ಕಳೆದ ಎರಡು ದಿನಗಳ ಹಿಂದೆ ಹೃದಯಸ್ತಂಭನಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಾರಾಷ್ಟ್ರದ ಮೊದಲ ಶಿವಸೇನಾ ಸಿಎಂ, ಮಾಜಿ ಲೋಕಸಭಾ ಸ್ಪೀಕರ್ ಮನೋಹರ್ ಜೋಶಿ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮನೋಹರ್ ಜೋಶಿ ಅವರಿಗೆ 86 ವರ್ಷ ವಯಸ್ಸಾಗಿತ್ತು. ಎರಡು ದಿನಗಳ ಹಿಂದಷ್ಟೇ ಅವರಿಗೆ ಹೃದಯಸ್ತಂಭನ ಆಗಿದ್ದರಿಂದ ಅವರನ್ನು ನಗರದ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ನಿಧನರಾದರು. ಮುಂಬೈನ ಶಿವಾಜಿ ಪಾರ್ಕ್ ರುದ್ರಭೂಮಿಯಲ್ಲಿ ಶುಕ್ರವಾರವೇ ಅವರ ಅಂತ್ಯಸಂಸ್ಕಾರ ನೆರವೇರಲಿದೆ.
1995ರಿಂದ 1999ರವರೆಗೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಜೋಶಿ. ಮಹಾರಾಷ್ಟ್ರದ ಸಿಎಂ ಆಗಿ ಕಾರ್ಯ ನಿರ್ವಹಿಸಿದ ಶಿವಸೇನೆಯ ಮೊದಲ ಮುಖಂಡ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಜೊತೆಗೆ ಆ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಸಿಎಂ ಸಹ ಹೌದು. ಆ ಬಳಿಕ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮುಂಬೈ ಸೆಂಟ್ರಲ್‌ನಿಂದ ಶಿವಸೇನೆಯಿಂದ ಗೆದ್ದು ಸಂಸದರಾಗಿದ್ದರು. 2002ರಿಂದ 2004ರವರೆಗೆ ಲೋಕಸಭಾ ಸ್ಪೀಕರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.
ಇದನ್ನು ಓದಿದ್ದೀರಾ? ದಾಳಿಗೆ ಹೆದರಿ ದೇಣಿಗೆ : ಬಿಜೆಪಿ ವಿರುದ್ಧದ ತನಿಖೆಗೆ ಆಗ್ರಹಿಸಿದ ಕಾಂಗ್ರೆಸ್
1937ರ ಡಿಸೆಂಬರ್ 2ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ನಾಂದ್ವಿಯಲ್ಲಿ ಜನಿಸಿದ್ದ ಜೋಶಿ ಅವರು ಮುಂಬೈನಲ್ಲಿ ಶಿಕ್ಷಣ ಪಡೆದಿದ್ದರು. ಅವರ ಪತ್ನಿ ಅನಘಾ ಮನೋಹರ್ 2020ರಲ್ಲಿ ಮೃತಪಟ್ಟಿದ್ದರು. ಅವರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ.
