ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

Date:


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)
ಈ ಅತ್ತಿ-ಸೊಸಿ ಜಗಳ ಅಂಬೋದು ರಾಷ್ಟೀಯ ಸಮಸ್ಯೆ ಆಗೊ ಹಂಗ ಕಾಣಲತದ. ಎಲ್ಲರ ಮನ್ಯಾಗೂ ಒಂದೊಂದು ಕಥಿ. ಕಾರಣ ಸಾವಿರ ಇರಬಹುದು. ಆದ್ರ ಇದು ಮುಖ್ಯವಾಗಿ ಇಬ್ಬರು ಹೆಂಗಸರ ಮಧ್ಯ ಯಾಕೆ ಶುರುವಾಗತಿದೆ? ಉತ್ಸಾಹದಿಂದ ಮಗನ ಮದುವೆ ಮಾಡಿ ಸೊಸಿಗಿ ಮನಿ ತುಂಬಿಸಿಕೊಂಡ ಕೆಲವೇ ದಿನಗಳಲ್ಲಿ ಯಾಕ ಸಮಸ್ಯೆ ಶುರು ಆಗಲತವ…?

ನಮ್ಮ ಕಡಿ ಚಳಿಗಾಲ ಶುರುವಾಗಿ ಮೂರು ತಿಂಗಳು ಆದಮ್ಯಾಗ ಈಗ ಸ್ವಲ್ಪ ಚಳಿ ಅನಸಲತಾವ ನೋಡ್ರೀ. ನಮ್ಮ ಕಲಬುರ್ಗಿ ಮಂದಿ ಎಷ್ಟ ಬೆಕಾದ್ರೂ ಧಗಿ ತಾಳಿಕೊತಿವಿ, ಆದ್ರ ಸ್ವಲ್ಪ ಚಳಿ ಹೆಚ್ಚಾದ್ರ ಆಯ್ತು ನೋಡ್ರೀ, ಮೈಮ್ಯಾಲ್ ಒಂದ್ ಮಣ ಬಟ್ಟಿ ಹೊದ್ದಕೊಂಡು, ಒಂದಿಪ್ಪತ್ತ ಸರಿ ಚಾ ಕುಡಕೊತ ನಡಗಿಕೊಂಡು ಕೂತಬಿಡತಿವಿರ್ರಿ. ಯಾವಾಗ್ಲೂ ಈ ಬಿಸಿಲಿಗಿ ಬೈಕೋಂತ ಇರೋ ನಾವು, ಈಗ ಒಂದೆರಡು ದಿನ ಮೋಡ ಮುಸುಕಿ ಚಳಿ ಹೆಚ್ಚಾಗಿದ್ದೇ ತಡ ಮ್ಯಾಲ್ ಮಾರಿ ಮಾಡಿ ಬಿಸಿಲಿಗಿ ಹುಡಕಲಕ್ಕ ಹತ್ತಿವಿ.

ಮುಂಜಾನಿ ನಾಷ್ಟಾ ಮಾಡಿದ್ದೇ ತಡ ಯಾಕೊ ಚಳಿ-ಚಳಿ ಅನಿಸಿ ಮನಿ ಹೊರಗ ಬಿಸಿಲಾಗ ಬಂದು ನಿಂತಿದ್ದೆ. ಬಾಜು ಮನಿ ಶೈಲೂನೂ ಬಿಸಿಲು ಕಾಸಕೊಂತ ನಿಂತಿದ್ದಳು. ನನ್ನ ನೋಡಿ, “ನಾಷ್ಟಾ ಆಯ್ತೆನ್ರೀ ಅಕ್ಕೋರೇ?” ಅನಕೊಂತ ಬಂದಳು.

