ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ ಇರುತ್ತೇನೆ. ನನ್ನ ಜೀವ, ನನ್ನ ರಕ್ತ ಎಲ್ಲವೂ ಕಾಂಗ್ರೆಸ್. ನಾನೀಗ ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಅದಕ್ಕೆ ಆಧಾರಸ್ತಂಭವಾಗಿ ನಿಲ್ಲುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ಕಾಗಿ ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳು ‘ವಿಧಾನಸಭೆಯಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದರ ಪರಿಣಾಮ ನೀವು ಬಿಜೆಪಿ ಹಾಗೂ ಆರ್ ಎಸ್ ಎಸ್ ಜೊತೆ ಕೈ ಜೋಡಿಸುವ ಬಗ್ಗೆ ಚರ್ಚೆಯಾಗುತ್ತಿದೆ’ ಎಂದು ಕೇಳಿದಾಗ ಉತ್ತರಿಸಿದ ಅವರು, “ನಾನು ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಯಾವುದೇ ರೀತಿಯಲ್ಲೂ ಅವರ ಜೊತೆ ಕೈ ಜೋಡಿಸುವ ಪ್ರಮೇಯವೇ ಇಲ್ಲ. ನಾನು ಅಪ್ಪಟ ಕಾಂಗ್ರೆಸ್ಸಿಗ. ಜನತಾದಳ, ಬಿಜೆಪಿ ಬಗ್ಗೆ ಸಂಶೋಧನೆ ಮಾಡುತ್ತಿರುತ್ತೇನೆ. ಅದೇ ರೀತಿ ಆರ್ ಎಸ್ ಎಸ್ ಬಗ್ಗೆಯೂ ತಿಳಿದುಕೊಂಡಿದ್ದೇನೆ” ಎಂದರು.
ಆರ್ ಎಸ್ ಎಸ್ ನಿಂದ ಶಿಕ್ಷಣ ಸಂಸ್ಥೆಗಳ ಮೇಲೆ ಹಣ ಹೂಡಿಕೆ
“ನಾನು ಪ್ರತಿಯೊಂದು ರಾಜಕೀಯ ಪಕ್ಷಗಳ ಬಗ್ಗೆಯೂ ನನ್ನದೇ ಆದ ಸಂಶೋಧನೆ ನಡೆಸಿದ್ದೇನೆ. ಆರ್ ಎಸ್ ಎಸ್ ರಾಜ್ಯದಲ್ಲಿ ಹೇಗೆ ತನ್ನ ಸಂಘಟನೆ ಕಟ್ಟಿತು ಎಂಬುದು ನನಗೆ ತಿಳಿದಿದೆ. ಆರ್ ಎಸ್ ಎಸ್ ಪ್ರತಿ ತಾಲ್ಲೂಕು, ಜಿಲ್ಲೆ ಸೇರಿದಂತೆ ಎಲ್ಲಾ ಕಡೆ ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಸಾಕಷ್ಟು ಹಣ ಹೂಡಿಕೆ ಮಾಡುತ್ತಿದೆ. ಮಕ್ಕಳನ್ನು ತಲುಪುವ ಕೆಲಸ ಮಾಡುತ್ತಿದೆ” ಎಂದರು.
“ರಾಜಕೀಯವಾಗಿ ನಾವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ರಾಜಕೀಯ ವ್ಯಕ್ತಿಯಾದ ನಾನು ರಾಜಕೀಯ ಎದುರಾಳಿಗಳಲ್ಲಿ ಯಾರು ಸ್ನೇಹಿತರಿದ್ದಾರೆ, ಯಾರು ಶತ್ರುಗಳಿದ್ದಾರೆ ಎನ್ನುವುದನ್ನು ತಿಳಿಯಬೇಕಲ್ಲವೇ? ಆದ ಕಾರಣಕ್ಕೆ ಆರ್ ಎಸ್ ಎಸ್ ಇತಿಹಾಸ ತಿಳಿದುಕೊಂಡಿದ್ದೇನೆ” ಎಂದು ಹೇಳಿದರು.
“ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಸ್ಥೆಗಳಲ್ಲಿ ಒಂದಷ್ಟು ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನೂ ನಾವು ಗಮನಿಸಬೇಕಲ್ಲವೇ? ನೇರವಾಗಿ, ದಿಟ್ಟವಾಗಿ ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು ಗಮನಿಸಬೇಕು ಅದೇ ರೀತಿ ನಾವು ಮಾಡಿದ್ದೇವೆ” ಎಂದು ಹೇಳಿದರು.
ಬಿಜೆಪಿ ಠುಸ್ ಗಿರಾಕಿ
ಬಿಜೆಪಿಯವರು ಧರ್ಮಸ್ಥಳ ಯಾತ್ರೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಬಿಜೆಪಿ ಒಂದು ಠುಸ್ ಗಿರಾಕಿ. ಅವರು ಮಾಡುತ್ತಿರುವುದು ರಾಜಕಾರಣ. ಹಿರಿಯ ಅಧಿಕಾರಿ ಮೊಹಾಂತಿ ಅವರ ನೇತೃತ್ವದಲ್ಲಿ ತನಿಖಾ ತಂಡವು ಅಚ್ಚುಕಟ್ಟಾಗಿ ತಮ್ಮ ಕೆಲಸ ನಿರ್ವಹಿಸುತ್ತಿದೆ” ಎಂದರು.
ಆಧಾರವಿಟ್ಟುಕೊಂಡು ಆರೋಪ ಮಾಡಲಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆ ಆರೋಪ ಮಾಡಿದವನನ್ನು (ಮಹೇಶ್ ಶೆಟ್ಟಿ ತಿಮರೋಡಿ) ಒದ್ದು ಒಳಗೆ ಹಾಕಲಾಗಿದೆ. ಆರೋಪ ಮಾಡಲು ಆತನ ಬಳಿ ದಾಖಲೆ ಏನಿದೆ? ನಮ್ಮ ನಡುವೆ ರಾಜಕೀಯವಾಗಿ ಸಾಕಷ್ಟು ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ನಮ್ಮ ವಿರೋಧಿಗಳ ಬಗ್ಗೆ ಏನೇನೋ ಮಾತನಾಡುತ್ತಾನೆ ಎಂದು ನಾವು ಖುಷಿಪಡುವುದಲ್ಲ” ಎಂದು ತಿಳಿಸಿದರು.
“ಇಂದು ಅವರ ಬಗ್ಗೆ ಮಾತನಾಡಿದವರು, ನಾಳೆ ನಮ್ಮ ಬಗ್ಗೆಯೂ ಮಾತನಾಡುತ್ತಾರೆ. ಈ ಹಿಂದೆ ಮುಖ್ಯಮಂತ್ರಿಯವರು ಹಾಗೂ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಈ ರಾಜ್ಯದಲ್ಲಿ ಯಾರ ಸ್ವಾಭಿಮಾನಕ್ಕೂ ಧಕ್ಕೆ ಬರದಂತೆ ಕೆಲಸ ಮಾಡಬೇಕು. ರಾಜಕೀಯ ಮಾಡಲಿ, ರಾಜಕೀಯವಾಗಿ ಆರೋಪಗಳನ್ನು ಮಾಡಲಿ. ಆದರೆ ಆಧಾರಗಳನ್ನಿಟ್ಟುಕೊಂಡು ಆರೋಪ ಮಾಡಲಿ” ಎಂದರು.
ಧರ್ಮಸ್ಥಳದಲ್ಲಿ ಸಂಗ್ರಹವಾಗುವ ಹುಂಡಿ ಹಣದ ಲೆಕ್ಕ ಕೊಡಬೇಕು ಎನ್ನುವ ಸಮಾನ ಮನಸ್ಕ ವೇದಿಕೆಯ ಆಗ್ರಹದ ಬಗ್ಗೆ ಕೇಳಿದಾಗ, “ಇದನ್ನು ನೋಡಲು ಆದಾಯ ತೆರಿಗೆ ಇಲಾಖೆಯಿದೆ” ಎಂದು ಹೇಳಿದರು.
