- ಮಧ್ಯಪ್ರದೇಶದ ಶಹದೋಲ್‌ನಲ್ಲಿ ನಡೆದ ಘಟನೆ
- ಪತ್ನಿಯ ಹುಡುಕುವಂತೆ ಪೊಲೀಸರ ಮೊರೆ ಹೋದ ಪತಿ
ಟೊಮ್ಯಾಟೋ ಬೆಲೆ ಏರಿಕೆಯಿಂದ ಜನರ ಜೇಬಿಗೆ ಪೆಟ್ಟು ಬಿದ್ದಿರುವುದೇನೋ ನಿಜ. ಬೆಲೆ ಏರಿಕೆಯ ಪರಿಣಾಮದಿಂದ ಹಲವಾರು ರೆಸ್ಟೋರೆಂಟ್‌ಗಳು ಟೊಮ್ಯಾಟೋ ಆಧಾರಿತ ತಿಂಡಿಗಳನ್ನು ಮಾಡುವುದನ್ನೇ ಕೈಬಿಟ್ಟಿವೆ. ಆದರೆ ಇದಕ್ಕೆಲ್ಲ ವ್ಯತಿರಿಕ್ತ ಎನ್ನುವಂತಹ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ವಿಚಿತ್ರ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಶಹದೋಲ್‌ನಲ್ಲಿ ಅಡುಗೆಗೆ ಪತಿ ತನ್ನನ್ನು ಕೇಳದೆಯೇ ಟೊಮ್ಯಾಟೋ ಬಳಸಿದ್ದಕ್ಕೆ ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಬಗ್ಗೆ ಪೊಲೀಸರಿಗೆ ಪತಿರಾಯ ದೂರು ನೀಡಿದ್ದಾನೆ.
ಸಣ್ಣ ಡಾಬಾ ನಡೆಸುತ್ತಿರುವ ಸಂದೀಪ್ ಬರ್ಮನ್ ಎಂಬಾತ ತನ್ನ ಪತ್ನಿ ಆರತಿ ಬರ್ಮನ್ ಅಡುಗೆಗೆ ಟೊಮ್ಯಾಟೋ ಬಳಸಿದ್ದಕ್ಕೆ ಕೋಪಗೊಂಡು ತನ್ನನ್ನು ಬಿಟ್ಟು ತೆರಳಿರುವುದಾಗಿ ತಿಳಿಸಿದ್ದಾನೆ.
“ನಾನು ಬಸ್ ನಿಲ್ದಾಣದ ಬಳಿ ಸಣ್ಣ ಡಾಬಾ ನಡೆಸುತ್ತಿದ್ದೇನೆ. ಅಡುಗೆ ಮಾಡುವಾಗ ಪತ್ನಿಯನ್ನು ಕೇಳದೆಯೇ ಹೆಚ್ಚುವರಿ ಎರಡು ಟೊಮ್ಯಾಟೋ ಬಳಸಿದ್ದೆ. ದರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿ, ನನ್ನೊಂದಿಗೆ ಜಗಳ ಪ್ರಾರಂಭಿಸಿದಳು. ಆ ಬಳಿಕ ಬೆಳಗ್ಗೆ 10.30ರ ಬಸ್ಸಿನಲ್ಲಿ ನನ್ನ ಮಗಳನ್ನೂ ಕರೆದುಕೊಂಡು ಹೊರಟುಬಿಟ್ಟಳು. ಮೂರು ದಿನಗಳಿಂದ ಹುಡುಕುತ್ತಿದ್ದೇನೆ. ಸಿಗದಿದ್ದಕ್ಕೆ ಇಬ್ಬರ ಫೋಟೋವನ್ನು ಪೊಲೀಸರಿಗೆ ನೀಡಿದ್ದೇನೆ. ಟೊಮ್ಯಾಟೋದಿಂದಾಗಿ ನನ್ನ ಕುಟುಂಬಕ್ಕೆ ಈ ಪರಿಸ್ಥಿತಿ ಬಂದಿದೆ” ಎಂದು ಸಂದೀಪ್ ಬರ್ಮನ್ ಹೇಳಿಕೆ ನೀಡಿದ್ದಾನೆ.
ಸಂದೀಪ್ ದೂರು ನೀಡಿರುವುದನ್ನು ಖಚಿತಪಡಿಸಿರುವ ಶಹದೋಲ್‌ನ ಧನಪುರಿ ಸ್ಟೇಷನ್ ಹೌಸ್ ಆಫೀಸರ್ ಸಂಜಯ್ ಜೈಸ್ವಾಲ್, ‘ಟೊಮ್ಯಾಟೋ ಬಳಸಿದ ವಿಚಾರವಾಗಿ ಜಗಳವಾಗಿರುವುದಾಗಿ ತಿಳಿಸಿದ್ದಾನೆ. ಆ ಬಳಿಕ ಆತನ ಪತ್ನಿ ಮನನೊಂದು ಮನೆ ಬಿಟ್ಟು ಹೋಗಿದ್ದಾಳೆ. ಪತಿ-ಪತ್ನಿ ಪರಸ್ಪರ ಮಾತನಾಡುವಂತೆ ತಿಳಿಸಿದ್ದೇವೆ. ಅವರು ಶೀಘ್ರದಲ್ಲೇ ಹಿಂದಿರುವುದಾಗಿ ತಿಳಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಟೊಮ್ಯಾಟೋಗಳ ಉತ್ಪಾದನೆ ಕಡಿಮೆಯಾಗಿದ್ದು, ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ. ಹಲವು ಕಡೆಗಳಲ್ಲಿ ಕೆ ಜಿ ಗೆ ₹200ರ ಗಡಿ ಸಮೀಪಿಸಿದೆ.