ಕೇರಳ | ಸಾರಿಗೆ ಅಧಿಕಾರಿಗಳು- ರಾಬಿನ್ ಬಸ್ ನಡುವೆ ವಿಚಿತ್ರ ವಿವಾದ; ಖಾಸಗಿ ಬಸ್‌ ಪರ ನಿಂತ ಜನ!

Date:

Advertisements

ಮಾಹಿತಿ: ಹಕೀಂ ಪದಡ್ಕ, ಕೊಚ್ಚಿ, ಕೇರಳ

ಕೇರಳದಲ್ಲಿ ಕಳೆದ ಮೂರು ತಿಂಗಳ ಹಿಂದೆ ಮೋಟಾರು ವಾಹನ ಇಲಾಖೆ(ಎಂವಿಡಿ) ಹಾಗೂ ಖಾಸಗಿ ‘ರಾಬಿನ್ ಬಸ್’ ನಡುವೆ ಆರಂಭಗೊಂಡಿದ್ದ ಪುಟ್ಟ ವಿವಾದವೊಂದು, ಸದ್ಯ ದೊಡ್ಡಮಟ್ಟಿಗೆ ದಕ್ಷಿಣದ ರಾಜ್ಯದಲ್ಲಿ ಸುದ್ದಿಯಾಗಿ ಮಾರ್ಪಟ್ಟಿದೆ.

ಈ ವಿವಾದ ಸದ್ಯ ಕೇರಳದಲ್ಲಿ ಸಾರಿಗೆ ಅಧಿಕಾರಿಗಳು ಮತ್ತು ರಾಬಿನ್ ಬಸ್ ನಡುವೆ ಪ್ರತಿಷ್ಠೆಯ ವಿವಾದವಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರು ಖಾಸಗಿ ಬಸ್ ಪರ ನಿಂತು, ಬೆಂಬಲ ನೀಡುತ್ತಿದ್ದಾರೆ. ಬಸ್ ಬಂದಲ್ಲೆಲ್ಲ ಹೂವು ಹಾರ ಹಾಕಿ, ಸ್ವಾಗತಿಸುತ್ತಿದ್ದಾರೆ. ಕೇರಳ ಸರ್ಕಾರಿ ಅಧಿಕಾರಿಗಳು ಖಾಸಗಿ ವ್ಯಕ್ತಿಗಳು ಬಸ್ ಸರ್ವಿಸ್ ನಡೆಸದಂತೆ ನಡೆಸುತ್ತಿರುವ ಷಡ್ಯಂತ್ರ ಇದು ಎಂದು ಆರೋಪಿಸುತ್ತಿದ್ದು, ಹೀಗಾಗಿ ಈ ಹೋರಾಟಕ್ಕೆ ನೂರಾರು ಮಂದಿ ಬೆಂಬಲ ನೀಡುತ್ತಿದ್ದಾರೆ.

Advertisements

ROBIN BUS KERALA 1

ಮೂರು ತಿಂಗಳ ಹಿಂದೆ ಕೇರಳದ ಪತ್ತನಂತಿಟ್ಟ ಜಿಲ್ಲೆಯ ರಾಣಿಯಿಂದ ತಮಿಳುನಾಡಿನ ಕೊಯಮತ್ತೂರು ಕಡೆಗೆ ‘ರಾಬಿನ್’ (ROBIN) ಎಂಬ ಹೆಸರಿನ ಖಾಸಗಿ ಬಸ್ ಸರ್ವಿಸ್ ಆರಂಭಿಸಿತು. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಎಂವಿಡಿ(Motor Vehicle Department) ಇಲಾಖೆಯ ಅಧಿಕಾರಿಗಳು, ಹಲವು ಕಾರಣಗಳನ್ನು ಉಲ್ಲೇಖಿಸಿ ಬಸ್ಸಿನ ‘ಫಿಟ್ನೆಸ್ ಸರ್ಟಿಫಿಕೇಟ್’ ರದ್ದುಗೊಳಿಸಿದ್ದರು. ಆ ಬಳಿಕ ಇದನ್ನು ಸವಾಲಾಗಿ ಸ್ವೀಕರಿಸಿದ ಬಸ್ಸಿನ ನಿರ್ವಹಣೆ ಮಾಡುತ್ತಿರುವ ಮಾಲೀಕ, ನಿರಂತರವಾಗಿ ಹೋರಾಟ ನಡೆಸಿದರು. ಕೊನೆಗೆ 45 ದಿನಗಳ ಬಳಿಕ ಸಾರಿಗೆ ಅಧಿಕಾರಿಗಳು ಮತ್ತೆ ಸಂಚರಿಸಲು ಅವಕಾಶ ನೀಡಿದರು.

