ರೈತರ ಬಹುದಿನಗಳ ಬೇಡಿಕೆಯಾದ ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಸಿ-2+50% ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಅದನ್ನು ಶಾಸನಬದ್ಧಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವೂ ಇಲ್ಲ, ಸೊಲ್ಲೂ ಇಲ್ಲ.
ನಮ್ಮ ಕಡೆ ಆಳಿಗೆ ತಕ್ಕನಾಗಿ, ವಯಸ್ಸಿಗೆ ಹೊಂದುವಂತೆ ಅಥವಾ ಯಾವ್ಯಾವ ಸಮಯಕ್ಕೆ ಏನೇನು ಮಾಡಬೇಕೋ ಅದನ್ನು ಮಾಡದವರನ್ನು ಕುರಿತು ‘ಎಂಟು ವರ್ಷಕ್ಕೆ ನನ್ನ ಮಗ ದಂಟು ಅಂದಾ…’ ಎಂದು ಕಿಚಾಯಿಸುವುದುಂಟು. ಈಗ ದಾಖಲೆಯ ಎಂಟನೆಯ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಕೂಡಾ ಅಷ್ಟೇ ಮಾಡಿರುವುದು.
ಇವರಿಗೆ ಸ್ಲೋಗನ್‌ಗಳನ್ನು ಸೃಜಿಸುವುದು, ಯೋಜನೆಗಳಿಗೆ ಆಕರ್ಷಕ ಹೆಸರಿಡುವುದು ‘ಬದಲಾವಣೆ’ಯಂತೆ ಕಾಣುತ್ತಿದೆ. ಅದನ್ನು ಅವರು ಮಡಿಲ ಮಾಧ್ಯಮಗಳಿಗಾಗಿ ಮಾಡುತ್ತಾರೋ ಅಥವಾ ಅವರ ಹಿಂದಿರುವ ತಂಡ ಸೂಚಿಸಿದ್ದಕ್ಕೆ ಥ್ರಿಲ್ಲಾಗಿ ಇಡುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ವಿಭಿನ್ನ ಎನ್ನುವಂತಹ ಯೋಜನೆಗಳನ್ನು ಘೋಷಣೆ ಮಾಡುತ್ತಾರೆ. ಉದಾಹರಣೆಗೆ, ಪಿ.ಎಂ. ಧನ್ ಧಾನ್ಯ ಕೃಷಿ ಯೋಜನೆ- PM-DDKY- ತೆಗೆದುಕೊಳ್ಳುವುದಾದರೆ…
ದೇಶದಲ್ಲಿ ಅತಿ ಕಡಿಮೆ ಉತ್ಪಾದಕತೆ ಇರುವ, ಸಾಧಾರಣ ಬೆಳೆಗಳನ್ನು ಹೊಂದಿರುವ ಮತ್ತು ಉತ್ಪಾದಕತೆಯ ಮಾನದಂಡಕ್ಕಿಂತ ಕಡಿಮೆ ಇರುವ ನೂರು ಜಿಲ್ಲೆಗಳನ್ನು ಆಯ್ದುಕೊಂಡು ಬೆಳೆ ಉತ್ಪಾದಕತೆ ಹೆಚ್ಚಿಸುವುದು, ವೈವಿಧ್ಯಮಯ ಬೆಳೆಗಳನ್ನು ಬೆಳೆಯುವುದು, ಸುಸ್ಥಿರ ಕೃಷಿ ಪದ್ಧತಿಗಳನ್ನು ಅನುಸರಿಸುವುದು, ಪಂಚಾಯಿತಿ ಮಟ್ಟದಲ್ಲಿ ಕೊಯ್ಲೋತ್ತರ ದಾಸ್ತಾನು ಕೇಂದ್ರಗಳನ್ನು ತೆರೆಯುವುದು, ನೀರಾವರಿಗೆ ಅಗತ್ಯ ಸೌಕರ್ಯಗಳನ್ನು ಕೊಡುವುದು ಮತ್ತು ದೀರ್ಘಕಾಲಿಕ ಹಾಗೂ ಅಲ್ಪಕಾಲೀನ ಸಾಲ ದೊರೆಯುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಇದರಿಂದಾಗಿ 1.7 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಒಪ್ಪಿದೆ, ಈಗ ಒಂದೊಂದಾಗಿ ಅರ್ಥಮಾಡಿಕೊಳ್ಳೋಣ. ಬೆಳೆಯ ಉತ್ಪಾದಕತೆ ಹೆಚ್ಚಿಸುವುದು ಅಂದರೆ ಏನರ್ಥ? ಸರ್ಕಾರಗಳ ಪ್ರಕಾರ ಹೈ ಯೀಲ್ಡಿಂಗ್ ವೆರೈಟಿ ಬಿತ್ತನೆ ಬೀಜ ಒದಗಿಸುವುದು, ಕೃಷಿ ಒಳಸುರಿಗಳನ್ನು ಹೆಚ್ಚಿಸುವುದು, ಅದಕ್ಕೆ ಸಬ್ಸಿಡಿ ಕೊಡುವುದು ಮತ್ತು ನೀರಾವರಿ ಸೌಕರ್ಯ ಕಲ್ಪಿಸುವುದು ಮುಂತಾಗಿ. ಇದೆಲ್ಲಾ ಖರ್ಚಿನ ಬಾಬ್ತು. ಹೆಚ್ಚು ಖರ್ಚು ಮಾಡಿ ಹೆಚ್ಚು ಉತ್ಪಾದನೆ ಮಾಡಿದರೆ ಪ್ರಯೋಜನವೇನು? ‘Money Saved is Money earned’ ಎಂಬ ಸಾಮಾನ್ಯಜ್ಞಾನ ಇವರಿಗೇಕೆ ಇರುವುದಿಲ್ಲ. ಅಥವಾ ಇಲ್ಲದಂತೆ ನಟಿಸುತ್ತಾರಲ್ಲ?
ಇದನ್ನು ಓದಿದ್ದೀರಾ?: ಬಜೆಟ್ 2025 | ಬಿಹಾರಕ್ಕೆ ಭರಪೂರ ಕೊಡುಗೆ, ಚುನಾವಣೆಗಾಗಿ ಎಂದ ವಿರೋಧ ಪಕ್ಷಗಳು, ಆಕ್ರೋಶ
ಇನ್ನು ನ್ಯಾಷನಲ್ ಮಿಷನ್ ಆನ್ ಹೈಯೀಲ್ಡಿಂಗ್ ಸೀಡ್ಸ್ ಎಂಬ ಯೋಜನೆಯನ್ನೂ ಪ್ರಕಟಿಸಿದ್ದಾರೆ. ಈ ಬಗ್ಗೆ ಇಡೀ ದೇಶದ ರೈತರು ಈಗಿನಿಂದಲೇ ಎಚ್ಚರದಿಂದಿರಬೇಕು. ಹೈಯೀಲ್ಡಿಂಗ್ ಹೆಸರಿನಲ್ಲಿ ಈಗಾಗಲೇ ಅಭಿವೃದ್ಧಿ ಹೊಂದಿರುವ ಹತ್ತಾರು ರಾಷ್ಟ್ರಗಳಲ್ಲಿ ನಿಷೇಧಿಸಲಾಗಿರುವ ಜಿ.ಎಂ. ಸೀಡ್ಸ್ (ಕುಲಾಂತರಿ ಬೀಜಗಳು) ಅನ್ನು ಪ್ರಮೋಟ್ ಮಾಡಲು ಸ್ಕ್ರಿಪ್ಟೆಡ್ ಪ್ರೋಗ್ರಾಮ್ ತಯಾರಿದೆ. ರೈತರಿಗೆ, ಕೃಷಿ ಪರಿಸರಕ್ಕೆ, ಕೃಷಿ ಭೂಮಿಗೆ ಹೀಗೆ ಯಾವುದಕ್ಕೂ ಒಳ್ಳೆಯದಲ್ಲದ ಜೆನಟಿಕಲಿ ಮಾಡಿಫೈಡ್ ಬೀಜಗಳನ್ನು ತಿರಸ್ಕರಿಸಲು ರೈತರು ಸನ್ನದ್ಧರಾಗಿರಬೇಕಿದೆ. ಅಷ್ಟೇ ಅಲ್ಲದೆ ಸರ್ಕಾರಿ ಸ್ವಾಮ್ಯದ ಬೀಜ ಉತ್ಪಾದನಾ ಸಂಸ್ಥೆಗಳು, ಕೃಷಿ ವಿವಿಗಳು ಗುಣಮಟ್ಟದ ಬಿತ್ತನೆ ಬೀಜಗಳನ್ನು ಉತ್ಪಾದಿಸಲು ಪ್ರೋತ್ಸಾಹ ನೀಡಬೇಕೆಂಬ ಹಕ್ಕೊತ್ತಾಯವನ್ನು ಕೂಡ ರೈತ ಸಂಘಗಳು ಮಂಡಿಸಬೇಕಿದೆ. ಇಲ್ಲದಿದ್ದರೆ, ಈಗಾಗಲೇ ಕೈತಪ್ಪಿರುವ ಬಿತ್ತನೆ ಬೀಜ ಮಾರುಕಟ್ಟೆ ಸಂಪೂರ್ಣ ಕಾರ್ಪೊರೇಟ್‌ಗಳ ಪಾಲಾಗಲಿದೆ.
