ಯೂಟ್ಯೂಬ್‌ನಲ್ಲಿ ಎರಡು ಮಿಲಿಯನ್‌ಗೂ ಅಧಿಕ ಸಬ್‌ಸ್ಕ್ರೈಬರ್ಸ್ ಹೊಂದಿರುವ ಕನ್ನಡದ ವ್ಲಾಗರ್ ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್, ಸದ್ಯ ಚೀನಾ ಪ್ರವಾಸದ ವೇಳೆ ಭಾರತದ ಬಗ್ಗೆ ನೀಡಿರುವ ಸಲಹೆಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಪರ-ವಿರೋಧ ಚರ್ಚೆಗೂ ಗ್ರಾಸವಾಗಿದೆ. ವಿಡಿಯೋ ವೈರಲ್ ಆಗಿದೆ.
ಡಾಕ್ಟರ್ ಬ್ರೋ ಎಂದೇ ಕರ್ನಾಟಕದಲ್ಲಿ ಗುರುತಿಸಿಕೊಂಡಿರುವ 23 ವರ್ಷದ ಗಗನ್ ಶ್ರೀನಿವಾಸ್, ಹತ್ತಾರು ದೇಶ ಸುತ್ತಿ, ಪ್ರಪಂಚ ಪರ್ಯಟನೆ ಮಾಡುತ್ತಾ, ಆ ದೇಶಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಸರಣಿ ವಿಡಿಯೋ ಹಂಚಿಕೊಳ್ಳುತ್ತಾ, ವಿದೇಶದ ಆಚರಣೆ, ಆಹಾರ ಪದ್ಧತಿ, ಅಲ್ಲಿನ ಸಣ್ಣ ಸಣ್ಣ ಕೌತುಕಗಳನ್ನೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಸದ್ಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿರುವುದರಿಂದ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‌ಗಾಗಿ ಕೆಲಸ ಮಾಡುತ್ತಿದ್ದಾರೆ.
ಇಷ್ಟೇ ವಿಷಯ!!
ಧರ್ಮಾಂಧತೆಯಿಂದ ಯಾವ ಬೆಳವಣಿಗೆ ಆಗಲ್ಲ!! ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳದೆ ದೇಶದ ಪ್ರಗತಿ ಇಲ್ಲ!! pic.twitter.com/UX0uJanHWb
— ಯಶವಂತ | Yashwanth (@Yashu_ts) October 15, 2023
ಈ ನಡುವೆ ಇತ್ತೀಚೆಗೆ ಚೀನಾ ದೇಶದ ಪ್ರವಾಸಕ್ಕೆ ತೆರಳಿದ್ದ ಡಾಕ್ಟರ್ ಬ್ರೋ, ತಮಗಾದ ಅನುಭವಗಳನ್ನು ವಿವರಿಸುತ್ತಿದ್ದರು. ಅಲ್ಲದೇ, ನಿನ್ನೆ ಅವರು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದ ವಿಡಿಯೋದ ಕೊನೆಯಲ್ಲಿ ‘ಜಾತಿ ರಾಜಕಾರಣ’ದ ಬಗ್ಗೆ ನೀಡಿರುವ ಸಲಹೆಯೊಂದು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಹಲವರ ಗಮನ ಸೆಳೆದಿದೆ.
ವಿಡಿಯೋದಲ್ಲಿ, ‘ಚೀನಾದ ಮಕ್ಕಳು ಚಿಕ್ಕ ವಯಸ್ಸಿನಿಂದಾನೇ ಬೇರೆ ಬೇರೆ ಕೌಶಲ್ಯಗಳನ್ನು ಕಲಿಯುವುದಕ್ಕೆ ಗಮನ ಕೊಡ್ತಾರೆ. ಆದರೆ ನಮ್ಮ ದೇಶದಲ್ಲಿ ಕಾಲೇಜುಗಳಲ್ಲಿ ಜಾತಿ-ಧರ್ಮ ಅಂತ ಕಿತ್ತಾಡಿಕೊಳ್ಳುತ್ತಾರೆ. ಮನಸ್ಸಿಗೆ ತುಂಬಾ ಭಾರವಾಗುತ್ತದೆ. ಆದರೂ ಹೇಳುತ್ತಿದ್ದೇನೆ. ಚೀನಾ ಈವರೆಗೆ ಏನು ಅಭಿವೃದ್ಧಿಯಾಗಿದೆಯೋ ಅದು ನಮ್ಮ ಭಾರತದಲ್ಲಾಗಲು ಇನ್ನೂ 70 ವರ್ಷಗಳು ಬೇಕಾಗಬಹುದು. ಅದು ಕೂಡ ನಮ್ಮಲ್ಲಿರುವ ಬಜೆಟ್ ಸರಿಯಾಗಿ ಉಪಯೋಗವಾದರೆ ಮಾತ್ರ. ಚೀನಾಗಿಂತ ನಾವು ಎಷ್ಟು ಹಿಂದುಳಿದಿದ್ದೇವೆ ಅಂದರೆ, ಬೀಜಿಂಗ್‌ನ ಯಾವುದೋ ಗಲ್ಲಿಯ ರಸ್ತೆಯಲ್ಲಿದ್ದೇನೆ. ಇಲ್ಲಿ ಪ್ರತಿಯೊಂದೂ ಅಭಿವೃದ್ಧಿಯಾಗಿದೆ. ಚೀನಾ ರಾಜಕೀಯ ಏನೇ ಇರಬಹುದು, ಆದರೆ ಅಲ್ಲಿನ ಜನರ ಜೀವನಶೈಲಿ ಬದಲಾಯಿಸಲು ಶ್ರಮ ಪಡುತ್ತಿದೆ. ವೋಟಿಗೋಸ್ಕರ ಜಾತಿ ರಾಜಕಾರಣ ಮಾಡಿ ಇಲ್ಲಿನ ಜನರ ನಡುವೆ ದ್ವೇಷ ಉಂಟು ಮಾಡುವ ಕೆಲಸಕ್ಕೆ ಕೈ ಹಾಕುತ್ತಿಲ್ಲ. ಈ ವಿಡಿಯೋ ನೋಡಿದ ಮೇಲೆ ತುಂಬಾ ಮಂದಿ ನನಗೆ ಬೈಯ್ಯಬಹುದು. ಆದರೆ, ಇದು ನಾನು ನೋಡಿರುವ ವಾಸ್ತವ ಸತ್ಯ’ ಎಂದು ಹೇಳಿರುವ 45 ಸೆಕೆಂಡಿನ ವಿಡಿಯೋ ಈಗ ವೈರಲಾಗಿದೆ.
ಇದು ಈಗ ಸದ್ಯ ಸುದ್ದಿಯಾಗಿದ್ದು, ಪರ-ವಿರೋಧ ಚರ್ಚೆಗೂ ಕಾರಣವಾಗಿದೆ. ಈ ವಿಡಿಯೋವನ್ನು ಮೆಚ್ಚಿರುವ ಹಲವರು, ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಎಲ್ಲ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ರಾಜಕಾರಣಿಗಳಿಗೆ ಇದನ್ನು ತೋರಿಸಿ ಎಂದು ಸಲಹೆ ನೀಡುತ್ತಿದ್ದಾರೆ. ಇನ್ನು ಕೆಲವರು, ಈತನಿಗೆ ಶೀಘ್ರವೇ ದೇಶದ್ರೋಹಿ ಪಟ್ಟ ನೀಡಲು ಬಲಪಂಥೀಯರು ಮುಂದಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಡಾ ಬ್ರೋ ಅನ್ನೋ ಹುಡುಗ ಚೀನಾ ಮತ್ತು ಇಂಡಿಯಾವನ್ನು ಹೋಲಿಸಿದ ವಿಡಿಯೋ ಕ್ಲಿಪ್ ಎಲ್ಲ ಕಡೆಗೂ ಓಡಾಡುತ್ತಿದೆ. ಆದರೆ ಎಂದಾದರೂ ಭಾರತದಲ್ಲಿ ಜರುಗುವ ಜಾತಿ ದೌರ್ಜನ್ಯ ಖಂಡಿಸಿ, ಅದಕ್ಕೆ ಕಾರಣವಾದ ತನ್ನದೇ ಜಾತಿ ಜನರ ವಿರುದ್ಧ ಮಾತನಾಡಿ, ಅವರಿಗೆ ತಿಳಿವಳಿಕೆ ಹೇಳಿದ ಒಂದೇ ಒಂದು ಸೆಕೆಂಡಿನ ವಿಡಿಯೋ ಇದೆಯೇ? ಸುಮ್ಮನೇ ಹೀಗೆ ಓತಪ್ರೋತವಾಗಿ ಮಾತನಾಡುವವನನ್ನು ಮೆರೆಸುವ ಮೊದಲು ಸಾಮಾನ್ಯ ಜ್ಞಾನದಿಂದ ಯೋಚಿಸಿ, ಕುರಿಗಳಂತೆ ಹಳ್ಳಕ್ಕೆ ಬೀಳಬೇಡಿ’ ಎಂದು ಕೆಲವರು ಟೀಕಿಸುತ್ತಿದ್ದಾರೆ.
ಇದಕ್ಕೆ ಕಮೆಂಟ್ ಮಾಡಿರುವ ಹಲವರು, ಆತ ಇನ್ನೂ ಚಿಕ್ಕ ಯುವಕ. ಆತನಿಗೆ ಓದಾಗಲೀ, ಜಾಸ್ತಿ ತಿಳಿವಳಿಕೆಯಾಗಲೀ ಇರಲಿಕ್ಕಿಲ್ಲ, ಯಾರಾದರೂ ಆತ ಹಾಳಾಗದಂತೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಡಾಕ್ಟರ್ ಬ್ರೋ ಅವರ 45 ಸೆಕೆಂಡಿನ ವಿಡಿಯೋ ಸುದ್ದಿ ಮಾಡುತ್ತಿದೆ.
ಕಿಂಗ್ ಕೊಹ್ಲಿಯ ಫೇವರಿಟ್ ಚೋಲೆ ಬಟೂರೆ ಅಂಗಡಿಯಲ್ಲಿ ನಮ್ಮ ಡಾ ಬ್ರೋ ಹಾವಳಿ 😋
ನೋಡಿರಿ 📺 | ICC Men’s Cricket World Cup | #INDvAFG | ಈಗ ನಿಮ್ಮ #StarSportsKannada ಮತ್ತು Disney+Hotstar ನಲ್ಲಿ@DrBroKannada #WorldCupOnStar #CWC2023 #CricketWorldCup #BelieveInBlue pic.twitter.com/RTdxFsSzSi
— Star Sports Kannada (@StarSportsKan) October 11, 2023
ಡಾ ಬ್ರೋ ಇತ್ತೀಚೆಗೆ ಕನ್ನಡದಲ್ಲಿ ಬಿಡುಗಡೆಯಾಗಿದ್ದ ಶಶಾಂಕ್ ಸೋಗಲ್ ನಿರ್ದೇಶನದ ‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾದ ಟ್ರೇಲರ್‌ಗೆ ಹಿನ್ನೆಲೆ ಧ್ವನಿ ನೀಡಿ ಕೂಡ ಸುದ್ದಿಯಾಗಿದ್ದರು. ಸದ್ಯ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್‌ಗಾಗಿ ಕೆಲಸ ಮಾಡುತ್ತಿದ್ದು, ಟೀಮ್ ಇಂಡಿಯಾದ ಎಲ್ಲೆಲ್ಲಿ ವಿಶ್ವಕಪ್ ಪಂದ್ಯವಿರುತ್ತದೋ ಅಲ್ಲಿಗೆ ತೆರಳಿ ಸ್ಥಳೀಯ ಕ್ರೀಡಾಭಿಮಾನಿಗಳನ್ನು ಮಾತನಾಡಿಸುತ್ತಿದ್ದಾರೆ.