ದೇಶದ ಅತಿ ಉದ್ದದ ಸಮುದ್ರ ಸೇತುವೆಯಾದ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್(MTHL)ಜನವರಿ 12 ರಂದು ಉದ್ಘಾಟನೆಗೊಳ್ಳಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಅವರು, ಜ.12ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹವಾ ಶೇವಾ ಪ್ರದೇಶದ ನಡುವಿನ 21.8 ಕಿಲೋಮೀಟರ್ ಉದ್ದದ ಸೇತುವೆಯು ಪ್ರಸ್ತುತ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದ್ದಾರೆ.
“ಈ ಸೇತುವೆಯಿಂದ ಆರ್ಥಿಕತೆ ಅಭಿವೃದ್ಧಿಯಾಗಲಿದೆ. ರಾಜ್ಯದ ಎರಡು ದೊಡ್ಡ ನಗರಗಳನ್ನು ಸಂಪರ್ಕಿಸುವ ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಗೆ ಮತ್ತಷ್ಟು ಸಂಪರ್ಕ ಕಲ್ಪಿಸುತ್ತದೆ. ಆರು ಲೇನ್ ಮಾರ್ಗ ಹೊಂದಿದ್ದು, ಸಮುದ್ರದ ಮೇಲೆ 16.50 ಕಿಲೋಮೀಟರ್ ಮತ್ತು ಭೂಮಿಯಲ್ಲಿ 5.50 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಈ ಸೇತುವೆಗೆ ‘ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತು’ ಎಂದು ಹೆಸರನ್ನು ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸೇತುವೆಯ ವಿಶೇಷತೆ ಏನು?
ಈ ಯೋಜನೆಯು ಸರಿಸುಮಾರು 22 ಕಿ.ಮೀ. ಉದ್ದದ 6 ಲೇನ್ (3+3-ಲೇನ್, 2 ತುರ್ತು ಲೇನ್) ಸೇತುವೆಯನ್ನು ಮುಂಬೈ ನಗರದ ಶಿವಡಿ ಮತ್ತು ಮುಖ್ಯ ಭೂಭಾಗದ ನ್ಹಾವಾವನ್ನು ಸಂಪರ್ಕಿಸುತ್ತದೆ.
1962ರಲ್ಲೇ ಎರಡು ನಗರಗಳ ಮಧ್ಯೆ ಸಂಚಾರ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಜಾರಿ ಸಂಬಂಧ ಹಲವು ಅಧ್ಯಯನಗಳು ನಡೆದಿದ್ದವು.
Mumbai Trans-Harbour Link – Planned in the 1960s, Modi came, laid the foundation stone, completed this Project, India’s largest sea bridge in record time! #MTHL pic.twitter.com/pXkjrfKCam
— Mihir Jha (@MihirkJha) November 25, 2023
2008ರಲ್ಲಿ ಮಹಾರಾಷ್ಟ್ರ ಸರ್ಕಾರ ಈ ಯೋಜನೆ ಜಾರಿಗೆ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಈ ಯೋಜನೆಯಲ್ಲಿ ರಾಜಕೀಯ ವಿವಾದ ಉಂಟಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಕೊನೆಗೆ ಎಲ್ಲಾ ಇಲಾಖೆಗಳ ಅನುಮತಿ ಪಡೆದ ಬಳಿಕ 2016ರ ಡಿಸೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಭೂಮಿ ಸ್ವಾಧೀನ ಪಡಿಸಿದ ಬಳಿಕ 2018ರ ಏಪ್ರಿಲ್ 24 ರಂದು ಕಾಮಗಾರಿ ಆರಂಭವಾಗಿತ್ತು.
ನಿಗದಿ ಪ್ರಕಾರ ಸೆಪ್ಟೆಂಬರ್ 22, 2022ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ ಕೋವಿಡ್ ಲಾಕ್‌ಡೌನ್ ನಂತರ ಕಾರ್ಮಿಕರ ಸಮಸ್ಯೆಯಿಂದಾಗಿ ಯೋಜನೆ ಮುಂದಕ್ಕೆ ಹೋಗಿತ್ತು. ಈಗ ಜನವರಿಯಲ್ಲಿ ಉದ್ಘಾಟನೆಯಾಗುತ್ತಿದೆ.
ಆರಂಭದಲ್ಲಿ ಈ ಯೋಜನೆ ನಿರ್ಮಾಣಕ್ಕೆ 14,712.70 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಈ ವೆಚ್ಚ 16,904.43 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಆರ್‌ಟಿಐ ಅಡಿ ಕೇಳಿದ್ದ ಪ್ರಶ್ನೆಯೊಂದಕ್ಕೆ ಅಧಿಕಾರಿಗಳಿಂದ ಉತ್ತರ ದೊರಕಿತ್ತು.