‘ಫಿಟ್ನೆಸ್ ಸರ್ಟಿಫಿಕೇಟ್’ ಸಿಕ್ಕ ಕೂಡಲೇ ಮತ್ತೆ ಸೇವೆ ಆರಂಭಿಸಿದ ಬಸ್ಸನ್ನು ನಾನಾ ಕಾರಣ ನೀಡಿ, ಮತ್ತೆ ಸಾರಿಗೆ ಅಧಿಕಾರಿಗಳು ಕಸ್ಟಡಿಗೆ ಪಡೆದುಕೊಂಡರು.ಈ ಹಿನ್ನೆಲೆಯಲ್ಲಿ ‘ರಾಬಿನ್’ ಬಸ್‌ನ ಮೂಲ ಮಾಲೀಕರಿಂದ ‘ಪವರ್ ಆಫ್ ಅಟಾರ್ನಿ’ ಮೂಲಕ ಕಾರ್ಯಾಚರಣೆಯ ನಿಯಂತ್ರಣವನ್ನು ನೋಡಿಕೊಳ್ಳುತ್ತಿರುವ ಬೇಬಿ ಗಿರೀಶ್ ನ್ಯಾಯಾಲಯದ ಕದ ತಟ್ಟಿದರು.

Girish baby
ಬೇಬಿ ಗಿರೀಶ್

ಅರ್ಜಿಯ ವಿಚಾರಣೆ ನಡೆಸಿದ ‘ಜುಡೀಶಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್’ ಬಸ್ ಅನ್ನು ಮಾಲೀಕನಿಗೆ ಮರಳಿಸುವಂತೆ ತೀರ್ಪು ಕೊಟ್ಟಿತು. ನಂತರ ನವೆಂಬರ್ 18 ರಂದು ‘ರಾಬಿನ್’ ಬಸ್ ಮತ್ತೆ ರಸ್ತೆಗಿಳಿಯಿತು.

‘ರಾಣಿ’ ಪ್ರದೇಶದ ಬಸ್‌ನಿಲ್ದಾಣದಿಂದ ಜನರನ್ನು ತುಂಬಿಸಿಕೊಂಡು ಕೊಯಂಬತ್ತೂರು ಕಡೆಗೆ ಬೆಳ್ಳಂಬೆಳಗ್ಗೆಯೇ ಬಸ್ 100 ಮೀ. ಮುಂದಕ್ಕೆ ಚಲಿಸುತ್ತಿದ್ದಂತೆಯೇ ಸಾರಿಗೆ ಅಧಿಕಾರಿಗಳು ಮತ್ತೆ ತಡೆದಿದ್ದಾರೆ. ಅಲ್ಲಿ ದಂಡ ಕಟ್ಟಿ ಮುಂದೆ ಹೋಗುವಾಗ ಮತ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳು ತಡೆದಿದ್ದಾರೆ.

ಹೀಗೆ ಒಂದೇ ದಾರಿಯಲ್ಲಿ ಅಂದರೆ ಕೊಯಮತ್ತೂರು ತಲುಪುವವರೆಗೆ ನಾಲ್ಕು ಬಾರಿ ಸಾರಿಗೆ ಅಧಿಕಾರಿಗಳು ಬಸ್ ಅನ್ನು ತಡೆದು ದಂಡ ವಿಧಿಸಿದರು. ಹೀಗೆ ಒಂದೇ ದಿನ ‘ರಾಬಿನ್’ ಬಸ್ ಮಾಲಕ ಗಿರೀಶ್ ಗೆ ವಿಧಿಸಲ್ಪಟ್ಟ ಒಟ್ಟು ದಂಡ ಬರೋಬ್ಬರಿ ₹71,000 ರೂಪಾಯಿ. ಸಣ್ಣಮಟ್ಟದಲ್ಲಿದ್ದ ವಿವಾದವು, ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ದೊಡ್ಡ ವಿವಾದವಾಗಿ ಪರಿವರ್ತನೆಯಾಯಿತು. ಸಾರ್ವಜನಿಕರು ಕೂಡ ಈ ವಿಚಾರದಲ್ಲಿ ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ROBIN 2