“ಹ್ಞೂಂ… ಅಯ್ತವ್ವ. ನಿಂದಾಯ್ತ?” ಅಂತ ಕೇಳ್ದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಹ್ಞೂಂ ರೀ ಅಕ್ಕೋರೆ… ತಂಗಳ ರೊಟ್ಟಿ ಉಳಿದಿವು. ಅವಕ್ಕೇ ನೀರಾಗ ಗಲಗಲ ತೊಳದು, ನೀರು ಜಾನಿ ಉದರುದುರ ಮಾಡಿ, ಹಸಿಮೆಣಸಿನಕಾಯಿ-ಉಳ್ಳಾಗಡ್ಡಿ ಹಾಕಿ, ಒಗ್ಗರಣಿ ಹಾಕಿ ಉಪ್ಪಿಟ್ಟು ಮಾಡ್ದೆ. ಮದ್ಯಾನ್ಹ ಊಟಕ್ಕ ಮತ್ತೆನರ ಮಾಡಬೇಕು,” ಅಂದಳು.

“ನಿಮ್ಮತ್ತಿ ಕಾಣಲಹೋಗ್ಯಾರೆ ಶೈಲಾ! ಊರಿಗಿ ಹೋಗ್ಯಾರೇನು?” ಅಂತ ಕೇಳ್ದೆ.

ಶೈಲೂ ಒಮ್ಮೆಗೆ ಸುಮ್ಮನಾದಳು. ನನಗೂ ಕೆದಕಿ ಕೇಳೋ ಅಭ್ಯಾಸ ಇಲ್ಲ.

ಸ್ವಲ್ಪ ನಿಂತು ಅಕಿನೇ ಮೆಲ್ಲಗ, “ಅಕ್ಕೋರೆ, ನಮ್ಮ ಅತ್ತಿ ನನ್ನ ಜೊತಿ ಕಿರಕಿರಿ ಮಾಡಿ ಮಗಳ ಮನಿಗಿ ಹೊಗ್ಯಾಳ್ರೀ…” ಅಂದಳು.

ನಂಗಂತೂ ಈಗೀಗ ಈ ಅತ್ತಿ-ಸೊಸಿ ಜಗಳದ ಬಗ್ಗೆ ಯಾರರೆ ಮಾತಡಲತರ ಒಂಥರ ಜಿಗುಪ್ಸೆ ಬರಲತದರಿ. ಅತ್ತಿ ಹೇಳದು ಖರೆನೆ ಅನಸ್ತದ; ಸೊಸಿ ಹೇಳದು ಖರೆನೆ ಅನಸ್ತದ. ಯಾರಿಗೂ ಬುದ್ದಿಮಾತು ಹೆಳಂಗೇ ಇಲ್ಲ. ಇಬ್ಬರಿಗೂ ತಾವೇ ಖರೆ ಅನಿಸಿದ್ದ ಮ್ಯಾಗ್ ತಪ್ಪು ಯಾರದ ಅನಬೇಕ್ರೀ? ಅದಕ್ಕ ಅ ಜಗಳಗ ವಿಷಯ ಕೇಳೊದೇ ಬ್ಯಾಡ್ ಅಂತ ಸುಮ್ನ ನಿಂತಿದ್ದ. ಹೇಳೋರು ಬಿಡಬೇಕಲ್ಲ!

“ಅಕ್ಕೋರೆ… ನಾ ಏನ್ ಮಾಡಿದ್ರೂ ಹೆಸರಿಡತಾರ್ರೀ… ನಾ ಮಾಡಿದ್ದ ಅಡುಗಿಗಿ ದಿನಾ ಹೆಸರಿಟ್ಟ ಉಣತಾರ. ರೊಟ್ಟಿ ಚಂದ ಆಗಿಲ್ಲ, ಪಲ್ಯ ಚಂದ ಆಗಿಲ್ಲ… ಹಿಂಗೇ ಏನಾರ ಒಂದು. ಎಷ್ಟಂತ ಅನಸಕೋಬೇಕರಿ? ‘ನನ್ನ ಅಡಗಿ ಪಸಂದ ಬರಲ್ಲ ಅಂದ್ರ ಬ್ಯಾರೆ ಮಾಡಿಕೊಂಡು ಉಣ್ರೀ’ ಅಂದ‌. ಅಟಕ್ಕೆ ಅಳಕೊತ ಕರಕೋತ ಮಗಳ ಮನಿಗಿ ಹೋಗ್ಯಾರ. ಹೋಗ್ಲೀ… ಎಷ್ಟ ದಿನ ಇರತಾರಂತ ನಾನು ನೋಡತಿನಿ,” ಅಂದಳು ಮುಖ ದಪ್ಪ ಮಾಡಕೊಂಡು.

