- ಮಧ್ಯಪ್ರದೇಶದ ಕಟ್ನಿಯಲ್ಲಿ ನಡೆದ ಘಟನೆ
- ಪ್ರಕರಣ ದಾಖಲಾಗಿದೆ ಎಂದ ಲೋಕಾಯುಕ್ತ ಪೊಲೀಸರು
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆ ಸಿಕ್ಕಿಬೀಳುವ ಭಯದಲ್ಲಿ ಲಂಚವಾಗಿ ಪಡೆದಿದ್ದ ಹಣವನ್ನು ಬಾಯಿಗೆ ಹಾಕಿ, ನುಂಗಿದ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಕಟ್ನಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಯೊಬ್ಬ ವ್ಯಕ್ತಿಯೋರ್ವನಿಂದ ಲಂಚವಾಗಿ ಪಡೆದಿದ್ದ 5 ಸಾವಿರ ರೂ. ಹಣವನ್ನು ಪೊಲೀಸರ ದಾಳಿಯಾಗುತ್ತಿದ್ದಂತೆಯೇ ಹಣವನ್ನು ನುಂಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೇಳೆ ಹಣವನ್ನು ನುಂಗುತ್ತಿರುವ ದೃಶ್ಯವನ್ನು ಲೋಕಾಯುಕ್ತ ಅಧಿಕಾರಿಗಳು ಸೆರೆ ಹಿಡಿದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಈ ಘಟನೆ ನಿನ್ನೆ(ಜು.24)ರಂದು ನಡೆದಿದ್ದು, ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಕಂದಾಯ ಇಲಾಖೆಯ ಅಧಿಕಾರಿಯನ್ನು ಪಟ್ವಾರಿ ಗಜೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂ–ಮೈ ಎಕ್ಸ್‌ಪ್ರೆಸ್-ವೇನಲ್ಲಿ ಲಘು ವಾಹನ ಸಂಚಾರ ನಿರ್ಬಂಧ
ಈ ಬಗ್ಗೆ ಮಾಹಿತಿ ನೀಡಿರುವ ಲೋಕಾಯುಕ್ತ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್ಮೆಂಟ್ನ (ಎಸ್‌ಪಿಇ) ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಸಾಹು, “ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಗಜೇಂದ್ರ ಸಿಂಗ್ ಲಂಚ ಕೇಳುತ್ತಿದ್ದಾರೆಂದು ಆರೋಪಿಸಿ ನಮಗೆ ದೂರು ನೀಡಿದ್ದರು. ಹಣವನ್ನು ತೆಗೆದುಕೊಂಡ ನಂತರ ಸ್ಥಳದಲ್ಲಿದ್ದ ಲೋಕಾಯುಕ್ತ ಅಧಿಕಾರಿಗಳನ್ನು ಗಮನಿಸಿ, ರೆಡ್ ಹ್ಯಾಂಡಾಗಿ ಸಿಕ್ಕಿ ಬೀಳುವುದು ಗೊತ್ತಾಗಿದೆ. ಭಯದಿಂದ ಬಳಿಕ ಲಂಚವಾಗಿ ಪಡೆದಿದ್ದ ಐದು ಸಾವಿರ ಮೊತ್ತದಷ್ಟಿದ್ದ ನೋಟುಗಳನ್ನು ಬಾಯಿಗೆ ಹಾಕಿ, ನೀರು ಕುಡಿದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷಿಸಿದ ವೈದ್ಯರು, ಆತನ ಆರೋಗ್ಯದಲ್ಲಿ ಏನೂ ಏರುಪೇರಾಗಿಲ್ಲ, ಚೆನ್ನಾಗಿದ್ದಾರೆ ಎಂದು ತಿಳಿಸಿದರು. ಸದ್ಯ ಗಜೇಂದ್ರ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ” ಎಂದು ಅಧಿಕಾರಿ ಹೇಳಿದರು.
ಈ ಘಟನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಹಲವು ನೆಟ್ಟಿಗರು, ಈವರೆಗೆ ಅಧಿಕಾರಿಗಳು ಹಣವನ್ನು ನುಂಗಿ, ನೀರು ಕುಡಿದಿದ್ದಾರೆ ಎಂದಷ್ಟೇ ಕೇಳಿದ್ದೆವು. ಈತ ಅದನ್ನು ಎಲ್ಲರಿಗೂ ನಿಜವಾಗಿಯೂ ಸಾಕ್ಷಿ ನೀಡಿದ. ಇಂತದ್ದೂ ಕೂಡ ನಮ್ಮ ದೇಶದಲ್ಲಿ ನಡೆಯುತ್ತದೆಯಲ್ವಾ!” ಎಂದು ಆಶ್ಚರ್ಯ ವ್ಯಕ್ತಪಡಿಸಿ, ಟ್ರೋಲ್ ಮಾಡಿದ್ದಾರೆ.