ದಲಿತ ಮಹಿಳೆಯ ಗುರುತು ದುರುಪಯೋಗಿಸಿಕೊಂಡ ಮತ್ತು ಸುಳ್ಳು ಆರೋಪಗಳನ್ನು ದಾಖಲಿಸಿದ ವಕೀಲರೊಬ್ಬರಿಗೆ ಲಕ್ನೋದ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 5.10 ಲಕ್ಷ ರೂಪಾಯಿ ದಂಡವನ್ನು ವಿಧಿಸಿದೆ.
ಪರಮಾನಂದ ಗುಪ್ತಾ ಎಂಬ ವಕೀಲರು ದಲಿತ ಮಹಿಳೆ ಪೂಜಾ ರಾವತ್ ಅವರನ್ನು ಬಳಸಿಕೊಂಡು ತನ್ನ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಪಿತೂರಿ ನಡೆಸಿದ್ದಾರೆ. ಅವರನ್ನು ಕಾನೂನು ದುರ್ಬಳಕೆ ಆರೋಪದಲ್ಲಿ ತಪ್ಪಿತಸ್ಥರೆಂದು ವಿಶೇಷ ನ್ಯಾಯಾಧೀಶ (ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ) ವಿವೇಕಾನಂದ ಶರಣ್ ತ್ರಿಪಾಠಿ ಅವರ ನ್ಯಾಯ ಪೀಠವು ಮಂಗಳವಾರ ತೀರ್ಪು ನೀಡಿದೆ.
ಇದನ್ನು ಓದಿದ್ದೀರಾ? ದೇಶಾದ್ಯಂತ 52,866 ದಲಿತ ದೌರ್ಜನ್ಯ ಪ್ರಕರಣಗಳು ದಾಖಲು; 13 ರಾಜ್ಯಗಳಲ್ಲಿಯೇ 97% ಕೇಸ್‌ಗಳು: ಸರ್ಕಾರಿ ವರದಿ
“ಗುಪ್ತಾ ಅವರು ರಾವತ್ ಜೊತೆ ಶಾಮೀಲಾಗಿ, ತಮ್ಮ ಹೆಸರಿನಲ್ಲಿ ಕನಿಷ್ಠ 18 ಪ್ರಕರಣಗಳನ್ನು ಮತ್ತು ರಾವತ್ ಮೂಲಕ 11 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇವುಗಳಲ್ಲಿ ಹಲವು ಆಸ್ತಿ ವಿವಾದಕ್ಕೆ ಸಂಬಂಧಿಸಿದ ದೂರುಗಳು ಅವರ ಪ್ರತಿಸ್ಪರ್ಧಿ ಅರವಿಂದ್ ಯಾದವ್ ಮತ್ತು ಅವರ ಕುಟುಂಬದ ವಿರುದ್ಧ ದಾಖಲಾಗಿವೆ. ಸುಳ್ಳು ಪ್ರಕರಣಗಳಲ್ಲಿ ಅತ್ಯಾಚಾರ ಮತ್ತು ಕಿರುಕುಳದ ಆರೋಪಗಳೂ ಸೇರಿವೆ” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅರವಿಂದ್ ಮಿಶ್ರಾ ಅವರು ಹೇಳಿದರು.
ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಾದ ಬಳಿಕ ಪ್ರಕರಣವು ಬೆಳಕಿಗೆ ಬಂದಿದೆ. ತದನಂತರದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಿಂದ ವರದಿಗಳನ್ನು ಕೇಳಿದ ಹೈಕೋರ್ಟ್ 2025ರ ಮಾರ್ಚ್ 5ರಂದು ಈ ಪ್ರಕರಣವನ್ನು ಸಿಬಿಐಗೆ ನೀಡಿತ್ತು.
