- ಉತ್ತರ ಪ್ರದೇಶದ ಶಹಜಹಾನ್‌ಪುರದ ಮೊಹಲ್ಲಾದಲ್ಲಿ ನಡೆದ ಘಟನೆ
- ಘಟನೆಯ ಸಿಸಿಟಿವಿ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್
ತನ್ನ ಪುಟ್ಟ ಮಗಳನ್ನು ಭುಜದ ಮೇಲೆ ಕುಳ್ಳಿರಿಸಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೇ ದುಷ್ಕರ್ಮಿಯೋರ್ವ ವ್ಯಕ್ತಿಯ ತಲೆಗೆ ಗುಂಡು ಹಾರಿಸಿದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಘಟನೆ ಆ.13ರ ಸಂಜೆ ಶಹಜಹಾನ್‌ಪುರದ ಮೊಹಲ್ಲಾದ ಬಾಬುಜೈ ಎಂಬಲ್ಲಿ ಈ ಘಟನೆ ನಡೆದಿದ್ದು, ಗುಂಡೇಟಿಗೊಳಗಾದ ವ್ಯಕ್ತಿಯನ್ನು ಶೋಯೆಬ್(28) ಎಂದು ಗುರುತಿಸಲಾಗಿದೆ.
ತನ್ನ ಒಂದೂವರೆ ವರ್ಷದ ಮಗಳನ್ನು ಭುಜದ ಮೇಲೆ ಹೊತ್ತು ನಡೆದುಕೊಂಡು ಹೋಗುತ್ತಿದ್ದಾಗ, ಪಾಯಿಂಟ್ ಬ್ಲ್ಯಾಂಕ್ ರೇಂಜ್‌ನಲ್ಲಿ ದುಷ್ಕರ್ಮಿ ಈ ಕೃತ್ಯ ಎಸಗಿದ್ದು, ಬಳಿಕ ಬೈಕ್‌ನಲ್ಲಿ ಕಾಯುತ್ತಿದ್ದ ಇಬ್ಬರೊಂದಿಗೆ ಪರಾರಿಯಾಗಿದ್ದಾನೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಯು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಎಂಥವರ ಕಲ್ಲೂ ಹೃದಯವನ್ನೂ ಕರಗಿಸುವಂತಿದೆ.
ಘಟನೆ ನಡೆದ ಕೂಡಲೇ ಅವರನ್ನು ರಾಯ್ ಬರೇಲಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಅದೃಷ್ಟವಶಾತ್ ಮಗು ಸುರಕ್ಷಿತವಾಗಿದ್ದು, ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ.

ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚನೆ : ಶಹಜಹಾನ್‌ಪುರ ಎಸ್‌ಪಿ
ಘಟನೆಯ ಬಗ್ಗೆ ಮಾಹಿತಿ ನೀಡಿರುವ ಶಹಜಹಾನ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಮೀನಾ, ‘ಆಗಸ್ಟ್ 13 ರಂದು ಸಂಜೆ 7:30 ಕ್ಕೆ ಈ ಘಟನೆ ನಡೆದಿದೆ. ಬುಲೆಟ್ ತಗುಲಿದ ತಕ್ಷಣ ಶೋಯೆಬ್ ಮಗುವಿನೊಂದಿಗೆ ರಸ್ತೆಗೆ ಬಿದ್ದಿದ್ದಾನೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಆರೋಪಿಗಳ ಗುರುತನ್ನು ಪತ್ತೆ ಮಾಡಲಾಗುತ್ತಿದೆ. ಇದರಲ್ಲಿ ಮೂವರು ದಾಳಿಕೋರರು ಗೋಚರಿಸಿದ್ದಾರೆ. ಬೈಕ್ ನಂಬರ್ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಬೇರೆ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಡ ಗಮನಿಸುತ್ತಿದ್ದೇವೆ. ಪ್ರಾಥಮಿಕ ತನಿಖೆಯಿಂದ ಹಳೆಯ ದ್ವೇಷದಿಂದ ಈ ಕೃತ್ಯ ಎಸಗಿರುವ ಬಗ್ಗೆ ಯುವಕನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ನಿಶ್ಚಿತಾರ್ಥ ಮುರಿದಿದ್ದಕ್ಕೆ ಕೃತ್ಯ : ಶೋಯೆಬ್ ಚಿಕ್ಕಪ್ಪ ಆರೋಪ
ಗುಂಡೇಟಿಗೊಳಗಾದ ಯುವಕ ಶೋಯೆಬ್‌ನ ಚಿಕ್ಕಪ್ಪ ಪೊಲೀಸರಿಗೆ ಲಿಖಿತ ದೂರು ನೀಡಿದ್ದು, ಶೋಯೆಬ್ ಮೂರು ವರ್ಷಗಳ ಹಿಂದೆ ಚಾಂದಿನಿ ಎಂಬಾಕೆಯನ್ನು ಮದುವೆಯಾಗಿದ್ದರು. ಈ ಮದುವೆಗೂ ಮೊದಲು, ನೆರೆಯ ವೋಲ್ ಪ್ರದೇಶದಲ್ಲಿ ನೆಲೆಸಿದ್ದ ತಾರೀಕ್ ಎಂಬಾತನ ಸಹೋದರನೊಂದಿಗೆ ಚಾಂದಿನಿಯ ನಿಶ್ಚಿತಾರ್ಥವಾಗಿತ್ತು.
ಆದರೆ ವಿವಿಧ ಕಾರಣಗಳಿಂದಾಗಿ ಆ ನಿಶ್ಚಿತಾರ್ಥಕ್ಕೆ ಶೋಯೆಬ್‌ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಚಾಂದಿನಿಯನ್ನು ಶೋಯೆಬ್‌ನೊಂದಿಗೆ ಮದುವೆ ಮಾಡಿದ್ದರು. ಈ ನಿರ್ಧಾರದಿಂದಾಗಿ ನಮ್ಮ ಕುಟುಂಬಕ್ಕೆ ಅವಮಾನವಾಗಿತ್ತು ಎಂದು ತಾರಿಕ್ ಹೇಳುತ್ತಾ ತಿರುಗುತ್ತಿದ್ದ. ಅಲ್ಲದೇ, ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶವನ್ನು ವ್ಯಕ್ತಪಡಿಸುತ್ತಿದ್ದ ಎಂದು ಉಲ್ಲೇಖಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ತಾರೀಕ್ ಗುಂಡಿಟ್ಟಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
15 ವರ್ಷಗಳ ಹಿಂದೆಯೇ, ಶೋಯೆಬ್ ಕುಟುಂಬವು ಪಂಜಾಬಿನ ಅಮೃತಸರದಲ್ಲಿ ನೆಲೆಸಿದ್ದರು. ಘಟನೆಯ ನಡೆಯುವ ಎರಡು ದಿನಗಳ ಹಿಂದೆಯಷ್ಟೇ ಕುಟುಂಬ ಸಂಬಂಧಿಕರೋರ್ವರ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ತರ ಪ್ರದೇಶದ ಬಾಬುಜೈ ಪ್ರದೇಶಕ್ಕೆ ಬಂದಿದ್ದರು. ಇದೇ ವೇಳೆ ಈ ದಾರುಣ ಘಟನೆ ನಡೆದಿದೆ.
ಸದ್ಯ ದೆಹಲಿಯ ಆಸ್ಪತ್ರೆಯಲ್ಲಿರುವ ಶೋಯೆಬ್ ಅವರ ತಲೆಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ವರದಿಯಾಗಿದೆ.