ಹರಿಯಾಣದ ನುಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮುಗಲಭೆಯಲ್ಲಿ ಪ್ರಮುಖ ಆರೋಪಿ, ಭಜರಂಗದಳದ ಮುಖಂಡ ಬಿಟ್ಟು ಭಜರಂಗಿಯನ್ನು ಮೇವಾತ್‌ನ ಪೊಲೀಸರು ಮಂಗಳವಾರ ಬಂಧಿಸಿರುವುದಾಗಿ ವರದಿಯಾಗಿದೆ.
ಬಿಟ್ಟು ಭಜರಂಗಿಯನ್ನು ಆತನ ಫರೀದಾಬಾದ್ ನಿವಾಸದಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಈತನನ್ನು ಪೊಲೀಸರು ಬಂಧಿಸಿದ ದೃಶ್ಯವು ಸ್ಥಳೀಯ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸುಮಾರು 15ರಿಂದ 20 ಮಂದಿ ಪೊಲೀಸರು ಗುಂಪಿನಲ್ಲಿರುವುದು ಸೆರೆಯಾಗಿದೆ.
ಬಿಟ್ಟು ಭಜರಂಗಿ ಫರೀದಾಬಾದ್ ನಿವಾಸಿಯಾಗಿದ್ದು, ಈತನ ನಿಜವಾದ ಹೆಸರು ರಾಜಕುಮಾರ್. ಸ್ವಘೋಷಿತ ಗೋರಕ್ಷಕನಾಗಿ ಗುರುತಿಸಿಕೊಂಡಿರುವ ಈತ, ಗೋರಕ್ಷಾ ಭಜರಂಗದಳ ಎಂಬ ಸಂಘಟನೆಯ ಅಧ್ಯಕ್ಷ.
ಈ ಸಂಘಟನೆಯು ಇತ್ತೀಚೆಗೆ ಕರೆ ನೀಡಿದ್ದ ಬ್ರಿಜ್ ಮಂಡಲ ಯಾತ್ರೆಯ ವೇಳೆ ಕೋಮುಗಲಭೆ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಜುಲೈ 31 ರಂದು ನುಹ್‌ನಲ್ಲಿ ಭುಗಿಲೆದ್ದಿದ್ದ ಕೋಮುಗಲಭೆಯಲ್ಲಿ ಆರು ಜನರು ಸಾವನ್ನಪ್ಪಿದ್ದರು. 88 ಜನರು ಗಂಭೀರವಾಗಿ ಗಾಯಗೊಂಡಿದ್ದರು.
ಇತ್ತೀಚಿನ ಮಾಹಿತಿಯ ಪ್ರಕಾರ, ಗಲಭೆಗೆ ಸಂಬಂಧಿಸಿದಂತೆ 230 ಜನರನ್ನು ನುಹ್ ಪೊಲೀಸರು ಮತ್ತು 79 ಜನರನ್ನು ಗುರುಗ್ರಾಮ್ ಪೊಲೀಸರು ಬಂಧಿಸಿದ್ದರು ಎಂದು ತಿಳಿದುಬಂದಿದೆ.