ಗುಜರಾತ್‌ನ ಸೂರತ್‌ನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಈ ಸುದ್ದಿಯನ್ನು ನಂಬ್ತೀರೋ ಬಿಡ್ತೀರೋ ಅದು ನಿಮಗೆ ಬಿಟ್ಟದ್ದು. ಯಾಕೆಂದರೆ ಇದು ನಿಮಗೆ ಒಂದು ಕಟ್ಟುಕಥೆಯ ರೀತಿ ಅನ್ನಿಸಬಹುದು. ಆದರೆ, ವಾಸ್ತವದಲ್ಲಿ ನಡೆದ ಅಪರೂಪದ ಘಟನೆ.
ಗುಜರಾತ್‌ನಲ್ಲಿ ಬೈಕ್ ಕಳೆದುಕೊಂಡಿದ್ದವನೋರ್ವ ಬೈಕ್ ಕದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಿಲ್ಲ. ಬದಲಾಗಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ ಕಳ್ಳನ ಬಗೆಗಿನ ‘ಅನುಕಂಪ’ದ ಸಂದೇಶಕ್ಕೆ ಮರುಗಿ ಕಳ್ಳನೇ ಬೈಕನ್ನು ಕದ್ದ ಸ್ಥಳಕ್ಕೇ ವಾಪಸ್ ತಂದು ನಿಲ್ಲಿಸಿದ ಅಪರೂಪದ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?
ಪರೇಶ್ ಪಟೇಲ್ ಸೂರತ್ ನಿವಾಸಿ. ವಜ್ರದ ಕೆಲಸಗಾರನಾಗಿ ಉದ್ಯೋಗ ಮಾಡುತ್ತಿದ್ದಾರೆ. ಇತ್ತೀಚೆಗೆ ಪಾರ್ಕಿಂಗ್‌ನಲ್ಲಿ ತಾನು ನಿಲ್ಲಿಸಿದ್ದ, ದಿನನಿತ್ಯ ತಾನು ಬಳಸುತ್ತಿದ್ದ ಬೈಕ್ ಕಾಣೆಯಾಗಿತ್ತು. ಬಳಿಕ ಪಾರ್ಕಿಂಗ್ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದ್ದಾರೆ. ಆಗ ವ್ಯಕ್ತಿಯೊಬ್ಬ ತನ್ನ ಬೈಕನ್ನು ಸ್ಟಾರ್ಟ್ ಮಾಡಿ ತೆಗೆದುಕೊಂಡು ಹೋಗುವುದು ಕಂಡಿದೆ.
ಸಾಧಾರಣವಾಗಿ ನಮ್ಮ ಅಮೂಲ್ಯವಾದ ಯಾವುದಾದರೂ ವಸ್ತು ಕಳ್ಳತನವಾದಾಗ ನಾವು ಪೊಲೀಸರಿಗೆ ದೂರು ಕೊಡುತ್ತೇವೆ. ಆದರೆ, ಪರೇಶ್ ಪಟೇಲ್ ಬೈಕ್ ಕಳವಾದ ಬಗ್ಗೆ ಹತಾಶೆಗೊಳಗಾಗಿದ್ದರೂ ಕೂಡ ಆ ದಾರಿಯನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ ತನ್ನ ಬೈಕ್ ಕಳವುಗೈಯ್ಯುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಹಂಚಿಕೊಂಡು, ಗುಜರಾತಿ ಭಾಷೆಯಲ್ಲಿ ಸಂದೇಶವೊಂದನ್ನು ಬರೆದು, ಅದನ್ನು ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದಾರೆ.