ಇದು ಶೈಲು ಒಬ್ಬಳದೆ ಕಥಿ ಆದ್ರ ಏನಾರ ಹೆಳಬಹುದು. ಆದ್ರ, ಈ ಅತ್ತಿ-ಸೊಸಿ ಜಗಳ ಅಂಬೋದು ರಾಷ್ಟೀಯ ಸಮಸ್ಯೆ ಆಗೊ ಹಂಗ ಕಾಣಲತದ. ಎಲ್ಲರ ಮನ್ಯಾಗೂ ಒಂದೊಂದು ಕಥಿ. ಮಗನ ಮದುವಿ ಮಾಡೊದೇ ತಡ ಸಮಸ್ಯೆ ಶುರು. ಯಾಕೇ? ಕಾರಣ ಸಾವಿರ ಇರಬಹುದು. ಆದ್ರ ಇದು ಮುಖ್ಯವಾಗಿ ಇಬ್ಬರು ಹೆಂಗಸರ ಮಧ್ಯ ಯಾಕೆ ಶುರುವಾಗತಿದೆ. ಉತ್ಸಾಹದಿಂದ ಮಗನ ಮದುವೆ ಮಾಡಿ ಸೊಸಿಗಿ ಮನಿ ತುಂಬಿಸಿಕೊಂಡ ಕೆಲವೇ ದಿನಗಳಲ್ಲಿ ಯಾಕ ಸಮಸ್ಯೆ ಶುರು ಆಗಲತವ… ಹೀಗೆ ನನ್ನ ಆಲೋಚನೆಗಳು ಎತ್ತೆತ್ತೋ ಸಾಗುತಿದ್ದಾಗ, ಶೈಲಾನ ದ್ವನಿ ಎಚ್ಚರಿಸ್ತು.

“ಅಕ್ಕೋರೇ… ವಯಸ್ಸಾದವ್ರೂ ಏನ್ ತಪ್ಪು ಮಾಡಿದ್ರೂ ತಪ್ಪು ನಮ್ಮ ಸಣ್ಣವರದೇ ಎದ್ದು ಕಾಣತದ ಯಾಕ್ರೀ? ಅವರಿಗಿ ಕೈಲಾಗಲ್ಲಂದ್ರೂ ಸುಮ್ನ ಕೂಡಬೇಕು ಅನ್ನಲ್ಲ. ನಾವು ಮಾಡಿ ಹಾಕಿದ್ದು ಸುಮ್ನ ಕುಂತು ತಿನ್ನಬೇಕು ಅನ್ನಲ್ಲ. ಕೆಲಸ ನಮಗಾದಾಗ ನಾವು ಮಾಡತಿವಿ, ಅವರು ಹೇಳಿದಂಗೆ ಮಾಡಬೇಕಂದ್ರ ಹ್ಯಾಂಗ್ರೀ? ಮುಂಜಾನಿ ಎನಾರ ನಾಷ್ಟಾ ಮಾಡಿದ್ರ ಮದ್ಯಾನ್ಹ ಬರಿ ಅನ್ನ ಉಣ್ರೀ ಅಂದ್ರ ಉಣ್ಣಲ್ಲ, ರೊಟ್ಟಿನೇ ಬೇಕು ಅಂತಾರ, ಅದೂ ಅವರು ಊಟ ಮಾಡಪರಿನೆ ಮಾಡಕೋಡಬೇಕಂತ. ಒಂದೊಂದು ಸರಿ ನನಗೂ ಮಾಡ್ಲಿಕ್ ಆಗಲ್ಲ, ಅದೇ ದೊಡ್ದು ಮಾಡಿ ಅವರ ಮಕ್ಕಳಿಗಿ ಪೋನ್ ಮಾಡಿ ಹೇಳತಾರ. ನಮ್ಮ ಅತ್ಗಿ ನಮ್ಮ ಅವ್ವಗ ಉಳ್ಳಕ ಹಾಕಲಹೊಗ್ಯಾಳ ಅಂತ ಅವರು ಪುಕಾರ ಮಾಡ್ರಾರ್ರೀ… ಅವರ ಅತ್ತಿಗಿ ಅವರು ಏಟ ಮಾಡಿ ಹಾಕ್ತಾರಂತ ನನಗ ಗೊತ್ತಿಲ್ಲೇನ್!” ಅಂತ ಮೂಗು ಮುರಿದಳು.