ಈ ಮಧ್ಯೆ ಇನ್ನೊಂದು ವಿಚಿತ್ರ ವಿಷಯವೇನೆಂದರೆ, ‘ರಾಬಿನ್’ ಬಸ್‌ಗೆ ಸ್ಪರ್ಧೆ ನೀಡಿ ಮರುದಿನವೇ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಕೂಡ ಅದೇ ಸಮಯಕ್ಕೆ ಸರ್ವಿಸ್‌ಗೆ ಇಳಿಸಲಾಯಿತು. ಆದರೆ ವಿಪರ್ಯಾಸವೇನೆಂದರೆ ಬಸ್ಸಿಗೆ ಒಬ್ಬನೇ ಒಬ್ಬ ಪ್ರಯಾಣಿಕ ಹತ್ತಲೇ ಇಲ್ಲ, ಬಸ್‌ ಜನರಿಲ್ಲದೇ ಅಲ್ಲಿಂದ ತೆರಳಿತ್ತು‌. ಕೆಎಸ್‌ಆರ್‌ಟಿಸಿ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳ ಈ ನಡೆಯು ಸಾರ್ವಜನಿಕರಲ್ಲಿ ಮತ್ತಷ್ಟು ಅನುಮಾನ ಮೂಡುವಂತೆ ಮಾಡಿತು.

ಕೆ.ಎಸ್.ಆರ್.ಟಿ.ಸಿ ಗೆ ಸಾರ್ವಜನಿಕರು ಛೀಮಾರಿ ಹಾಕಿ, ಕೇವಲ ಒಂದು ಖಾಸಗಿ ಬಸ್‌ಗಾಗಿ ಇಡೀ ಸರ್ಕಾರದ ವ್ಯವಸ್ಥೆಯೇ ಅಡ್ಡಗಾಲು ಹಾಕುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದರು. ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಪ್ರಜೆಗೂ ಉದ್ಯೋಗ ಮಾಡುವ ಅವಕಾಶ ಇದೆ. ಕೇರಳದಲ್ಲಿ ಯಾಕೆ ಅದಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಸಾರ್ವಜನಿಕರು ಮಾಧ್ಯಮಗಳ ಮೂಲಕ ಹಾಗೂ ಸೋಷಿಯಲ್‌ ಮೀಡಿಯಾಗಳಲ್ಲಿ ಪ್ರಶ್ನಿಸ ತೊಡಗಿದರು.

ಈ ನಡುವೆ ‘ರಾಬಿನ್ ಬಸ್’ ಸರ್ವಿಸ್ ನಡೆಸಲು ಆರಂಭಿಸಿದ ದಿನ ‘ಅನುಮತಿ ಪಡೆದುಕೊಳ್ಳಲಿಲ್ಲ’ ಎಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಾರಿಗೆ ಅಧಿಕಾರಿಗಳು ₹7500 ರೂಪಾಯಿ ದಂಡ ವಿಧಿಸಿದರು. ಬಳಿಕ ಅಲ್ಲಿನ ಅಧಿಕಾರಿಗಳಿಗೆ ಬಸ್‌ನ ಮಾಲೀಕರು ಹೊಸ ಕಾನೂನಿನಲ್ಲಿ ಆಲ್ ಇಂಡಿಯಾ ಪರ್ಮಿಟ್ ಇರುವ ಬಸ್ ಗೆ ಎಲ್ಲ ರಾಜ್ಯಗಳಲ್ಲಿ ಸರ್ವಿಸ್ ನೀಡಲು ಅವಕಾಶ ಇದೆ ಎಂದು ಮನವರಿಕೆ ಮಾಡಿದ ಬಳಿಕ ಬಸ್‌ ಸರ್ವಿಸ್ ನಡೆಸಲು ಅನುಮತಿಸಿದ್ದರು.

ಈ ಎಲ್ಲ ಬೆಳವಣಿಗೆಗಳು ಕೇರಳದಲ್ಲಿ ಜನರು ಹಾಗೂ ಸಾರಿಗೆ ಅಧಿಕಾರಿಗಳ ನಡುವೆ ವ್ಯಾಪಕ ಕಿಚ್ಚಿಗೆ ಕಾರಣವಾಗಿದೆ.

