- ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಚಿತ್ತರಂಗ ಕಾದಂಬರಿ ಬಿಡುಗಡೆ
- ಕೃತಿ ಲೋಕಾರ್ಪಣೆ ಮಾಡಿದ ಹಿರಿಯ ನಟ ಶ್ರೀನಿವಾಸ ಪ್ರಭು
ಸಿನಿಮಾ ರಂಗದಲ್ಲಿ ಏನು ನಡೆದರೂ ನಾವು ಚಿಂತಿಸುವುದಿಲ್ಲ. ಏಕೆಂದರೆ ಸಿನಿಮಾಗಿಂತ ವಾಸ್ತವ ಬದುಕು ಭಿನ್ನವಾಗಿದೆ ಎಂದು ಹಿರಿಯ ಲೇಖಕ ಅಗ್ರಹಾರ ಕೃಷ್ಣಮೂರ್ತಿ ಅವರು `ಚಿತ್ತರಂಗ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತ್ಯಲೋಕ ಪಬ್ಲಿಕೇಷನ್ಸ್ ಹಾಗೂ ಬುಕ್‌ಬ್ರಹ್ಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಲೇಖಕಿ ಆಶಾ ರಘು ಅವರ ‘ಚಿತ್ತರಂಗ’ ಕಾದಂಬರಿ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ನಿಜ ಜೀವನದ ಘಟನೆಗಳನ್ನೇ ನಾವು ಸಿನಿಮಾಗೆ ಕೊಂಡಿಯಾಗಿಸುತ್ತೇವೆ. ಆದ್ದರಿಂದ ಸಿನಿಮಾ ರಂಗದ ವ್ಯಕ್ತಿಗಳ ಬಗ್ಗೆ ನಾವು ಚಿಂತಿಸುವುದಿಲ್ಲ. ಅವರಿಗಿಂತ ನಮ್ಮ ಬದುಕು ಭಿನ್ನವಾಗಿದೆ” ಎಂದು ತಿಳಿಸಿದರು.
“ಸಿನಿಮಾ ಜಗತ್ತನ್ನು ನಾವು ದೂರ ನಿಂತೇ ನೋಡುತ್ತೇವೆ. ಸಿನಿಮಾ ರಂಗವನ್ನು ನೋಡುವ ಹಾಗೂ ಅನುಭವಿಸುವ ಮೂಲಕ ಕಲಾ ಜಗತ್ತಿನ ಸುಖ ಪಡೆಯುತ್ತೇವೆ” ಎಂದು ವಿವರಿಸಿದರು.
ಹಿರಿಯ ನಟ ಶ್ರೀನಿವಾಸ ಪ್ರಭು ಕೃತಿ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ, “ಕೃತಿಯ ಕೇಂದ್ರ ಪಾತ್ರಗಳು ಮನೋ ಆಳಕ್ಕೆ ಇಳಿದು ಬಗೆಯುತ್ತಾ ಎಳೆ ಎಳೆಯಾಗಿ ಮನೋ ವ್ಯಾಪಾರಗಳ ಬಿಡಿಸಿ, ಅನಾವರಣಗೊಳಿಸುವ ಲೇಖಕಿಯ ನಿರೂಪಣಾ ಶೈಲಿ ಇಲ್ಲಿ ಮುಖ್ಯವಾಗಿದೆ. ರೋಚಕ ಘಟನೆಗಳಿಂದ ಹಾಗೂ ನಿರೀಕ್ಷಿತ ವಿಚಾರಗಳಿಂದ ಕೃತಿಯನ್ನು ಪಾರು ಮಾಡುವುದು ಲೇಖಕಿಗೆ ಸವಾಲಾಗಿದೆ” ಎಂದು ತಿಳಿಸಿದರು.