ಅತ್ತಿಅತ್ತೆ - ಸೊಸೆ ಕುಟುಂಬ ಕಲಬುರಗಿ ಕನ್ನಡ ಭಾಷೆ ಜ್ಯೋತಿ ಡಿ ಬೊಮ್ಮಾ
ಸಾಂದರ್ಭಿಕ ಚಿತ್ರ

ವಯಸ್ಸಾದ ಮ್ಯಾಲ್ ಹಲ್ಲು ಮೆತ್ತಗಾಗಿ ಬಿಸಿ ಅಡುಗಿ ಮಾತ್ರ ಉಣ್ಣಲಿಕ್ಕಿ ಆಗತದ, ಆದ್ರ ಟೈಮಿಗಿ ಸರಿಯಾಗಿ ಬಿಸಿಬಿಸಿ ಅಡುಗಿ ಸೊಸಿನೆ ಮಾಡಿಹಾಕಬೇಕು ಅಂತ ಹಿರಿಯರು ಬಯಸುವದು ಎಷ್ಟು ಸರಿ ಎಂಬುದು ನನಗೆ ನಿರ್ಧರಿಸಲಿಕ್ಕ ಆಗತಿಲ್ಲ. ಈಗಿನ ಜನರೇಶನ್‌ನವರೂ ಹೊರಗಿನಿಂದ ಆರ್ಡರ್ ಮಾಡಿ ತರಿಸಿಕೊಂಡು ತಿನ್ನೊಂತವರು. ಅಡುಗಿ ಅನ್ನೋದು ಅವರಿಗಿ ಇಷ್ಟದ ವಿಷಯ ಅಲ್ಲವೇ ಅಲ್ಲ. ತವರಮನ್ಯಾಗ್ ಅತೀ ಲಾಡ್‌ದಿಂದ ಬೆಳೆದ ಹುಡುಗಿಯರಿಗಿ ಅಡುಗಿ ಎಲ್ಲಿ ಬರತದ. ಅಡುಗಿ ಒಂದೇ ಅಲ್ಲ, ಯಾವ ಕೆಲಸನೂ ಬರಲ್ಲ. ಗಂಡನ ಮನಿ ಜವಾಬ್ದಾರಿ ಬರಲಿಕ್ಕಿ ವರುಷಗಳು ಬೇಕು. ಆದ್ರ ನಮಗೆಲ್ಲಿ ತಾಳ್ಮೆ ಇರತದ! ಅವಳು ಬರೊದೇ ತಡ ನಮ್ಮ ಬೇಕು-ಬೇಡ ನೊಡ್ಕೋಬೇಕು ಅಂತ ಬಯಸ್ತಿವಿ. ಸಿಗಲಿಲ್ಲ ಅಂದ್ರೆ ಸಿಟ್ಟು, ಜಗಳ, ಮಾತಿಗಿ ಮಾತು…

“ಯಾಕ್ರೀ ಅಕ್ಕೋರೆ, ಏನು ಮಾತೆ ಆಡಲ್ಲ ಹೋಗಿರಲ್ಲ. ನೀವೆ ನೋಡಿರಲ್ಲ, ನಾ ಎಷ್ಟ ಕೆಲಸ ಮಾಡ್ತಿನಂತ. ನಮ್ಮಪ್ಪನ ಮನ್ಯಾಗ್ ನಾ ಒಂದ್ ಕಡ್ಡಿ ಅಕಡಿಂದ್ ಈಕಡಿ ಎತ್ತಿಟ್ಟಾಕಿ ಇಲ್ಲ. ಇಲ್ಲಿ ಕತ್ತಿ ಹಂಗ ದುಡಿಲತಿನಿ. ಇಷ್ಟಾದರೂ ಇನ್ನೂ ಅಂತಾರಂದ್ರ… ನಮ್ಮಪ್ಪ-ಅವ್ವ ನನಗೇನು ಕಲಿಸಿಲ್ಲ ಅಂತಾರ್ರೀ; ನನಗೇನಾರ ಅನ್ಲಿ, ನಮ್ಮಪ್ಪಾವ್ವಗ ಏನಾರ ಅಂದ್ರ ನಾ ಸುಮ್ನ ಇರಲ್ಲ ನೋಡ್ರೀ ಅಕ್ಕೋರೇ…” ಅಂದಳು.