ತನಿಖೆಯ ವೇಳೆ ಪರಮಾನಂದ ಗುಪ್ತಾ ತಮ್ಮ ಪ್ರತಿಸ್ಪರ್ದಿ ಅರವಿಂದ ಯಾದವ್ ಮತ್ತು ಅವರ ಕುಟುಂಬಸ್ಥರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲು ದಲಿತ ಮಹಿಳೆ ರಾವತ್ ಅವರ ಗುರುತನ್ನು ಬಳಸಿಕೊಂಡು ಸಂಚು ರೋಪಿಸಿರುವುದು ಬೆಳಕಿಗೆ ಬಂದಿದೆ. ಆದಾಗ್ಯೂ ಈ ಆರೋಪಗಳ ತನಿಖೆಯ ವೇಳೆ ರಾವತ್ ವಿವಾದಿತ ಸ್ಥಳದಲ್ಲಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ವಾಸ್ತವವಾಗಿ ರಾವತ್ ವಾಸವಿದ್ದ ಬಾಡಿಗೆ ಮನೆ ಯಾದವ್ ಕುಟುಂಬದ್ದಾಗಿತ್ತು, ಅದೂ ನಿರ್ಮಾಣ ಹಂತದಲ್ಲಿತ್ತು ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.
ಗುಪ್ತಾ ಅವರ ಪತ್ನಿ ಸಂಗೀತಾ ತಮ್ಮದೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಅಲ್ಲಿ ರಾವತ್ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರ ಗುರುತನ್ನು ಬಳಸಿಕೊಂಡು ದುರ್ಬಳಕೆ ಮಾಡಿದ್ದರು. ನಂತರ ಸ್ವತಃ 2025ರ ಆಗಸ್ಟ್ 4ರಂದು ಪೂಜಾ ರಾವತ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ಇದನ್ನು ಓದಿದ್ದೀರಾ? ಜಾತಿ ದೌರ್ಜನ್ಯ | ಕುದುರೆ ಮೇಲೆ ಮೆರವಣಿಗೆ: ದಲಿತ ವರನ ಮೇಲೆ 40 ಮಂದಿ ಪ್ರಬಲ ಜಾತಿಯ ದುರುಳರಿಂದ ಹಲ್ಲೆ
ರಾವತ್ ಅವರು ಮ್ಯಾಜಿಸ್ಟ್ರೇಟ್ ಮುಂದೆ ‘ಲೈಂಗಿಕ ದೌರ್ಜನ್ಯದ ಸುಳ್ಳು ಹೇಳಿಕೆಗಳನ್ನು ನೀಡುವಂತೆ ಒತ್ತಾಯಿಸಲಾಗಿದೆ’ ಎಂದು ಒಪ್ಪಿಕೊಂಡಿದ್ದರು ಮತ್ತು ನ್ಯಾಯಾಲಯ ಮುಂದೆ ಕ್ಷಮೆಯಾಚಿಸಿದ್ದರು. ನ್ಯಾಯಾಲಯವು ರಾವತ್‌ಗೆ ಷರತ್ತುಬದ್ಧ ಕ್ಷಮೆಯನ್ನು ನೀಡಿತ್ತು.
ಆದಾಗ್ಯೂ, ವಕೀಲ ಪರಮಾನಂದ ಗುಪ್ತಾ ಅವರು ಮಾಡಿದ ಸುಳ್ಳು ಆರೋಪಗಳು ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತವೆ ಎಂದು ಸಂಪೂರ್ಣವಾಗಿ ತಿಳಿದಿದ್ದರೂ ಈ ಪಿತೂರಿಯನ್ನು ರೂಪಿಸಿದ್ದಾರೆ. ಮಾತ್ರವಲ್ಲದೇ ಕಾನೂನನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅನುಕರಣೀಯ ಶಿಕ್ಷೆಗೆ ಅರ್ಹರು ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯವು, ನ್ಯಾಯಾಂಗದ ಪಾವಿತ್ರ್ಯವನ್ನು ಕಾಪಾಡಲು ವಕೀಲ ಪರಮಾನಂದ ಗುಪ್ತಾ ಅವರಂತಹ ಅಪರಾಧಿ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸಿ ಕಾನೂನು ಅಭ್ಯಾಸ ಮಾಡದಂತೆ ಖಚಿತಪಡಿಸಿಕೊಳ್ಳಲು ತನ್ನ ತೀರ್ಪಿನ ಪ್ರತಿಯನ್ನು ಉತ್ತರ ಪ್ರದೇಶದ ಬಾರ್ ಕೌನ್ಸಿಲ್‌ಗೆ ಕಳುಹಿಸುವಂತೆಯೂ ನಿರ್ದೇಶಿಸಿದೆ.
