚ್‌ಒ ಅಜಯನಾಥ್ ಕನೌಜಿಯಾ ತಿಳಿಸಿದ್ದಾರೆ.
ಘಟನೆಯ ಆಘಾತಕಾರಿ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವ್ಯಾಪಕವಾಗಿ ಅಕ್ರೋಶ ವ್ಯಕ್ತವಾಗಿದೆ. ಅಮಾನವೀಯವಾಗಿ ವರ್ತಿಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.