“ನೀನೆ ಅಲ್ಲ, ಯಾವ ಹೆಣ್ಣಮಕ್ಕಳಿಗೂ ಅವರ ತವರಮನಿಯವರಿಗಿ ಏನಾರ ಅಂದ್ರ ಸಿಟ್ಟು ಬಂದೇ ಬರತದ. ಅವರಿಗಿ ಅನ್ನೋದೆ ಮೊದಲ ತಪ್ಪು, ಆದ್ರೂ ಇದೊಂದು ರೂಢಿ ಆಗ್ಯಾದ – ಸೊಸಿ ಜೋಡಿ ಅವ್ರ  ತವರಮನಿಯವರಿಗೂ ಆಡಕೊಳ್ಳೋದು. ಹಿಂಗೇ ನೋಡು ಜಗಳ ಶುರು ಆಗೋದು. ಮಾತುಗಳು ದೊಡ್ಡವಾಗತಾವ, ಮನಸ್ಸುಗಳು ದೂರ ಆಗತಾವ…”

“…ನೋಡು ಶೈಲೂ, ಇಲ್ಲಿ ಯಾರದು ತಪ್ಪು-ಯಾರದು ಸರಿ ಅಂತ ಪಂಚಾಯಿತಿ ಮಾಡಕೊಂಡು ಕೂಡದ್ರಾಗ ಅರ್ಥ ಇಲ್ಲ. ಜವಾಬ್ದರಿ ಅನ್ನೊದು ಬಹಳ ದೊಡ್ದು. ಮಕ್ಕಳು ಹುಟ್ಟಿಸಿವಿ, ಆಸ್ತಿ ಕೊಟ್ಟಿವಿ, ಅವ್ರೂ ನಮ್ಮಗ ಆಸರಿ ಆಗಿರಬೇಕಂತ ಹಿರೇರು ಬಯಸೋದು ಸಹಜ. ಯಾವ ಜವಾಬ್ದಾರಿ ಇಲ್ಲದೆ ಸ್ವಂಚಂದವಾಗಿರಬೇಕು ಅನ್ನೋದು ಚಿಕ್ಕವರ ಆಸೆ. ಇದು ಸಹಜ. ಅದಕ್ಕ ಇಲ್ಲಿ ಸರಿ-ತಪ್ಪಿನ ಪ್ರಶ್ನೆ ಬರಬಾರದು. ಒಂದೇ ಮನೆಯಲ್ಲಿದ್ದು ಈ ರೀತಿ ಸಮಸ್ಯೆ ಬರತಿದ್ದರೆ ಯಾರದವರು ಬೇರೆ-ಬೇರೆ ಆಗಿರದೇ ಸೂಕ್ತ. ಯಾರು ಏನೇ ಅನ್ನಲಿ, ಹೊಂದಾಣಿಕಿ ನಮ್ಮಲ್ಲಿ ಇಲ್ಲ ಅಂದಮೇಲೆ ಲೋಕದ ಚಿಂತಿ ಮಾಡಬಾರದು…”