ಉತ್ತಮ ಗುಣಮಟ್ಟದ ಹತ್ತಿ ಉತ್ಪಾದಿಸಿ ಜವಳಿ ಉದ್ಯಮಕ್ಕೆ ಒದಗಿಸಲು ಐದು ವರ್ಷದ ಒಂದು ಮಿಷನ್ ಪ್ರಕಟಿಸಿದ್ದಾರೆ ಮಾನ್ಯ ವಿತ್ತ ಸಚಿವರು. ಈ ಬಗ್ಗೆ ಮೊದಲು ನಾವು ಅರ್ಥ ಮಾಡಿಕೊಳ್ಳಬೇಕಾದ್ದು ಭಾರತದ ಹತ್ತಿ ಬೆಳೆವ ಭೂಮಿಗೆ ಇಳಿದ ಕುಲಾಂತರಿ ಹತ್ತಿ ಅಥವಾ ಬಿಟಿ ಕಾಟನ್ ಮಾಡಿದ ಸಮಸ್ಯೆಯನ್ನು. ಬಿಟಿ ಹತ್ತಿ ಬೆಳೆದ ಮಹಾರಾಷ್ಟದ ವಿದರ್ಭಾ ಪ್ರಾಂತ್ಯದಲ್ಲಿ ಸಾವಿರಾರು ಹತ್ತಿ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡದ್ದು, ಮಾಡಿಕೊಳ್ಳುತ್ತಿರುವುದು ಮುಂದುವರೆದಿದೆ. ಕರ್ನಾಟಕದ ನೆಲದಲ್ಲೇ ಉತ್ಕೃಷ್ಟ ದರ್ಜೆಯ ಹತ್ತಿ ಬೀಜಗಳಾದ ವರಲಕ್ಷ್ಮಿ, ಡಿಎಚ್ 35 ಹತ್ತಿ ಹೇಳಹೆಸರಿಲ್ಲದೆ ಕಣ್ಮರೆಯಾದವು. ಅಷ್ಟರಮಟ್ಟಿಗೆ ಕುಲಾಂತರಿ ಹತ್ತಿ ಬೀಜೋತ್ಪಾದನೆ ಕಂಪನಿಗಳ ದಾಳಿ ಹತ್ತಿ ಬೀಜೋತ್ಪಾದನೆ ಮಾಡುತ್ತಿದ್ದ ಸಂಸ್ಥೆಗಳ ಮೇಲೂ ಆಯಿತು, ಬೆಳೆವ ಭೂಮಿಯ ಮೇಲೂ ಆಯಿತು.
ಈ ಸರ್ಕಾರಕ್ಕೆ ಹತ್ತಿ ಬೆಳೆಯ ಬಗ್ಗೆ ನಿಜವಾಗಲೂ ಕಾಳಜಿ ಇದ್ದರೆ ಕಳೆದು ಹೋಗಿರುವ ನೈಸರ್ಗಿಕ ಬಣ್ಣದ ಹತ್ತಿ ತಳಿ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿ. ಈಗ ಹತ್ತಿಗಾಗಿ ಐದು ವರ್ಷ ಮಿಷನ್ ಘೋಷಿಸಿರುವ ಸರ್ಕಾರ ಬಣ್ಣದ ಹತ್ತಿಯತ್ತ ತನ್ನ ಚಿತ್ತ ಹರಿಸಲಿ. ಹಾಗೆಯೇ ಬ್ರಿಟಿಷರ ಆಳ್ವಿಕೆಯಲ್ಲಿ ಬಟ್ಟೆಗೆ ಬಣ್ಣ ಹಾಕುವ ಉದ್ಯಮ ನೈಸರ್ಗಿಕ ಹತ್ತಿಯನ್ನು ನುಂಗಿದ ಇತಿಹಾಸವನ್ನು ಅರಿಯಲಿ.
ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದ ಪಡೆವ ಸಾಲ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಲಾಗಿದೆ ಎಂಬ ಸುದ್ದಿ ನೋಡಿದಾಕ್ಷಣ ನನಗೆ ನೆನಪಿಗೆ ಬಂದ ಪ್ರಸಂಗವೊಂದನ್ನು ಹೇಳಬೇಕೆನಿಸಿತು. ಇದು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಹಾಸ್ಯಭರಿತ ಸುಡು ಸತ್ಯ. ‘ಬ್ಯಾಂಕ್‌ನವರು ಒಳ್ಳೆಯ ಹವಾಮಾನ ಇದ್ದಾಗ ಛತ್ರಿಯನ್ನು ನಮಗೆ ಕೊಟ್ಟು… ಮಳೆಗಾಲ ಆರಂಭವಾಗುತ್ತಿದ್ದಂತೆ ಛತ್ರಿ ವಾಪಸ್ ಕೇಳುತ್ತಾರೆ – ಹಿಂದಿರುಗಿಸಲು ಪೀಡಿಸುತ್ತಾರೆ’ ಎಂಬ ಈ ಮಾತು ರೈತರ ಸಾಲಗಳಿಗೆ ಬಹಳ ಹತ್ತಿರವಿದೆ. ಹಾಗಾಗಿ ಈ ಹೆಚ್ಚುವರಿ ಸಾಲದ ಬಗ್ಗೆ No Comments.
ಇದನ್ನು ಓದಿದ್ದೀರಾ?: ಬಜೆಟ್ 2025 | ಯಾವೆಲ್ಲ ವಸ್ತುಗಳ ಬೆಲೆ ಏರಿಕೆ, ಇಳಿಕೆ?
ಕಾಳುಗಳು ಹಾಗೂ ಎಡಿಬಲ್ ಆಯಿಲ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಯೋಜನೆಗಳಿವೆ ಎಂದೂ ಹೇಳಲಾಗಿದೆ. ಆಗಲಿ, ಅದು ಉತ್ತಮ ಕೆಲಸ. ಹಿಂದೆ ರಾಜೀವ್ ಗಾಂಧಿ ಎಡಿಬಲ್ ಆಯಿಲ್ ಸ್ವಾವಲಂಬನೆಗೆ ಯೆಲ್ಲೋ ರೆವಲ್ಯೂಷನ್ ಮಾಡಿದ್ದರು. ಅಲ್ಲಿಂದಲೂ ಅಗತ್ಯ ಪಾಠವನ್ನು ಪ್ರಸ್ತುತ ಘನ ಸರ್ಕಾರ ಪಡೆದುಕೊಳ್ಳಬಹುದು.
ಇನ್ನು ರೈತರ ಬಹುದಿನಗಳ ಬೇಡಿಕೆಯಾದ ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಸಿ-2+50% ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಅದನ್ನು ಶಾಸನಬದ್ಧಗೊಳಿಸುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವೂ ಇಲ್ಲ, ಸೊಲ್ಲೂ ಇಲ್ಲ.
ಅದಕ್ಕೇ… ಆರಂಭದಲ್ಲೇ ಹೇಳಿದ್ದು ಎಂಟನೇ ವರ್ಷದಲ್ಲೂ ವಿತ್ತ ಸಚಿವರು ‘ದಂಟು’ ಎಂದು.

ಕೆ. ಎನ್ ನಾಗೇಶ್
ಲೇಖಕ, ಪತ್ರಕರ್ತ, ಕೃಷಿ ವಿಶ್ಲೇಷಕ