ಬೈಕ್ ಮಾಲೀಕ ಪರೇಶ್ ಪಟೇಲ್ ಹಾಕಿದ್ದ ಸಂದೇಶ ಈ ರೀತಿಯಲ್ಲಿತ್ತು…
“ಓ ಕಳ್ಳ ಮಹಾಶಯನೇ. ನನಗಿಂತ ಹೆಚ್ಚು ನಿನಗೆ ಈ ಬೈಕ್ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಹೇಗೂ ನೀನು ಬೈಕ್ ತೆಗೆದುಕೊಂಡು ಹೋದೆ. ನೆಲಮಾಳಿಗೆಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲೇ ವಿದ್ಯುತ್ ಮೀಟರ್ ಇದೆ. ನನ್ನ ಬೈಕಿನ ಆರ್‌ಸಿ ಪುಸ್ತಕ ಮತ್ತು ಕೀಯನ್ನು ಕೂಡ ಅಲ್ಲಿ ಇಟ್ಟಿದ್ದೇನೆ. ದಯವಿಟ್ಟು ಅದನ್ನು ಕೂಡ ತೆಗೆದುಕೊಂಡು ಹೋಗು. ಬೈಕಿನ ದಾಖಲೆಗಳು ಕೂಡ ನಿನ್ನ ಬಳಿಯಲ್ಲಿದ್ದರೆ ನೀನು ಆರಾಮವಾಗಿ ಅದನ್ನು ಓಡಿಸಬಹುದು ಎಂಬುದು ನನ್ನ ಭಾವನೆ. ನನ್ನ ಬಳಿ ಒಂದು ಸೈಕಲ್ ಇದೆ. ಅದರಲ್ಲಿ ಬೇಕಾದರೆ ನಾನು ನನ್ನ ದಿನನಿತ್ಯದ ಕೆಲಸವನ್ನು ಮಾಡುತ್ತೇನೆ” ಎಂದು ಪಟೇಲ್ ಬರೆದಿದ್ದರು. ಬಳಿಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೈಕ್ ಮಾಲೀಕ ಪರೇಶ್ ಪಟೇಲ್ ಹರಿಬಿಟ್ಟಿದ್ದ ‘ಪರರ ಹಿತಚಿಂತನೆಯ ಸಂದೇಶ’ವು ಸೂರತ್‌ನಾದ್ಯಂತ ವ್ಯಾಪಕವಾಗಿ ಕಾಡ್ಗಿಚ್ಚಿನಂತೆ ಹರಿದಾಡಿದೆ. ಅಚ್ಚರಿ ಎಂಬಂತೆ ಬೈಕ್ ಕದ್ದಿದ್ದ ಕಳ್ಳನಿಗೂ ಈ ಸಂದೇಶ ಸೋಷಿಯಲ್ ಮೀಡಿಯಾ ಮೂಲಕ ತಲುಪಿದೆ.
ಬೈಕ್ ಮಾಲೀಕ ತನ್ನ ಬಗ್ಗೆ ತೋರಿದ ಅನುಕಂಪದ ಮಾತಿಗೆ ಮರುಕಪಟ್ಟ ಬೈಕ್ ಕದ್ದಿದ್ದ ಕಳ್ಳ, ಕೆಲವೇ ದಿನಗಳಲ್ಲಿ ಕದ್ದಿದ್ದ ಸ್ಥಳಕ್ಕೇ ತಂದು ಬೈಕ್ ನಿಲ್ಲಿಸಿದ್ದಾರೆ. ಬೈಕ್ ಕದಿಯುವ ದೃಶ್ಯ ಹಾಗೂ ಮಾಲೀಕನ ಸಂದೇಶ ತಲುಪಿದ ಬಳಿಕ ಕಳ್ಳ, ಬೈಕ್ ತಂದಿಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ತನ್ನ ಬೈಕ್ ಅನ್ನು ತೆಗೆದುಕೊಂಡ ವ್ಯಕ್ತಿಯ ಕಿವಿಗೆ ತನ್ನ ಸಂದೇಶ ತಲುಪುತ್ತದೆ ಎಂದು ಪಟೇಲ್ ತಿಳಿದಿರಲಿಲ್ಲ. ಪವಾಡವೆಂಬಂತೆ ಕಳ್ಳನಿಗೂ ಈ ಸಂದೇಶ ತಲುಪಿದ್ದು, ಆತನ ಮನಸ್ಸು ಬದಲಾವಣೆಗೆ ಕಾರಣವಾಗಿದೆ.
