ಪಶ್ಚಿಮ ಬಂಗಾಳದಲ್ಲಿ ಬೃಹತ್ ಚಿಮಿಣಿಯ ಒಂದು ಪಾರ್ಶ್ವದ ಇಟ್ಟಿಗೆಗಳು ಕುಸಿದು ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ಪ್ರದೇಶದ ಧಲ್ತಿತಾ ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.
ಬುಧವಾರ ಸಂಜೆ ಬಸಿರ್ಹತ್ನ ಧಾಲ್ತಿತಾ ಗ್ರಾಮದಲ್ಲಿ ಒಂದು ವರ್ಷದಿಂದ ಮುಚ್ಚಿದ್ದ ಇಟ್ಟಿಗೆ ಗೂಡು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ಇಬ್ಬರು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾರೆ. ಎರಡು ಶವಗಳು ಅವಶೇಷಗಳ ಅಡಿಯಲ್ಲಿ ಕಂಡುಬಂದಿವೆ. ಅವರೆಲ್ಲರೂ ಇಟ್ಟಿಗೆ ಗೂಡಿನ ಕಾರ್ಮಿಕರಾಗಿದ್ದರು” ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಧಾರ್ಮಿಕ, ಸಾರ್ವಜನಿಕ ಸ್ಥಳದಲ್ಲಿ ಧ್ವನಿವರ್ಧಕ ನಿಷೇಧಿಸಿದ ನೂತನ ಸಿಎಂ!
ಮೃತಪಟ್ಟವರಲ್ಲಿ ಇಬ್ಬರು ಉತ್ತರ ಪ್ರದೇಶದ ಫೈಜಾಬಾದ್ ಮೂಲದ ಜೇತುರಾಮ್ ಮತ್ತು ರಾಕೇಶ್ ಕುಮಾರ್ ಎಂದು ಗುರುತಿಸಲಾಗಿದ್ದರೆ, ಮತ್ತೊಬ್ಬನನ್ನು ಸ್ಥಳೀಯ ಹಫೀಜುಲ್ ಮೊಂಡಲ್ ಎಂದು ಗುರುತಿಸಲಾಗಿದೆ. ನಾಲ್ಕನೇ ವ್ಯಕ್ತಿಯನ್ನು ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆಯ ಸಂದರ್ಭ 60 ಮಂದಿ ಕಾರ್ಮಿಕರು ಇಟ್ಟಿಗೆ ಜೋಡಣೆಯ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚಿಮಿಣಿ ಕುಸಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪಶ್ಚಿಮ ಬಂಗಾಳ ಪೊಲೀಸರು ತಿಳಿಸಿದ್ದಾರೆ.