ಈ ವಿವಾದ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾದ ಪರಿಣಾಮ ಕೇರಳದಲ್ಲಿ ಈಗ ರಾಬಿನ್ ಬಸ್‌ಗೆ ಅಪಾರ ಅಭಿಮಾನಿಗಳ ಬಳಗವೇ ಸೃಷ್ಟಿಯಾಗಿದೆ. ರಾಬಿನ್ ಬಸ್ ಹೆಸರಿನಲ್ಲೇ ಕೆಲವೊಂದು ಸೋಷಿಯಲ್‌ ಮೀಡಿಯಾ ಫ್ಯಾನ್ ಪೇಜ್‌ಗಳು ಕೂಡ ಆರಂಭಿಸಲಾಗಿದೆ.

ಹಲವು ಬಾರಿ ಆರ್.ಟಿ.ಒ ಮತ್ತು ಎಮ್.ವಿ.ಡಿ ಸೇರಿ ತನ್ನ ತಡೆದರೂ ಬಸ್ ಸರ್ವಿಸ್ ನಡೆಸುತ್ತಿರುವ ಬೇಬಿ ಗಿರೀಶ್, “ತಾನು ಎಲ್ಲ ರೀತಿಯ ಪರ್ಮಿಟ್‌ನೊಂದಿಗೇ ಬಸ್ ಸರ್ವಿಸ್ ನಡೆಸುತ್ತಿದ್ದೇನೆ. ತಡೆಯುವುದಕ್ಕೆ ಸಾಧ್ಯವಿದ್ದರೆ ತಡೆಯಿರಿ” ಎಂದು ಸವಾಲು ಹಾಕಿದ್ದರು. ಈ ಮಧ್ಯೆ ರಾಬಿನ್‌ಗೆ ಸವಾಲಾಗಿ ರಸ್ತೆಗಳಿದ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್‌ಗೆ ಪರ್ಮಿಟ್‌ ಇರಲಿಲ್ಲ ಎನ್ನುವ ಆರೋಪ ಕೂಡ ಕೇಳಿಬಂದಿದೆ.

ಅಷ್ಟಕ್ಕೂ ಈ ‘ರಾಬಿನ್ ಬಸ್’ ಅನ್ನು ಯಾಕೆ ಗುರಿಪಡಿಸಲಾಗುತ್ತಿದೆ?
ನಮ್ಮ ದೇಶದಲ್ಲಿ ಎರಡು ರೀತಿಯ ವಾಹನಗಳು ಓಡುತ್ತಿವೆ. ಒಂದು ಕಾಂಟ್ರಾಕ್ಟ್ ಕ್ಯಾರೇಜ್. ಇನ್ನೊಂದು ಸ್ಟೇಜ್ ಕ್ಯಾರೇಜ್. ಗುತ್ತಿಗೆ ಕ್ಯಾರೇಜ್‌ಗಳು ಪೂರ್ವ-ಬಾಡಿಗೆ ಗುತ್ತಿಗೆ ಆಧಾರದ ಮೇಲೆ ಬಾಡಿಗೆಗೆ ಪಡೆದ ವಾಹನಗಳ ಪ್ರಕಾರವಾಗಿದೆ. ಇದಕ್ಕೆ ಟಿಕೆಟ್ ಪಡೆದು, ಬೋರ್ಡ್ ಅಳವಡಿಸಿ ಸರ್ವಿಸ್ ನಡೆಸಲು ಅನುಮತಿಯಿಲ್ಲ.

ಮೋಟಾರು ವಾಹನಗಳ ಕಾಯಿದೆಯು ಸ್ಟೇಜ್ ಕ್ಯಾರೇಜ್‌ಗೆ ತಾತ್ಕಾಲಿಕ ವಿಶೇಷ ಗುತ್ತಿಗೆ ಕ್ಯಾರೇಜ್ ಪರವಾನಿಗೆಯನ್ನು ಒದಗಿಸುತ್ತದೆ. ಆದರೆ ಕಾಂಟ್ರಾಕ್ಟ್ ಕ್ಯಾರೇಜ್‌ಗಳಿಗೆ ಸ್ಟೇಜ್ ಕ್ಯಾರೇಜ್ ಪರ್ಮಿಟ್ ಅನ್ನು ತಾತ್ಕಾಲಿಕವಾಗಿ ನೀಡಲು ಅನುಮತಿಸಲಾಗುವುದಿಲ್ಲ. ಇದುವರೆಗೆ ಕೇಂದ್ರ ಮೋಟಾರು ವಾಹನ ನಿಯಮಗಳ ಪ್ರಕಾರ ಟೂರಿಸ್ಟ್ ಬಸ್‌ಗಳು ಸಂಚರಿಸುತ್ತಿದ್ದವು. ಆಗ ಹಲವು ರಾಜ್ಯಗಳಲ್ಲಿ ಪ್ರತ್ಯೇಕ ತೆರಿಗೆ ಕಟ್ಟಬೇಕಿತ್ತು. ಆ ಅನಾನುಕೂಲತೆಯನ್ನು ತಪ್ಪಿಸಲು 2023ರಲ್ಲಿ ಅಖಿಲ ಭಾರತ ಟೂರಿಸ್ಟ್ ಪರ್ಮಿಟ್ ನಿಯಮವನ್ನು ಪರಿಚಯಿಸಲಾಯಿತು. ಅದರಂತೆ, ಭಾರತದಲ್ಲಿನ ಯಾವುದೇ ರಾಜ್ಯದಲ್ಲಿ ತೆರಿಗೆಯನ್ನು ಪಾವತಿಸುವ ಮೂಲಕ ಕಾಂಟ್ರಾಕ್ಟ್ ಕ್ಯಾರೇಜ್ ಅನ್ನು ನಿರ್ವಹಿಸುವ ಬಸ್ ಮಾಲೀಕರು ವಾರ್ಷಿಕವಾಗಿ ರೂ.3 ಲಕ್ಷದ ಪರವಾನಿಗೆ ಶುಲ್ಕವನ್ನು ಪಾವತಿಸಿ, ಆ ಬಳಿಕ ಭಾರತದ ಯಾವುದೇ ರಾಜ್ಯದಲ್ಲಿ ಸರ್ವಿಸ್ ಮಾಡಲು ಅವಕಾಶ ನೀಡಲಾಗಿದೆ.

FINE

ಈ ಹೊಸ ಕಾನೂನಿನ ಕೆಲವು ನಿಬಂಧನೆಗಳ ಪ್ರಕಾರ, ಪ್ರಸ್ತುತ ಕಾಂಟ್ರಾಕ್ಟ್ ಕ್ಯಾರೇಜ್ ಆಗಿರುವ ತನ್ನ ಬಸ್ ಅನ್ನು ಸ್ಟೇಜ್ ಕ್ಯಾರೇಜ್‌ನಂತೆ ಬೋರ್ಡ್ ಇಟ್ಟು, ಸ್ಟಾಪ್‌ನಲ್ಲಿ ನಿಲ್ಲಿಸಿ ಜನರನ್ನು ಹತ್ತಿಸಿಕೊಳ್ಳಬಹುದು ಎಂದು ರಾಬಿನ್ ಬಸ್ ಮಾಲೀಕ ಗಿರೀಶ್ ಹೇಳಿಕೊಂಡಿದ್ದಾರೆ.

ಆದರೆ, “ಹೊಸ ಕಾನೂನಿನಲ್ಲಿ ಅಂಥದ್ದೇನೂ ಇಲ್ಲ” ಎಂದು ನಿರಂತರವಾಗಿ ರಾಬಿನ್ ಬಸ್‌ ಅನ್ನು ತಡೆದು ದಂಡ ವಸೂಲಿ ಮಾಡುತ್ತಿರುವ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ. ಹಾಗಾಗಿ, ಇದರ ವಿರುದ್ಧ ರಾಬಿನ್ ಬಸ್‌ನ ಮೂಲ ಮಾಲೀಕರ ಜೊತೆಗೆ ಮಾತುಕತೆ ನಡೆಸಿ, ಬೇಬಿ ಗಿರೀಶ್ ಅವರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ ಈ ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಹೈಕೋರ್ಟ್ ಮಾತ್ರವಲ್ಲದೆ, ಸುಪ್ರೀಂ ಕೋರ್ಟಿಗೂ ಅರ್ಜಿ ಸಲ್ಲಿಸಿದ್ದು, ಅಂತಾರಾಜ್ಯ ಸರ್ವಿಸ್ ಬಸ್ ನಡೆಸಲು ಅವಕಾಶ ನೀಡುವಂತೆ ಕೋರಿ, ಅರ್ಜಿ ಸಲ್ಲಿಸಲಾಗಿದೆ.

ಈ ಮಧ್ಯೆ ಎರಡು ದಿನಗಳ ಹಿಂದೆ ಸುಪ್ರೀಂ ಕೋರ್ಟ್ ರಾಬಿನ್ ಬಸ್ ಅನ್ನು ತಡೆಯದಂತೆ ಕೇರಳ ಮತ್ತು ತಮಿಳುನಾಡು ಸರ್ಕಾರಕ್ಕೆ ಆದೇಶ ಹೊರಡಿಸಿರುವುದಾಗಿ ವರದಿಯಾಗಿದೆ. ಈ ಆದೇಶದ ನಡುವೆಯೂ ಕೂಡ ನ.23ರಂದು ಮಧ್ಯರಾತ್ರಿ ರಾಬಿನ್ ಬಸ್ ಅನ್ನು ಮತ್ತೊಮ್ಮೆ ಮೋಟಾರು ವಾಹನ ಇಲಾಖೆ(ಎಂವಿಡಿ) ವಶಕ್ಕೆ ಪಡೆದಿರುವುದಾಗಿ ಕೇರಳದ ಮಾಧ್ಯಮಗಳು ವರದಿ ಮಾಡಿದೆ.

ರಾಬಿನ್ ಬಸ್ ಪರವಾಗಿ ವಾದಿಸುತ್ತಿದ್ದ ವಕೀಲ ನಿಧನ

ಈ ಎಲ್ಲ ವಿವಾದಗಳು ಸುದ್ದಿಯಲ್ಲಿರುವಾಗಲೇ, ರಾಬಿನ್ ಬಸ್ ಪರ ಕೇರಳ ಹೈಕೋರ್ಟಲ್ಲಿ ವಾದಿಸುತ್ತಿದ್ದ 57ರ ಹರೆಯದ ವಕೀಲ ದಿನೇಶ್ ಮೆನನ್ ನಿಧನರಾಗಿದ್ದಾರೆ. ರಾಬಿನ್ ಬಸ್‌ಗೆ ಸಂಬಂಧಿಸಿದಂತೆ ವಾದಿಸಲು ಹೈಕೋರ್ಟ್‌ಗೆ ತೆರಳುತ್ತಿದ್ದಾಗ ಅವರು ಹೃದಯಾಘಾತಕ್ಕೊಳಗಾಗಿ, ಮೃತಪಟ್ಟಿದ್ದಾರೆ. ಬಸ್ ಮಾಲೀಕ ಗಿರೀಶ್ ಪರವಾಗಿ ದಿನೇಶ್ ಮೆನನ್ ಅವರು ಸಂಬಂಧಿತ ವ್ಯಾಜ್ಯಗಳನ್ನು ನಿಭಾಯಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ನಿಧನದ ಹಿನ್ನೆಲೆಯಲ್ಲಿ ತಾನು ನೂತನ ವಕೀಲರನ್ನು ನೇಮಿಸಿರುವುದಾಗಿ ಗಿರೀಶ್ ಮಾಹಿತಿ ನೀಡಿದ್ದಾರೆ. ಈ ವಿವಾದವು ಮುಂದೆ ಎಲ್ಲಿಯವರೆಗೆ ಹೋಗಿ ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ.

ಸದ್ಯಕ್ಕಂತೂ ರಾಬಿನ್ ಬಸ್ ಕೇರಳ ಯೂಟ್ಯೂಬರ್ ಹಾಗೂ ವ್ಲಾಗರ್‌ಗಳಿಗೆ ವೈರಲ್ ಕಂಟೆಂಟ್ ಆಗಿಬಿಟ್ಟಿರುವುದು ವಾಸ್ತವ. ಸರ್ಕಾರಿ ಅಧಿಕಾರಿಗಳ ವಿರುದ್ಧ ಹೋರಾಡುತ್ತಿರುವ ವಿಶೇಷ ಚೇತನ ಗಿರೀಶ್ ಬೇಬಿಯ ಧೈರ್ಯವನ್ನು ಜನ ಮೆಚ್ಚಿ, ಬೆಂಬಲ ನೀಡುತ್ತಿದ್ದಾರೆ. ಗಿರೀಶ್ ಅವರು ಬೈಕ್ ಅಪಘಾತದಲ್ಲಿ ಒಂದು ಕೈಯ ಸ್ವಾಧೀನ ಕಳೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

hakeem padadka
ಹಕೀಂ ಪದಡ್ಕ(ಹವ್ಯಾಸಿ ಬರಹಗಾರ) ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನವರು. ಕೇರಳದ ಕೊಚ್ಚಿಯಲ್ಲಿ ಉದ್ಯೋಗದಲ್ಲಿದ್ದಾರೆ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X