ಈ ಎಲ್ಲ ಬೆಳವಣಿಗೆ ಹಾಗೂ ಅನಿರೀಕ್ಷಿತ ತಿರುವಿನ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಪರೇಶ್ ಪಟೇಲ್, “ಡಿ.9ರಂದು ನಾನು ನನ್ನ ಬೈಕನ್ನು ಸಾಮಾನ್ಯವಾಗಿ ನಾನು ನಿಲ್ಲಿಸುತ್ತಿರುವ ಪಾರ್ಕಿಂಗ್ ಸ್ಥಳದಲ್ಲಿ ಇರಿಸಿದ್ದೆ. ಆವತ್ತು ಸಂಜೆ ಬೈಕ್ ತೆಗೆಯಲೆಂದು ಹೋದಾಗ ಕಾಣೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದಿರುವುದು ಗೊತ್ತಾಯಿತು. ಪೊಲೀಸರಿಗೆ ದೂರು ಕೊಡುವ ಬದಲು ವಿಭಿನ್ನ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದೆ. ಬೈಕ್ ಕಳ್ಳ ಸೋಷಿಯಲ್ ಮೀಡಿಯಾದಲ್ಲೂ ಕೂಡ ಸಕ್ರಿಯವಾಗಿರಬಹುದೆಂದು ಊಹಿಸಿ, ಅಪರಾಧಿಯನ್ನು ನೇರವಾಗಿ ಉದ್ದೇಶಿಸಿ, ಸಂದೇಶ ಬರೆದು ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಅದು ವೈರಲಾಗಿ ಹೇಗೋ ಅವನಿಗೆ ತಲುಪಿದೆ. ಕದ್ದು ತೆಗೆದುಕೊಂಡು ಹೋಗಿದ್ದ ಸ್ಥಳದಲ್ಲೇ ತಂದು ಡಿ.11ರಂದು ಇರಿಸಿದ್ದಾನೆ. ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.
Bike thief has a change of heart after a man appeals for his bike #Surat #Gujarat #TV9News pic.twitter.com/aa6zpOZb62
— Tv9 Gujarati (@tv9gujarati) December 14, 2023
ಅದೂ ಅಲ್ಲದೇ, ಕಳ್ಳತನದ ಸಮಯದಲ್ಲಿ ಉಂಟಾದ ಹಾನಿಯನ್ನು ಸರಿಪಡಿಸಲು ಹಣವನ್ನೂ ಕೂಡ ಭರಿಸುವುದಾಗಿ ತೆಗೆದುಕೊಂಡ ಹೋದವ ನನಗೆ ತಿಳಿಸಿದ್ದಾನೆ ಎಂದು ಪಟೇಲ್ ಮಾಹಿತಿ ಹಂಚಿಕೊಂಡಿದ್ದಾರೆ. ಆದಾಗ್ಯೂ, ಆತ ಯಾರು? ಎಲ್ಲಿಯವ ಎಂಬ ಮಾಹಿತಿಯನ್ನು ಬೈಕ್ ಮಾಲೀಕ ಬಿಟ್ಟುಕೊಟ್ಟಿಲ್ಲ.
ಬೈಕ್ ಕಳ್ಳ ಬೈಕ್ ತಂದು ಇಟ್ಟ ವಿಚಾರ ಕೂಡ ವೈರಲಾಗುತ್ತಿದ್ದಂತೆಯೇ ಅಭಿಪ್ರಾಯ ವ್ಯಕ್ತಪಡಿಸಿರುವ ಸಾರ್ವಜನಿಕರು, ‘ಪ್ರೀತಿಯಿಂದ ಕೊಡುವ ಸಂದೇಶ ಎಲ್ಲಕ್ಕಿಂತಲೂ ಪ್ರಭಾವಶಾಲಿ ಎಂಬುದು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಕಳ್ಳನ ಬಗೆಗೆ ತೋರಿದ ಸಹಾನುಭೂತಿಯ ಮಾತುಗಳು ಮತ್ತು ಕ್ಷಮೆಯು ಪ್ರಬಲ ಶಕ್ತಿ ಎಂಬುದಕ್ಕೆ ಈ ಘಟನೆ ಸಾಕ್ಷಿ’ ಎಂದು ಬರೆದುಕೊಂಡಿದ್ದಾರೆ.