“ಒಬ್ಬ ನಿರ್ದೇಶಕ ತಾನು ನಿರ್ದೇಶಿಸುವ ಚಿತ್ರ ಅಥವಾ ನಾಟಕವನ್ನು ತನ್ನ ಮನೋರಂಗದಲ್ಲಿ ಪೂರ್ವಭಾವಿಯಾಗಿ ನೋಡಿರಬೇಕು. ಲೇಖಕರು ತಮ್ಮ ಮನೋರಂಗದಲ್ಲಿ ಎಲ್ಲ ಘಟನೆಗಳನ್ನು ಸಾಕ್ಷಾತ್ಕಾರ ಮಾಡಿಕೊಂಡು ಕಾದಂಬರಿ ರೂಪವನ್ನು ಕೊಟ್ಟಿದ್ದಾರೆ. ಚಿತ್ತರಂಗ ಇನ್ನಿಲ್ಲದ ಹಾಗೆ ಓದುಗರ ತೆಕ್ಕೆಗೆ ಆವರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.
ವಿಮರ್ಶಕ ಎಚ್.ಎಸ್. ಸತ್ಯನಾರಾಯಣ, “ಲೇಖಕಿ ಮೂಲ ಕತೆಯ ಸೂಕ್ಷ್ಮತೆಯ ಬರವಣಿಗೆಯನ್ನು ಇಟ್ಟುಕೊಂಡು ಕೃತಿಗೆ ಚಿತ್ತರಂಗ ಎಂದು ಹೆಸರಿಟ್ಟಿದ್ದಾರೆ. ಸಿನಿಮಾ ಹಾಗೂ ಸಾಹಿತ್ಯಕ್ಕೆ ಶೀರ್ಷಿಕೆ ಬಹುಮುಖ್ಯ ಎಂಬುದು ಇಲ್ಲಿ ಸಾಬೀತಾಗಿದೆ. ಇದರ ವಸ್ತು ವಿಶ್ಲೇಷಣೆ, ನಿರೂಪಣೆ ಮಹತ್ವ ಪಡೆದುಕೊಂಡಿದೆ” ಎಂದು ಬಣ್ಣಿಸಿದರು.
ಹಿರಿಯ ಪತ್ರಕರ್ತ ಗಣೇಶ ಕಾಸರಗೋಡು, “ಇದು ಸುಬ್ಬಣ್ಣ ಅಲ್ಲ, ನಿರ್ದೇಶಕ ಪುಟ್ಟಣ್ಣ ಎಂದು ಘಂಟಾಘೋಷವಾಗಿ ಹೇಳಬಹುದು. ಚಿತ್ತರಂಗ ಒಳಗಿನ ಮಾನಸಿಕ ವಿಶ್ಲೇಷಣೆಯೇ ಈ ಕೃತಿ. ಸಿನಿಮಾವಾಗುವಂತಹ ಎಲ್ಲ ಸದಭಿರುಚಿಯ ವಿಚಾರಗಳು ಕೃತಿಯೊಳಗೆ ಅಡಕವಾಗಿದೆ” ಎಂದು ವಿಶ್ಲೇಷಿಸಿದರು.
ಈ ಸುದ್ದಿ ಓದಿದ್ದೀರಾ? ರಾಹುಲ್ ಗಾಂಧಿ ಸಂಸತ್ತಿನಿಂದ ಅನರ್ಹ | ಹತ್ತು ಗಂಭೀರ ಪ್ರಶ್ನೆಗಳು
ಲೇಖಕಿ ಆಶಾ ರಘು, “ಆಧುನಿಕ ಕಾಲಘಟ್ಟದ ನನ್ನ ಕಾದಂಬರಿ ಚಿತ್ತರಂಗ. ಇದು ನನ್ನ ಸಿನಿಮಾರಂಗದ ಕುರಿತಾದ ವಿಭಿನ್ನ ಪ್ರಯತ್ನವಾಗಿದೆ. 70-80ರ ದಶಕದ ಕನ್ನಡ ಚಿತ್ರರಂಗದ ವಾತಾವರಣವನ್ನು ಒಳಗೊಂಡಂತಹ ಕಾದಂಬರಿ ಇದು” ಎಂದು ಹೇಳಿದರು.