“…ತಂದೆ-ತಾಯಿ ಹತ್ರ ದುಡ್ಡಿದ್ರೆ ಅವರಿಗಿ ನೀವು ದುಡ್ಡು ಕೊಡೊ ಅವಶ್ಯಕತೆ ಇಲ್ಲ. ಒಂದು ವೇಳೆ ದುಡ್ಡು ಇಲ್ಲದಿದ್ದಾಗ ಮಕ್ಕಳ ಕರ್ತವ್ಯ ಆಗತದ ಅವರಿಗಿ ನೋಡುಕೊಳ್ಳೊದು. ಹತ್ರ ಇಟ್ಟುಕೊಂಡು ಮಾಡ್ಲಿಕ್ಕ ಆಗದಿದ್ರೂ ಅವರಿಗಿ ಸೌಲಭ್ಯ ಒದಗಿಸಿ ಬೇರೆ ಇರೋ ವ್ಯವಸ್ಥೆ ಮಾಡಬೇಕು. ಇದು ಈಗಿನ ಕಾಲದ ಅನಿವಾರ್ಯ ಅದಾ. ವಯಸ್ಸಾದವರಿಗಿ ವಯಸ್ಸಿನ ಸಂಗಡ ಸ್ವಾಭಿಮಾನ, ಹಠ ಹೆಚ್ಚಾಗತದ. ಅವರ ಹಠ ಸಣ್ಣವರಿಗಿ ಸಿಟ್ಟು ತರಿಸ್ತದ. ಇದು ಹಿಂಗೇ ನಡಿತಾ ಇರತದ ನೋಡು. ಬೇರೆ ಇರೋದು ನಿನಗ-ನಿಮ್ಮತ್ತಿಗಿ ಇಷ್ಟ ಆದ್ರ ಇರ್ರಿ. ನೀವು ಮಂದಿ ಚಿಂತಿ ಮಾಡಬೇಕಾಗಿಲ್ಲ. ಎಲ್ಲರ ಮನಿ ದೋಸೆಗೂ ತೂತೆ ಅವ,” ಎಂದು ಮಾತು ಮುಗಿಸಿದೆ.

ಶೈಲೂಗೆ ನಾನು ಅವಳ ಪರ ಮಾತಾಡಿಲ್ಲ ಅಂತ ಅಸಮಾಧಾನ ಆಗಿರಬೇಕು. ಮತ್ತ ತನ್ನ ಸಮರ್ಥನೆ ಮಾಡಿಕೊಳ್ಳೋ ಮಾತು ಆಡಲತಿದ್ದಳು. ನಾನು ಅಡುಗೆ ನೆವ ಮಾಡಕೊಂಡು ಒಳಗ ಬಂದೆ.

ಇಂತಹ ವಿಷಯದಾಗ ಮತ್ತೊಬ್ಬರಿಗಿ ಬುದ್ದಿ ಹೇಳೋದಾಗಲಿ, ಸಲಹೆ ಕೊಡೋದಾಗಲಿ, ಇವರದು ತಪ್ಪು-ಇವರದು ಸರಿ ಅಂತ ವಾದ ಮಾಡೋದಾಗಲಿ ಪೂರ್ಣ ಬಿಡಬೇಕಂದ್ರೂ ಈ ಹಾಳು ಬಾಯಿ ಸುಮ್ನ ಕೂಡಲ್ಲ ನೋಡ್ರೀ. ಇನ್ನ ನಾ ಅತ್ತಿ ಆದಾಗ ಏನೇನ ಕಥಿ ಅದಾನೋ ಅಂತ ಚಿಂತಿ ಮಾಡಕೊಂತ ಕುಂತ!

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಪೋಸ್ಟ್ ಹಂಚಿಕೊಳ್ಳಿ:

ಜ್ಯೋತಿ ಡಿ ಬೊಮ್ಮಾ
ಜ್ಯೋತಿ ಡಿ ಬೊಮ್ಮಾ
ಚಿಂಚೋಳಿ ತಾಲೂಕಿನವರು. ಸದ್ಯ ಕಲಬುರಗಿ ನಿವಾಸಿ. ಗೃಹಿಣಿ. ಓದು, ಬರಹ, ಪ್ರವಾಸವೆಂದರೆ ಪ್ರೀತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ಈ ಪದ್ದತಿಗಳು ಹೆಂಗಸರಿಗಿ ಜೀವಾ ತಿಂತಾವ ನೋಡ್ರೀ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ...