- ‘ಪ್ರಚಾರ ಪಡೆಯುವ ಹಿನ್ನೆಲೆಯಲ್ಲಿ ಈ ನಾಟಕವಾಡಿದ್ದಾನೆ’ ಎಂದು ಬಾಯ್ಬಿಟ್ಟ ಯೋಧನ ಸ್ನೇಹಿತ
- ‘ಪಿಎಫ್‌ಐ’ ಎಂದು ಬರೆಯಲು ಬಳಸಿದ್ದ ಪೈಂಟ್ ಹಾಗೂ ಬ್ರಶ್ ವಶಕ್ಕೆ ಪಡೆದ ಪೊಲೀಸರು
ರಜೆಯಲ್ಲಿ ಊರಿಗೆ ಬಂದಿದ್ದ ಸೈನಿಕನೋರ್ವನ ಮೇಲೆ ಆರು ಮಂದಿಯ ಗುಂಪು ಹಲ್ಲೆ ನಡೆಸಿ, ಬೆನ್ನಲ್ಲಿ ಹಸಿರು ಬಣ್ಣದಲ್ಲಿ ‘ಪಿಎಫ್ಐ’ ಎಂದು ಬರೆದ ಘಟನೆಯನ್ನು ಭೇದಿಸಿರುವ ಕೇರಳ ಪೊಲೀಸರು, ಎಲ್ಲವೂ ಸುಳ್ಳು, ಬರೀ ನಾಟಕ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
ಘಟನೆಯ ಸಂಬಂಧ ಸುಳ್ಳು ದೂರು ನೀಡಿ, ಸಮಾಜದಲ್ಲಿ ಗಲಭೆಗೆ ಪ್ರಚೋದನೆ ನೀಡಿದ್ದಲ್ಲದೇ ಅಧಿಕಾರಿಗಳನ್ನು ದಾರಿ ತಪ್ಪಿಸಿದ ಯೋಧ ಶೈನ್ ಕುಮಾರ್ ಮತ್ತು ಆತನ ಸ್ನೇಹಿತ ಜೋಶಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಬೆನ್ನಿನ ಮೇಲೆ ಪಿಎಫ್‌ಐ ಎಂದು ಬರೆಯಲು ಬಳಸಿದ ಹಸಿರು ಬಣ್ಣದ ಪೈಂಟ್‌ನ ಡಬ್ಬ ಮತ್ತು ಬ್ರಶ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ನೀಡಿದ ಕೆಲವು ಹೇಳಿಕೆಗಳಿಂದ ಅನುಮಾನಗೊಂಡ ಪೊಲೀಸರು, ಯೋಧನ ಸ್ನೇಹಿತ ಜೋಶಿಯನ್ನು ವಿಚಾರಣೆಗೊಳಪಡಿಸಿದಾಗ ಎಲ್ಲವೂ ನಾಟಕ ಎಂದು ಬಯಲಾಗಿದೆ.
A FIR was registered on the basis of a complaint filed by an army personnel alleging he attacked in a shop by 5-6 miscreants who, after assault, painted PFI on his back.
— Mohammed Zubair (@zoo_bear) September 26, 2023
Update: According to recent update, The Soldier Shine Kumar and his friend Joshi who helped him are in… pic.twitter.com/ByVLaamm3H
“ಫೇಮಸ್ ಆಗಬೇಕೆಂಬ ಯೋಧ ಶೈನ್ ಕುಮಾರ್ ಅವರ ಆಸೆಗಾಗಿ ಈ ರೀತಿಯ ನಾಟಕವಾಡಿದ್ದಾನೆ” ಎಂದು ತಿಳಿಸಿರುವ ಕೇರಳ ಪೊಲೀಸರು, ಯೋಧನ ಸ್ನೇಹಿತ ಜೋಶಿ ನೀಡಿರುವ ವಿಡಿಯೋ ಹೇಳಿಕೆಯನ್ನು ದಾಖಲಿಸಿದ್ದಾರೆ.
ಶೈನ್ ಕುಮಾರ್ ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ಇಂಜಿನಿಯರ್ಸ್ ಕಾರ್ಪ್ಸ್ ನಲ್ಲಿ ರಾಜಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು. ರಜೆ ಮುಗಿಸಿ ಹಿಂದಿರುಗುವ ಮುನ್ನಾದಿನದಂದು ಈ ಘಟನೆ ನಡೆದಿದೆ.
ಪೊಲೀಸರು ವಿಚಾರಣೆ ನಡೆಸಿದಾಗ ಯೋಧ ಶೈನ್ ಕುಮಾರ್ ಅವರು ತನ್ನ ಹೇಳಿಕೆ ಸತ್ಯವೆಂದೇ ವಾದಿಸುತ್ತಿದ್ದರು.ಆದರೆ ಆತನ ಸ್ನೇಹಿತ ಜೋಶಿ ಸತ್ಯವನ್ನು ಬಹಿರಂಗಪಡಿಸಿದ ನಂತರ ಎಲ್ಲವೂ ನಾಟಕ ಎಂದು ಬಯಲಾಗಿದೆ.
ಏನಿದು ಘಟನೆ?
ಭಾರತೀಯ ಸೇನೆಯ ಯೋಧನಾಗಿರುವ ಶೈನ್ ಕುಮಾರ್ ಮೇಲೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಅಪರಿಚಿತರಿಂದ ದಾಳಿ ನಡೆದಿದ್ದು, ಸೈನಿಕನ ಬೆನ್ನ ಮೇಲೆ ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಎಂದು ಬರೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದರು.
ಪೊಲೀಸ್ ಠಾಣೆಗೆ ನೀಡಿದ್ದ ದೂರಿನಲ್ಲಿ, “ತಮ್ಮ ನಿವಾಸದ ಬಳಿ ಇರುವ ರಬ್ಬರ್ ಫಾರೆಸ್ಟ್‌ನಲ್ಲಿ ಆರು ಜನರ ಗುಂಪೊಂದು ಭಾನುವಾರ ರಾತ್ರಿ ನನ್ನ ಮೇಲೆ ಏಕಾಏಕಿ ದಾಳಿ ನಡೆಸಿದೆ. ದುಷ್ಕರ್ಮಿಗಳು ತಮ್ಮ ಎರಡು ಕೈಗಳನ್ನು ಟೇಪ್‌ನಿಂದ ಕಟ್ಟಿ ನನ್ನ ಬೆನ್ನ ಹಿಂದೆ ಹಸಿರು ಬಣ್ಣದಲ್ಲಿ ಪಿಎಫ್ಐ ಎಂದು ಬರೆದರು” ಎಂದು ಯೋಧ ವಿವರಿಸಿದ್ದರು.

ಇದು ಸುದ್ದಿಯಾದ ಬೆನ್ನಲ್ಲೇ ಪೊಲೀಸರು ಸಹಿತ ಸೇನಾ ಗುಪ್ತಚರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಕೈಗೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಆದರೆ, ಪ್ರಕರಣದ ಗಂಭೀರತೆಯನ್ನುಅರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಿದ ಪೊಲೀಸರಿಗೆ ಯೋಧನ ದೂರಿನಲ್ಲಿ ಮತ್ತು ಹೇಳಿಕೆಯಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದವು. ಪೊಲೀಸರು ವಿಸ್ತ್ರತವಾದ ತನಿಖೆ ನಡೆಸಿದರು. ನಂತರದ ತನಿಖೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿ ನಡೆಸಿದ ನಾಟಕ ಎನ್ನುವುದು ಬಯಲಾಗಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.