- ಬಿಜೆಪಿಯಲ್ಲಿ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ ಎಂದ ಪರಿಷತ್ ಸದಸ್ಯ
- ಬಿಜೆಪಿ ನಾಯಕತ್ವದ ವಿರುದ್ಧವೇ ಅಸಮಾಧಾನ ಹೊರಹಾಕಿದ ಪ್ರದೀಪ್ ಶೆಟ್ಟರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದು ಬೀಗಿದ್ದಲ್ಲದೇ, ಅಧಿಕಾರದ ಚುಕ್ಕಾಣಿ ಹಿಡಿದು ನೂರು ದಿನಗಳನ್ನು ಈಗಾಗಲೇ ಪೂರೈಸಿದೆ. ಆದರೆ, ಚುನಾವಣೆಯ ಸೋಲಿನ ಹೊಡೆತದಿಂದ ಬಿಜೆಪಿ ಇನ್ನೂ ಮೇಲೆದ್ದಂಗೆ ಕಾಣುತ್ತಿಲ್ಲ ಎಂಬುದಕ್ಕೆ ಬಿಜೆಪಿಯ ಒಳಗಡೆ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷೀಕರಿಸಿದೆ.
ಈಗಿನ ಸರದಿ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಅವರದ್ದು. ಸದ್ಯ ಕಾಂಗ್ರೆಸ್ ಮುಖಂಡ, ಪರಿಷತ್ ಸದಸ್ಯ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸಹೋದರ.
ಜಗದೀಶ್ ಶೆಟ್ಟರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೊಡದೇ ಇದ್ದಾಗಲೂ ಬಿಜೆಪಿ ವಿರುದ್ಧ ಅಪಸ್ವರ ಎತ್ತದೆ, ಸುಮ್ಮನಿದ್ದ ಪ್ರದೀಪ್ ಶೆಟ್ಟರ್, ಈಗ ಅತೃಪ್ತಿಯ ಬೇಗೆಯಿಂದ ಗುಡುಗಿದ್ದು, ಬಿಜೆಪಿ ನಾಯಕತ್ವದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಅವರು, “ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ತುಳಿದಿದ್ದೇ ವಿಧಾನಸಭೆಯಲ್ಲಿ ಪಕ್ಷದ ಸೋಲಿಗೆ ಕಾರಣವಾಗಿದೆ. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ಸಮಸ್ಯೆ ಆಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಏಕ ಚಕ್ರಾಧಿಪತಿಯಂತೆ ವರ್ತಿಸುತ್ತಿದ್ದಾರೆ. ಇದನ್ನು ಅವರು ಸರಿಪಡಿಸಿಕೊಳ್ಳಬೇಕು” ಎಂದು ಪ್ರದೀಪ್ ಶೆಟ್ಟರ್ ಬಹಿರಂಗವಾಗಿಯೇ ಗುಡುಗಿದ್ದಾರೆ.
ಇದನ್ನು ಓದಿದ್ದೀರಾ? ಬಿಜೆಪಿ ನಾಯಕರಲ್ಲೇ ಒಗ್ಗಟ್ಟಿಲ್ಲ, ಹಾಗಾಗಿ ವಿಪಕ್ಷ ನಾಯಕನ ಆಯ್ಕೆ ಆಗಿಲ್ಲ : ಎಚ್ ಡಿ ದೇವೇಗೌಡ
“ಬಿಜೆಪಿಯಲ್ಲಿ ಪಕ್ಷ ನಿಷ್ಠೆ ಬಿಟ್ಟು ಬಕೆಟ್ ಹಿಡಿದವರಿಗೆ ಮನ್ನಣೆ ನೀಡಲಾಗುತ್ತಿದೆ. ಅಲ್ಲದೇ ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಮಾಜಿ ಸಚಿವರಾದ ಮುನೇನಕೊಪ್ಪ, ಮಾಧುಸ್ವಾಮಿ, ರೇಣುಕಾಚಾರ್ಯ, ಮಾಜಿ ಶಾಸಕ ಚಿಕ್ಕನಗೌಡರ ಸೇರಿದಂತೆ ಅನೇಕ ಲಿಂಗಾಯತ ನಾಯಕರ ಒಂದು ಕಾಲು ಪಕ್ಷದಿಂದ ಹೊರಗಿದೆ” ಎಂದಿದ್ದಾರೆ.
“ವಿಧಾನ ಪರಿಷತ್ ಸದಸ್ಯನಾಗಿದ್ದರೂ ನನ್ನನ್ನು ಕೆಲವು ಕಾರ್ಯಕ್ರಮಗಳಿಗೆ ಕಡೆಗಣಿಸಿದ್ದಾರೆ. ನಾಲ್ಕೈದು ಕಾರ್ಯಕ್ರಮಗಳಲ್ಲಿ ಕಡೆಗಣನೆ ಮಾಡಲಾಗಿದೆ. ಇದು ನನಗೆ ಬೇಸರ ತಂದಿದೆ. ಯಾಕೆ ಹೀಗೆ ಆಗುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಆದರೆ ವೀರಶೈವ ಲಿಂಗಾಯತ ನಾಯಕರಿಗೆ ನಾಯಕತ್ವ ಕೊಟ್ಟರೆ ಮಾತ್ರ ಬಿಜೆಪಿ ಗೆಲ್ಲಲು ಸಾಧ್ಯ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ವೀರಶೈವ ಲಿಂಗಾಯತರಿಗೆ ಕೊಡಬೇಕು. ನಾನು ಪಕ್ಷ ಬಿಟ್ಟು ಹೋಗಲ್ಲ. ಆದರೆ ಈ ಎಲ್ಲ ವಿಚಾರಗಳ ಬಗ್ಗೆ ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತೇನೆ” ಎಂದು ಪ್ರದೀಪ್ ಶೆಟ್ಟರ್ ಬಹಿರಂಗವಾಗಿಯೇ ರಾಜ್ಯ ಬಿಜೆಪಿ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.
ಇದು ಓದಿ : ನೆಟ್ಟಿಗರ ಮನಗೆದ್ದ ವಿರಾಟ್ ಕೊಹ್ಲಿಯ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಅಭಿಮಾನಿ: ವಿಡಿಯೋ ವೈರಲ್
“ಕಾಂಗ್ರೆಸ್‍ನ ಅನೇಕ ದೊಡ್ಡ ನಾಯಕರು ನನ್ನ ಸಂಪರ್ಕ ಮಾಡಿದ್ದಾರೆ. ಈಗಾಗಲೇ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ಸಮಸ್ಯೆ ಆಗಿದೆ. ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ. ಪಕ್ಷದಲ್ಲಿ ಲಿಂಗಾಯತ ನಾಯಕರೇ ಇಲ್ಲ. ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಇರುವ ಅಲ್ಪ ಸ್ವಲ್ಪ ಲಿಂಗಾಯತ ನಾಯಕರನ್ನು ಕೈಬಿಟ್ಟರೆ ಬಿಜೆಪಿ ಕೆಟ್ಟ ಸ್ಥಿತಿಗೆ ತಲುಪುತ್ತದೆ. ರಾಜ್ಯದ ಬಿಜೆಪಿ ಉಸ್ತುವಾರಿ ಬದಲಾಗಬೇಕು” ಎಂದು ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಆಗ್ರಹಿಸಿದ್ದಾರೆ.