ಎರಡು ಬೈಕ್ ಪರಸ್ಪರ ಅಪಘಾತವಾದ ಬಳಿಕ ಮುಸ್ಲಿಂ ಯುವಕನೋರ್ವನನ್ನು ಗುಂಪೊಂದು ದೊಣ್ಣೆ ಹಾಗೂ ರಾಡ್ಗಳಿಂದ ಬಡಿದು ಕೊಂದಿರುವ ದಾರುಣ ಘಟನೆ ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಹಲ್ಲೆಗೊಳಗಾಗಿ ಮೃತಪಟ್ಟ ಮುಸ್ಲಿಂ ಯುವಕನನ್ನು ಜೈಪುರದ ರಾಮಗಂಜ್ ಬಜಾರ್ನ ಮುಹಮ್ಮದ್ ಮಜೀದ್ ಎಂಬವರ ಪುತ್ರ ಮುಹಮ್ಮದ್ ಇಕ್ಬಾಲ್(18) ಎಂದು ಗುರುತಿಸಲಾಗಿದೆ.
ಅಪಘಾತ ಬಳಿಕ ಉಂಟಾದ ವಾಗ್ವಾದದ ಬಳಿಕ ಗುಂಪಿನಲ್ಲಿ ಬಂದ ಜನರು, ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಕುಟುಂಬದವರ ನೀಡಿರುವ ಮಾಹಿತಿಯ ಪ್ರಕಾರ, ಮೃತ ಇಕ್ಬಾಲ್ ತನ್ನ ಅಜ್ಜಿ ಮನೆಯಿಂದ ಹಿಂದಿರುಗುತ್ತಿದ್ದಾಗ ಅಪಘಾತವಾಗಿದೆ. ಈ ವೇಳೆ ಆತನ ಹೆಸರನ್ನು ಕೇಳಿದ ನಂತರ ಆತನ ಮೇಲೆ ದೊಣ್ಣೆ ಮತ್ತು ರಾಡ್ಗಳಿಂದ ಗುಂಪಿನಲ್ಲಿ ಬಂದ ಜನರು ಹೊಡೆದು ಕೊಂದಿರುವುದಾಗಿ ತಿಳಿಸಿದ್ದಾರೆ.
ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಗುಂಪಿನಲ್ಲಿ ಮಹಿಳೆಯರು ಕೂಡ ಇದ್ದರು ಎಂದು ವರದಿಯಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬೈಕ್ ಅಪಘಾತವಾಗಿತ್ತು. ಈ ವೇಳೆ ಜಗಳ ನಡೆದಿದ್ದು, ಆಗ ಸ್ಥಳಕ್ಕೆ ಬಂದ ಕೆಲವು ವ್ಯಕ್ತಿಗಳು ಇಕ್ಬಾಲ್ ಅವರ ಮೇಲೆ ದೊಣ್ಣೆ ಮತ್ತು ರಾಡ್ಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಘಟನೆಯ ಸಂಬಂಧ ಮಾಹಿತಿ ಕಲೆ ಹಾಕಿ ಕೆಲ ಶಂಕಿತರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.